ನಿರ್ಮಾಪಕಿಯಾಗಿ ಬಂದಿರುವ ನಿವೇದಿತಾ ಶಿವರಾಜ್‌ ಕುಮಾರ್‌ ತಮ್ಮ ಸಿನಿಮಾ ಬಗ್ಗೆ ಏನ್ ಹೇಳ್ತಾರೆ ?

Published : Apr 24, 2025, 12:38 PM IST
Niveditha Shivarajkumar

ಸಾರಾಂಶ

‘ಫೈರ್‌ ಫ್ಲೈ’ ಚಿತ್ರದ ಮೂಲಕ ಶಿವರಾಜ್‌ ಕುಮಾರ್‌ ಪುತ್ರಿ ನಿವೇದಿತಾ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಹೊಸ ಪ್ರತಿಭೆ ವಂಶಿ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರ ನಿವೇದಿತಾ ತಾತ ಡಾ. ರಾಜ್‌ಕುಮಾರ್‌ ಜನ್ಮದಿನವಾದ ಇಂದು (ಏ.24) ಬಿಡುಗಡೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ನಿವೇದಿತಾ ಜೊತೆಗೆ ಮಾತು.

 ವಂಶಿ ನಟನೆ, ನಿರ್ದೇಶನದ ಸಿನಿಮಾ 

- ಪ್ರಿಯಾ ಕೆರ್ವಾಶೆ

ಕನ್ನಡಿಗರಿಗೆ ಇವತ್ತಿಗೂ ನಿವೇದಿತಾ ಅಂದರೆ ಅಂಡಮಾನ್‌ ಸಿನಿಮಾ ನೆನಪಾಗುತ್ತೆ. ಆಗಲೇ ಚಿತ್ರರಂಗದ ಮೇಲೆ ಆಸಕ್ತಿ ಬಂತಾ?

ಇಲ್ಲ. ಆ ಸಮಯಕ್ಕೆ ನನಗಿನ್ನೂ ನಾಲ್ಕು ವರ್ಷ. ನಿರ್ದೇಶಕರು ಹೇಳಿಕೊಟ್ಟಂತೆ ನಟನೆ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ನನಗೆ ಸಿನಿಮಾರಂಗದ ಮೇಲೆ ಆಸಕ್ತಿ ಬಂದದ್ದೆಲ್ಲ ಕೊಂಚ ದೊಡ್ಡವಳಾದ ಮೇಲೆ. ನನಗೆ ಬ್ಯುಸಿನೆಸ್‌ ಮೇಲೆ ಆಸಕ್ತಿ. ಬೇರೆಲ್ಲೋ ಹೊಸದೇನೋ ಶುರು ಮಾಡುವ ಬದಲು ಫ್ಯಾಮಿಲಿ ಬ್ಯುಸಿನೆಸ್‌ನಲ್ಲೇ ಹೊಸ ಪ್ರಯೋಗ ಮಾಡೋಣ ಅಂತ ನಿರ್ಮಾಣಕ್ಕಿಳಿದೆ. ಎರಡು ವೆಬ್‌ ಸೀರೀಸ್‌, ಸೀರಿಯಲ್‌ಗಳ ಬಳಿಕ ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಿಸಿದ್ದೇನೆ.

- ಫೈರ್‌ ಫ್ಲೈ ಜೊತೆಗೆ ನಿಮ್ಮ ಫ್ರೆಂಡ್‌ಶಿಪ್‌ ಬೆಳೆದದ್ದು ಹೇಗೆ?

ವಂಶಿ ನನಗೆ ಮೊದಲಿಂದಲೂ ಪರಿಚಯ. ಅವರ ಜೊತೆಗೆ ವೆಬ್‌ ಸೀರೀಸ್‌ ಮಾಡಿದ್ದೆ. ಮುಂದೆಯೂ ವೆಬ್‌ ಸೀರೀಸೇ ಮಾಡಬೇಕು ಅಂದುಕೊಂಡಿದ್ದವಳನ್ನು ಸಿನಿಮಾ ನಿರ್ಮಾಣಕ್ಕೆ ಬರುವಂತೆ ಮಾಡಿದ್ದು ಫೈರ್‌ ಫ್ಲೈ ಸ್ಕ್ರಿಪ್ಟ್‌. ವಂಶಿ ಒಮ್ಮೆ ನನ್ನ ಬಳಿ, ಸಿನಿಮಾ ಮಾಡೋದು ಬಿಡೋದು ಆಮೇಲಿನ ಪ್ರಶ್ನೆ. ಮೊದಲು ಈ ಒನ್‌ಲೈನ್‌ ಕೇಳಿ ಅಂದರು. ಹಾಗೆ ಕೇಳಿದ್ದು ನಂಗೆ ಬಹಳ ಇಷ್ಟ ಆಗಿ ಅಪ್ಪನಿಗೆ ನರೇಶನ್‌ ಮಾಡಲು ಹೇಳಿದೆ. ಅವರಿಗೂ ಇಷ್ಟ ಆಯ್ತು. ಆಮೇಲೆ ಈ ಸಿನಿಮಾ ಕೆಲಸ ಶುರುವಾಯ್ತು. ನಾನು ಚಿತ್ರದ ಪ್ರತೀ ಹಂತದಲ್ಲೂ ಭಾಗಿಯಾದೆ.

- ನಿರ್ಮಾಪಕಿಯಾಗಿ ಮೂರನೇ ಜನರೇಶನ್‌, ಆದರೂ ಕೋರ್‌ ಥಾಟ್‌ನಲ್ಲಿ ಸಿಮಿಲಾರಿಟಿ ಇದೆ ಅನಿಸುತ್ತ?

ಈ ಬಗ್ಗೆ ಹೇಳಲು ನಾನಿನ್ನೂ ಚಿಕ್ಕವಳು. ಆದರೆ ನಮ್ಮ ಮೂವರಲ್ಲೂ ಸಿನಿಮಾ ಪ್ರೀತಿಯಂತೂ ಬಹಳಷ್ಟಿದೆ ಅನ್ನಬಲ್ಲೆ.

- ಫೈರ್‌ ಫ್ಲೈಗೆ ಶಿವಣ್ಣ ಸಹಕಾರ ಹೇಗಿದೆ?

ಬಹಳ ಚೆನ್ನಾಗಿದೆ. ಆದರೆ ಅಪ್ಪ ಯಾವತ್ತೂ ನಮ್ಮ ಕೆಲಸದಲ್ಲಿ ಮೂಗು ತೂರಿಸಿಲ್ಲ. ನಾವು ಕೇಳಿದಾಗಲಷ್ಟೇ ಸಲಹೆ ಸೂಚನೆ ನೀಡಿದ್ದಾರೆ. ಬೆಂಬಲ ಕೊಟ್ಟಿದ್ದಾರೆ. ಸಿನಿಮಾದಲ್ಲೂ ಸೊಗಸಾಗಿ ಅಭಿನಯಿಸಿದ್ದು ನಮ್ಮಂಥಾ ಯುವ ತಂಡಕ್ಕೆ ದೊಡ್ಡ ಬಲವನ್ನೇ ಕೊಟ್ಟಿದೆ.

- ಇದು ಯಾವ ವಯೋಮಾನದವರಿಗೆ ಮಾಡಿರುವ ಸಿನಿಮಾ?

ಈ ಜನರೇಶನ್‌ಗೆ ಹೆಚ್ಚು ಕನೆಕ್ಟ್‌ ಆಗುತ್ತೆ. ಆದರೆ ವಯಸ್ಸು, ಲಿಂಗವನ್ನೆಲ್ಲ ಮೀರಿ ಎಲ್ಲರಿಗೂ ಇಷ್ಟವಾಗುವ ಕಥೆ ನಮ್ಮ ಸಿನಿಮಾದ್ದು.

- ಶಿವಣ್ಣ ಅವರ ಮಾಸ್‌ ಫ್ಯಾನ್ಸ್‌ಗೆ ಇಷ್ಟ ಆಗೋ ಹಾಗಿದೆಯ?

ಅವರು ಬಂದು ಥೇಟರಲ್ಲಿ ಕೂರಬೇಕಷ್ಟೇ. ಮಾಸ್‌ ಎಲಿಮೆಂಟ್‌ ಸಿನಿಮಾದಲ್ಲಿಲ್ಲ. ಆದರೆ ಕಥೆ ಅವರನ್ನು ಥೇಟರ್‌ನಲ್ಲಿ ಕೂರಿಸುತ್ತೆ.

- ನಿಮ್ಮ ಇತರ ಆಸಕ್ತಿಗಳು?

ನನಗೆ ಓದುವುದು ಅಂದರೆ ಬಹಳ ಇಷ್ಟ. ಮೊದಲಿಂದಲೂ ಥ್ರಿಲ್ಲರ್‌, ಫ್ಯಾಂಟಸಿ ಕಥೆಯನ್ನು ಸದಾ ಓದುತ್ತಿರುತ್ತೇನೆ. ಬಿಡುವಿದ್ದಾಗ ಪುಸ್ತಕಗಳೇ ನನ್ನ ಒಡನಾಡಿಗಳು.

- ನಿಮ್ಮ ಅಜ್ಜಿ ಕಾದಂಬರಿ ಆಧರಿತ ಸಿನಿಮಾಗಳನ್ನು ಮಾಡಿದವರು. ನಿಮಗೆ ಅಂಥಾ ಆಸಕ್ತಿ ಇಲ್ವಾ?

ಯಾಕಿಲ್ಲ, ಖಂಡಿತಾ ಇದೆ. ನನಗೂ ಕಾದಂಬರಿ ಆಧರಿಸಿ ಸಿನಿಮಾ ಮಾಡುವ ಆಸಕ್ತಿ ಬಹಳ ಇದೆ. ಮುಂದೆ ಅಂಥಾ ಪ್ರಯತ್ನಗಳನ್ನೂ ಮಾಡುವವಳಿದ್ದೇನೆ.

- ನಿರ್ದೇಶನ, ನಟನೆ?

ಸದ್ಯಕ್ಕಿನ್ನೂ ಆ ಬಗ್ಗೆ ಯೋಚನೆ ಮಾಡಿಲ್ಲ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌