ಕನ್ನಡಪ್ರಭ ಸಿನಿವಾರ್ತೆ
ಪುರಾಣಗಳ ಪ್ರಕಾರ ರಾವಣನು ಶಿವನ ಪರಮ ಭಕ್ತ ಮತ್ತು ಆರಾಧಕ. ಶಿವ ಭಕ್ತನಾಗಿರುವ ರಾವಣನಿಗೂ ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರನಿಗೂ ಸಂಬಂಧವಿದೆ ಎಂಬುದು ಪ್ರತೀತಿ. ರಾವಣನು ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರ ಲಿಂಗವನ್ನು ಲಂಕೆಗೆ ಕೊಂಡೊಯ್ಯಲು ಯತ್ನಿಸಿದ್ದ ಎಂಬ ಕತೆ ಇದೆ. ಅದಕ್ಕೆ ಪೂರಕವಾಗಿ ರಾವಣ ಪಾತ್ರ ಮಾಡುತ್ತಿರುವ ನಟ ಯಶ್ ಅವರು ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ವಿಶೇಷ ಎಂದರೆ ಮಹಾಕಾಲೇಶ್ವರ ದೇವಸ್ಥಾನದ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ಬೆಳಗಿನ ಜಾವದ ಭಸ್ಮಾರತಿಯಲ್ಲಿ ಯಶ್ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಳಗಿನ ಜಾವ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಡೆಯುವ ಈ ಪೂಜೆಯಲ್ಲಿ ಯಶ್ ಸರಳವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು.ಈ ಸಂದರ್ಭ, ‘ಶ್ರೀ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಸಂತೋಷವಾಗಿದೆ. ನಾನು ಕೂಡ ಶಿವನ ದೊಡ್ಡ ಭಕ್ತ. ನಮ್ಮ ಮನೆ ದೇವರು ಕೂಡ ಶಿವ. ಹೀಗಾಗಿ ಮಹಾಶಿವನ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ ಯಶ್.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ. ಏಪ್ರಿಲ್ ಕೊನೆಯ ವಾರದಿಂದ ಯಶ್ ಪಾತ್ರದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಇದಕ್ಕಾಗಿ ಮುಂಬೈನಲ್ಲಿ ವಿಶೇಷ ಸೆಟ್ ಕೂಡ ನಿರ್ಮಿಸಲಾಗಿದ್ದು, ರಾವಣನ ವೈಭವವನ್ನು ಬಿಂಬಿಸುವ ಸೆಟ್ ಇದಾಗಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಅಂಗವಾಗಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರಲ್ಲಿ ತೆರೆಗೆ ಬರಲಿದೆ.