ಕಾಯ್ತಾ ಇರಿ, ನೋಡಲು ಮರೆಯದಿರಿ! 2025ರಲ್ಲಿ ತೆರೆ ಕಾಣುವ ಬಹು ನಿರೀಕ್ಷಿತ ಸಿನಿಮಾಗಳು ಇವೇ ನೋಡಿ

KannadaprabhaNewsNetwork |  
Published : Dec 27, 2024, 12:45 AM ISTUpdated : Dec 27, 2024, 09:28 AM IST
Shenoys multiplex theatre

ಸಾರಾಂಶ

2025ರಲ್ಲಿ ತೆರೆ ಕಾಣುವ ಬಹು ನಿರೀಕ್ಷಿತ ಸಿನಿಮಾಗಳು ಇವೇ ನೋಡಿ

- ಪ್ರಿಯಾ ಕೆರ್ವಾಶೆ

1. ಕಾಂತಾರ 1

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಕರಾವಳಿಯ ದೈವಾರಾಧನೆಯ ಬಗೆಗಿನ ಚಿತ್ರ. ಪ್ರಾದೇಶಿಕ ಕಥೆಯನ್ನು ಹಾಲಿವುಡ್‌ ಲೆವೆಲ್‌ನ ಅತ್ಯಾಧುನಿಕ ತಾಂತ್ರಿಕತೆ ಬಳಸಿ ನಿರ್ಮಿಸಲಾಗುತ್ತಿದೆ. ಹೊಂಬಾಳೆ ಫಿಲಂಸ್‌ ನಿರ್ಮಾಣದ ಈ ಸಿನಿಮಾ 2025ರ ಅಕ್ಟೋಬರ್‌ 2 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

2. ಟಾಕ್ಸಿಕ್‌

ಯಶ್ ನಟನೆ, ಗೀತು ಮೋಹನ್‌ ದಾಸ್‌ ನಿರ್ದೇಶನ, ವೆಂಕಟ್‌ ನಾರಾಯಣ್‌ ನಿರ್ಮಾಣದ ಬಹುಕೋಟಿ ವೆಚ್ಚದ ವರ್ಲ್ಡ್‌ ಕ್ಲಾಸ್‌ ಸಿನಿಮಾ. ಗೋವಾದ ಡ್ರಗ್‌ ಮಾಫಿಯಾ ಕುರಿತಾದ ಕಥೆ ಇರುವ ಈ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾನಿ, ಹ್ಯೂಮಾ ಖುರೇಷಿ ನಟಿಸಿದ್ದಾರೆ. ಏ.10ರಂದು ರಿಲೀಸ್‌ ಆಗಬೇಕಿದ್ದ ಈ ಸಿನಿಮಾ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

3. ಡೆವಿಲ್‌ ದಿ ಹೀರೋ

‘ಕಾಟೇರ’ ಬಳಿಕ ದರ್ಶನ್‌ ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್‌ ದರ್ಶನ್‌ ಜೈಲುವಾಸವೂ ಸೇರಿದಂತೆ ಅನೇಕ ಕಾರಣಕ್ಕೆ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ ಹೊಸ ವರ್ಷದಿಂದ ಈ ಸಿನಿಮಾ ಚಿತ್ರೀಕರಣ ಮತ್ತೆ ಕಿಕ್‌ ಸ್ಟಾರ್ಟ್‌ ಆಗುವ ಸಾಧ್ಯತೆ ಇದೆ. ಪ್ರಕಾಶ್‌ ನಿರ್ದೇಶನದ ಈ ಸಿನಿಮಾ ವರ್ಷಾಂತ್ಯಕ್ಕೆ ಬಿಡುಗಡೆಯಾಗಬಹುದು.

4. ಯುವರ್‌ ಸಿನ್ಸಿಯರ್ಲೀ ರಾಮ್

‘ಕೃಷ್ಣಂ ಪ್ರಣಯ ಸಖಿ’ ಸಕ್ಸಸ್‌ ಬಳಿಕ ಗಣೇಶ್‌ ತೊಡಗಿಸಿಕೊಂಡಿರುವ ಸಿನಿಮಾ. ಗೆಳೆತನದ ಕಥೆಯಿರುವ ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಮತ್ತೊಬ್ಬ ಹೀರೋ. ಎ ಆರ್ ವಿಖ್ಯಾತ್ ನಿರ್ದೇಶನದ ಈ ಸಿನಿಮಾ ಆಗಸ್ಟ್‌ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 

5. 45

ಅರ್ಜುನ್‌ ಜನ್ಯ ನಿರ್ದೇಶನದ ಬಹು ನಿರೀಕ್ಷೆಯ ಚಿತ್ರ. ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟಿಸಿರುವ ಈ ಸಿನಿಮಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ರಮೇಶ್‌ ರೆಡ್ಡಿ ನಿರ್ಮಾಣದ ಈ ಚಿತ್ರ ಜನವರಿಯಲ್ಲಿ ರಿಲೀಸ್‌ ಎನ್ನಲಾಗಿದ್ದರೂ ಸದ್ಯದ ಬೆಳವಣಿಗೆ ನೋಡಿದರೆ ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. 

6. ಕೆಡಿ

ಧ್ರುವ ಸರ್ಜಾ ನಟನೆ, ಜೋಗಿ ಪ್ರೇಮ್‌ ನಿರ್ದೇಶನ, ವೆಂಕಟ್‌ ನಾರಾಯಣ್‌ ನಿರ್ಮಾಣದ ಈ ಸಿನಿಮಾ ಯುಗಾದಿ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಪ್ಯಾನ್ ಇಂಡಿಯಾ ಸಿನಿಮಾದ ಪ್ರಚಾರವನ್ನು ಪ್ರೇಮ್ ಈಗಾಗಲೇ ಶುರು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ರೀಷ್ಮಾ, ರವಿಚಂದ್ರನ್‌, ರಮೇಶ್‌ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರಕ್ಕಿದೆ. 

7. ರಾಚಯ್ಯ

ದುನಿಯಾ ವಿಜಯ್‌ ನಟನೆಯ ಸಿನಿಮಾ. ಬರಹಗಾರ ಜಡೇಶ್‌ ಹಂಪಿ ಈ ಚಿತ್ರದ ಮೂಲಕ ನಿರ್ದೇಶಕರ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ‘ರಾಚಯ್ಯ’ ಎಂದು ಹೇಳಿದ್ದರೂ ಇನ್ನಷ್ಟೇ ಫೈನಲ್‌ ಆಗಬೇಕಿದೆ. ‘ಇದು ಅಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಟ್ಯಾಗ್‌ಲೈನ್‌ನಲ್ಲಿರುವ ಚಿತ್ರ ಜಾತಿ ವ್ಯವಸ್ಥೆ ಬಗೆಗಿನ ಕಥಾಹಂದರ ಹೊಂದಿದೆ. ಆಗಸ್ಟ್ ವೇಳೆ ರಿಲೀಸ್‌ ಸಾಧ್ಯತೆ ಇದೆ.

 8. ಜಿಂಗೊ

ಡಾಲಿ ಧನಂಜಯ, ಶಶಾಂಕ್‌ ಸೋಗಾಲ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರ. ನಾಗೇಂದ್ರ ರೆಡ್ಡಿ ಹಾಗೂ ಡಾಲಿ ಪಿಕ್ಚರ್ಸ್‌ ಸಿನಿಮಾ ನಿರ್ಮಿಸುತ್ತಿದ್ದಾರೆ. ಮರ್ಡರ್‌ ಇನ್ವೆಸ್ಟಿಗೇಶನ್‌ ಜಾನರಾದ ಈ ಸಿನಿಮಾದಲ್ಲಿ ಧನಂಜಯ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ವರ್ಷಾಂತ್ಯಕ್ಕೆ ಈ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

9. ಕರಾವಳಿ

ಈ ಸಿನಿಮಾ 2025ರ ಏಪ್ರಿಲ್‌ 11ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೆಸರೇ ಹೇಳುವಂತೆ ಕರಾವಳಿಯ ಸಾಂಸ್ಕೃತಿಕ ವೈಭವದ ಜೊತೆಗೆ ರಾಗ ದ್ವೇಷದ ಎಳೆಯೂ ಇರುವ ಕಥಾಹಂದರ ಚಿತ್ರದ್ದು. ಪ್ರಜ್ವಲ್‌ ದೇವರಾಜ್‌ ನಟಿಸುತ್ತಿದ್ದು, ಗುರುದತ್‌ ಗಾಣಿಗ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 

10. ಮನದ ಕಡಲು

ಯೋಗರಾಜ ಭಟ್‌ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ. ‘ಮುಂಗಾರು ಮಳೆ’ ಸಿನಿಮಾ ಮಾಡಿದ ಕೃಷ್ಣಪ್ಪ ನಿರ್ಮಾಪಕರು. ಈ ಕಾಲದ ಯುವಕರ ಕಥೆ ಚಿತ್ರದ್ದು. ಕಡಲು ಸಿನಿಮಾ ಭಾಗವಾಗಿ ಬರುತ್ತದೆ. ಹೊಸ ಕಾಲದ ಮನಸ್ಥಿತಿಯ ಚಿತ್ರಣ ಸಿನಿಮಾದಲ್ಲಿದೆ. ಏಪ್ರಿಲ್‌ ವೇಳೆ ರಿಲೀಸ್‌ ಆಗುವ ಸಾಧ್ಯತೆ ಇದೆ. ಸುಮುಖ, ರಾಶಿಕ ಶೆಟ್ಟಿ, ಅಂಜಲಿ ಅನೀಶ್‌ ಮುಖ್ಯಪಾತ್ರಗಳಲ್ಲಿದ್ದಾರೆ.

11. ತೀರ್ಥರೂಪ ತಂದೆಯವರಿಗೆ

‘ಹೊಂದಿಸಿ ಬರೆಯಿರಿ’ ಸಿನಿಮಾ ಮಾಡಿದ ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ಸಿನಿಮಾ ‘ತೀರ್ಥರೂಪ ತಂದೆಯವರಿಗೆ’. ನಿಹಾರ್‌ ಮುಖೇಶ್‌ ಈ ಸಿನಿಮಾದ ಹೀರೋ. ಸುಧಾರಾಣಿ, ಸಿತಾರ, ರಾಜೇಶ್‌ ನಟರಂಗ ಮುಖ್ಯಪಾತ್ರಗಳಲ್ಲಿದ್ದಾರೆ. 

12. ದೈಜಿ

ರಮೇಶ್‌ ಅರವಿಂದ್ ನಟನೆಯ 106ನೇ ಸಿನಿಮಾ. ಆಕಾಶ್‌ ಶ್ರೀವತ್ಸ ನಿರ್ದೇಶನದ ಈ ಹಾರರ್‌ ಫ್ಯಾಂಟಸಿ ಸಿನಿಮಾ ಮುಂದಿನ ವರ್ಷ ಜೂನ್‌ ವೇಳೆಗೆ ತೆರೆ ಕಾಣುವ ಸಾಧ್ಯತೆ ಇದೆ. ರವಿ ಕಶ್ಯಪ್‌ ಈ ಸಿನಿಮಾದ ನಿರ್ಮಾಪಕರು. ಈ ಸಿನಿಮಾ ಸಂಪೂರ್ಣವಾಗಿ ಅಮೆರಿಕಾದಲ್ಲಿ ಚಿತ್ರೀಕರಣಗೊಳ್ಳಲಿದೆ. ಮುಂದಿನ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌