ಒಂದು ಪರ್ಫೆಕ್ಟ್ ಥ್ರಿಲ್ಲರ್, ಬಂದ ಅಸಲಿ ಕಿಲ್ಲರ್! ಫುಲ್‌ಸ್ಟಾಪ್ ಆಗಲೀ ಕಾಮಾ ಆಗಲೀ ಇಲ್ಲದೇ ಸಾಗುತ್ತಲೇ ಇರುತ್ತದೆ

Published : Dec 26, 2024, 12:14 PM IST
Kichcha Sudeepa

ಸಾರಾಂಶ

ಒಂದು ಪರ್ಫೆಕ್ಟ್ ಥ್ರಿಲ್ಲರ್, ಬಂದ ಅಸಲಿ ಕಿಲ್ಲರ್! ಫುಲ್‌ಸ್ಟಾಪ್ ಆಗಲೀ ಕಾಮಾ ಆಗಲೀ ಇಲ್ಲದೇ ಸಾಗುತ್ತಲೇ ಇರುತ್ತದೆ ಮ್ಯಾಕ್ಸ್

ಚಿತ್ರ: ಮ್ಯಾಕ್ಸ್

ನಿರ್ದೇಶನ: ವಿಜಯ ಕಾರ್ತಿಕೇಯ

ತಾರಾಗಣ: ಕಿಚ್ಚ ಸುದೀಪ್, ಸುನೀಲ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ

ರೇಟಿಂಗ್: 4

- ಜೋಗಿ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿಯಲ್ಲಿ ದೂರದಲ್ಲೆಲ್ಲೋ ಭರ್ರೆಂದು ಸಾಗುವ ಕಾರಿನೊಳಗೆ ಕುಳಿತವರ ಪಾಲಿಗೆ ಬಂತೈ ಬಂತೈ ಸುಂಟರಗಾಳಿ ಎನ್ನಿಸುವಂತೆ ಧುತ್ತನೆ ಎದುರಾಗುತ್ತಾ ಒಮ್ಮೆ ಕೈಯಲ್ಲಿ ಮತ್ತೊಮ್ಮೆ ಕೊಡಲಿಯಲ್ಲಿ ಬೆನ್ನ ಹಿಂದೆ ಅಡಗಿಸಿಟ್ಟ ಪಿಸ್ತೂಲಿನಲ್ಲಿ ಮತ್ತೊಮ್ಮೆ ಮಾರುದ್ಧದ ಬಂದೂಕಿನಲ್ಲಿ ಎದುರೆದುರೇ ಸಿಕ್ಕಿದರೆ ಕಣ್ಣಿನಲ್ಲಿ ಫೋನಲ್ಲಿ ಎದುರಾದರೆ ಅಬ್ಬರದ ಮಾತಿನಲ್ಲಿ ದುಷ್ಟರನ್ನು ಕೊಚ್ಚಿ ಕೆಡಹುತ್ತಾ ಸಂತೋಷವಾದಾಗ ಹಾಡುತ್ತಾ ಸಂಕಟವಾದಾಗ ಚಹಾ ಕುಡಿಯುತ್ತಾ ಲೆಕ್ಕಾಚಾರ ಹಾಕುವಾಗ ಸಿಗರೇಟು ಸೇದುತ್ತಾ ಸುಮ್ಮನಿದ್ದಾಗ ದಿಟ್ಟಿಸಿ ನೋಡುತ್ತಾ ಮಿಕ್ಕವರು ಯೋಚಿಸುವ ಮುನ್ನವೇ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಾ ತನ್ನವರು ಮಾಡಿದ ತಪ್ಪುಗಳನ್ನು ಯೋಚಿಸದೇ ಅದನ್ನು ಸರಿಮಾಡುವ ತಂತ್ರಗಳನ್ನು ಯೋಜಿಸುತ್ತಾ ಸಿಳ್ಳೆ ಹಾಕುತ್ತಾ ಗುಳ್ಳೆನರಿಗಳ ಬಣ್ಣ ಬಯಲು ಮಾಡುತ್ತಾ ಇನ್ನೇನು ಬೆಳಗಾಗುತ್ತದೆ ಎನ್ನುವಷ್ಟರಲ್ಲಿ ಕೊಡಬೇಕಾದವರಿಗೆ ಬೇಕುಬೇಕಾದ್ದನ್ನೆಲ್ಲ ಕೊಟ್ಟು ಉರುಳಿಸಬೇಕಾದವರನ್ನು ಉರುಳಿಸಿ, ಹೊರಳಿಸಬೇಕಾದ್ದನ್ನು ಹೊರಳಿಸಿ, ರಕ್ಷಿಸಬೇಕಾದವರನ್ನು ರಕ್ಷಿಸಿ, ಶಿಕ್ಷಿಸಬೇಕಾದವರನ್ನು ಶಿಕ್ಷಿಸಿ ಹೊಸದಾರಿಯ ಹುಡುಕಿಕೊಂಡು ಹೊಸ ಹಾಡುಗಳ ಹಾಡಿಕೊಂಡು ದ್ರೋಹ ಬಗೆಯುವ ತನ್ನವರಿಗೆ ತಕ್ಕ ಪಾಠ ಕಲಿಸುತ್ತಾ ತನ್ನವರು ಮಾಡಿದ ತಪ್ಪುಗಳನ್ನು ಉದಾರವಾಗಿ ಕ್ಷಮಿಸುತ್ತಾ ನಾಯಕನಾದವನು ಹೇಗಿರಬೇಕು ಅನ್ನುವ ನೀತಿ ಹೇಳುತ್ತಾ ಮುಂದೆ ನಡೆಯುವುದನ್ನೆಲ್ಲ ನಡೆಯುವ ಮೊದಲೇ ತಿಳಿಯುತ್ತಾ ರಂಜಿಸುತ್ತಾ ನಗಿಸುತ್ತಾ ಬೆರಗಿನಲ್ಲಿ ಮುಳುಗಿಸುತ್ತಾ ಅಭಿಮಾನಿಗಳಿಗೆ ಬಾಡೂಟ ಮಿಕ್ಕವರಿಗೆ ಲಾಡೂಟ ಆಗೀಗ ಒದಗಿಸುತ್ತಾ ಮ್ಯಾಕ್ಸಿಮಮ್ ಥ್ರಿಲ್ಲನ್ನು ನೆತ್ತರಿಗೆ ತುಂಬುತ್ತಾ..

ಮ್ಯಾಕ್ಸ್ ಸಿನಿಮಾ ಈ ಮೇಲಿನ ಪ್ಯಾರಾಗ್ರಾಫ್ ಥರವೇ ಎಲ್ಲಿಯೂ ಫುಲ್‌ಸ್ಟಾಪ್ ಆಗಲೀ ಕಾಮಾ ಆಗಲೀ ಇಲ್ಲದೇ ಸಾಗುತ್ತಲೇ ಇರುತ್ತದೆ. ತಿರುವು ಮುರುವು ಚಿತ್ರಕತೆಯಲ್ಲೂ ಅತಿವೇಗ, ನೂರಾರು ಪಾತ್ರಗಳಿದ್ದರೂ ಗೊಂದಲವಿಲ್ಲದ ನಿರೂಪಣೆ, ಎಷ್ಟು ಬೇಕೋ ಅಷ್ಟು ಮಾತು, ಕತೆಗೆ ತಕ್ಕ ಹಿನ್ನೆಲೆ ಸಂಗೀತ, ಕತ್ತಲಿಗೆ ಕನ್ನಡಿ ಹಿಡಿದು ತೋರುವ ಅದ್ಭುತವಾದ ಛಾಯಾಗ್ರಹಣ- ಮ್ಯಾಕ್ಸ್ ಚಿತ್ರವನ್ನು ಒಂದು ಅತ್ಯುತ್ತಮ ಥ್ರಿಲ್ಲರ್ ಆಗಿಸಿದೆ.

ಸುದೀಪ್ ಇಡೀ ಚಿತ್ರವನ್ನು ತಾನಿಲ್ಲದೇ ಸಿನಿಮಾ ಇಲ್ಲ ಎಂಬಂತೆ ಆವರಿಸಿಕೊಂಡು ಬಿಟ್ಟಿದ್ದಾರೆ. ಕನ್ನಡದ ನಿರ್ದೇಶಕರಿಗಿಂತ ಚೆನ್ನಾಗಿ ಸುದೀಪ್ ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿರುವ ನಿರ್ದೇಶಕ ವಿಜಯ ಕಾರ್ತಿಕೇಯ ಸುದೀಪ್ ವಿಶ್ವರೂಪ ದರ್ಶನ ಮಾಡಿಸುತ್ತಾರೆ. ಥ್ರಿಲ್ಲರ್ ಚಿತ್ರದೊಳಗೆ ಯುದ್ಧದ ನಡುವೆಯೇ ತಮಾಷೆ, ರೌದ್ರತೆಯ ನಡುವೆಯೇ ರಂಗಗೀತೆ, ಕ್ರೌರ್ಯದ ಮಧ್ಯೆಯೇ ಕತೆ, ಸಿಟ್ಟಿನ ಜತೆಗೇ ಸಾವಧಾನ ಎಲ್ಲವನ್ನೂ ತಂದಿದ್ದಾರೆ.

ರಾಜಮೌಳಿ ನಿರ್ದೇಶನದ ಈಗ ಚಿತ್ರದ ನಂತರ ವೈವಿಧ್ಯ ಮತ್ತು ವೇಗ ತುಂಬಿರುವ ಪಾತ್ರವೊಂದು ಸುದೀಪ್‌ ಅವರಿಗೆ ಮತ್ತೊಮ್ಮೆ ಸಿಕ್ಕಿದೆ. ಆ ಅವಕಾಶವನ್ನು ಸುದೀಪ್ ಸಮರ್ಥವಾಗಿ ಬಳಸಿಕೊಂಡು ಚಿತ್ರದಲ್ಲಿ ಬರುವ ಎಲ್ಲರನ್ನೂ ಎಲ್ಲವನ್ನೂ ಬೆಳಗಿದ್ದಾರೆ.

ಸ್ಟಾರ್ ನಟರಿಗೆ ಎಂಥಾ ಕತೆ ಮಾಡಬೇಕು ಎನ್ನುವುದನ್ನು ಅರ್ಥಮಾಡಿಕೊಂಡವರಂತೆ ಪರಭಾಷಾ ಚಿತ್ರಗಳು ತಂತ್ರಜ್ಞಾನದ ಎಲ್ಲಾ ಸೌಲಭ್ಯಗಳನ್ನೂ ಸಮರ್ಥವಾಗಿ ಬಳಸಿಕೊಂಡು ಕತೆ ಹೇಳುತ್ತಾ ಜನರನ್ನು ರಂಜಿಸುತ್ತಿರುವ ಹೊತ್ತಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ ಸುದೀಪ್ ಅವರನ್ನು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಗಂಟೆ ಹನ್ನೆರಡು ನಿಮಿಷಗಳ ಕಾಲ ಏನಾಯಿತು ಅಂತ ಬೆರಗಾಗುತ್ತಾ ನೀವು ಚಿತ್ರಮಂದಿರದಿಂದ ಹೊರಗೆ ಬರುತ್ತೀರಿ ಅನ್ನುವುದೇ ಮ್ಯಾಕ್ ಚಿತ್ರದ ಮ್ಯಾಕ್ಸಿಮಮ್ ಎಫೆಕ್ಚ್ ಮತ್ತು ಎಫರ್ಟ್.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌