ನಟ ದರ್ಶನ್‌ ಚಲನ ಚಿತ್ರರಂಗದ ಪ್ರಯಾಣ ಸುಲಭವಾಗಿರಲಿಲ್ಲ: ಹಿರಿಯ ನಟಿ ಸುಮಲತಾ ಅಂಬರೀಶ್‌

KannadaprabhaNewsNetwork | Updated : Feb 19 2024, 08:32 AM IST

ಸಾರಾಂಶ

ದರ್ಶನ್‌ ನನ್ನ ಹಿರಿಯ ಮಗ. ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಮೆಜೆಸ್ಟಿಕ್‌ ಸಿನಿಮಾ ಮಾಡುವಾಗ ದರ್ಶನ್‌ ಚಿಕ್ಕ ಹುಡುಗ. . ಅವನಿಗೀಗ 47 ವರ್ಷ ವಯಸ್ಸಾದರೂ ನನಗೆ 25 ವರ್ಷದ ಹುಡುಗನೇ ಆಗಿದ್ದಾನೆ. ತಾಯಿಗೆ ಯಾವತ್ತು ಮಕ್ಕಳು ಮಕ್ಕಳೇ..

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನಾನು ಮಂಡ್ಯ ಮಣ್ಣನ್ನು ಯಾವತ್ತಿಗೂ ಬಿಟ್ಟು ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಭಾವುಕರಾಗಿ ಹೇಳಿದರು.ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಟ ದರ್ಶನ್‌ ತೂಗುದೀಪ ಚಿತ್ರರಂಗ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂಬರೀಶ್‌ ಹಣೆಗೆ ಮಂಡ್ಯ ಮಣ್ಣಿನ ತಿಲಕ ಇಟ್ಟು ಕಳುಹಿಸಿದ್ದೇವೆ. ಮಂಡ್ಯ ಮಣ್ಣಿನ ಗುಣ, ಋಣ ನನ್ನಲ್ಲಿ ಬೆರೆತುಹೋಗಿದೆ. ಅಷ್ಟು ಸುಲಭವಾಗಿ ಈ ಮಣ್ಣಿನಿಂದ ನನ್ನನ್ನು ಬೇರ್ಪಡಿಸಲಾಗುವುದಿಲ್ಲ. 

ಮಂಡ್ಯ ಮಣ್ಣನ್ನು ನಾನು ಯಾವತ್ತಿಗೂ ಬಿಡುವುದಿಲ್ಲ ಎಂದರು.ದರ್ಶನ್‌ ನನ್ನ ಹಿರಿಯ ಮಗ. ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಮೆಜೆಸ್ಟಿಕ್‌ ಸಿನಿಮಾ ಮಾಡುವಾಗ ದರ್ಶನ್‌ ಚಿಕ್ಕ ಹುಡುಗ. 

ನಮ್ಮ ಮನೆಯ ಪಕ್ಕದಲ್ಲೇ ಇರುವ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ನಡೆದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅವನಿಗೀಗ 47 ವರ್ಷ ವಯಸ್ಸಾದರೂ ನನಗೆ 25 ವರ್ಷದ ಹುಡುಗನೇ ಆಗಿದ್ದಾನೆ. 

ತಾಯಿಗೆ ಯಾವತ್ತು ಮಕ್ಕಳು ಮಕ್ಕಳೇ ಎಂದು ಹೇಳಿದರು.ದರ್ಶನ್‌ ಚಲನಚಿತ್ರರಂಗದ ಪ್ರಯಾಣ ಸುಲಭವಾಗಿರಲಿಲ್ಲ. ಅವನು ಸಾಕಷ್ಟು ಕಷ್ಟ, ಸವಾಲುಗಳನ್ನ ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದಾನೆ.

ದರ್ಶನ್ ಕಷ್ಟಪಟ್ಟು ಬೆಳೆದಿದ್ದರ ಬಗ್ಗೆ ನೀವು ಯಾರೂ ಮರೆಯಬಾರದು. ಅದಕ್ಕೆ ತಾಯಿಯಾಗಿ ನಾನು ಹೆಮ್ಮೆ ಪಡುತ್ತೇನೆ. ಮಕ್ಕಳ ಜೀವನದಲ್ಲಿ ಸಾಧಿಸುವ ಯಶಸ್ಸಿಗಿಂತ ತಾಯಿಗೆ ಇನ್ನೇನು ಬೇಕು ಎಂದರು.ದರ್ಶನ್ ಸದಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. 

ಅಂಬರೀಶ್ ಇಲ್ಲದಿದ್ದರೂ ಅಭಿಗೆ ನೀನಿದ್ದೀಯಾ ಎಂದು ದರ್ಶನ್ ಗೆ ಹೇಳುತ್ತಿರುತ್ತೇನೆ. ಕಳೆದ ಲೋಕಸಭಾ ಚುನಾವಣೆ ವೇಳೆ ನನ್ನ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದು ದರ್ಶನ್ ಮತ್ತು ಯಶ್. ಹದಿನೈದರಿಂದ ಇಪ್ಪತ್ತು ದಿನ ನನಗೋಸ್ಕರ ಜನರ ಮಧ್ಯೆ ಕಷ್ಟಪಟ್ಟು ನನಗಾಗಿ ದುಡಿದರು.

ಯಾರು ಏನೇ ಟಾರ್ಗೆಟ್ ಮಾಡಿದರೂ, ಟ್ರೋಲ್ ಮಾಡಿದರೂ ದರ್ಶನ್, ಯಶ್ ಅಂದು ನನ್ನ ಹಿಂದೆ ನಿಂತರು ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ಅಂಬರೀಶ್ ಜೊತೆ ಇದ್ದವರಲ್ಲಿ ಇಂದು ಎಷ್ಟೋ ಜನ ನನ್ನೊಂದಿಗಿಲ್ಲ. ನಡೆದು ಬಂದ ದಾರಿ ಯಾರೂ ಸಹ ಮರೆಯಬಾರದು. ಆ ಗುಣ ದರ್ಶನ್ ಅವರಲ್ಲಿದೆ. ಹೆಸರು ಬರುತ್ತೆ, ಹೋಗುತ್ತೆ. ಅದು ಯಾವತ್ತೂ ಶಾಶ್ವತ ಅಲ್ಲ. ಒಳ್ಳೆಯ ಗುಣ ಮಾತ್ರ ಕೊನೆಯವರೆಗೂ ನಮ್ಮೊಂದಿಗೆ ಉಳಿಯತ್ತದೆ ಎಂದು ನುಡಿದರು.

2023ರ ಚುನಾವಣೆಗೂ ಮುನ್ನ ಶ್ರೀರಂಗಪಟ್ಟಣದಿಂದ ಅಭಿಷೇಕ್‌ ಅಥವಾ ಸಚ್ಚಿದಾನಂದ ಅವರಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರ ಬಂದಾಗ ನಾನು ಸಚ್ಚಿದಾನಂದ ಹೆಸರನ್ನೇ ಹೇಳಿದ್ದೆ. 

ಇವತ್ತಿಗೂ ನಾನು ಅದನ್ನೇ ಉಳಿಸಿಕೊಂಡು ಬಂದಿದ್ದೇನೆ. ಬೇರೆಯವರಿಗಾಗಿ ಮಿಡಿಯುವುದನ್ನ ಅಂಬರೀಶ್ ಅವರಲ್ಲಿ ಕಂಡಿದ್ದೆ. ಈಗ ಅದನ್ನು ದರ್ಶನ್ ರಲ್ಲಿ ನೋಡುತ್ತಿದ್ದೇನೆ.

ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಗೌರಿಗದ್ದೆಯ ವಿನಯ್‌ ಗುರೂಜಿ, ಪ್ರಕಾಶ್‌ನಾಥ ಸ್ವಾಮೀಜಿ, ಶಾಸಕರಾದ ಸತೀಶ್‌ ರೆಡ್ಡಿ, ದರ್ಶನ್‌ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ಮಾಜಿ ಶಾಸಕ ಅಶೋಕ್‌ ಖೇಣಿ, ನಟರಾದ ವಿನೋದ್‌ ರಾಜ್‌, ವಿನೋದ್‌ ಪ್ರಭಾಕರ್‌, ಪ್ರಜ್ವಲ್‌ ದೇವರಾಜ್‌, ನೀನಾಸಂ ಸತೀಶ್‌, ಅಭಿಷೇಕ್‌ ಅಂಬರೀಶ್‌, ಶರಣ್‌, ಚಿಕ್ಕಣ್ಣ, ಧನ್ವೀರ್‌, ಬಿಜೆಪಿ ಮುಖಂಡ ಇಂಡುವಾಳು ಎಸ್‌.ಸಚ್ಚಿದಾನಂದ ಇತರರಿದ್ದರು.

ದರ್ಶನ್‌ ಅಭಿನಯದಿಂದಲೇ ಜನರ ಮನಸ್ಸನ್ನು ಸೂರೆಗೊಂಡಿದ್ದಾರೆ. ಅವರ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ಕಲಾಕ್ಷೇತ್ರದಲ್ಲಿ ಅವರು ರಜತ ಮಹೋತ್ಸವ ಆಚರಿಸುವ ಜೊತೆಗೆ ಸುವರ್ಣ ಮಹೋತ್ಸವವನ್ನು ಆಚರಿಸಲಿ. ಜನರ ಪ್ರಭಾವದಿಂದ ದರ್ಶನ್‌ ಕಲಾಪ್ರೇಮ ಇನ್ನಷ್ಟು ಬೆಳೆದು ಕಲಾವಿದರನ್ನು ಪ್ರೋತ್ಸಾಹಿಸುವಂತಾಗಲಿ.-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ.

ನಮ್ಮ ಬದುಕು ಸದಾ ಆನಂದದಾಯಕವಾಗಿ, ಸಂತೋಷದಾಯಕವಾಗಿ ಇರಬೇಕೆಂದರೆ ಕಲೆ ಬಹಳ ಮುಖ್ಯ. ಕಲೆಗೋಸ್ಕರ ದರ್ಶನ್‌ ಜೀವನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ನಾಡಿನ ಕಲಾರಂಗವನ್ನು ನೂರಾರು ಜನ ಬೆಳಗಿದ್ದಾರೆ. 

ಪ್ರಮುಖವಾಗಿ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌. ಈ ತ್ರಿಮೂರ್ತಿಗಳ ಜೊತೆಗೆ ಕಲೆಗೆ ಮೆರುಗನ್ನು ತಂದುಕೊಟ್ಟವರು ತೂಗುದೀಪ ಶ್ರೀನಿವಾಸ್‌. ಅವರ ಸುಪುತ್ರನಾಗಿ ತಂದೆಯನ್ನು ಮೀರಿಸಿ ಬೆಳೆದವರು ದರ್ಶನ್‌. ಸಾಧನೆ ಮೂಲಕ ಯಶಸ್ಸಿನ ತುತ್ತ ತುದಿಗೆ ಹೋಗಬಹುದು. ಅದನ್ನು ಉಳಿಸಿಕೊಳ್ಳುವುದು ಕಷ್ಟ. ಶಿಸ್ತು, ಪರಿಶ್ರಮದಿಂದ ಯಶಸ್ಸನ್ನು ಕಾಪಾಡಿಕೊಳ್ಳಬಹುದು.- ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ಬೆಳ್ಳಿ ಪರ್ವದಲ್ಲಿ ಹಾಡು-ನೃತ್ಯದ ರಂಗು: ಮೋಡಿ ಮಾಡಿದ ವಿ.ಹರಿಕೃಷ್ಣ ತಂಡದ ಗಾಯನ
ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಚಿತ್ರರಂಗ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮದಲ್ಲಿ ಹಾಡು-ನೃತ್ಯ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ತಂಡದವರ ಗಾಯನ ಅದ್ಭುತವಾಗಿ ಮೂಡಿಬಂದಿತು. 

ಹೇಮಂತ್‌ ಕಂಠಸಿರಿಯಲ್ಲಿ ಈ ಕನ್ನಡ ಮಣ್ಣನು ಮರಿಬೇಡ, ಹೇಮಂತ್‌, ವಾಣಿ ಜೋಡಿಯಾಗಿ ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ, ವಾಣಿ ಅವರು ಹಾಡಿದ ಹಾಗೋ ಹೀಗೋ ಇದ್ದೆ ನಾನು, ಸಂತೋಷ್‌ ವೆಂಕಿ ಗಾಯನದಲ್ಲಿ ಮೂಡಿಬಂದ ಐರಾವತ, ಸಾಹೋರೇ ಸಾಹು, ಹರಿಕೃಷ್ಣ, ಇಂದು ನಾಗರಾಜ್‌ ಹಾಡಿದ ಬಸಣ್ಣಿ ಬಾ, ತನ್ವಿ ಅವರ ಕುಲಕಬೇಡ ಕುಲುಕ ಬೇಡ ಸಿಲ್ಕು ಹಾಡುಗಳು ಸಾವಿರಾರು ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಪಾತ್ರವಾದವು.

ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ನಾಯಕಿ ಪ್ರಿಯಾಂಕ ಅವರು ನೃತ್ಯ ಎಲ್ಲರ ಗಮನಸೆಳೆಯಿತು. ಕಣ್ಣು ಕೊರೈಸುವ ವರ್ಣರಂಜಿತ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ದರ್ಶನ್‌ ಅಭಿನಯದ ಚಿತ್ರದ ಹಾಡುಗಳಿಗೆ ಕಲಾತಂಡದವರು ನೃತ್ಯ ಮಾಡಿದರು.

Share this article