ವಿಜಯ ರಾಘವೇಂದ್ರ, ಶ್ರೀಮುರಳಿ ಆಗೋದಕ್ಕಾಗಲ್ಲ!

Published : Aug 29, 2025, 12:18 PM IST
Vijay Raghavendra

ಸಾರಾಂಶ

ವಿಜಯ ರಾಘವೇಂದ್ರ ನಾಯಕನಾಗಿ ನಟಿಸಿರುವ ಕಿಶೋರ್‌ ಮೂಡಬಿದ್ರೆ ನಿರ್ದೇಶನದ, ಪಂಚಾನನ ಫಿಲಂಸ್‌ ನಿರ್ಮಿಸಿರುವ ಆ್ಯಕ್ಷನ್‌ ಥ್ರಿಲ್ಲರ್‌ ‘ರಿಪ್ಪನ್ ಸ್ವಾಮಿ’ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾ ಬಗ್ಗೆ ವಿಜಯ ರಾಘವೇಂದ್ರ ಮಾತು.

ಪ್ರಿಯಾ ಕೆರ್ವಾಶೆ

ರಿಪ್ಪನ್ ಸ್ವಾಮಿ ಪಾತ್ರವನ್ನು ಹೇಗೆ ಆವಾಹಿಸಿಕೊಂಡಿರಿ?

ಯಾರದೋ ಕಥೆಯಲ್ಲಿ ಬರುವ ಪಾತ್ರದಂತೆ ನನಗೆ ಮೊದಲ ಸಲ ರಿಪ್ಪನ್ ಸ್ವಾಮಿ ಕಂಡ. ಕೋಪಿಷ್ಠ, ಅಹಂಕಾರಿ, ವೈಲೆಂಟ್‌, ಒಳ್ಳೆಯ ಗುಣ ಇಲ್ಲದ ಮೇಲ್ನೋಟಕ್ಕೆ ರಾಕ್ಷಸನ ಥರ ಕಾಣುವ ವ್ಯಕ್ತಿತ್ವ. ಸಾಧಾರಣವಾಗಿ ನನಗೆ ಬರೋ ಸಿನಿಮಾಗಳಲ್ಲಿ ನೀವು ರಿಯಲ್‌ ಲೈಫಲ್ಲಿ ಹೇಗಿರ್ತೀರೋ ಅದೇ ಥರ ಈ ಪಾತ್ರದಲ್ಲೂ ಇದ್ದುಬಿಡಿ ಅನ್ನುತ್ತಾರೆ. ಆದರೆ ರಿಪ್ಪನ್‌ ಸ್ವಾಮಿ ಇವ್ಯಾವುದೂ ಇಲ್ಲ. ಹೀಗಾಗಿ ಆತನ ಮೈಂಡ್‌ ಸೆಟ್‌ಗೆ ಹೋಗಿ ಆ ಪಾತ್ರ ನಿರ್ವಹಿಸೋದು ಚಾಲೆಂಜಿಂಗ್‌ ಆಗಿತ್ತು. ಆ ಪಾತ್ರದ ಉಸಿರಾಟ ರಿದಂ, ನೋಡುವ, ನಡೆಯುವ ಬಗೆ, ಒಟ್ಟಿನಲ್ಲಿ ಬೇರೆಯೇ ಪ್ಯಾಟರ್ನ್‌ ಬೇಕಿತ್ತು. ಅದನ್ನು ಅಭ್ಯಾಸ ಮಾಡಿದ್ದೆ.

ವಿಜಯ ರಾಘವೇಂದ್ರ, ಶ್ರೀಮುರಳಿ ಆಗೋದಕ್ಕಾಗಲ್ಲ ಅಂದಿದ್ರಿ. ಅದರ ಹಿಂದಿನ ಧ್ವನಿ ಏನು?

ಹೌದು. ಆಗ ಹೈ ಬಜೆಟ್‌ ಮಾಸ್‌ ಆ್ಯಕ್ಷನ್‌ ಸಿನಿಮಾ ನಾನು ಮಾಡ್ತಿಲ್ಲ ಎಂಬ ಮಾತು ಬಂತು. ಹೈ ಬಜೆಟ್‌ ಇಟ್ಕೊಂಡು ಸಕ್ಸಸ್‌ ಕಂಡ ಮಾಸ್‌ ಸಿನಿಮಾವನ್ನು ನೀಡಿದ್ದೀನಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇದರ ಹಿಂದೆ ಯಾವುದೇ ನೋವಾಗಲೀ, ಅಸಮಾಧಾನ ಆಗಲಿ ಇಲ್ಲ. ಇರೋ ವಿಷ್ಯ ಅದಷ್ಟೇ. ಜನ ನನ್ನನ್ನು ಸ್ವೀಕಾರ ಮಾಡಿರೋದು ಬೇರೆ ಬಗೆಯಲ್ಲಿ. ನನಗೆ ಕೆಲಸ ಸಿಗುವುದು ಅದೇ ಧಾಟಿಯಲ್ಲಿ. ಅದೇ ನನ್ನ ಬ್ಯುಸಿಯಾಗಿಟ್ಟಿದೆ. ಜನ ಏನೋ ಹೇಳ್ತಾರೆ, ನಿಮಗೊಂದು ಮಾಸ್‌ ಆ್ಯಕ್ಷನ್‌ ಹಿಟ್‌ ಸಿಗಬೇಕು ಅಂತ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬರಬೇಕಿದೆಯಷ್ಟೇ ಅಲ್ಲವೇ.. ಆ ಹಿನ್ನೆಲೆಯಲ್ಲೇ ಹೇಳಿದ್ದು ವಿಜಯ ರಾಘವೇಂದ್ರ, ಶ್ರೀಮುರಳಿ ಆಗೋದಕ್ಕಾಗಲ್ಲ ಅಂತ. ಹಾಗೆಂದು ನನ್ನ ಪ್ರಯತ್ನ ಚಾಲ್ತಿಯಲ್ಲಿರುತ್ತದೆ. ಸತ್ಯವನ್ನು ಒಪ್ಪಿಕೊಳ್ಳುವುದು ನನಗಿಷ್ಟ. ಅದು ನನ್ನ ವ್ಯಕ್ತಿತ್ವ.

- ರಿಪ್ಪನ್ ಸ್ವಾಮಿಯಂಥಾ ಸಿನಿಮಾವನ್ನು ಹೇಗೆ ರಿಸೀವ್ ಮಾಡಿಕೊಳ್ಳಬಹುದು ಅನ್ನುವುದು ನಿಮ್ಮ ನಿರೀಕ್ಷೆ?

ಮಲೆನಾಡಿನ ಕೊಪ್ಪ, ಬಸರಿಕಟ್ಟೆಯಂಥಾ ಒಂದೂರು. ಅಲ್ಲೊಬ್ಬ ತೋಟದ ಮಾಲೀಕ ನಿಗೂಢವಾಗಿ ಸಾವನ್ನಪ್ಪುತ್ತಾನೆ, ಅದು ಕೊಲೆಯಾ ಆತ್ಮಹತ್ಯೆಯಾ ಅನ್ನೋದು ಸಿನಿಮಾದ ಎಳೆ. ಕಾಡು ಅನ್ನೋದು ಪ್ರಧಾನವಾಗಿ ಬರುತ್ತೆ, ಯಾವ ಕಾಡದು, ಮನಸ್ಸಿನ ಕಾಡಿನ ಬಗೆಗೆ ಸಿನಿಮಾ ಹೇಳುತ್ತಾ, ಕಟುಕ, ರಾಕ್ಷಸನಂಥಾ ವ್ಯಕ್ತಿ ಹೇಳುವ ಕಾಡು ಯಾವುದು ಅನ್ನೋದು ಮುಖ್ಯ.

- ಮಾಸ್‌ ಆ್ಯಕ್ಷನ್‌ ಸಿನಿಮಾವಾಗಿ ಇದರಿಂದ ನೀವು ಬಯಸೋ ಸಕ್ಸಸ್‌ ಸಿಗಬಹುದಾ?

ಈ ಮಾಸ್‌ ಅಂದರೇನು, ಎಲ್ಲಾ ವರ್ಗದ ಜನ ಎನ್‌ಜಾಯ್‌ ಮಾಡುವ ಸಿನಿಮಾ ಅಂತಲ್ವಾ, ನನ್ನ ಪ್ರಕಾರ ಮಾಸ್‌ ಅಂದರೆ ಬಂಗಾರದ ಮನುಷ್ಯ, ನಾಗಮಂಡಲ ಹಾಗೂ ಓಂನಂಥಾ ಸಿನಿಮಾಗಳು. ಚಿತ್ರವೊಂದು ಯಶಸ್ಸು ಕಂಡ ಬಳಿಕ ಮಾಸ್‌ ಆಗುತ್ತೆ. ನನಗೆ ಸಕ್ಸಸ್‌ನ ಹಂಬಲ ಪ್ರತೀ ಸಿನಿಮಾ ಮಾಡುವಾಗಲೂ ಇದ್ದೇ ಇರುತ್ತದೆ.

- ಸಾಫ್ಟ್‌ ಪಾತ್ರದ ಬಗ್ಗೆ ಸಾಫ್ಟ್‌ ಕಾರ್ನರ್‌ ಇದ್ದಂತಿಲ್ಲ?

ಪ್ರೇಕ್ಷಕರು, ಕಥೆ ಹೇಳುವ ವಿಧಾನ, ಜನರ ಜೀವನದ ರೀತಿಯೇ ಶಿಫ್ಟ್‌ ಆಗಿದೆ. ಅವರಿಗೆ ಒಳ್ಳೆಯವರಾಗಿರೋದು ಇಷ್ಟ ಆಗೋದಿಲ್ಲ. ನಾಯಕ ಕೊಂಚ ಒರಟ ಆಗಿದ್ರೆ ಉಳಿದವರು ಆತನ ಮಾತು ಕೇಳ್ತಾರೆ ಅನ್ನೋ ಮೈಂಡ್‌ಸೆಟ್‌ ಇದೆ. ಕಲಾವಿದನಾಗಿ ನನಗೆ ರಿಯಲಿಸ್ಟಿಕ್‌ ಇಂಟೆನ್ಸ್‌ ಪಾತ್ರಗಳನ್ನೂ ಪ್ರಯತ್ನಿಸುವ ಆಸೆ.

- ಜಗತ್ತು ನಿಮ್ಮ ಸಿನಿಮಾಗಳ ಬಗ್ಗೆ ಮಾತಾಡೋದಕ್ಕಿಂತ ವೈಯುಕ್ತಿಕ ಬದುಕಿನ ಬಗ್ಗೆ ಮಾತಾಡ್ತಿದೆ ಅನಿಸ್ತಿದೆಯಾ?

ನಡೆದಿರೋದು ಹಾಗಾಗಿದೆ ಅಲ್ವಾ. ಜನರಿಗೆ ಮೊದಲಿನಿಂದಲೂ ನಾನು ಒಬ್ಬ ನಟನಿಗಿಂತಲೂ ಹೆಚ್ಚಾಗಿ ಅವರ ಚಿನ್ನಾರಿಮುತ್ತ. ಅವರಿಗೆ ಗೊತ್ತಿರುವ ಹತ್ತಿರದ ವ್ಯಕ್ತಿ. ಅಂಥಾ ವ್ಯಕ್ತಿಯ ಹೆಂಡತಿ ಸ್ಪಂದನಾ. ಆಕೆ ಮೌನಿ, ಅಪರೂಪಕ್ಕೆ ನಗ್ತಾಳೆ. ಸಡನ್ನಾಗಿ ಆಕೆ ಕಣ್ಮರೆಯಾದಾಗ ಮುಂದೆ ಆತನ ಕಥೆ ಏನು, ಆ ಮಗುವಿನ ಜೀವನ ಹೇಗೆ ಎಂಬ ಕಾಳಜಿಯಿಂದ ಜನ ಮಾತಾಡ್ತಾರೆ. ಜನ ಅವರಾಗಿ ಅವರೇ ಏನೂ ಕೇಳಲ್ಲ. ಎಷ್ಟೋ ಸಲ ಸೋಷಲ್‌ ಮೀಡಿಯಾ ಕಾಮೆಂಟಲ್ಲಿ ಹೇಳ್ತಾರೆ, ಬಿಟ್‌ ಬಿಡ್ರೀ ಆಯಪ್ಪನ್ನ, ಆರಾಮಾಗಿ ಜೀವನ ಮಾಡಲಿ ಅಂತ. ಈಗ ಜನರ ಕಾಳಜಿ, ಚರ್ಚೆ ವೈಯಕ್ತಿಕ ಬದುಕಿಂದ ನನ್ನ ಸಿನಿಮಾಗಳ ಕಡೆಗೆ ಹರಿಯುತ್ತಿದೆ.

- ನಿಜಕ್ಕೂ ಹಾಗನಿಸ್ತಿದೆಯಾ? ಸದ್ಯ ವೈಯಕ್ತಿಕ ಬದುಕು ಹೇಗಿದೆ?

ಹೌದು. ಜನ ವೈಯಕ್ತಿಕ ಬದುಕಿನಿಂದ ನನ್ನ ಸಿನಿಮಾದತ್ತ ಹೊರಳಿದ್ದಾರೆ ಅನಿಸ್ತಿದೆ. ಬದುಕಿನ ಬಗ್ಗೆ ಹೇಳೋದಾದ್ರೆ, ಚೆನ್ನಾಗಿದೆ. ಇವತ್ತಿನ ದಿನ ಆಯ್ತು, ನಾಳೆ ಮತ್ತೊಂದು ದಿನ, ಅದೂ ಮುಗಿಯುತ್ತದೆ.. ಆ ಥರ ಹೋಗ್ತಿದ್ದೀನಿ. ವಾಸ್ತವವನ್ನು ಪ್ರಶ್ನೆ ಮಾಡಲ್ಲ.

- ರಿಪ್ಪನ್‌ ಸ್ವಾಮಿ ಸಿನಿಮಾದಲ್ಲಿ ಜನರನ್ನು ಥೇಟರಿಗೆ ಕರೆತರುವ ಅಂಶ?

ಟೈಟಲ್‌ ಚೆನ್ನಾಗಿದೆ. ನನ್ನೊಳಗಿನ ಕಲಾವಿದನನ್ನು ಸಿನಿಮಾ ತೋರಿಸಿದೆ. ಟ್ರೇಲರ್‌ ಚೆನ್ನಾಗಿ ಬಂದಿದೆ. ಸಿಂಪಲ್‌ ಕತೆ ಬೇಕು. ಕಂಟೆಂಟ್‌, ಕತೆ ಬಿಟ್ಟು ಬೇರೇನು ಬೇಡ ಎನ್ನುವ ಮಾಸ್‌ಗಾಗಿ ಈ ಸಿನಿಮಾ. ಮನರಂಜನೆ, ಭಾರವಾದ ಎನರ್ಜಿ ಇದೆ. ಜನ ಆ ಎನರ್ಜಿ ಜೊತೆ ಆಚೆ ಬರ್ತಾರೆ.

PREV
Read more Articles on

Recommended Stories

ರೋಷನ್‌ ರಾಮ್‌ಮೂರ್ತಿ ಜೊತೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಅನು
ಬಡವರ ಮತಹಕ್ಕು ಕಸಿಯಲು ಎನ್‌ಡಿಎಗೆ ಬಿಡಲ್ಲ: ರಾಹುಲ್