ದಾದಾ ಸಾಹೇಬ್ ಪ್ರಶಸ್ತಿಯತ್ತ ಅನಂತ ನಾಗ್ ನಡೆದು ಬಂದ ದಾರಿ

Published : Sep 17, 2026, 12:33 PM IST
Anant Nag

ಸಾರಾಂಶ

ಕೆಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೇ ಕೆಲವರು ಸಿನಿಮಾ ಮುಗಿದ ಮೇಲೂ ನಮ್ಮೊಳಗೆ ಉಳಿದುಕೊಳ್ಳುತ್ತಾರೆ. ಅನಂತನಾಗ್ ಎರಡನೆಯ ಸಾಲಿಗೆ ಸೇರಿದವರು. ಅವರ ಅಭಿನಯವನ್ನು ನೆನಪಿಸಿಕೊಳ್ಳುವಾಗ ನಮಗೆ ಯಾವುದೋ ಒಂದು ಪಾತ್ರ ನೆನಪಾಗುವುದಿಲ್ಲ; ನಮ್ಮ ಜೀವನದ ಹಲವು ಹಂತಗಳು ನೆನಪಾಗುತ್ತವೆ.

ಕೆಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೇ ಕೆಲವರು ಸಿನಿಮಾ ಮುಗಿದ ಮೇಲೂ ನಮ್ಮೊಳಗೆ ಉಳಿದುಕೊಳ್ಳುತ್ತಾರೆ. ಅನಂತನಾಗ್ ಎರಡನೆಯ ಸಾಲಿಗೆ ಸೇರಿದವರು. ಅವರ ಅಭಿನಯವನ್ನು ನೆನಪಿಸಿಕೊಳ್ಳುವಾಗ ನಮಗೆ ಯಾವುದೋ ಒಂದು ಪಾತ್ರ ನೆನಪಾಗುವುದಿಲ್ಲ; ನಮ್ಮ ಜೀವನದ ಹಲವು ಹಂತಗಳು ನೆನಪಾಗುತ್ತವೆ. ಪ್ರೇಮಿಸಿದ ಯುವಕ, ಸೋತ ಗಂಡ, ಅಸಹಾಯಕ ತಂದೆ, ಹಠದ ರಾಜಕಾರಣಿ, ಶ್ರೀಸಾಮಾನ್ಯ ಗೃಹಸ್ಥ, ಮಧ್ಯಮವರ್ಗದ ಬಡಪಾಯಿ, ತುಂಟ ತರಲೆ, ಒಳಗೊಳಗೇ ತೊಳಲಾಡುವ ಮನುಷ್ಯ- ಹೀಗೆ ನಮ್ಮ ಸುತ್ತಲಿನ ಮನುಷ್ಯರನ್ನೇ ಅವರು ತೆರೆಯ ಮೇಲೆ ನಮಗೆ ತೋರಿಸುತ್ತಾ ಬಂದಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲದ ಅವರ ಈ ಪಯಣವೇ ಅವರನ್ನು ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಬಾಗಿಲಿನ ಎದುರು ತಂದು ನಿಲ್ಲಿಸಿದೆ. 2023ರಲ್ಲಿ ಅವರು ಚಿತ್ರರಂಗದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ್ದರು. ಐವತ್ತು ವರ್ಷಗಳ ಕಾಲ ಕನ್ನಡಿಗರ ಕಣ್ಮಣಿಯಾಗಿ ಮೆರೆದವರು.

ಅನಂತ ನಾಗ್ ಅವರ ಕಥೆ ರಂಗಭೂಮಿಯಿಂದ ಆರಂಭವಾಗುತ್ತದೆ. ಹದಿನೆಂಟರ ಹರೆಯದಲ್ಲಿ ರಜೆ ದಿನಗಳ ಪಾರ್ಟ್ ಟೈಮ್ ಕೆಲಸವಾಗಿ ಸಿಕ್ಕ ಅವಕಾಶವೊಂದು ಅವರನ್ನು ನಾಟಕದ ಕಡೆಗೆ ಕರೆದುಕೊಂಡು ಹೋಯಿತು. ನಾಟಕದ ಪಾತ್ರಗಳು ಅವರೊಳಗಿನ ನಟನಿಗೆ ಬಾಗಿಲು ತೆರೆದವು. ನಂತರದ ಐದು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿದರು. ನಟನಿಗೆ ರಂಗಭೂಮಿ ಕೊಡುವ ಒಂದು ದೊಡ್ಡ ಪಾಠವೆಂದರೆ, ಮಾತಿನಿಂತ, ಮುಖಭಾವದಿಂದ ಮಾತ್ರವಲ್ಲ, ಮೌನದಿಂದಲೂ ಅಭಿನಯಿಸಬಹುದು ಎನ್ನುವುದು. ಅನಂತ ನಾಗ್ ಅವರ ನಂತರದ ಸಿನಿಮಾಗಳನ್ನು ನೋಡಿದಾಗ ಈ ರಂಗಭೂಮಿಯ ತರಬೇತಿ ಎಷ್ಟು ಗಾಢವಾಗಿ ಅವರೊಳಗೆ ನೆಲೆಸಿದೆ ಎನ್ನುವುದು ಅರ್ಥವಾಗುತ್ತದೆ.

ಕನ್ನಡ ಸಿನಿಮಾಕ್ಕೆ ಬಂದಾಗಲೂ ಅವರು ಸಿದ್ಧವಾಗಿ ಬಂದ ನಟರಲ್ಲ. ವೈ.ಎನ್. ಕೃಷ್ಣಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಜಿ.ವಿ. ಅಯ್ಯರ್ ಅವರ ಪ್ರೋತ್ಸಾಹದಿಂದ ಸಂಕಲ್ಪ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದರು. ನಂತರ ಶ್ಯಾಮ್ ಬೆನಗಲ್ ಅವರ ಅಂಕುರ್ ಮೂಲಕ ಹಿಂದಿ ಚಿತ್ರರಂಗಕ್ಕೂ ಹೋದರು. ಅಲ್ಲಿಂದ ಮುಂದೆ ಭಾಷೆಗಳ ಗಡಿ ಅವರಿಗೆ ಅಡ್ಡಿಯಾಗಲಿಲ್ಲ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಮರಾಠಿ -ಹಲವು ಭಾಷೆಗಳ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಮಾಲ್ಗುಡಿ ಡೇಸ್ ಕೂಡ ಅವರ ಅಭಿನಯ ಪಯಣದ ಒಂದು ಮುಖ್ಯ ಗುರುತು.

ಅನಂತ ನಾಗ್ ಅವರನ್ನು ಇಷ್ಟು ವರ್ಷಗಳ ಕಾಲ ಪ್ರೇಕ್ಷಕರಿಗೆ ಹತ್ತಿರವಾಗಿಟ್ಟಿದ್ದು ಅವರ ಅಭಿನಯದ ಸಹಜತೆ. ನಡುಗಿಸುವ ಸಂಭಾಷಣೆ ಇಲ್ಲದೆ, ಕಣ್ಣಿನ ಒಂದು ನೋಟದಿಂದಲೇ ಒಂದು ಪಾತ್ರದ ಅಂತರಾಳದ ಮಾತನ್ನು ಧ್ವನಿಸಬಲ್ಲ ನಟ ಅವರು. ನಾಯಕನಾಗಿದ್ದಾಗಲೂ ಹೀರೋಯಿಸಮ್ ತೋರಿಸಲಿಲ್ಲ; ಪೋಷಕ ಪಾತ್ರಕ್ಕೆ ಬಂದಾಗಲೂ ತನ್ನ ಘನತೆಯನ್ನು ಕುಗ್ಗಿಸಿಕೊಳ್ಳಲಿಲ್ಲ. ಪಾತ್ರ ದೊಡ್ಡದೋ ಚಿಕ್ಕದೋ ಎನ್ನುವುದಕ್ಕಿಂತ ಅದು ಮನುಷ್ಯನೋ ಇಲ್ಲವೋ ಎನ್ನುವುದೇ ಅವರಿಗೆ ಮುಖ್ಯವಾಗಿದ್ದಂತೆ ಕಾಣುತ್ತದೆ. ಅದಕ್ಕಾಗಿಯೇ ಹಲವು ತಲೆಮಾರುಗಳು ಅವರನ್ನು ತಮ್ಮದೇ ನಟನಂತೆ ಸ್ವೀಕರಿಸಿವೆ.

ಐದು ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಗಳು, ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರ ದಾರಿಯಲ್ಲಿ ಬಂದಿವೆ. 2025ರಲ್ಲಿ ಅವರಿಗೆ ಪದ್ಮಭೂಷಣವೂ ದೊರೆಯಿತು. ಆದರೆ ಪ್ರಶಸ್ತಿಗಳ ಪಟ್ಟಿಯನ್ನು ಓದುವುದರಿಂದ ಅನಂತ ನಾಗ್ ಅವರ ಪಯಣದ ಪೂರ್ಣ ಅರ್ಥ ಸಿಗುವುದಿಲ್ಲ. ಒಂದು ನಟನಿಗೆ ಸಿಗಬಹುದಾದ ದೊಡ್ಡ ಪ್ರಶಸ್ತಿ ಬಹುಶಃ ಜನರ ನೆನಪು, ಪ್ರೀತಿ. ಅನಂತ ನಾಗ್ ಅವರಿಗೆ ಅದು ಬಹಳ ಹಿಂದೆಯೇ ಸಿಕ್ಕಿದೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ; ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಈ ಪ್ರಶಸ್ತಿ ಗುರುತಿಸುತ್ತದೆ. ಅನಂತ ನಾಗ್ ಅವರ ದಾರಿಯನ್ನು ನೋಡಿದಾಗ, ಈ ಗೌರವದ ಅರ್ಥ ಕೇವಲ ಒಬ್ಬ ನಟನಿಗೆ ದೊರೆಯುವ ಪ್ರಶಸ್ತಿ ಎನ್ನುವುದಕ್ಕಿಂತ ಮಹತ್ವದ್ದಾಗಿ ಕಾಣುತ್ತದೆ. ಇದು ಕನ್ನಡದ ಒಬ್ಬ ನಟ ತನ್ನ ಸಹಜ ಅಭಿನಯದಿಂದ ಭಾಷೆಯ ಗಡಿಗಳನ್ನು ದಾಟಿ, ಹಲವು ತಲೆಮಾರುಗಳ ನೆನಪಿನಲ್ಲಿ ಉಳಿದುಕೊಂಡ ಕಥೆಯ ಕುರುಹಾಗಿ ಉಳಿದುಕೊಂಡ ಗುರುತು. ಅವರು ಇನ್ನೂ ಅಭಿನಯಿಸಬೇಕಾದ ಪಾತ್ರಗಳು ಮುಂದೆ ಬರಬಹುದು. ಆದರೆ ಹಿಂದಿರುಗಿ ನೋಡಿದರೆ, ಅನಂತ ನಾಗ್ ನಡೆದು ಬಂದ ದಾರಿ ಈಗಾಗಲೇ ಕನ್ನಡ ಸಿನಿಮಾದ ಸುವರ್ಣ ಅಧ್ಯಾಯದಂತೆ ಕಾಣುತ್ತದೆ.

ಮೊನ್ನೆ ಮೊನ್ನೆ ತಾನೇ ತನ್ನ 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅನಂತನಾಗ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ದಾದಾಸಾಹೇಬ್ ಫಾಲ್ಕೆ ಸಂದಿದೆ.

ಅನಂತ್ ಸರ್ ನನಗೆ ತುಂಬಾ ಸ್ಪೆಷಲ್: ರಿಷಬ್ ಶೆಟ್ಟಿ

- ರಿಷಬ್ ಶೆಟ್ಟಿ

ಅನಂತ್ ಸರ್ ಅವರಿಗೆ ಅತ್ಯುನ್ನತ ಗೌರವ ಸಂದಿರುವುದು ಅತೀವ ಸಂತೋಷ ತಂದಿದೆ. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ನಿಜಕ್ಕೂ ಅವರು ನಮ್ಮ ಚಿತ್ರರಂಗದ ಲಿವಿಂಗ್ ಲೆಜೆಂಡ್. ಇಡೀ ಚಿತ್ರರಂಗವೇ ಅವರಿಂದ ಸ್ಫೂರ್ತಿ ಪಡೆದುಕೊಂಡು ಬೆಳೆದಿದೆ. ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇಡೀ ಕನ್ನಡ ನಾಡಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಸಂದ ಗೌರವ.

ಅಣ್ಣಾವ್ರು, ವಿಷ್ಣು ಸರ್, ಅಂಬರೀಶಣ್ಣ ಅವರಂತಹ ದಿಗ್ಗಜರನ್ನು ಕಳೆದುಕೊಂಡ ಮೇಲೆ, ಚಿತ್ರರಂಗ ಯಾವ ದಾರಿಯಲ್ಲಿ ಸಾಗಬೇಕು, ಯಾವ ದಾರಿಯಲ್ಲಿ ಬಂದಿದ್ದೇವೆ ಎಂಬುದನ್ನು ನೆನಪಿಸಲು ನಮ್ಮ ನಡುವೆ ಇರುವ ದೊಡ್ಡ ಶಕ್ತಿ ಅನಂತ್ ಸರ್. ಕುಟುಂಬದಲ್ಲಿ ಒಬ್ಬ ಹಿರಿಯ ವ್ಯಕ್ತಿ ಇದ್ದರೆ ಸಿಗುವ ನೆಮ್ಮದಿ, ಧೈರ್ಯ ಅವರ ಉಪಸ್ಥಿತಿಯಿಂದ ನಮಗೆ ಸಿಗುತ್ತದೆ. ‘ನಾವೂ ಕನ್ನಡ ಚಿತ್ರರಂಗದವರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅವರೇ ನಮಗೆ ದೊಡ್ಡ ಪ್ರೇರಣೆ.

‘ಸ.ಹಿ.ಪ್ರಾ ಶಾಲೆ ಕಾಸರಗೋಡು’ ಚಿತ್ರದ ಕ್ಲೈಮ್ಯಾಕ್ಸ್ ಕೋರ್ಟ್‌ರೂಮ್ ದೃಶ್ಯ ನನಗೆ ಸದಾ ವಿಶೇಷ. ಆ ದೃಶ್ಯ ಸುಮಾರು 15 ನಿಮಿಷ 20 ಸೆಕೆಂಡ್‌ಗಳ ಕಾಲ ನಿರಂತರವಾಗಿ ಸಾಗುವ ಸಿಂಗಲ್ ಶಾಟ್. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆವು. ಸರ್ಕಾರದ ಗಮನ ಸೆಳೆಯುವ ಗಂಭೀರ ವಿಚಾರವನ್ನು ಪ್ರಸ್ತುತಪಡಿಸಬೇಕಿತ್ತು. ವೃತ್ತಿಪರ ವಕೀಲನಲ್ಲದಿದ್ದರೂ ಕಾನೂನು ತಿಳಿದಿರುವ, ತರ್ಲೆ ಮಾಡುತ್ತಲೇ ಅಲ್ಲಲ್ಲಿ ಧೈರ್ಯ ತೋರುವ ಅನಂತಪದ್ಮನಾಭ ಪಿ. (ಪಿ ಫಾರ್ ಪೀಕಾಕ್) ಪಾತ್ರವನ್ನು ಆ ಸಣ್ಣ ಕೋರ್ಟ್ ಹಾಲ್‌ನಲ್ಲಿ ಕಟ್ಟಿಕೊಡುವುದು ಸುಲಭವಾಗಿರಲಿಲ್ಲ.

ಭಾಷೆಯ ಸೂಕ್ಷ್ಮತೆ, ಕಾಸರಗೋಡಿನ ಸಂಕೀರ್ಣತೆ, ಸರ್ಕಾರಿ ಶಾಲೆಗಳ ಕಷ್ಟ ಮುಂತಾದ ಗಂಭೀರ ವಿಚಾರಗಳನ್ನು ಕೇವಲ ಒಂದೇ ಶಾಟ್‌ನಲ್ಲಿ ದಾಟಿಸುವುದು ಸಾಮಾನ್ಯ ನಟನಿಗೆ ಸಾಧ್ಯವಿಲ್ಲ. ಆ ಎಲ್ಲಾ ವಿಚಾರ ಗ್ರಹಿಸುವುದೂ ಆಗಲ್ಲ. ಆದರೆ ಈ ಸವಾಲನ್ನು ಕೇಳಿದ ತಕ್ಷಣ ಅನಂತ್ ಸರ್ ಎಕ್ಸೈಟ್ ಆದರು. ಒಬ್ಬ ಮಹಾನ್ ಕಲಾವಿದನಲ್ಲಿ ನಟನೆಯ ಹಸಿವು ಯಾವತ್ತೂ ಇರುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ. ಈ ಹಿಂದೆ ಶಂಕರ್ ನಾಗ್ ಅವರ ಜೊತೆ ನಾಟಕಗಳಲ್ಲಿ 18, 26, 28 ಪುಟಗಳ ಏಕಪಾತ್ರಾಭಿನಯ ಮಾಡಿದ್ದ ಅನುಭವವನ್ನು ನೆನಪಿಸಿಕೊಂಡು ಈ ಸಿಂಗಲ್ ಶಾಟ್‌ಗೆ ಸಂಪೂರ್ಣ ಜೀವ ತುಂಬಿದರು.

ಆ ಶಾಟ್ ಮುಗಿದ ತಕ್ಷಣ ಸೆಟ್‌ನಲ್ಲಿದ್ದವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ ಆ ಕ್ಷಣ ಅವಿಸ್ಮರಣೀಯ. ಚಿತ್ರಮಂದಿರಗಳಲ್ಲೂ ಆ ದೃಶ್ಯಕ್ಕೆ ಬೆಚ್ಚಗಿನ ಅಪ್ಪುಗೆ ಸಿಕ್ಕಿತು. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ವೃತ್ತಿಜೀವನದ ಅತಿಮುಖ್ಯ ಸಿನಿಮಾ ಸಹಿಪ್ರಾ ಶಾಲೆ ಕಾಸರಗೋಡು. ಆ ಸಿನಿಮಾ ಹಾಗೆ ರೂಪುಗೊಳ್ಳಲು ಅನಂತ್ ಸರ್ ಅವರ ಆ ಅಭಿನಯವೇ ಮುಖ್ಯ ಕಾರಣ. ಹಾಗಾಗಿ ಅನಂತ್ ಸರ್ ನನ್ನ ಪಾಲಿಗೆ ಎಂದಿಗೂ ಅತ್ಯಂತ ಸ್ಪೆಷಲ್.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಅನಂತನಾಗ್‌ಗೆ ಫಾಲ್ಕೆ ಗೌರವ - 5 ದಶಕಗಳ ಕನ್ನಡ ಚಿತ್ರರಂಗದ ಸೇವೆಗಾಗಿ ಸಂದ ಮನ್ನಣೆ
ಭಾವನೆಗಳ ಪಯಣದಲ್ಲಿ ಕಾಡುವ ಪಾತ್ರಗಳು