ನಿನ್ನೆಯಷ್ಟೇ 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಅನಂತನಾಗ್ ಹೊಸ ಹುರುಪಿನಲ್ಲಿದ್ದಾರೆ. ತಮಗೆ ಅಪಾರ ಪ್ರೀತಿ ತೋರಿಸುತ್ತಿರುವ ಜನರ ಬಳಿಗೆ ಹೋಗಲು ನಿರ್ಧಾರ ಮಾಡಿದ್ದಾರೆ. ಆ ಯೋಚನೆಯ ಫಲವೇ ಅನಂತನಾಗ್ ಸಂಗೀತ ಯಾನ ಯೋಚನೆ.
ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಅನಂತನಾಗ್ ಅವರ ಜೊತೆ ಸಂಗೀತ ಸಂಜೆ ಆಯೋಜಿಸಿತ್ತು. ಅದರ ಯಶಸ್ಸಿನಿಂದ ದೊರೆತ ಸ್ಫೂರ್ತಿಯಿಂದ ಅನಂತನಾಗ್ ಈಗ ಬೇರೆ ಬೇರೆ ಊರುಗಳಿಗೆ ಹೋಗಿ ಸಂಗೀತದ ಮೂಲಕ ಪ್ರೀತಿ ಹಂಚುವ ನಿರ್ಧಾರ ಮಾಡಿದ್ದಾರೆ. ಈ ಯೋಜನೆ ಇನ್ನೂ ಯೋಚನೆಯ ಹಂತದಲ್ಲಿದ್ದು, ಮೊದಲ ಕಾರ್ಯಕ್ರಮ ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ನಡೆಯಲಿದೆ. ರಾಮಚಂದ್ರ ಹಡಪದ ತಂಡ ಇದನ್ನು ಆಯೋಜಿಸಿದೆ.
ಈ ಕುರಿತು ಅನಂತನಾಗ್ ಅವರು, ‘77ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನಾ ಕಡೆಯಿಂದ ಶುಭ ಹಾರೈಕೆಯ ಫೋನ್‌ಗಳು ಬಂದಿವೆ. ಅವರೆಲ್ಲರೂ ಪ್ರೀತಿಯಿಂದ ನಮ್ಮ ಊರಿಗೊಮ್ಮೆ ಬನ್ನಿ ಅಂತ ಕರೆಯುತ್ತಾರೆ. ಅವರೆಲ್ಲರ ಹಂಬಲದಂತೆ ಒಂದು ವಿವಾದವಿಲ್ಲದ, ಪ್ರೀತಿ ಹಂಚುವ ಕಾರ್ಯಕ್ರಮ ಮಾಡುವ ಆಸೆ ನಮ್ಮದು. ಎಲ್ಲಾ ಕಡೆ ಹೋಗಿ ಹಳೆಯ ಹಾಡುಗಳ ಕಾರ್ಯಕ್ರಮ ಮಾಡಲಿದ್ದೇವೆ. ಹೊಸ ಪೀಳಿಗೆಗೆ ಹಳೆಯ ಹಾಡಿನ ರುಚಿ ಹತ್ತಿಸುವ ಆಸೆ ಇದೆ. ಜೊತೆಗೆ ಹಾಡುಗಳ ಮೂಲಕವೇ ಹಳೆಯ ನೆನಪುಗಳನ್ನು ಹಂಚಲಿದ್ದೇವೆ. ಆ ಕಾಲದ ಸಂಗೀತ ನಿರ್ದೇಶಕರು, ಸಾಹಿತಿಗಳು ಎಲ್ಲರನ್ನೂ ಸಂಭ್ರಮಿಸಲಿದ್ದೇವೆ. ನಕರಾತ್ಮಕತೆ ಎಲ್ಲಾ ಕಡೆ ಹರಡಿರುವ ಈ ಕಾಲದಲ್ಲಿ ಸಕರಾತ್ಮಕತೆ ಹಂಚುವ ಪ್ರಯತ್ನ ಇದು’ ಎನ್ನುತ್ತಾರೆ.
ಸದ್ಯ ಈ ಯೋಜನೆಯ ರೂಪುರೇಷೆಗಳು ತಯಾರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೊಂದು ಸ್ಪಷ್ಟರೂಪ ದೊರೆಯಲಿದೆ.