ಕನ್ನಡದ ಮೊಟ್ಟ ಮೊದಲ ಜೆನ್‌ ಜೀ ಸಿನಿಮಾ ಬುಲ್ಲಿ: ಭುವನ್‌ ಪೊನ್ನಣ್ಣ

Published : Jul 31, 2026, 01:16 PM IST
Bhuvan

ಸಾರಾಂಶ

ಭುವನ್‌ ಪೊನ್ನಣ್ಣ ಮೂರು ವರ್ಷಗಳ ಬ್ರೇಕ್‌ ಬಳಿಕ ‘ಬುಲ್ಲಿ’ ಸಿನಿಮಾ ಮಾಡುತ್ತಿದ್ದಾರೆ. ಸಮೃದ್ಧ್‌ ಸ್ಟುಡಿಯೋಸ್‌ ಮತ್ತು ಭುವನಂ ಎಂಟರ್‌ಟೇನ್‌ಮೆಂಟ್‌ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಅನೂಪ್‌ ಆ್ಯಂಟನಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಭುವನ್‌ ಮಾತು.

- ಬುಲ್ಲಿ ಸಿನಿಮಾದ ನಿಮ್ಮ ಪಾತ್ರ ಹೇಗಿದೆ?

ನಾನು ಇಲ್ಲಿಯವರೆಗೆ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದವನಲ್ಲ. ಮೊದಲ ಶಾಟ್‌ನಲ್ಲಿ ನಾನು, ಊರ್ವಶಿ ಹಾಗೂ ಓಂಶಿವಪ್ರಕಾಶ್‌ ಅವರ ಕಾಂಬಿನೇಶನ್‌ ಇತ್ತು. ಓಂ ಶಿವಪ್ರಕಾಶ್‌ ಅವರದು ಬಡ್ಡಿ ವ್ಯಾಪಾರಿ ಪಾತ್ರ. ಊರ್ವಶಿ ಮತ್ತು ನಾನು ಅವರಿಂದ ಬಡ್ಡಿಗೆ ಹಣ ತಗೊಂಡು ವಾಪಾಸ್‌ ಕೊಡದೇ ನಾಟಕ ಮಾಡುವ ಕೆಳಮಧ್ಯಮ ವರ್ಗದ ಅಮ್ಮ, ಮಗ. ಆ ಸೀನ್‌ನಲ್ಲಿ ಓಂ ಶಿವಪ್ರಕಾಶ್‌ ‘ನೀವಿಬ್ಬರೂ ಅಮ್ಮ ಮಗ ಬೆಂಗಳೂರು ಬಿಟ್ಟು ತೊಲಗಿ.. ಥೂ’ ಅಂತಾರೆ. ಮುಂದಿನ ಡೈಲಾಗ್‌ ಬೇರೇನೋ ಇತ್ತು. ಆದರೆ ಊರ್ವಶಿ ಅವರು, ‘ಆಯ್ತಣ್ಣ, ನಾವು ಮೈಸೂರಿಗೆ ಹೋಗ್ತೀವಿ, ಅಲ್ಲಿ ನನ್ನ ತಂಗಿ ಮನೆ ಇದೆ’ ಅಂದುಬಿಟ್ಟರು. ನಾನು ಥಂಡಾ ಆದೆ. ಅಲ್ಲಿ ಏನು ಡೈಲಾಗ್‌ ಹೇಳಬೇಕೋ ಗೊತ್ತಾಗಲಿಲ್ಲ. ನನ್ನ ಸ್ಥಿತಿ ನೋಡಿದ ನಿರ್ದೇಶಕರು ವಿವರಿಸಲು ಬಂದರು. ಆಗ ಊರ್ವಶಿ ಅವರು ಪಕ್ಕಕ್ಕೆ ಕರೆದು ಕೂರಿಸಿಕೊಂಡು, ‘ಭುವ, ನೋಡು ನೀನು ಕಾಮಿಡಿ ಮಾಡಬೇಡ. ನಿನ್ನ ಪಾತ್ರವಷ್ಟೇ ಕಾಮಿಡಿ, ನೀನು ಕಾಮಿಡಿ ಅಲ್ಲ. ನೀನು ಕಾಮಿಡಿ ಮಾಡಲಿಕ್ಕೆ ಹೋದರೆ ಜನ ನಗಲ್ಲ, ನೀನು ಹೇಗಿದ್ದೀಯೋ ಹಾಗೇ ಇರು, ಕಾಮಿಡಿಯನ್ನು ಪಾತ್ರವೇ ಮಾಡುತ್ತಾ ಹೋಗುತ್ತದೆ. ನಾನು ಹೇಳಿದ್ದಕ್ಕೆ ನೀನು ರಿಯಲ್‌ ಲೈಫ್‌ನಲ್ಲಿ ಪ್ರತಿಕ್ರಿಯೆ ಕೊಡುವ ರೀತಿ ಕೌಂಟರ್‌ ಕೊಡಬೇಕು’ ಎಂದರು. ಚಿತ್ರದುದ್ದಕ್ಕೂ ಅವರ ಸಲಹೆಯನ್ನು ಪಾಲಿಸಿದ್ದೇನೆ.

- ಬುಲ್ಲಿ ಪಾತ್ರಕ್ಕೆ ತೂಕ ಇಳಿಸಿಕೊಂಡಿರಾ?

ಮದುವೆ ಆದಮೇಲೆ ಹೆಂಡತಿ ಕೊಡುವ ಟೆನ್ಶನ್‌ಗೆ ಹುಡುಗರ ತೂಕ ಇಳಿಯದೇ ಇರುತ್ತಾ.. ಈ ಪಾತ್ರಕ್ಕೆ ಮತ್ತೂ ನಾಲ್ಕೈದು ಕೆಜಿ ಇಳಿಸಿದ್ದೀನಿ. ಇದು ಈ ಕಾಲದ ಜೆನ್‌ ಜೀ ಹುಡುಗನ ಪಾತ್ರ. ಆತನಿಗೆ ಗೊತ್ತು ಗುರಿ ಇರುವುದಿಲ್ಲ. ಅವನ ನಿಜ ಹೆಸರು ಬಲರಾಮ. ಪೋಕರಿ ಕೆಲಸಗಳಿಂದ ಬುಲ್ಲಿ ಅಂತ ಫೇಮಸ್‌ ಆಗಿರುತ್ತಾನೆ. ಈ ಪಾತ್ರಕ್ಕಾಗಿ ಜೆನ್‌ ಜೀ ಹುಡುಗರು ಹೇಗೆ ಯೋಚನೆ ಮಾಡ್ತಾರೆ, ಅವರ ಬಾಡಿ ಮ್ಯಾನರಿಸಂ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಪುಣೆಯ ಎಫ್‌ಟಿಐಐ ವರ್ಕ್‌ಶಾಪ್‌ನಲ್ಲಿ ಮೂರು ವಾರ ಅವರ ಜೊತೆಗೆ ಕಳೆದಿದ್ದೆ. ನಮಗೆಲ್ಲ ಟೀಚರ್‌ ಅಂದರೆ ಭಯ ಭಕ್ತಿ ಇರುತ್ತದೆ. ಆದರೆ ಜೆನ್‌ ಜೀ ಹುಡುಗರಿಗೆ ಫ್ರೆಂಡ್‌ಗೂ, ಗುರುವಿಗೂ ವ್ಯತ್ಯಾಸವೇ ಗೊತ್ತಿಲ್ಲ. ಟೀಚರ್‌ ಹೆಸರು ಹಿಡಿದು ಫ್ರೆಂಡ್ಸ್‌ ಬಳಿ ಮಾತನಾಡುವಂತೆ ಮಾತನಾಡುತ್ತಿರುತ್ತಾರೆ. ವಿಚಿತ್ರ ವೇಷ ಭೂಷಣ, ಚಂಚಲ ಮನಸ್ಸು, ಇವತ್ತು ಒಬ್ಬರ ಜೊತೆ ಡೇಟಿಂಗ್‌ ಮಾಡುತ್ತಾರೆ. ಮರುದಿನ ಅದರ ಬಗ್ಗೆ ಗೊತ್ತೇ ಇಲ್ಲದ ಹಾಗಿರುತ್ತಾರೆ. ಇಂಥದ್ದನ್ನೆಲ್ಲ ಪಾತ್ರದಲ್ಲಿ ತಂದಿದ್ದೇನೆ.

- ಊರ್ವಶಿ ಮಗಳು ತೇಜಾ ಅವರ ನಟಿಸಿದ ಅನುಭವ ಹೇಗಿತ್ತು?

ಅಮ್ಮನ ಹಾಗೇ ಬಹಳ ಸರಳ ಹುಡುಗಿ ತೇಜಾ. ಅವರಿಗೆ ಬದುಕಿನ ಬಗ್ಗೆ ಸ್ಪಷ್ಟತೆ ಇದೆ. ಅಮ್ಮನ ಪರಂಪರೆಯನ್ನು ಮುಂದುವರಿಸುವ ಹುಮ್ಮಸ್ಸು ಇದೆ. ಅವರ ಜೊತೆಗಿನ ಶೂಟಿಂಗ್‌ ಇನ್ನಷ್ಟೇ ಶುರುವಾಗಬೇಕಿದೆ.

- ಮೂರು ವರ್ಷದ ಅಜ್ಞಾತವಾಸದ ಬಳಿಕ ಮತ್ತೆ ಬರುತ್ತಿದ್ದೀರಿ, ಹೇಗಿದೆ ಅನುಭವ?

ಮೂರು ವರ್ಷ ಬಹಳ ಮೌಲ್ಯಯುತವಾಗಿ ಕಳೆದಿದ್ದೇನೆ. ಮಗಳ ಬೆಳವಣಿಗೆಯನ್ನು ಆಸ್ಥೆಯಿಂದ ಗಮನಿಸಿದ್ದೇನೆ. ಬರವಣಿಗೆಯ ಕೆಲಸ ಮಾಡಿದ್ದೇನೆ. ಫ್ಯಾಮಿಲಿ ಲೈಫ್‌ನ ರುಚಿ ಉಂಡಿದ್ದೇನೆ. ಈ ಮೂರು ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿನ ಬೆಳವಣಿಗೆ ಏನೂ ಆದಂತಿಲ್ಲ. ನಮ್ಮ ಚಿತ್ರರಂಗದವರು ಇನ್ನೂ ಮುಂಗಾರು ಮಳೆ ಸಿನಿಮಾ ಬಂದ ಕಾಲದ ಪ್ರೇಕ್ಷಕರನ್ನೇ ಮನಸ್ಸಲ್ಲಿ ಇಟ್ಟು ಸಿನಿಮಾ ಮಾಡುತ್ತಿದ್ದಾರೆ. ಬದಲಾದ ಪ್ರೇಕ್ಷಕರ ಮನಸ್ಥಿತಿ ಬಗ್ಗೆ ಗಮನವೇ ಇಲ್ಲ. ನಾವು ಈ ಕಾಲದ ಪ್ರೇಕ್ಷಕರ ಅಭಿರುಚಿ ಬಗ್ಗೆ ಸರ್ವೆ ಮಾಡಿದ್ದೇವೆ. ಅವರ ಟೇಸ್ಟ್‌ಗೆ ತಕ್ಕಂಥಾ ಸಿನಿಮಾ ಮಾಡಿದ್ದೇವೆ. ಬುಲ್ಲಿ ಕನ್ನಡದ ಮೊಟ್ಟ ಮೊದಲ ಜೆನ್‌ ಜೀ ಸಿನಿಮಾ. ಇದರಲ್ಲಿ ಜೆನ್‌ ಜೀ ಮಗ ಮತ್ತು ಅವನ ರೀತಿಗೆ ಹೊಂದಿಕೊಂಡ ಈ ಕಾಲದ ಅಮ್ಮನ ಕಥೆ ಇದೆ. ಮಾನ ಮರ್ಯಾದೆಗೆ ಅಂಜಿ ಬದುಕುವುದಕ್ಕಿಂತ ನಾವಿರುವ ಹಾಗೇ ಸಮಾಜದೆದುರು ತೆರೆದುಕೊಂಡು ನಿರಾಳವಾಗಿ ಬದುಕುವುದು ಒಳ್ಳೆಯದು ಅನ್ನುವುದನ್ನು ಸಿನಿಮಾ ಮನದಟ್ಟು ಮಾಡಿಸುತ್ತದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ನಿರ್ದೇಶಕರು ಅಪ್‌ಡೇಟ್‌ ಆಗಬೇಕು: ಎಂ.ಡಿ.ಶ್ರೀಧರ್‌
ಬ್ಯಾಂಕ್‌ ಆಫ್ ಬರೋಡಾ ಸಿಸ್ಟಂ ಹ್ಯಾಕ್‌ : 1 ಟಿಬಿ ಡೇಟಾ ಲೀಕ್‌!