ಅಪ್ಪು ಚಿತ್ರನಾ ರೀ ಕ್ರಿಯೇಟ್ ಮಾಡಕ್ಕಾಗಲ್ಲ, ಪುನೀತ್ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳಲಾಗದು: ರಕ್ಷಿತಾ ಪ್ರೇಮ್‌

Published : Mar 17, 2025, 11:33 AM IST
Rakshita Prem

ಸಾರಾಂಶ

ಅಪ್ಪು ಚಿತ್ರದ ನಾಯಕಿಯ ನೆನಪುಗಳುಅಪ್ಪು ಚಿತ್ರನಾ ರೀ ಕ್ರಿಯೇಟ್ ಮಾಡಕ್ಕಾಗಲ್ಲ, ಪುನೀತ್ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳಲಾಗದು: ರಕ್ಷಿತಾ ಪ್ರೇಮ್‌

ಅಪ್ಪು ಚಿತ್ರದ ನಾಯಕಿಯ ನೆನಪುಗಳು

ಅಪ್ಪು ಚಿತ್ರನಾ ರೀ ಕ್ರಿಯೇಟ್ ಮಾಡಕ್ಕಾಗಲ್ಲ, ಪುನೀತ್ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳಲಾಗದು: ರಕ್ಷಿತಾ ಪ್ರೇಮ್‌

ಪೂರಿ ಜಗನ್ನಾಥ್‌ ನಿರ್ದೇಶಿಸಿ, ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ‘ಅಪ್ಪು’ ಚಿತ್ರದ ಮೂಲಕ ನಟ ಪುನೀತ್‌ರಾಜ್‌ಕುಮಾರ್‌ ಹಾಗೂ ರಕ್ಷಿತಾ ಅವರು ಚಿತ್ರರಂಗಕ್ಕೆ ಪರಿಚಯವಾದವರು. ಇಂದು ಪುನೀತ್‌ ಅವರ 50ನೇ ಹುಟ್ಟುಹಬ್ಬ. ಅಪ್ಪು-ಪುನೀತ್‌ ಜತೆಗಿನ ತನ್ನ ನೆನಪುಗಳನ್ನು ರಕ್ಷಿತಾ ಪ್ರೇಮ್ ಅವರು ಮೆಲುಕು ಹಾಕಿದ್ದಾರೆ.

-ಆರ್‌.ಕೇಶವಮೂರ್ತಿ

ಪುನೀತ್‌ ರಾಜ್‌ಕುಮಾರ್‌ ಅವರ ನಿಮ್ಮ ಮೊದಲ ಭೇಟಿ ಯಾವಾಗ ಮತ್ತು ಹೇಗಾಯಿತು?

ಸಿನಿಮಾಗಿಂತ ಮೊದಲು ನಾನು ಅಪ್ಪು ಅವರನ್ನು ಭೇಟಿ ಯಾಗಿದ್ದು ಎರಡು ಸಲ. ಸದಾಶಿವನಗರ ಮನೆಯಲ್ಲಿ ಅನಿಸುತ್ತದೆ. ರಾಘಣ್ಣ ಅವರು ಅಪ್ಪುಗೆ ಕ್ರಯಾನ್ಸ್, ಸ್ಕೆಚ್‌ ಪೆನ್ಸಿಲ್‌, ಕಲರಿಂಗ್‌ ತೆಗೆದುಕೊಂಡು ಬರುವಂತೆ ಅಪ್ಪುಗೆ ಹೇಳಿದರು. ಆಗ ಅಪ್ಪು ಬಂದರು. ನಾವು ಮತ್ತು ಅಪ್ಪು ಇಬ್ಬರು ಜತೆಗೆ ಕೂತು ಪೇಂಯಿಂಟಿಂಗ್‌ ಮಾಡಿದ್ವಿ. ಇದು ನನ್ನ ಮತ್ತು ಅಪ್ಪು ಮೊದಲ ಭೇಟಿ. ಆಗ ನನಗೆ ಏಳೆಂಟು ವರ್ಷ ವಯಸ್ಸು. ಮುಂದೆ ಮತ್ತೆ ನಮ್ಮ ಭೇಟಿ ಆಗಿದ್ದು ಡ್ಯಾನ್ಸ್‌ ಕ್ಲಾಸ್‌ನಲ್ಲಿ ಇಬ್ಬರು ಒಂದೇ ಕಡೆ ಡ್ಯಾನ್ಸ್‌ ಕಲಿಯಲು ಹೋಗುತಿದ್ವಿ.

ಅಪ್ಪು ಚಿತ್ರದ ನಿಮ್ಮ ಮೊದಲ ಸೀನ್, ಡೈಲಾಗ್ ನೆನಪಿದೆಯೇ?

ರಾಮಯ್ಯ ಕಾಲೇಜಿನಲ್ಲಿ ನನ್ನ ಮತ್ತು ಅಪ್ಪು ಅವರ ಮೊದಲ ಸೀನ್ ಚಿತ್ರೀಕರಣ ಆಗಿದ್ದು. ನಾನು ಕ್ಲಾಸ್‌ನಲ್ಲಿರುತ್ತೇನೆ. ಪ್ರೊಪೇಸರ್ ಬಂದು ನನ್ನ ಕರೆಯುವುದು, ಮತ್ತೆ ಹೀರೋ ಫ್ರೆಂಡ್ ಬಂದು ಸುಚಿ, ಅಪ್ಪು ಮಾತನಾಡಬೇಕಂತೆ ಅಂದಾಗ ನಾನು ಬರಲ್ಲ ಎನ್ನುವುದು... ನಂತರ ಹ್ಯಾವ್ ಎ ಬ್ರೇಕ್ ಕಿಟ್ ಕ್ಯಾಟ್ ಅಂತ ಬರುತ್ತದೆ. ಇದು ನನ್ನ ಮೊದಲ ಸೀನ್.

ಅಪ್ಪು ಚಿತ್ರದ ಮೂರು ಭಾಷೆಯಲ್ಲೂ ನೀವೇ ನಟಿಸಿದ್ದೀರಲ್ಲ?

ಕನ್ನಡ, ತೆಲುಗು, ತಮಿಳು ಈ ಮೂರು ಭಾಷೆಯಲ್ಲಿ ನಾನೇ ನಾಯಕಿ. ಮಲಯಾಳಂಗೂ ರೀಮೇಕ್‌ ಆದಾಗ ನನಗೇ ಕೇಳಿದರು. ಆದರೆ, ಮಾಡಕ್ಕೆ ಆಗಲಿಲ್ಲ. ಒಂದು ವೇಳೆ ಮಾಡಿದ್ದರೆ, ಮೊದಲ ಚಿತ್ರದಲ್ಲೇ ನಾಲ್ಕು ಭಾಷೆಯನ್ನು ಕವರ್ ಮಾಡುತ್ತಿದ್ದೆ.

ಪುನೀತ್‌ ಅವರಲ್ಲಿ ನೀವು ಮೊದಲ ಕಂಟ ಗುಣಗಳೇನು?

ಪ್ರತಿಯೊಬ್ಬರ ಜತೆಗೂ ಹೊಂದಿಕೊಂಡು ಹೋಗುವುದು, ಎಲ್ಲರನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ಗುಣ. ಎಲ್ಲರ ಜತೆಗೆ ಫ್ರೆಂಡ್ಲಿಯಾಗಿ ಮಾತನಾಡಿಸುವುದು. ಇದು ನಾನು ಅಪ್ಪು ಅವರಲ್ಲಿ ಕಂಡ ಗುಣಗಳು. ಅವು ಕೊನೆವರೆಗೂ ಇದ್ದವು.

ನೀವು ಅವರ ಸಹ ನಟಿಯಾಗಿ ಪುನೀತ್‌ ಅವರನ್ನು ನಟನಾಗಿ ನೋಡಿದಾಗ?

ಎಲ್ಲರಿಗೂ ಗೊತ್ತಿರುವಂತೆ ಅವರು ಬಾಲನಟನಾಗಿ ಗೆದ್ದವರು. ತುಂಬಾ ಫರ್‌ಫೆಕ್ಷನಿಷ್ಟ್‌, ಒಳ್ಳೆಯ ಡ್ಯಾನ್ಸರ್‌, ಅಧ್ಭುತ ಫೈಟರ್‌. ಎಲ್ಲ ರೀತಿಯಲ್ಲೂ ತರಬೇತಿ ತೆಗೆದುಕೊಂಡೇ ಬಂದಿದ್ದರು.

ಪುನೀತ್‌ ಚಿತ್ರಕ್ಕೆ ನಾಯಕಿ ಅಂದಾಗ ನಿಮ್ಮ ಮನೆಯಲ್ಲಿ ನಿಮಗೆ ಹೇಳಿದ್ದೇನು?

ಏನಮ್ಮ ಮಾಡ್ತಿಯಾ, ನಾವೆಲ್ಲ ವಜ್ರೇಶ್ವರಿ ಸಂಸ್ಥೆಯಿಂದಲೇ ಬಂದವರು. ನಿನಗೂ ಅದೇ ಸಂಸ್ಥೆಯಿಂದ ಲಾಂಚಿಂಗ್‌ ಸಿಗುತ್ತಿದೆ. ಪುಣ್ಯ ಮಾಡಿದ್ದಿಯಾ, ಹೇಗೆ ನಿಭಾಯಿಸಿಕೊಂಡು ಹೋಗ್ತಿಯಾ ಅಂತ ಮೊದಲು ಕೇಳಿದ್ದು ಅಮ್ಮ. ಎಲ್ಲರನ್ನು ಗೌರವದಿಂದ ಮಾತನಾಡಿಸಬೇಕು, ರೆಸ್ಪೆಕ್ಟ್‌ ತುಂಬಾ ಮುಖ್ಯ ಎಂದು ಅಪ್ಪ ಹೇಳಿದರು. ಇದು ಒಂದು ರೀತಿಯಲ್ಲಿ ನನ್ನ ಅಭಿಪ್ರಾಯ ಕೇಳಿದಂತೆಯೂ ಇತ್ತು, ಹಾಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಎಚ್ಚರಿಕೆಯಂತೆಯೂ ಇತ್ತು.

ನೀವು ಹೇಗೆ ‘ಅಪ್ಪು’ ಚಿತ್ರಕ್ಕೆ ನಾಯಕಿ ಆಗಿದ್ದು?

ಒಮ್ಮೆ ಪಾರ್ವತಮ್ಮ ಅವರು ನಾವು ಡ್ಯಾನ್ಸ್‌ ಕಲಿಯುತ್ತಿದ್ದ ಶಾಲೆಗೆ ಬಂದಿದ್ದರು. ಅಲ್ಲಿ ನನ್ನ ನೋಡಿ, ಯಾರು ಇವಳು ಅಂತ ಕೇಳಿದರು. ಗೌರಿ ಶಂಕರ್‌ ಮಗಳು ಅಂತ ತಿಳಿದು, ಏಷ್ಟ್ ದೊಡ್ಡವಳಾಗಿದ್ದಾಳೆ ಅಂತ ಅಚ್ಚರಿಯಿಂದ ನನ್ನ ಮಾತನಾಡಿಸಿದರು. ಅಲ್ಲೇ ಅಮ್ಮನಿಗೆ ನನ್ನ ಒಂದು ಫೋಟೋಶೂಟ್‌ ಮಾಡಿಸಿಕ್ಕೆ ಹೇಳಿದರು. ಯಾಕೆ ಅಂತ ನನಗೂ ಗೊತ್ತಾಗಲಿಲ್ಲ ಆಗ. ಒಂದೆರಡು ಫೋಟೋಗಳನ್ನು ಪಾರ್ವತಮ್ಮ ಅವರಿಗೆ ಕಳುಹಿಸಿದಾಗ ಫೋಟೋ ನೋಡಿ ನೀನೇ ನಾಯಕಿ ಅಂದರೆ. ಆ ಮೇಲೆ ಮತ್ತೊಂದು ಫೋಟೋಶೂಟ್‌ ಆಯಿತು. ಡಾ ರಾಜ್‌ಕುಮಾರ್‌, ವರದಪ್ಪ ಎಲ್ಲರು ಕೂತು ಚರ್ಚೆ ಮಾಡಿದ ನಂತರ ಪಾರ್ವತಮ್ಮ, ಡಾ ರಾಜ್‌ಕುಮಾರ್‌, ವರಪದಪ್ಪ ಮೂವರು ಓಕೆ ಅಂದರು. ಹಾಗೆ ನಾನು ನಾಯಕಿ ಆದೆ.

ಶೂಟಿಂಗ್‌ ಜಾಗದಲ್ಲಿ ರೀ ಟೇಕ್‌, ಇನ್ನಷ್ಟು ಚೆನ್ನಾಗಿ ಮಾಡಬೇಕು ಕೇಳಿದ್ದುಂಟೆ?

ನಾನು ಅಪ್ಪು ಚಿತ್ರಕ್ಕೆ ನಾಯಕಿ ಆದಾಗ ನನಗೆ 17 ವರ್ಷ. ತೀರಾ ಚಿಕ್ಕ ವಯಸ್ಸು. ಫರ್‌ಪೆಕ್ಟ್‌, ರೀ ಟೇಕ್‌ ಇತ್ಯಾದಿ ಬಗ್ಗೆ ತಿಳವಳಿಕೆಯೇ ಇರಲ್ಲ. ಇದ್ದರೂ ಕೇಳುವಷ್ಟು ಧೈರ್ಯವಂತೂ ಇರುತ್ತಿರಲಿಲ್ಲ. ಬ್ಲೈಂಡ್‌ ಆಗಿ ನಿರ್ದೇಶಕರು ಹೇಳಿದಂತೆ ಕೇಳಿಕೊಂಡು ಹೋಗುತ್ತಿದ್ದೆ. ಜಸ್ಟ್‌ ನಾನು ಆಗ ಸ್ಟೂಡೆಂಟ್‌ ಅಷ್ಟೆ.

ಮತ್ತೆ ಮೊನ್ನೆ ‘ಅಪ್ಪು’ ಸಿನಿಮಾ ನೋಡಿದಾಗ ನಿಮಗೆ ಏನನಿಸಿತು?

ನಿಜ ಹೇಳಬೇಕು ಅಂದರೆ ಭಯಕ್ಕೆ ನಾನು ‘ಅಪ್ಪು’ ಚಿತ್ರವನ್ನು ಪೂರ್ತಿ ನೋಡೇ ಇಲ್ಲ. ಒಂದಿಷ್ಟು ಸೀನ್ಸ್‌, ಹಾಡು ಮಾತ್ರ ನೋಡಿದ್ದೆ. 23 ವರ್ಷಗಳ ನಂತರ ಚಿತ್ರಮಂದಿರದಲ್ಲಿ ಹೋಗಿ ‘ಅಪ್ಪು’ ಚಿತ್ರ ನೋಡಿದಾಗ ಅನಿಸಿದ್ದು, ತುಂಬಾ ಫ್ರೆಶ್‌ ಸಿನಿಮಾ. ಆಶಿಕಿ, ಡಿಡಿಎಲ್‌ಜೆ ಚಿತ್ರಗಳಂತೆ ದಾಖಲೆಯಲ್ಲಿ ಉಳಿದು ಬಿಡುವ ಎವರ್‌ಗ್ರೀನ್‌ ಪ್ರೇಮ ಕತೆ. ಸುಂದರವಾಗಿ ಮೂಡಿ ಬಂದಿರುವ ಮುಗ್ಧ ಪ್ರೇಮ ಕತೆ. ಇಡೀ ಸಿನಿಮಾ ಸುಚಿ-ಅಪ್ಪು ಪಾತ್ರಗಳು ಹೇಗೆ ಆವರಿಸಿಕೊಳ್ಳುತ್ತವೆ ಎಂಬುದನ್ನು ಥಿಯೇಟರ್‌ನಲ್ಲಿ ಜನರ ಸಂಭ್ರಮ ನೋಡಿ ತಿಳಿಯಿತು.

ತೆರೆ ಮೇಲೆ ಪುನೀತ್‌ ಬಂದ ಕ್ಷಣ ಏನನಿಸಿತು?

ತುಂಬಾ ಬೇಗ ಕಳೆದುಕೊಂಡ್ವಿ. ಮತ್ತೆ ಮರಳಿ ಬಂದು ಬಿಡಲಿ. ಬಂದಾಗ ನಾನು ಪುನೀತ್‌ ಕೈಯ ಹಿಡಿದು ‘ಹೌ ಆರ್‌ ಯೂ’ ಅಂತ ಕೇಳಬೇಕು. ನನ್ನ ಆ ಮಾತಿಗೆ ಎಂದಿನಂತೆ ಅಪ್ಪು ಸ್ಮೈಲ್‌ ಕೊಟ್ಟು ಉತ್ತರಿಸಲಿ ಅಂತ ಭಾವನೆ ಹುಟ್ಟಿಕೊಂಡು ಕ್ಷಣ ಭಾವುಕಳಾದೆ. ನನ್ನ ಮಗನ ಬಗ್ಗೆ ಕೇಳಿದ್ದ ಪುನೀತ್‌, ಅದೇ ನನ್ನ ಮಗನ ಜತೆಗೆ ಕೂತು ಅವರ ಮೊದಲ ಸಿನಿಮಾ ನೋಡುತ್ತಿದ್ದೇನೆ ಎಂದಾಗ ಲೈಫ್‌ ತುಂಬಾ ಚೆನ್ನಾಗಿ ಡಿಸೈನ್ ಮಾಡಿದ ಸರ್ಕಲ್‌ ಅನಿಸಿತು.

ಸಿನಿಮಾ ಹೊರತಾದ ನಿಮ್ಮ ಮತ್ತು ಪುನೀತ್‌ ಒಡನಾಟವನ್ನು ನೆನಪಿಸಿಕೊಂಡರೆ?

ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲೇ ಸಿಗುತ್ತಿದ್ವಿ. ಅವರು ಒಮ್ಮೆ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋಗೆ ಗೆಸ್ಟಾಗಿ ಬಂದಿದ್ದರು. ಆಗ ಅವರು ನನ್ನ ಮಗನ ಬಗ್ಗೆ ಕೇಳಿದರು. ಅವರು ಮಗಳ ಬಗ್ಗೆ ಹೇಳಿಕೊಂಡು, ವಿದೇಶದಲ್ಲಿ ಓದುತ್ತಿದ್ದಾಳೆ ಅಂತ ಹೇಳಿದ್ದು, ಇಬ್ಬರು ನಮ್ಮ ಮೊದಲ ಚಿತ್ರದ ಬಗ್ಗೆ ನೆನಪಿಸಿಕೊಂಡು ಆ ಚಿತ್ರದಲ್ಲಿ ನಟಿಸುತ್ತಿದ್ದವರು ಈಗ ಏನು ಮಾಡುತ್ತಿದ್ದಾರೆಂದು ಪುನೀತ್‌ ಕೇಳಿದ್ದು ಈಗ ನೆನಪು. ಒಮ್ಮೆ ಪುನೀತ್‌ ಅವರ ಹುಟ್ಟುಹಬ್ಬಕ್ಕೆ ಚಿರಂಜೀವಿ ಅವರಿಂದ ಫೋನ್‌ ಮಾಡಿಸಿ ವಿಷ್‌ ಮಾಡಿಸಿದ್ದನ್ನು ಪುನೀತ್‌ ಹೇಳಿದ್ದು ನಾನು ಮರೆಯಲಾಗದ ಸಂಗತಿ. ಯಾಕೆಂದರೆ ನಾನೇ ಮರೆತು ಬಿಟ್ಟ ಘಟನೆ ಅವರು ನೆನಪಿಟ್ಟುಕೊಂಡಿದ್ದನ್ನು ತಿಳಿದು ನನಗೆ ಅಚ್ಚರಿ ಆಯಿತು.

ಅಪ್ಪು ನಂತರ ಮತ್ತೆ ಪುನೀತ್‌ ಜತೆಗೆ ಸಿನಿಮಾ ಮಾಡೋ ಅವಕಾಶಗಳು ಬಂದಿತ್ತೇ?

ವೀರಕನ್ನಡಿಗ ಚಿತ್ರಕ್ಕೆ ನಾನೇ ನಾಯಕಿ ಆಗಬೇಕಿತ್ತು. ಜತೆಗೆ ಅರಸು ಅಥವಾ ಆಕಾಶ್‌ ಚಿತ್ರಕ್ಕೂ ನನಗೇ ಕೇಳಿದ್ದರು. ಡೇಟ್ಸ್‌ ಸಮಸ್ಯೆಯಿಂದ ಆ ಚಿತ್ರಗಲಲ್ಲಿ ನಟಿಸಲು ಆಗಲಿಲ್ಲ.

ಅಪ್ಪು ಚಿತ್ರಲವನ್ನು ಮತ್ತೆ ರೀಮೇಡ್‌ ಮಾಡಿದರೆ ಈಗ ಯಾರು ಮಾಡಬಹುದು?

ಚಾನ್ಸೇ ಇಲ್ಲ. ರೀ ಕ್ರಿಯೇಟ್‌ ಅಥವಾ ರೀಮೇಡ್‌ ಮಾಡೋ ಪ್ರಯತ್ನ ಇರಲಿ. ಹಾಗೊಂದು ಕಲ್ಪನೆ ಮಾಡಕ್ಕೂ ಸಾಧ್ಯವಿಲ್ಲ. ಪುನೀತ್‌ ಅವರ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವಿನಾಶ್‌ ಅವರದ್ದು ಎಂಥ ಪಾತ್ರ. ಪೂರಿ ಜಗನ್ನಾಥ್‌ ಅವರ ಸ್ಥಾನ ತುಂಬಕ್ಕೆ ಆಗುತ್ತಾ? ಖಂಡಿತ ಆಗಲ್ಲ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ಡಿ.15ಕ್ಕೆ 45 ಚಿತ್ರದ ಟ್ರೇಲರ್‌ ಬಿಡುಗಡೆ- 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರ