ಇಲ್ಲಿ ದೂರುಗಳಿಗೆ ಮರ್ಯಾದೆ ಇಲ್ಲ, ಪರಿಹಾರ ಸಿಗುವುದಿಲ್ಲ!

Published : Jun 20, 2025, 11:00 AM IST
Karnataka Film Chamber

ಸಾರಾಂಶ

ವಾಣಿಜ್ಯ ಮಂಡಳಿಗೆ ದೂರು ಕೊಡಲಾಯಿತು, ನಿರ್ಮಾಪಕರ ಸಂಘಕ್ಕೆ ದೂರು ಸಲ್ಲಿಸಲಾಯಿತು ಎಂಬಿತ್ಯಾದಿ ಮಾಹಿತಿಗಳು ಆಗಾಗ ಕೇಳಿಬರುತ್ತವೆ. ಆದರೆ ಆ ದೂರುಗಳು ಎಲ್ಲಿ ಹೋದವು? ಪರಿಹಾರ ಸಿಕ್ಕಿತೇ? ಈ ಕುರಿತು ಒಂದು ಆಸಕ್ತಿಪೂರ್ಣ ವಿಶ್ಲೇಷಣೆ.

- ಆರ್‌. ಕೇಶವಮೂರ್ತಿ

ಕನ್ನಡ ಚಿತ್ರರಂಗದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತ್ತೆ ಚಿತ್ರರಂಗದ ಅಂಗ ಸಂಸ್ಥೆಗಳು ಎನಿಸಿಕೊಂಡವು 10ಕ್ಕೂ ಹೆಚ್ಚಿವೆ. ಇದರ ಜತೆಗೆ ಕೋವಿಡ್‌ ಸಮಯದಲ್ಲಿ ಹುಟ್ಟಿಕೊಂಡ ಆ್ಯಕ್ಟಿವ್ ಪ್ರೊಡ್ಯೂಸರ್ಸ್‌ ತಂಡವೂ ಇದೆ. ಇಷ್ಟೆಲ್ಲಾ ಇದ್ದರೂ ಏನು ಪ್ರಯೋಜನ ಎನ್ನುವ ಮಾತುಗಳು ಈಗೀಗ ಕೇಳಿ ಬರುತ್ತಿದೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ಕಾರ್ಮಿಕರ ಒಕ್ಕೂಟ ಹೀಗೆ ಚಿತ್ರೋದ್ಯಮದ ಪ್ರಮುಖ ಸಂಘ ಸಂಸ್ಥೆಗಳು ಏನು ಮಾಡುತ್ತಿವೆ ಎಂಬುದು ಯಾರಿಗಾದರು ಗೊತ್ತಿದೆಯೇ?

ಚಿತ್ರರಂಗದಲ್ಲಿ ಹುಟ್ಟಿಕೊಳ್ಳುವ ಯಾವ ಸಮಸ್ಯೆಗಳಿಗೂ ಇಲ್ಲಿ ತಾರ್ಕಿಕ ಅಂತ್ಯ ಸಿಗಲ್ಲ. ಇಲ್ಲಿ ಬರೋ ದೂರುಗಳಿಗೆ ಕಿಮ್ಮತ್ತಿಲ್ಲ. ದೂರುದಾರು ಸಂಬಂಧಪಟ್ಟ ಸಂಘಗಳಿಗೆ ಬಂದು ಹೋಗುತ್ತಾರೆ. ಆರೋಪಿತರನ್ನು ಕರೆಸಿ ಮಾತನಾಡಿಸುವ ಶಕ್ತಿ ಇಲ್ಲಿರುವ ಯಾರಿಗೂ ಇಲ್ಲ ಎಂಬುದು ಬಹು ದೊಡ್ಡ ದುರಂತ.

ಹೋಗಲಿ ಚಿತ್ರರಂಗಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾದರೂ ಈ ಸಂಘ- ಸಂಸ್ಥೆಗಳು ಒಟ್ಟಾಗಿ ದ್ವನಿ ಎತ್ತಿ ಸರ್ಕಾರದ ಮುಂದೆ ನಿಂತಿವೆಯೇ ಎಂದರೆ ಅದೂ ಇಲ್ಲ. ಇತ್ತೀಚೆಗೆ ಬಂದ ದೂರು, ಕೇಳಿ ಬಂದ ಸಮಸ್ಯೆಗಳು, ಸಂಭ್ರಮಿಸಬೇಕಾದ ಸಂದರ್ಭಗಳನ್ನೇ ಒಮ್ಮೆ ನೋಡಿ.

ದೂರುಗಳು

1. ಸಂಜು ವೆಡ್ಸ್‌ ಗೀತಾ 2 ಚಿತ್ರತಂಡದಿಂದ ನಾಯಕಿ ರಚಿತಾ ರಾಮ್‌ ಮೇಲೆ ದೂರು

2. ತಮ್ಮ ಚಿತ್ರಕ್ಕೆ ಸ್ಕ್ರೀನ್‌ಗಳು ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡ ಮಾದೇವ ಚಿತ್ರತಂಡ

3. ಎರಡು ವರ್ಷಗಳ ಹಿಂದೆಯೇ ರಚಿತಾ ರಾಮ್‌ ವಿರುದ್ಧ ಉಪ್ಪಿ ರುಪೀ ಚಿತ್ರದ ನಿರ್ಮಾಪಕಿ ವಿಜಯ್‌ಲಕ್ಷ್ಮೀ ಅರಸ್‌ ದೂರು

4. ತಮ್ಮ ಜೀವನ ಕಥೆಯಾಧರಿತ ಚಿತ್ರಕ್ಕೆ ತಡೆ ನೀಡುವಂತೆ ಸಾಲುಮರದ ತಿಮ್ಮಕ್ಕ ದೂರು

ಹೀಗೆ ಸಾಲು ಸಾಲು ದೂರುಗಳು ಬರುತ್ತವೆ. ಆದರೆ ಅವುಗಳಿಗೆ ಪರಿಹಾರ ಸಿಗುವುದಿಲ್ಲ. ಎರಡು ದಿನ ಜೋರು ಸದ್ದು, ಆಮೇಲೆ ಮಹಾ ಮೌನ.

ಈ ದೂರಿನ ಜೊತೆಗೆ ಇನ್ನೊಂದಷ್ಟು ವಿಚಾರಗಳನ್ನು ನೋಡೋಣ.

1. ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕೆಂದು ಶಿವರಾಜ್‌ಕುಮಾರ್‌ ಮನೆಯಲ್ಲಿ ಸಭೆ ನಡೆಯಿತು. ಆ ಸಭೆ ಏನಾಯಿತು?

2. ತೆರಿಗೆ ವಿನಾಯಿತಿ, ಟಿಕೆಟ್‌ ರೇಟು ಸೇರಿದಂತ್ತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ಚಿತ್ರರಂಗದ ಮನವಿ ಪತ್ರ ಏನಾಯಿತು?

3. ಸ್ಟಾರ್‌ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕೆಂಬ ಒತ್ತಾಯವನ್ನು ಯಾರಾದರು ಹೀರೋಗಳಿಗೆ ಮುಟ್ಟಿಸಿದ್ದಾರೆಯೇ?

4. ಕರ್ನಾಟಕದಲ್ಲಿ ಪರಭಾಷೆಯ ಚಿತ್ರಗಳಿಗೆ ಸಿಗುವಷ್ಟು ಸ್ಕ್ರೀನ್‌ಗಳು ಕನ್ನಡ ಚಿತ್ರಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಕನ್ನಡ ಚಿತ್ರರಂಗದ ನಿಲುವು, ಹೋರಾಟ, ನಡೆ ಏನು?

5. ಕಲಾವಿದರ ಸಂಘಕ್ಕೆ ಯಾಕೆ ಹಲವು ವರ್ಷಗಳಿಂದ ಚುನಾವಣೆ ಆಗಿಲ್ಲ. ಕಲಾವಿದರು ತಮ್ಮ ಸಮಸ್ಯೆಗಳನ್ನು ಎಲ್ಲಿ ಹೇಳಿಕೊಳ್ಳಬೇಕು?

6. ಕರ್ನಾಟಕ ಚಲನಚಿತ್ರ ಅಕಾಡೆಮಿ ಜತೆಗೆ ಕನ್ನಡ ಚಿತ್ರರಂಗ ಎಷ್ಟರ ಮಟ್ಟಿಗೆ ನಂಟು ಇಟ್ಟುಕೊಂಡಿದೆ. ಅಕಾಡೆಮಿಯಿಂದ ಉದ್ಯಮಕ್ಕೆ ಆಗಬಹುದಾದ ಕೆಲಸ, ಯೋಜನೆಗಳು ಚಿತ್ರರಂಗಕ್ಕೆ ಗೊತ್ತಿವೆಯೇ? ಗೊತ್ತಿದ್ದರೆ ಅಕಾಡೆಮಿಯಿಂದ ಚಿತ್ರರಂಗ ಹೇಗೆ ದುಡಿಸಿಕೊಳ್ಳುತ್ತಿದೆ.

ಸಂಭ್ರಮಗಳು

1. ಕಳೆದ ವರ್ಷ ಮಾರ್ಚ್‌ 3ಕ್ಕೆ ಕನ್ನಡ ಚಿತ್ರರಂಗಕ್ಕೆ 90 ವರ್ಷಗಳನ್ನು ಪೂರೈಸಿದೆ. ಆದರೆ, ಇದನ್ನು ಸಂಭ್ರಮಿಸಬೇಕೆಂಬ ಆಲೋಚನೆಯೇ ಚಿತ್ರರಂಗಕ್ಕೆ ಇಲ್ಲ.

2. ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಅವರಿಗೆ ಪದ್ಮಶ್ರೀ ಬಂದಾಗ, ಒಂದೇ ಭಾಷೆಯಲ್ಲಿ 700 ಚಿತ್ರಗಳಲ್ಲಿ ನಟಿಸಿ ಗಿನ್ನೆಸ್‌ ದಾಖಲೆಗೇರಿದಾಗ ಅಲ್ಲಿನ ಚಿತ್ರರಂಗ ಸೇರಿ ಸಂಭ್ರಮಿಸಿತು. ಆದರೆ, 50 ವರ್ಷಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್‌ನಾಗ್‌ ಅವರಿಗೆ ಪದ್ಮಭೂಷಣ ಗೌರವ ದಕ್ಕಿದ್ದು ಚಿತ್ರರಂಗಕ್ಕೆ ಮುಖ್ಯ ವಿಷಯವೇ ಆಗಿಲ್ಲ!

3. ಮೇರುನಟ ಡಾ ರಾಜ್‌ಕುಮಾರ್‌ ನಂತರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಮತ್ತೊಬ್ಬ ಕನ್ನಡಿಗ ಛಾಯಾಗ್ರಾಹಕ ದಿ. ವಿ ಕೆ ಮೂರ್ತಿ ಅವರ ಶತಮಾನೋತ್ಸವ ಇತ್ತೀಚೆಗೆ ಬಂತು. ಈ ಬಗ್ಗೆ ಚಿತ್ರರಂಗಕ್ಕೆ ಮಾಹಿತಿನೇ ಇಲ್ಲ.

5. ಪ್ರತೀ ವರ್ಷ ಮಾರ್ಚ್‌ 3ಕ್ಕೆ ವಿಶ್ವ ಕನ್ನಡ ಸಿನಿಮಾ ದಿನ ಎಂದು ಈ ಹಿಂದೆ ಸಿಎಂ ಆಗಿದ್ದ ಬಸವರಾಜ್‌ ಬೊಮ್ಮಾಯಿ ಅವರ ಸರ್ಕಾರ ಘೋಷಣೆ ಮಾಡಿತ್ತು. ವಿಶ್ವ ಕನ್ನಡ ಸಿನಿಮಾ ದಿನದ ಬಗ್ಗೆ ಚಿತ್ರರಂಗದ ಯಾರಿಗೆ ಮಾಹಿತಿ ಇದೆ, ಇದ್ದರೆ ಅದನ್ನು ಹೇಗೆ ಆಚರಿಸಬಹುದಿತ್ತು?

6. ಸದ್ಯ ಕನ್ನಡ ಚಿತ್ರರಂಗಕ್ಕೆ ಐಕಾನ್, ಕ್ರೀಯಾಶೀಲ ನಟ ಎಂದರೆ ಶಿವರಾಜ್‌ಕುಮಾರ್‌ ಅವರು. ಅವರು ಚಿತ್ರರಂಗಕ್ಕೆ ಬಂದು 40 ವರ್ಷಗಳಾಗುತ್ತಿವೆ. ಇದು ಉದ್ಯಮದ ಸಂಭ್ರಮ ಆಗಬೇಕಿತ್ತಲ್ಲವೇ?

ಇವು ಚಿತ್ರರಂಗದ ಅಂಗಸಂಸ್ಥೆಗಳ ಪ್ರಸ್ತುತ ಸ್ಥಿತಿಯನ್ನು ತೋರುವ ಒಂದಿಷ್ಟು ಸ್ಯಾಂಪಲ್‌ಗಳು ಅಷ್ಟೆ. ಬಿಡುಗಡೆ ಆಗುತ್ತಿರುವ ಸಿನಿಮಾಗಳು ಸೋಲಿನಿಂದ ಆಚೆ ಬರುತ್ತಿಲ್ಲ. ಸೋಲಿನ ಸುಳಿಯಲ್ಲಿರುವ ಸಿನಿಮಾಗಳನ್ನು ಆಚೆ ತರುವುದಕ್ಕೆ ಚಿತ್ರರಂಗದ ಮಾತೃ ಸಂಸ್ಥೆಯಾದಿಯಾಗಿ ಯಾರ ಮುಂದೆಯೂ ಸರಿಯಾದ ಯೋಜನೆ ಇಲ್ಲ. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ಕಲಾವಿದರ ಸಂಘ ಸೇರಿದಂತೆ ಇಡೀ ಉದ್ಯಮದ ಅಂಗಸಂಸ್ಥೆಗಳು ಉತ್ತರಿಸಬೇಕಿದೆ.

PREV
Read more Articles on

Recommended Stories

ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪಲು ಭಯ : ಧನಂಜಯ
ಡೆವಿಲ್ ಪ್ರಚಾರಕ್ಕೆ ನಿಂತ ದರ್ಶನ್ ಪತ್ನಿ : ಫ್ಯಾನ್ಸ್ ಬೆಂಬಲ ಕೋರಿದ ವಿಜಯಲಕ್ಷ್ಮೀ