ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್ ಸಂದರ್ಶನ
ಆರ್. ಕೇಶವಮೂರ್ತಿ
ಮೂರು ವರ್ಷದ ಶ್ರಮ ‘ಮಾರ್ಟಿನ್’ ತೆರೆ ಮೇಲೆ ಬರುತ್ತಿರುವ ಹೊತ್ತಿನಲ್ಲಿ ಏನನಿಸುತ್ತಿದೆ?ಪರೀಕ್ಷೆ ಬರೆದ ವಿದ್ಯಾರ್ಥಿ ರಿಜಲ್ಟ್‌ಗಾಗಿ ಕಾಯುತ್ತಿರುವಂತಿದೆ. ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರ ಶ್ರಮಕ್ಕೆ ಬೆಲೆ ಸಿಗಲಿ, ಸಿನಿಮಾ ಮಾಡಿದ ಸಾರ್ಥಕ ಭಾವನೆ ಇದೆ. ‘ಮಾರ್ಟಿನ್’ ಚಿತ್ರದ ಗೆಲುವಿನ ಈ ವಿಶ್ವಾಸಕ್ಕೆ ಕಾರಣಗಳೇನು?12 ವರ್ಷಗಳ ನಂತರ ನಾನು ಮತ್ತು ಧ್ರುವ ಸರ್ಜಾ ಜತೆಯಾಗಿರುವುದು, ವಿಷುವಲ್ ಟ್ರೀಟ್‌ಮೆಂಟ್, ನನ್ನ ಸ್ಚೈಲಿನ ಸ್ಕ್ರೀನ್ ಪ್ಲೇ, ಇಲ್ಲಿಯವರೆಗೂ ಕಾಣದ ಅಥವಾ ನೋಡದ ಧ್ರುವ ಸರ್ಜಾ ಅವರು ಇಲ್ಲಿ ಕಾಣುತ್ತಾರೆ, ಅದ್ದೂರಿ ಮೇಕಿಂಗ್, ಯಾವುದೇ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಅಂಶಗಳ ಕಾರಣಕ್ಕೆ ‘ಮಾರ್ಟಿನ್’ ನನ್ನಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದೆ. ಚಿತ್ರದಲ್ಲಿ ಅಂಥ ಕತೆ ಏನಿದೆ?ಒಂದು ಸಾಲಿನಲ್ಲಿ ಚಿತ್ರದ ಕತೆ ಹೇಳಬೇಕು ಎಂದರೆ ದೇಶಾಭಿಮಾನ ಇರುವ ಒಬ್ಬ ಗ್ಯಾಂಗ್‌ಸ್ಟರ್ ಕತೆ. ದೇಶಕ್ಕಾಗಿ ಒಬ್ಬ ವ್ಯಕ್ತಿ ಹೀಗೂ ಬದುಕಬಹುದೇ ಎಂದು ಬೆರಗು ಮೂಡಿಸುವಂತಹ ಕತೆ ಇಲ್ಲಿದೆ. ನಿರ್ದೇಶಕರಾಗಿ ಬೇರೊಬ್ಬರ ಕತೆಯನ್ನು ತೆರೆ ಮೇಲೆ ತರುವ ಸವಾಲುಗಳೇನು?ನಾನು ಮೊದಲ ಬಾರಿಗೆ ಬೇರೊಬ್ಬರ ಕತೆಯನ್ನು ನಿರ್ದೇಶಿಸಿದ್ದೇನೆ. ಹೀಗಾಗಿ ನನ್ನ ಹಿಂದಿನ ಚಿತ್ರಗಳಿಗಿಂತಲೂ ಹೆಚ್ಚಿನ ಶ್ರದ್ದೆ ಹಾಕಿದ್ದೇನೆ. ಯಾಕೆಂದರೆ ‘ರಾಮನು ಕಾಡಿಗೆ ಹೋದನು...’ ಹೀಗೆ ಹೇಳೋದು ಕತೆ. ಆದರೆ, ರಾಮ ಕಾಡಿಗೆ ಹೇಗೆ, ಯಾಕೆ ಹೋದ ಮತ್ತು ಹೋದ ಮೇಲೆ ಏನೆಲ್ಲ ಆಯಿತು. ಹೋಗುವ ಮುನ್ನ ಏನೆಲ್ಲ ಆಗಿರುತ್ತದೆ ಎಂಬುದನ್ನು ದೃಶ್ಯಗಳ ರೂಪದಲ್ಲಿ ಕತೆ ಹೇಳುತ್ತಾ ಹೋಗಬೇಕು. ಪೇಪರ್ ಟು ಸ್ಕ್ರೀನ್ ಕನ್ವರ್ಟ್ ತುಂಬಾ ದೊಡ್ಡ ಸವಾಲು. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆಂಬ ನಂಬಿಕೆ ಇದೆ. ಅರ್ಜುನ್ ಸರ್ಜಾ ಅವರಿಂದ ಕತೆ ಕೇಳಿದಾಗ ಏನಿಸಿತು?ಯುವಕ, ದೇಶಾಭಿಮಾನ, ದೇಶದ ಗೌರವ ಇತ್ಯಾದಿಗಳನ್ನು ಒಳಗೊಂಡ ಕತೆಯಾದ್ದರಿಂದ ತುಂಬಾ ಚೆನ್ನಾಗಿದೆ ಅನಿಸಿತು. ಈ ಕತೆಯನ್ನು ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಹೇಳಿದ್ದೇನೆ. ಈ ಸಿನಿಮಾ ನೋಡುವ ಧ್ರುವ ಸರ್ಜಾ ಅಭಿಮಾನಿಗಳಿಗೆ ನೀವು ಹೇಳೋ ಮಾತು ಏನು?ಆ್ಯಕ್ಷನ್ ಪ್ರಿನ್ಸ್ ಎನ್ನುವ ಸ್ಟಾರ್ ಪಟ್ಟಕ್ಕೆ ಸೂಕ್ತ ನ್ಯಾಯ ಸಲ್ಲಿಸುವ ಸಿನಿಮಾ ಮಾಡಿದ್ದೇನೆ ಎಂದು ಹೇಳಬಲ್ಲೆ. ‘ಮಾರ್ಟಿನ್’ ಕೇವಲ ಆಕ್ಷನ್ ಸಿನಿಮಾನಾ?ಇಲ್ಲೊಂದು ಬ್ಯೂಟಿಫುಲ್ ಲವ್ ಸ್ಟೋರಿ ಕೂಡ ಇದೆ. ಆಗಲೇ ಹೇಳಿದಂತೆ ಇದುವರೆಗೂ ಧ್ರುವ ಸರ್ಜಾ ಅವರನ್ನು ನೋಡದ ಇಮೇಜಿನಲ್ಲಿ ‘ಮಾರ್ಟಿನ್’ನಲ್ಲಿ ನೋಡಬಹುದು. ಮೊದಲ ಬಾರಿಗೆ ಬೇರೆ ಭಾಷೆಗಳಿಗೂ ಹೋಗುತ್ತಿದ್ದೀರಿ. ನಿರ್ದೇಶಕರಾಗಿ ಏನು ಹೇಳುತ್ತೀರಿ?ನಮ್ಮ ಮನೆ, ನಮ್ಮ ಊರಿನಲ್ಲಿ ಏನಾದರೂ ತಪ್ಪು ಮಾಡಿದರೆ ನಮ್ಮ ತಾಯಿ ಕ್ಷಮಿಸುತ್ತಾಳೆ. ಆದರೆ, ಬೇರೆ ಊರಿಗೆ ಹೋಗುತ್ತಿದ್ದೇವೆ. ಆ ಊರು, ಅಲ್ಲಿನ ತಾಯಿ ನಮ್ಮನ್ನು ಹೇಗೆ ಪ್ರೀತಿಸುತ್ತಾಳೆ, ಅಭಿಮಾನಿಸುತ್ತಾಳೆ ಎನ್ನುವ ಕಾತರ ಇದ್ದೇ ಇದೆ. ಇದಕ್ಕೆ ಅ. 11ರ ನಂತರ ಉತ್ತರ ಸಿಗಬಹುದು. ಆದರೆ, ಬೇರೆ ತಾಯಿ ಮಕ್ಕಳು ಕೂಡ ಹೆಮ್ಮೆ ಪಡೋ ಸಿನಿಮಾ ಅಂತೂ ಮಾಡಿದ್ದೇವೆಂಬ ಭರವಸೆ ಕೊಡುತ್ತೇನೆ. ನಿಮ್ಮ ಮತ್ತು ನಿರ್ಮಾಪಕರ ನಡುವೆ ವಿವಾದಗಳ ಬಗ್ಗೆ ಹೇಳುವುದಾದರೆ?ಎಲ್ಲಕ್ಕಿಂತ ಸಿನಿಮಾ ದೊಡ್ಡದು. ಸಿನಿಮಾ ಎಂಬುದು ನಿರ್ದೇಶಕನ ಮಾಧ್ಯಮ. ನಿರ್ದೇಶಕನಾಗಿ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನ ಪ್ರಾಮಾಣಿಕತೆ ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಗೊತ್ತಾಗಲಿದೆ. ಆದರೆ, ದೊಡ್ಡ ಸಿನಿಮಾ ಮಾಡಬೇಕು ಎನ್ನುವ ನಿರ್ಮಾಪಕ ಉದಯ್ ಕೆ ಮಹ್ತಾ ಅವರ ಸಿನಿಮಾ ಪ್ಯಾಷನ್, ನಟ ಧ್ರುವ ಸರ್ಜಾ ಅವರ ಡೆಡಿಕೇಷನ್, ತಂತ್ರಜ್ಞರ ಶ್ರಮಕ್ಕೆ ಗೆಲವು ಸಿಗಬೇಕು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.