ನವದೆಹಲಿ : ದೇಶದ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಸಂಕಷ್ಟಗಳು ಮುಂದುವರಿದಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ರಿಲಯನ್ಸ್ ಗ್ರೂಪ್ ಮುಖ್ಯಸ್ಥರಾದ ಅನಿಲ್ ಅವರಿಗೆ ಸಂಬಂಧಿಸಿದ 7,500 ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್‌ನಲ್ಲಿರುವ ಅಂಬಾನಿ ಕುಟುಂಬದ ಮನೆ ಸೇರಿದಂತೆ ಅವರ ಸಮೂಹ ಕಂಪನಿಗಳ ಒಟ್ಟು 42 ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 4 ತಾತ್ಕಾಲಿಕ ಆದೇಶಗಳನ್ನು ಇ.ಡಿ ಹೊರಡಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ದೆಹಲಿಯ ಮಹಾರಾಜ ರಣಜಿತ್ ಸಿಂಗ್ ಮಾರ್ಗದಲ್ಲಿರುವ ರಿಲಯನ್ಸ್ ಸೆಂಟರ್‌ಗೆ ಸೇರಿದ ಜಮೀನು ಮತ್ತು ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಠಾಣೆ, ಹೈದರಾಬಾದ್, ಚೆನ್ನೈ ಮತ್ತು ಪೂರ್ವ ಗೋದಾವರಿಯಲ್ಲಿರುವ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 3,084 ಕೋಟಿ ರುಪಾಯಿ ಆಗಿದೆ.
2017ರಿಂದ 2019ರ ಅವಧಿಯಲ್ಲಿ ಅನಿಲ್ ಅಂಬಾನಿಯವರಿಗೆ ಸೇರಿದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿ (ಆರ್ಎಚ್ಎಫ್ಎಲ್) 2,965 ಕೋಟಿ ರು. ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್‌ನಲ್ಲಿ (ಆರ್ಸಿಎಫ್ಎಲ್) 2,045 ಕೋಟಿ ರು.ಗಳನ್ನು ಯೆಸ್ ಬ್ಯಾಂಕ್ ಹೂಡಿಕೆ ಮಾಡಿತ್ತು. ಆದರೆ, ಈ ಕಂಪನಿಗಳು ನಷ್ಟ ಅನುಭವಿಸಿದ ಕಾರಣ 2019ರ ಡಿಸೆಂಬರ್ನಲ್ಲಿ ಆ ಹೂಡಿಕೆಗಳು ಅನುತ್ಪಾದಕ ಎನ್ನಿಸಿಕೊಂಡಿದ್ದವು. ಅಲ್ಲದೆ, ಅನಿಲ್ ಅವರ ಕಂಪನಿಗಳು ತಾವು ಪಡೆದ ಹಣವನ್ನು ಮೂಲ ಉದ್ದೇಶ ಬಿಟ್ಟು ಅಕ್ರಮವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡ ಆರೋಪವನ್ನೂ ಹೊತ್ತಿವೆ.