ಸಾವಿನ ಹಾಡಿಯಲ್ಲಿ ನವಿಲು ಕುಣಿತ
ಚಿತ್ರ : ಎಲ್ಟು ಮುತ್ತಾ
ತಾರಾಗಣ: ಶೌರ್ಯ ಪ್ರತಾಪ್, ನವೀನ್ ಡಿ ಪಡಿಲು, ರಾ.ಸೂರ್ಯ, ಪ್ರಿಯಾಂಕ ಮಳಲಿ, ಕಾಕ್ರೋಜ್ ಸುಧಿ, ರಾಮ್ ದೇವನಗರಿ
ನಿರ್ದೇಶನ: ರಾ.ಸೂರ್ಯ
ರೇಟಿಂಗ್ : 3
ಆರ್.ಕೇಶವಮೂರ್ತಿ
ಆಗಾಗ ಸದ್ದು ಮಾಡುವ ಜಿಟಿ ಜಿಟಿ ಮಳೆ. ಇಳಿಜಾರಿನ ಗುಡ್ಡಗಳು, ಅವುಗಳ ನಡುವೆ ಅಲ್ಲಲ್ಲಿ ಗುಡಿಸಿಲುಗಳು, ಅಲ್ಲೊಂದು ಗುಂಪು. ನವಿಲಿನ ಮುಗ್ಧತೆ ಮತ್ತು ರೋಷ ಎರಡನ್ನೂ ಮೈಗೂಡಿಸಿಕೊಂಡಿರುವ ಆ ಗುಂಪಿನ ನಾಯಕ. ಆತನ ಹೆಸರು ಮುತ್ತಾ. ಕೆಲಸ ಮತ್ತು ಜಗಳ ಇವೆರಡು ಬಿಟ್ಟು ಹೆಚ್ಚು ಗೊತ್ತಿಲ್ಲದ ಈ ಮುತ್ತನ ಜೀವನದಲ್ಲಿ ಏನೆಲ್ಲ ಸಂಭವಿಸುತ್ತದೆ ಎಂಬುದನ್ನು ಹೇಳುತ್ತಲೇ ಮೇಕಿಂಗ್, ಹಿನ್ನೆಲೆ ಸಂಗೀತ, ಕ್ಯಾರೆಕ್ಟರ್ ಡಿಸೈನ್ ಮತ್ತು ಆ ಪಾತ್ರಧಾರಿಗಳ ಸ್ಕ್ರೀನ್ ಅಪ್ರೋಚ್‌ನಲ್ಲಿ ಹೊಸತನ ಕಾಯ್ದುಕೊಳ್ಳುತ್ತಾರೆ ನಿರ್ದೇಶಕ ರಾ ಸೂರ್ಯ.
ಸಾವಿನ ಮನೆಯಲ್ಲಿ ಡೋಲು ಬಾರಿಸುವ ಮುತ್ತಾ ಮತ್ತು ಹೆಣಗಳ ಮೇಲಿನ ಹೂವುಗಳನ್ನು ಎತ್ತಿಕೊಂಡು ಮಾರುವ ಎಲ್ಟು ಈ ಇಬ್ಬರ ಸ್ನೇಹದ ಕತೆಯಂತೆ ಕಂಡರೂ ಮತ್ಸರ, ದ್ವೇಷ, ಹೆಣ್ಣಿನ ಮೇಲಿನ ಆಸೆ, ಸಂಪತ್ತಿನ ಮೇಲೆ ದುರಾಸೆ, ಹಸಿವು, ಒಂದು ಸಮುದಾಯದ ವ್ಯಥೆಗಳು. ಹೀಗೆ ಒಂದೊಂದಾಗಿ ಜೋಡಿಸುತ್ತಾ ಪ್ರಕೃತಿ ಮಡಿಲಲ್ಲಿ ಮೂಲೆಗೆ ತಳ್ಳಲ್ಪಟ್ಟವರ ಬದುಕಿನ ಚಿತ್ರಣಗಳನ್ನು ‘ಎಲ್ಟು ಮುತ್ತಾ’ ಕಟ್ಟಿ ಕೊಡುತ್ತದೆ.
ನಿರ್ದೇಶಕನ ಕತೆಗೆ ಬೆನ್ನೆಲುಬಾಗಿ ತಾಂತ್ರಿಕ ತಂಡ ಶಕ್ತಿ ಮೀರಿ ಕೆಲಸ ಮಾಡಿರುವುದು ತೆರೆ ಮೇಲೆ ಕಾಣುತ್ತದೆ. ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್, ಎಲ್ಟು ಪಾತ್ರದಲ್ಲಿ ರಾ. ಸೂರ್ಯ ಹಾಗೂ ಪ್ರಮುಖ ಪಾತ್ರದಲ್ಲಿ ನವೀನ್ ಡಿ ಪಡಿಲ್ ಕಾಣಿಸಿಕೊಂಡು, ಕತೆಯ ಮುಖ್ಯ ಸ್ತಂಭಗಳಾಗುತ್ತಾರೆ. ಹೊಸ ರೀತಿಯ ಕತೆ, ನಿರೂಪಣೆ ಮತ್ತು ಸರ್ಪ್ರೈಸ್ ಎಲಿಮೆಂಟ್‌ಗಳನ್ನು ಬಯಸುವವರು ‘ಎಲ್ಟು ಮುತ್ತಾ’ ಚಿತ್ರ ನೋಡಬಹುದು.