2025ರ ಈ 10 ತಪ್ಪುಗಳನ್ನು 2026ರಲ್ಲಿ ತಿದ್ದಿಕೊಳ್ಳಿ

Published : Jan 02, 2026, 12:20 PM IST
Movie theatre

ಸಾರಾಂಶ

ಕಳೆದ ವರ್ಷ ಬಿಡುಗಡೆಯಾದ ಕೆಲವೊಂದು ಸಿನಿಮಾಗಳು ತಾಂತ್ರಿಕವಾಗಿ ಹೊಸತನ ಅಳವಡಿಸಿದ್ದರೂ ಚಿತ್ರಕಥೆಯಲ್ಲಿ ನಾವೀನ್ಯತೆ ಎಂಬುದು ಕಾಣೆಯಾಗಿತ್ತು. ಹೊಸತನವಿಲ್ಲದ ಕತೆಗಳಿಗೆ ಬೇಡಿಕೆ ಕಡಿಮೆ.

-ಪ್ರಿಯಾ ಕೆರ್ವಾಶೆ/ಕೆ. ಕೇಶವಮೂರ್ತಿ

1. ಹೊಸತನ ಸಿನಿಮಾದ ಜೀವಾಳವಾಗಬೇಕು.

ಕಳೆದ ವರ್ಷ ಬಿಡುಗಡೆಯಾದ ಕೆಲವೊಂದು ಸಿನಿಮಾಗಳು ತಾಂತ್ರಿಕವಾಗಿ ಹೊಸತನ ಅಳವಡಿಸಿದ್ದರೂ ಚಿತ್ರಕಥೆಯಲ್ಲಿ ನಾವೀನ್ಯತೆ ಎಂಬುದು ಕಾಣೆಯಾಗಿತ್ತು. ಹೊಸತನವಿಲ್ಲದ ಕತೆಗಳಿಗೆ ಬೇಡಿಕೆ ಕಡಿಮೆ.

2. ಹಣ ಖರ್ಚು ಮಾಡೋದಕ್ಕಿಂತಲೂ ತಲೆ ಖರ್ಚು ಮಾಡಿ.

ಕೋಟಿಗಟ್ಟಲೆ ಬಜೆಟ್‌, ಹಾಲಿವುಡ್ ತಂತ್ರಜ್ಞಾನ, ಫಾರಿನ್‌ ಶೂಟ್‌ ಇವನ್ನಷ್ಟೇ ಇಟ್ಟುಕೊಂಡು ಸುಮಾರಾದ ಕಥೆ ಹೇಳಲು ಹೊರಟರೆ ನಿರ್ಮಾಪಕನ ಸಾಲದ ಹೊರೆ ಹೆಚ್ಚಾಗುತ್ತದೆಯಷ್ಟೇ, ಸಿನಿಮಾ ಗೆಲ್ಲೋದಿಲ್ಲ. ಸದ್ಯಕ್ಕೆ ಅದ್ದೂರಿತನಕ್ಕಿಂತಲೂ ತಲೆ ಖರ್ಚು ಮಾಡಬೇಕಾದ್ದು ಮುಖ್ಯ.

3. ಪ್ರಾದೇಶಿಕತೆಗೆ ಮೆಚ್ಚುಗೆ.

ಜನಪ್ರಿಯ ಫಾರ್ಮ್ಯಾಟ್‌ಗೆ ಜೋತುಬೀಳುವುದು, ಯೂನಿವರ್ಸಲ್ ಸಿನಿಮಾ ಮಾಡುವುದು ಅಷ್ಟಾಗಿ ನಡೆಯದು. ಮಲಯಾಳಂ ಚಿತ್ರ ಗೆಲ್ಲುತ್ತಿರುವುದೇ ಪ್ರಾದೇಶಿಕ ಅನನ್ಯತೆಯಿಂದ. ಕಳೆದ ವರ್ಷ ಕೈ ಹಿಡಿದ ‘ಸು ಫ್ರಮ್‌ ಸೋ’, ಸಿನಿಮಾ ಕೂಡ ಇದಕ್ಕೆ ಉದಾಹರಣೆ.

4. ಸಿನಿಮಾ ರಿಲೀಸ್‌ಗೆ ವಿಳಂಬ ಬೇಡ

ಸಿನಿಮಾ ರೆಡಿ ಆಗಿ ವರ್ಷಾನುಗಟ್ಟಲೆ ನಂತರ ರಿಲೀಸ್ ಆಗುತ್ತಿದೆ. ಮೇಕಿಂಗ್‌, ವಿಎಫ್‌ಎಕ್ಸ್‌ ಎಂಬೆಲ್ಲ ಕಾರಣಕ್ಕೆ ಸಿನಿಮಾಗಳು ತೆರೆಗೆ ಬರಲು ಬಹಳ ವಿಳಂಬವಾಗುತ್ತಿವೆ. ಸಿನಿಮಾ ನಿಧಾನವಾದಷ್ಟೂ ಕಥೆ ಹೇಳುವ ಕ್ರಮದಲ್ಲಿನ ತಾಜಾತನ ಮರೆಯಾಗುತ್ತದೆ.

5. ಸ್ಟಾರ್‌ಗಳಿಂದ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಭ್ರಮೆಯಿಂದ ಹೊರಬನ್ನಿ.

ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ಅನ್ನುವುದಷ್ಟೇ ಇಲ್ಲಿ ಮುಖ್ಯ. ಸ್ಟಾರ್ ಇದ್ದರೆ ಹಾಕಿದ ಬಂಡವಾಳ ವಾಪಾಸ್‌ ತೆಗೆಯೋದು ಸುಲಭ ಎಂಬ ಭ್ರಮೆಯಿಂದ ಚಿತ್ರರಂಗ ಹೊರಬರಬೇಕಿದೆ. ಸ್ಟಾರ್‌, ಫ್ಯಾನ್ಸ್‌ ಅನ್ನುವುದು ಸೋಷಲ್‌ ಮೀಡಿಯಾದಲ್ಲಿ ಗೌಜಿ ಎಬ್ಬಿಸಿದಷ್ಟು ಥೇಟರ್‌ನಲ್ಲಿ ಕಲೆಕ್ಷನ್‌ ಮಾಡೋದಿಲ್ಲ ಎಂಬುದು ನಗ್ನ ಸತ್ಯ. ಮೋಹನ್‌ಲಾಲ್‌ ಅಭಿನಯದ ವೃಷಭ ಅದಕ್ಕೆ ಒಳ್ಳೆಯ ಉದಾಹರಣೆ.

6. ಇಡೀ ತಂಡ ಜೊತೆಗಿರಬೇಕು:

ಸಿನಿಮಾ ಬಿಡುಗಡೆ ಹೊತ್ತಿಗೆ ನಿರ್ದೇಶಕ, ನಿರ್ಮಾಪಕನ ಹೊರತಾಗಿ ಉಳಿದವರು ನಾಪತ್ತೆಯಾಗಿರುತ್ತಾರೆ. ಸಿನಿಮಾ ಬಿಡುಗಡೆಗೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಬೇರೆ ಯಾವುದೋ ಕ್ರೀಡೆ, ಸಿನಿಮಾದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಿನಿಮಾ ಮೂಹೂರ್ತದಲ್ಲಿ ಎಲ್ಲರೂ ಜೊತೆಯಾಗಿರುವಂತೆ ಸಿನಿಮಾ ಬಿಡುಗಡೆ ಹೊತ್ತಿನಲ್ಲೂ ಇಡೀ ತಂಡ ಜೊತೆಯಾಗಿ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರಚಾರ ಮಾಡಬೇಕು.

7. ಅರ್ಥಪೂರ್ಣವಾಗಿ ಮಾತನಾಡಿ:

ಪ್ರತಿಯೊಂದು ಸಂಭ್ರಮ, ಮಾಧ್ಯಮ ಗೋಷ್ಟಿ ಮಾಡಿಕೊಂಡು ಮುಹೂರ್ತದಲ್ಲಿ ಮಾತನಾಡಿದ್ದನ್ನೇ, ಕೊನೆವರೆಗೂ ಅದೇ ಮಾತನಾಡಿಕೊಂಡು ಹೋಗುವುದಕ್ಕೆ ಪ್ರಚಾರದ ಜಾತ್ರೆಗಳು ಯಾಕೆ ಬೇಕು? ಸಾಧ್ಯವಾದಷ್ಟು ಗುಟ್ಟಾಗಿ ಕೆಲಸ ಮಾಡಿದರೆ, ಅದೇ ದುುಪ್ಪಟ್ಟು ನಿರೀಕ್ಷೆಗೆ ಕಾರಣವಾತ್ತದೆ. ಅಪರೂಪಕ್ಕೆ ಕಂಟೆಂಟ್ ಬಿಡುಗಡೆ ಮಾಡಿದರೆ ಪ್ರೇಕ್ಷಕರ ಮನಸ್ಸಿನಲ್ಲಿ ಕುತೂಹಲ ಉಳಿಯುತ್ತದೆ.

8. ಕರ್ನಾಟಕ ಸುತ್ತಾಡಿ:

ಸಿನಿಮಾ ಎಂದರೆ ಬೆಂಗಳೂರು, ಮೈಸೂರು ಮಾತ್ರವಲ್ಲ. ಸಿನಿಮಾ ತಂಡಗಳು ಬೆಂಗಳೂರು ಬಿಟ್ಟು ರಾಜ್ಯದ ಹೊರಗೆ ಹೋಗಬೇಕು. ಇದು ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಮಾಡಿದರೆ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಸೇರಿಸುವುದಕ್ಕೆ ಅನುಕೂಲವಾಗುತ್ತದೆ.

9. ನಿಮ್ಮ ಸಿನಿಮಾ ಯಾರಿಗೆ?:

ಈಗ ಸಿನಿಮಾ ನೋಡುವ ವೇದಿಕೆಗಳು ಬದಲಾಗುತ್ತಿವೆ. ಕೆಲವು ಚಿತ್ರಗಳು ಕಂಟೆಂಟ್‌ ತುಂಬಾ ಚೆನ್ನಾಗಿದ್ದರೂ ಚಿತ್ರಮಂದಿರಗಳಲ್ಲಿ ಓಡದೆ ಟಿವಿ ಹಾಗೂ ಓಟಿಟಿಗಳಲ್ಲಿ ಗಮನ ಸೆಳೆದಿರುತ್ತವೆ. ಅಂದರೆ ತಮ್ಮ ಚಿತ್ರಗಳು ಬಿಗ್‌ ಸ್ಕ್ರೀನ್‌, ಓಟಿಟಿ ಅಥವಾ ಟಿವಿಗೋ ಎನ್ನುವ ಸ್ಪಷ್ಟತೆ ಇರಬೇಕು.

10. ವಿಶಿಷ್ಟ ಕತೆಗಳಿರಲಿ:

ತೀರಾ ಕಲ್ಪನೆಯ ಕತೆಗಳಿಗೆ ಈಗ ಕಾಲ ಇಲ್ಲ. ರಿಯಾಲಿಟಿಗೆ ಹತ್ತಿರವಾಗಿರಬೇಕು. ಕಲ್ಟ್‌ ಮಾದರಿಯ ಸಿನಿಮಾಗಳನ್ನೇ ಹೆಚ್ಚು ಹೆಚ್ಚು ನೋಡುತ್ತಿದ್ದಾರೆ. ಓಟಿಟಿಗಳ ಅಬ್ಬರದಲ್ಲಿ ಅದೇ ಮಾಸ್‌ ಜಾತ್ರೆಯ ಚಿತ್ರಗಳ ಹೊರತಾಗಿ ಜನ ಕೇಳಿರುವ, ನೋಡಿರುವ ಅಥವಾ ತಿಳಿದುಕೊಂಡಿರುವ ಕತೆ, ಘಟನೆಗಳಿಗೆ ತೆರೆ ಮೇಲೆ ಹೆಚ್ಚು ಬೆಲೆ ಇದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ತುಳು ಚಿತ್ರದಲ್ಲಿ ನಿರೂಪಕ ಜಯಪ್ರಕಾಶ್ ಶೆಟ್ಟಿ
ಶೂನ್ಯ ಸಂಪಾದನೆಯ ವರ್ಷದಲ್ಲಿ ಐದು ಐತಿಹಾಸಿಕ ಸಂಗತಿಗಳು