ವಿಶ್ವನಾಯಕ ಯಶ್ ಮತ್ತು ಟಾಕ್ಸಿಕ್ ಎಂಬ ಮಾಯಾವಾಸ್ತವ

Published : Aug 28, 2026, 12:15 PM IST
Yash Toxic Movie

ಸಾರಾಂಶ

ಯಶ್ ಈಗ ವಿಶ್ವನಾಯಕ. ಅವರು ಕನ್ನಡ ಸಿನಿಮಾವನ್ನು ಜಗತ್ತಿನ ದೊಡ್ಡ ಮಾರುಕಟ್ಟೆಯ ಮುಂದೆ ನಿಲ್ಲಿಸಬಲ್ಲರು. ಇದು ಸಾಮಾನ್ಯವಾದ ಕೆಲಸ ಅಲ್ಲ. ಕಥೆ, ಮಾತುಕತೆ, ಅಭಿಪ್ರಾಯ, ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎಂಬೆಲ್ಲ ಮಾತುಗಳನ್ನು ಮೀರಿದ ಸಾಧನೆ ಇದು.

ಯಶ್ ಈಗ ವಿಶ್ವನಾಯಕ. ಅವರು ಕನ್ನಡ ಸಿನಿಮಾವನ್ನು ಜಗತ್ತಿನ ದೊಡ್ಡ ಮಾರುಕಟ್ಟೆಯ ಮುಂದೆ ನಿಲ್ಲಿಸಬಲ್ಲರು. ಇದು ಸಾಮಾನ್ಯವಾದ ಕೆಲಸ ಅಲ್ಲ. ಕಥೆ, ಮಾತುಕತೆ, ಅಭಿಪ್ರಾಯ, ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎಂಬೆಲ್ಲ ಮಾತುಗಳನ್ನು ಮೀರಿದ ಸಾಧನೆ ಇದು. ಕನ್ನಡ ನಟನ ಚಿತ್ರಕ್ಕಾಗಿ ಭಾರತದ ಬೇರೆ ಭಾಷೆಯ ಪ್ರೇಕ್ಷಕರು ಕಾಯುತ್ತಾರೆ ಅಂದರೆ ಇದು ಕನ್ನಡ ಚಿತ್ರರಂಗದ ಸಂಪತ್ತು.

- ಜೋಗಿ

ಒಂದು ಸಿನಿಮಾವನ್ನು ಕೊಲ್ಲಲು ಕೆಟ್ಟ ಕಥೆ ಬೇಕಾಗಿಲ್ಲ. ಕೆಲವೊಮ್ಮೆ ತುಂಬಾ ದೊಡ್ಡ ಬಜೆಟ್ ಸಾಕು.

ಇದು ಟಾಕ್ಸಿಕ್ ಚಿತ್ರದ ಕುರಿತ ಹೇಳಿಕೆ ಅಲ್ಲ. ಟಾಕ್ಸಿಕ್ ಬಿಡುಗಡೆಯ ನಂತರ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿರುವ ಭ್ರಮೆಯ ಕುರಿತ ಮಾತು. ಒಂದು ಕನ್ನಡ ಸಿನಿಮಾ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಬಹುದು ಎಂಬುದನ್ನು ಟಾಕ್ಸಿಕ್ ಮತ್ತೊಮ್ಮೆ ತೋರಿಸಿದೆ. ಯಶ್ ಅವರ ಪರದೆಯ ಮೇಲಿನ ನಿಲುವು, ಆ್ಯಕ್ಷನ್ ಮತ್ತು ದೃಶ್ಯ ವೈಭವವನ್ನು ಮೆಚ್ಚುವವರಿದ್ದಾರೆ, ಕಥೆ, ನಿರೂಪಣೆ, ಎಡಿಟಿಂಗ್ ಮತ್ತು ಚಿತ್ರದ ಉದ್ದದ ಬಗ್ಗೆ ಪ್ರಶ್ನೆ ಎತ್ತುವವರೂ ಇದ್ದಾರೆ. ಇದರಲ್ಲಿ ಯಾವುದೇ ವೈರುಧ್ಯ ಹುಡುಕಬೇಕಾಗಿಲ್ಲ.

ಇವತ್ತು ಸಿನಿಮಾ ಬಿಡುಗಡೆಯಾಗುವ ಮೊದಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಶುರುವಾಗುತ್ತದೆ. ಎಷ್ಟು ಟಿಕೆಟ್ ಮಾರಾಟವಾಗಿದೆ, ಎಷ್ಟು ಕೋಟಿ ಅಡ್ವಾನ್ಸ್ ಬಂದಿದೆ, ಮೊದಲ ದಿನ ಎಷ್ಟು, ಮೊದಲ ವಾರಾಂತ್ಯ ಎಷ್ಟು, ಯಾವ ರಾಜ್ಯದಲ್ಲಿ ಎಷ್ಟು, ಯಾವ ಭಾಷೆಯಲ್ಲಿ ಎಷ್ಟು? ಅಂದರೆ ಈಗ ಸಿನಿಮಾ ಅಂದರೆ ಒಂದೊಳ್ಳೆಯ ಕಥೆಯಷ್ಟೇ ಅಲ್ಲ, ಅದನ್ನು ಮೀರಿದ ಲೆಕ್ಕಾಚಾರ ಕೂಡ. ಈ ಲೆಕ್ಕಾಚಾರ ತಪ್ಪಲ್ಲ. ಸಿನಿಮಾ ಒಂದು ಉದ್ಯಮ. ಅದರಲ್ಲಿ ಹಣ ಇರಬೇಕು, ಹೂಡಿಕೆ ಮರಳಬೇಕು, ನಿರ್ಮಾಪಕ ಬದುಕಬೇಕು. ಆದರೆ ಸಿನಿಮಾ ಕೇವಲ ಇಂಥ ಲೆಕ್ಕಾಚಾರವಷ್ಟೇ ಆಗಿಬಿಟ್ಟಾಗ ಸಮಸ್ಯೆ ಶುರುವಾಗುತ್ತದೆ.

ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ಅದರ ಮಾರುಕಟ್ಟೆಯ ಲೆಕ್ಕ ಶುರುವಾಗಿತ್ತು. ಯಶ್ ಅವರ ಹಿಂದಿನ ಚಿತ್ರಗಳ ಮಾರುಕಟ್ಟೆ, ಅವರ ಅಭಿಮಾನಿ ಬಳಗ, ಬಹುಭಾಷಾ ಬಿಡುಗಡೆ, ಚಿತ್ರದ ಪ್ರಮಾಣ ಇವೆಲ್ಲ ಸೇರಿ ಸಿನಿಮಾವನ್ನು ಬಿಡುಗಡೆಯಾಗುವ ಮೊದಲೇ ಒಂದು ಮೆಗಾಪ್ರಾಡಕ್ಟ್ ಮಾಡಿಬಿಟ್ಟಿದ್ದವು. ಇದನ್ನು ನಾವು ಯಶ್ ಅವರ ಮಾರ್ಕೆಟ್ ವ್ಯಾಲ್ಯೂ ಅಂದುಕೊಳ್ಳಬಹುದು. ಇಂಡಸ್ಟ್ರಿ ಕತೆಯನ್ನು ನೋಡುವುದಿಲ್ಲ, ವ್ಯಾಪಾರದ ಸಾಧ್ಯತೆಯನ್ನು ನೋಡುತ್ತದೆ. ಸ್ಟಾರ್‌ನ ಮಾರುಕಟ್ಟೆಯನ್ನು ಸಿನಿಮಾ ಉಳಿಸಬಹುದು, ಆದರೆ ಸಿನಿಮಾ ಇಲ್ಲದಿದ್ದರೆ ಸ್ಟಾರ್‌ನ ಮಾರುಕಟ್ಟೆ ಉಳಿಯಲಾರದು.

ಕೆಜಿಎಫ್ ಕನ್ನಡ ಸಿನಿಮಾದ ಇತಿಹಾಸವನ್ನು ಬದಲಿಸಿತು. ಅದು ಕನ್ನಡ ಸಿನಿಮಾಕ್ಕೆ ಹೊರಗೆ ಮಾರುಕಟ್ಟೆ ಇದೆ ಎಂದು ಸ್ಯಾಂಡಲ್‌ವುಡ್ ನಂಬುವಂತೆ ಮಾಡಿತು. ಕನ್ನಡದ ಸಿನಿಮಾ ಜಗತ್ತನ್ನೇ ಗೆಲ್ಲಬಹುದು ಎಂಬ ನಂಬಿಕೆ ಹುಟ್ಟಿತು. ಆದರೆ ಬಹುತೇಕರು ಕೆಜಿಎಫ್ ಎಂದರೆ ಕಪ್ಪು ಬಣ್ಣ, ದೊಡ್ಡ ಕಾರು, ದೊಡ್ಡ ಗನ್, ದೊಡ್ಡ ಕಟ್ಟಡ, ದೊಡ್ಡ ವಿಲನ್, ದೊಡ್ಡ ನಾಯಕ, ದೊಡ್ಡ ಡೈಲಾಗ್, ಅಬ್ಬರಿಸುವ ಹಿನ್ನೆಲೆ ಸಂಗೀತ ಎಂದುಕೊಂಡರು. ಕೆಜಿಎಫ್ ಅನ್ನು ಗೆಲ್ಲಿಸಿದ್ದು ಅದರ ಗಾತ್ರ ಮಾತ್ರವಲ್ಲ. ಅದರೊಳಗಿದ್ದ ಹಸಿವು, ಅದರ ಪಾತ್ರಗಳ ಮಹತ್ವಾಕಾಂಕ್ಷೆ, ಅದರ ಕಥೆಯ ವೇಗ, ಅದರ ದೃಶ್ಯಕಲ್ಪನೆ ಮತ್ತು ಅದನ್ನು ಹೇಳುವ ಧೈರ್ಯ. ಗೆಲುವಿನ ಸೂತ್ರವನ್ನು ನಕಲು ಮಾಡಬಹುದು, ಆದರೆ ಆ ಹಸಿವನ್ನು ನಕಲು ಮಾಡಲಾಗುವುದಿಲ್ಲ. ಕೆಜಿಎಫ್‌ನ ನಂತರ ಬಂದ ಚಿತ್ರಗಳಲ್ಲಿ ಅಗಾಧತೆ ಇತ್ತು, ಕೆಜಿಎಫ್ ಚಿತ್ರದ ಹಸಿವು ಇರಲಿಲ್ಲ.

ಟಾಕ್ಸಿಕ್ ಚಿತ್ರವನ್ನು ನಾವು ಈ ದಿಕ್ಕಿನಲ್ಲಿ ಚರ್ಚಿಸಬೇಕಾಗಿದೆ. ಅದು ಎಷ್ಟು ಕೋಟಿ ಗಳಿಸುತ್ತದೆ ಎಂಬುದಕ್ಕಿಂತ ಅದು ಕನ್ನಡ ಸಿನಿಮಾಗಳ ಆರ್ಥಿಕತೆಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಮುಖ್ಯ. ದೊಡ್ಡ ಸ್ಟಾರ್, ದೊಡ್ಡ ಬಜೆಟ್, ಬಹುಭಾಷಾ ಮಾರುಕಟ್ಟೆ, ಜಾಗತಿಕ ಬಿಡುಗಡೆ, ದೊಡ್ಡ ಪ್ರಚಾರ, ಮೊದಲ ದಿನವೇ ದೊಡ್ಡ ಮೊತ್ತವನ್ನು ವಾಪಸ್ ಪಡೆಯುವ ಒತ್ತಡ -ಇವೆಲ್ಲ ಒಂದು ಸಿನಿಮಾ ನಿರ್ಮಾಣದ ಮೇಲೆ ಪ್ರಭಾವ ಬೀರುತ್ತವೆ. ನಿರ್ದೇಶಕನ ದಾರಿ ತಪ್ಪಿಸುತ್ತವೆ. ನಟನ ಹೆಗಲ ಮೇಲೆ ಭಾರ ಹೊರಿಸುತ್ತವೆ. ಒಂದು ಹಂತದ ನಂತರ ಸಿನಿಮಾ ಮಾಡುವುದಕ್ಕಿಂತ ಸಿನಿಮಾ ಮಾರಾಟ ಮಾಡುವುದೇ ಮುಖ್ಯವಾಗಿಬಿಟ್ಟರೆ, ಸಿನಿಮಾ ತನ್ನ ಸಹಜ ಸ್ವಭಾವವನ್ನು ಕಳೆದುಕೊಳ್ಳುತ್ತದೆ. ಕಥೆಗಿಂತ ಟ್ರೇಲರ್ ಮುಖ್ಯವಾಗುತ್ತದೆ. ಸಿನಿಮಾದ ಆಯಸ್ಸಿಗಿಂತ ಮೊದಲ ಮೂರು ದಿನಗಳ ಗಳಿಕೆ ಮುಖ್ಯವಾಗುತ್ತದೆ. ಪಾತ್ರಗಳಿಗಿಂತ ಸ್ಟಾರ್ ಇಮೇಜ್ ಮುಖ್ಯವಾಗುತ್ತದೆ. ನಿರ್ದೇಶಕನ ದೃಷ್ಟಿಗಿಂತ ಮಾರುಕಟ್ಟೆಯ ನಿರೀಕ್ಷೆ ಮುಖ್ಯವಾಗುತ್ತದೆ. ಆಗ ನಾವು ಸಿನಿಮಾ ಮಾಡುತ್ತಿರುವುದಿಲ್ಲ, ನಾವು ಒಂದು ದುಬಾರಿ ಪ್ರಾಡಕ್ಟನ್ನು ತಯಾರಿಸುತ್ತಿರುತ್ತೇವೆ.

ದೊಡ್ಡ ಬಜೆಟ್‌ನ ದೊಡ್ಡ ಸಮಸ್ಯೆಯೇ ಇದು. ಒಂದು ಸಿನಿಮಾ ನೂರು ಕೋಟಿ ರೂಪಾಯಿಗೆ ತಯಾರಾದಾಗ ನಿರ್ದೇಶಕನಿಗೆ ಇರುವ ಸ್ವಾತಂತ್ರ್ಯ ಅದೇ ಸಿನಿಮಾದ ಬಜೆಟ್ಟು ಐನೂರು ಕೋಟಿ ರೂಪಾಯಿ ಮುಟ್ಟಿದಾಗ ಕಡಿಮೆಯಾಗುತ್ತದೆ. ಹಾಕಿದ ಹಣ ವಾಪಸ್ ತರಬೇಕು. ಹೂಡಿಕೆದಾರನಿಗೆ ಉತ್ತರ ಕೊಡಬೇಕು. ವಿತರಕನಿಗೆ ಉತ್ತರ ಕೊಡಬೇಕು. ಸ್ಟಾರ್‌ನ ಮಾರುಕಟ್ಟೆಯನ್ನು ಕಾಪಾಡಬೇಕು. ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಬೇಕು. ಓಟಿಟಿ ಹಕ್ಕುಮಾರಾಟ ಮಾಡಬೇಕು. ಹೀಗಾಗಿ ನಿರ್ದೇಶಕನ ಮುಂದೆ ‘ನಾನು ಏನು ಹೇಳಬೇಕು?’ ಎಂಬ ಪ್ರಶ್ನೆಗಿಂತ ‘ನನ್ನ ಸಿನಿಮಾವನ್ನು ಹೇಗೆ ಮಾರಾಟ ಮಾಡಬೇಕು?’ ಎಂಬ ಪ್ರಶ್ನೆ ಮೂಡಬಹುದು. ಇದು ಕಲೆಗೆ ಅಪಾಯಕಾರಿ. ಏಕೆಂದರೆ ಕಲೆ ಒಂಚೂರು ಹುಚ್ಚುತನವನ್ನು ಕೇಳುತ್ತದೆ, ಒಂದಿಷ್ಟು ಎಡವಟ್ಟುಗಳ ನಡುವೆಯೇ ಹುಟ್ಟುತ್ತದೆ. ದೊಡ್ಡ ಬಜೆಟ್ ವ್ಯಾಮೋಹದ ವಿರೋಧಿ, ಪರ್ಫೆಕ್ಷನ್ ಪ್ರೇಮಿ.

ಹಿರಿಯ ನಿರ್ದೇಶಕ ಟಿಎನ್ ಸೀತಾರಾಮ್ ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದರು. ಐನೂರು ಕೋಟಿ ಬಜೆಟ್ಟಿನ ಸಿನಿಮಾ ಬಂದಿದೆ ಸರಿ, ಆದರೆ ಒಬ್ಬ ಕೇವಲ ಐದು ಕೋಟಿ ರೂಪಾಯಿಯ ಸಿನಿಮಾ ಮಾಡಬೇಕಾಗಿ ಬಂದಾಗ ಏನಾಗುತ್ತದೆ? ಮುಂದಿನ ಹೊಸ ನಿರ್ದೇಶಕನಿಗೆ ಯಾರು ಅವಕಾಶ ಕೊಡುತ್ತಾರೆ? ಹೊಸ ನಟನನ್ನು ಯಾರು ನಂಬುತ್ತಾರೆ? ಒಳ್ಳೆಯ ಕಥೆ ಬರೆದ ಬರಹಗಾರನಿಗೆ ಯಾರು ಹಣ ಕೊಡುತ್ತಾರೆ? ಪ್ರಯೋಗ ಮಾಡುವ ನಿರ್ದೇಶಕನಿಗೆ ಯಾರು ಜಾಗ ಕೊಡುತ್ತಾರೆ? ಈ ಪ್ರಶ್ನೆಗಳು ಬಾಕ್ಸ್ ಆಫೀಸ್ ಸಂಖ್ಯೆಗಳಿಗಿಂತ ಮುಖ್ಯ. ದೊಡ್ಡ ಸಿನಿಮಾಗಳು ಉದ್ಯಮಕ್ಕೆ ಹಣ ತರಬಹುದು, ಆದರೆ ಸಣ್ಣ ಸಿನಿಮಾಗಳು ಉದ್ಯಮಕ್ಕೆ ಹೊಸ ರಕ್ತ ತರುತ್ತವೆ. ದೊಡ್ಡ ಸಿನಿಮಾಗಳು ಮಾರುಕಟ್ಟೆಯನ್ನು ವಿಸ್ತರಿಸುತ್ತವೆ, ಸಣ್ಣ ಸಿನಿಮಾಗಳು ಸಿನಿಮಾದ ಭಾಷೆಯನ್ನು ವಿಸ್ತರಿಸುತ್ತವೆ. ದೊಡ್ಡ ಸಿನಿಮಾ ಸಾವಿರಾರು ಜನರನ್ನು ಒಂದೇ ಸಮಯದಲ್ಲಿ ಥಿಯೇಟರ್‌ಗೆ ಕರೆತರುತ್ತದೆ, ಸಣ್ಣ ಸಿನಿಮಾ ನಾಳೆಯ ಪ್ರೇಕ್ಷಕನನ್ನು ಸೃಷ್ಟಿಸುತ್ತದೆ. ಒಂದು ಉದ್ಯಮವನ್ನು ಬೆಳೆಸುತ್ತದೆ, ಇನ್ನೊಂದು ಉದ್ಯಮಕ್ಕೆ ಅರ್ಥ ಕೊಡುತ್ತದೆ.

ನಮಗೆ ಹಲವು ಭ್ರಮೆಗಳಿವೆ. ಐದು ಕೋಟಿ ಸಿನಿಮಾವನ್ನು ಐನೂರು ಕೋಟಿ ಸಿನಿಮಾದ ಜೊತೆ ಹೋಲಿಸುತ್ತೇವೆ. ದೊಡ್ಡ ಸ್ಟಾರ್ ಇಲ್ಲ, ದೊಡ್ಡ ಸೆಟ್ ಇಲ್ಲ, ದೊಡ್ಡ ಪ್ರಚಾರ ಇಲ್ಲದಿದ್ದರೆ ಅದುಸಣ್ಣ ಸಿನಿಮಾ ಎಂದುಕೊಳ್ಳುತ್ತೇವೆ. ಆದರೆ ಒಂದು ಸಣ್ಣ ಕೋಣೆಯಲ್ಲಿ ಇಬ್ಬರು ಮನುಷ್ಯರು ಮಾತನಾಡುವ ದೃಶ್ಯ ನಮ್ಮನ್ನು ಹತ್ತು ವರ್ಷ ಕಾಡಬಹುದು. ಐನೂರು ಕೋಟಿ ಖರ್ಚು ಮಾಡಿದ ಯುದ್ಧದ ದೃಶ್ಯ ಐದು ದಿನದಲ್ಲಿ ಮರೆತುಹೋಗಬಹುದು.

ಪ್ಯಾನ್-ಇಂಡಿಯಾ ಎಂಬ ಪದವೂ ಈಗ ಒಂದು ಮಾರುಕಟ್ಟೆಯ ಟ್ಯಾಗ್

ಪ್ಯಾನ್-ಇಂಡಿಯಾ ಎಂಬ ಪದವೂ ಈಗ ಒಂದು ಮಾರುಕಟ್ಟೆಯ ಟ್ಯಾಗ್ ಆಗಿಬಿಟ್ಟಿದೆ. ಒಂದು ಚಿತ್ರವನ್ನು ನಾಲ್ಕು ಅಥವಾ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದರೆ ಅದು ಪ್ಯಾನ್-ಇಂಡಿಯಾ ಸಿನಿಮಾ ಆಗುವುದಿಲ್ಲ. ಒಂದು ಕಥೆ ತನ್ನ ಸ್ಥಳೀಯತೆಯನ್ನು ಕಳೆದುಕೊಳ್ಳದೆ ಬೇರೆ ಭಾಷೆಯ ಮನುಷ್ಯನ ಮನಸ್ಸಿಗೆ ಹೋಗಬೇಕು. ಅದು ಕಷ್ಟ. ಅದಕ್ಕೆ ಹಣಕ್ಕಿಂತ ಬರವಣಿಗೆ ಬೇಕು. ಮಾರ್ಕೆಟಿಂಗ್‌ಗಿಂತ ಭಾವನೆ ಬೇಕು. ಕಾಂತಾರದ ದೊಡ್ಡ ಶಕ್ತಿ ಅದು ಕನ್ನಡತನವನ್ನು ಮರೆಮಾಡಲಿಲ್ಲ ಎಂಬುದರಲ್ಲಿ ಇತ್ತು. ಅದು ತನ್ನ ಮಣ್ಣನ್ನು, ತನ್ನ ನಂಬಿಕೆಯನ್ನು, ತನ್ನ ಜನಪದವನ್ನು, ತನ್ನ ಸಂಘರ್ಷವನ್ನು ಮುಂದೆ ಇಟ್ಟಿತು. ಅದು ಸ್ಥಳೀಯವಾಗಿತ್ತು. ಆದರೆ ಅದರ ಭಾವನೆ ಸ್ಥಳೀಯವಾಗಿರಲಿಲ್ಲ. ಇದೇ ಪ್ಯಾನ್-ಇಂಡಿಯಾದ ನಿಜವಾದ ಅರ್ಥ.

ಮುಂದೆ ಕನ್ನಡ ಚಿತ್ರರಂಗದಲ್ಲಿ ಎರಡು ದಾರಿಗಳು ಸ್ಪಷ್ಟವಾಗಬಹುದು. ಒಂದು ದಾರಿ ದೊಡ್ಡ ಸ್ಟಾರ್‌ಗಳ, ದೊಡ್ಡ ಬಜೆಟ್‌ಗಳ, ದೊಡ್ಡ ಮಾರುಕಟ್ಟೆಗಳ, ದೊಡ್ಡ ಅಪಾಯಗಳ ದಾರಿ. ಇನ್ನೊಂದು ದಾರಿ ಸಣ್ಣ ಬಜೆಟ್‌ಗಳ, ಹೊಸ ಮುಖಗಳ, ಹೊಸ ಕಥೆಗಳ, ಹೊಸ ನಿರ್ದೇಶಕರ, ಕಡಿಮೆ ಅಪಾಯದ ಆದರೆ ದೊಡ್ಡ ಕಲ್ಪನೆಯ ದಾರಿ. ದೊಡ್ಡ ಸ್ಟಾರ್‌ಗಳು ಉದ್ಯಮವನ್ನು ಉಳಿಸಬಹುದು. ಆದರೆ ಹೊಸ ನಿರ್ದೇಶಕರು ಉದ್ಯಮವನ್ನು ಬದಲಿಸುತ್ತಾರೆ. ಹೊಸ ಬರಹಗಾರರು ಭಾಷೆಯನ್ನು ಬದಲಿಸುತ್ತಾರೆ. ಹೊಸ ನಟರು ಪ್ರೇಕ್ಷಕರ ಕಲ್ಪನೆಯನ್ನು ಬದಲಿಸುತ್ತಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನವಿಲ್ಲ
ಯಶ್‌ ಟಾಕ್ಸಿಕ್‌ ಮೊದಲ ದಿನದ ಕಲೆಕ್ಷನ್ ರು.125 ಕೋಟಿ