ಸಿನಿವಾರ್ತೆ
ವಿಜಯ ರಾಘವೇಂದ್ರ ನಟನೆಯ ‘ಗ್ರೇ ಗೇಮ್ಸ್’ ಸಿನಿಮಾದ ಮೂಲಕ ಜಯ್ ಎಂಬ ಹುಡುಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ವಿಜಯ್ ರಾಘವೇಂದ್ರ ಅಕ್ಕನ ಮಗ ಎನ್ನುವುದು ವಿಶೇಷ. ಹೀಗಾಗಿ ಈ ಟ್ರೇಲರ್ ಲಾಂಚ್‌ನಲ್ಲಿ ಫ್ಯಾಮಿಲಿ ಕಾರ್ಯಕ್ರಮದ ಆಪ್ತತೆಯೂ ಇತ್ತು.
ರೋರಿಂಗ್ ಸ್ಟಾರ್ ಶ್ರೀಮುರಳಿ, ‘ನಾವೆಲ್ಲ ಮುದ್ದಾಗಿ ಬೆಳೆಸಿದ ಹುಡುಗ ಜಯ್. ನಮ್ಮ ಅಕ್ಕ ಕಲಿಕೆಯ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ನಂಗೆ 3 ಸ್ಕೂಲ್ ಬದಲಾಯಿಸಿದ್ದಳು. ಅಂಥಾದ್ರಲ್ಲಿ ಜಯ್ ಬಂದು ನಾನು ಓದಲ್ಲ, ಆ್ಯಕ್ಟರ್ ಆಗ್ತೀನಿ ಅಂದಾಗ ಆಕೆಗೆ ಶಾಕ್ ಆಗಿತ್ತು. ಆದರೆ ನಾವೆಲ್ಲ ಆತನ ಬೆಂಬಲಕ್ಕೆ ನಿಂತೆವು’ ಎಂದು ಅಳಿಯನ ಬೆನ್ನು ತಟ್ಟಿದರು.ನಾಯಕ ವಿಜಯ ರಾಘವೇಂದ್ರ, ‘ನನ್ನ ಪತ್ನಿ ಸ್ಪಂದನಾ ಅಂದರೆ ಜಯ್‌ಗೆ ಅಚ್ಚುಮೆಚ್ಚು. ಆಕೆಯನ್ನು ನಾವೆಲ್ಲ ಕಳೆದುಕೊಂಡಾಗ ಈ ಹುಡುಗನನ್ನು ಸಮಾಧಾನ ಮಾಡುವುದೇ ಕಷ್ಟವಾಗಿತ್ತು. ಈತ ಸಿನಿಮಾ ಕ್ಷೇತ್ರಕ್ಕೆ ಬಂದಾಗ, ನೀನು ನಿರ್ದೇಶಕರ ಬಳಿ ವಿದ್ಯಾರ್ಥಿ ರೀತಿ ಇರಬೇಕು ಎಂದಿದ್ದೆ. ಅದನ್ನೇ ಪಾಲಿಸಿದ್ದಾನೆ’ ಎಂದರು.
ನಿರ್ದೇಶಕ ಗಂಗಾಧರ್ ಸಾಲಿಮಠ್, ‘ಈ ಹುಡುಗ ನಮ್ಮ ಸಿನಿಮಾದಲ್ಲಿ ನಟಿಸುತ್ತಾನೆ ಎಂದಾಗ ವರ್ಕ್‌ಶಾಪ್ ಅನ್ನೇ ಬಂಕ್ ಮಾಡಿದ್ರೆ ಏನ್ ಮಾಡೋದಪ್ಪಾ ಅಂದುಕೊಂಡಿದ್ದೆ. ಆದರೆ ನನ್ನೆಲ್ಲ ಆತಂಕವನ್ನೂ ಸುಳ್ಳು ಮಾಡಿ ಬಹಳ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ನಟಿಸಿದ್ದಾನೆ. ಈ ಮೌಲ್ಯಗಳೇ ಈತನನ್ನು ನೆಕ್ಸ್ಟ್ ಲೆವೆಲ್‌ನಲ್ಲಿ ನಿಲ್ಲಿಸುತ್ತದೆ’ ಎಂದು ಶಹಭಾಸ್‌ಗಿರಿ ಕೊಟ್ಟರು.ನಟ ಜಯ್, ಅತ್ತೆ ಸ್ಪಂದನಾರನ್ನು ನೆನೆಸಿಕೊಂಡು, ‘ನಾನು ಈ ಸಿನಿಮಾಗೆ ಆಯ್ಕೆಯಾದಾಗ ಮೊದಲು ಅಭಿನಂದಿಸಿದ್ದೇ ಅತ್ತೆ’ ಎಂದು ಭಾವುಕರಾದರು.
ನಿರ್ಮಾಪಕರಾದ ಚಿನ್ನೇಗೌಡ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಚಿತ್ರದ ನಿರ್ಮಾಪಕ ಆನಂದ್ ಮುಗದ್, ನಟಿ ಭಾವನಾ ರಾವ್, ಮುಖ್ಯ ಪಾತ್ರಧಾರಿ ಇಶಿತಾ ಸಿಂಗ್ ಇದ್ದರು. ಮೆಟಾವರ್ಸ್ ಗೇಮಿಂಗ್ ಕುರಿತ ಈ ಚಿತ್ರ ಮೇ 10ಕ್ಕೆ ಬಿಡುಗಡೆಯಾಗಲಿದೆ.