ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟ ಹೊಂಬಾಳೆ ಫಿಲ್ಮ್ಸ್

KannadaprabhaNewsNetwork |  
Published : Jun 04, 2024, 01:30 AM ISTUpdated : Jun 04, 2024, 08:09 AM IST
ವಿಜಯ್‌ ಕಿರಂಗದೂರು | Kannada Prabha

ಸಾರಾಂಶ

ಆರ್‌.ವಿ.ಟ್ರಸ್ಟ್ ಅಧ್ಯಕ್ಷ ಶ್ಯಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ದೇಶಕ ಚಲುವೇಗೌಡ ಅವರು ಆರ್.ವಿ.ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ನಲ್ಲಿ ‘ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ, ಆ್ಯಂಡ್ ಕ್ರಿಯೇಟಿವ್ ಆರ್ಟ್ಸ್’ ಸ್ಥಾಪಿಸುವ ಸಂಬಂಧ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

 ಬೆಂಗಳೂರು : ಪ್ರತಿಷ್ಠಿತ ಆರ್.ವಿ.ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ನಲ್ಲಿ ‘ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ, ಆ್ಯಂಡ್ ಕ್ರಿಯೇಟಿವ್ ಆರ್ಟ್ಸ್’ (ಸಿನಿಮಾ, ಮಾಧ್ಯಮ ಮತ್ತು ಸೃಜನಶೀಲ ಕಲೆಗಳ ಕಾಲೇಜು-ಎಸ್ಓಎಫ್ಎಂಸಿಎ) ಸ್ಥಾಪಿಸುವ ಸಂಬಂಧ ಆರ್.ವಿ.ವಿಶ್ವವಿದ್ಯಾಲಯ ಹಾಗೂ ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿವೆ. ‌ ಈ ಸಹಭಾಗಿತ್ವದಡಿ ಸ್ಥಾಪನೆಯಾಗಲಿರುವ ಕಾಲೇಜಿನಲ್ಲಿ ಸಿನಿಮಾ, ಮಾಧ್ಯಮ, ಓಟಿಟಿ, ಸೃಜನಶೀಲ ಕಲೆಗಳಿಗೆ ಸಂಬಂಧಿಸಿದ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ ಗಳ ವ್ಯಾಸಂಗ ಇರುತ್ತದೆ. ಚಿತ್ರ ನಿರ್ಮಾಣ, ಆ್ಯನಿಮೇಶನ್ ಮತ್ತು ವಿಷುಯಲ್ ಎಫೆಕ್ಟ್ಸ್, ಚಿತ್ರ ನಿರ್ದೇಶನ, ಚಿತ್ರಕಥೆ ರಚನೆ, ಸಂಕಲನ, ಸಿನಿ ಛಾಯಾಗ್ರಹಣ, ಧ್ವನಿ ಸಂರಚನೆ ಕೋರ್ಸ್ ಗಳು ಕೂಡ ಇರುತ್ತವೆ.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಅಧ್ಯಕ್ಷ ಡಾ.ಎಂಪಿ ಶ್ಯಾಮ್ ಅವರು ಈ ಸಹಭಾಗಿತ್ವದ ಬಗ್ಗೆ ಮಾತನಾಡಿ, ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ದೃಶ್ಯಮಾಧ್ಯಮಕ್ಕೆ ಸಂಬಂಧಿಸಿದಂತೆ ಜಾಗತಿಕ ಗುಣಮಟ್ಟದ ತರಬೇತಿ ಲಭ್ಯವಾಗಲಿದೆ. ಜೊತೆಗೆ, ದೇಶದ ಅತಿ ದೊಡ್ಡ ಸ್ಟುಡಿಯೋದಲ್ಲಿ ಪ್ರಾಯೋಗಿಕ ಅನುಭವವೂ ಸಿಗಲಿದೆ ಎಂದು ವಿವರಿಸಿದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು ಅವರು ಈ ಸಹಭಾಗಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿ, ಇದರಿಂದ ಮುಂಬರುವ ವರ್ಷಗಳಲ್ಲಿ ದೃಶ್ಯ ಮಾಧ್ಯಮ ಹಾಗೂ ದೃಶ್ಯ ಮನೋರಂಜನೆಯ ಕ್ಷೇತ್ರಕ್ಕೆ ಅಗತ್ಯವಿರುವ ವೃತ್ತಿಪರ ಪ್ರತಿಭಾವಂತರನ್ನು ರೂಪಿಸಲು ಅನುಕೂಲವಾಗಲಿದೆ ಎಂದರು.

ಚಲನಚಿತ್ರ ನಿರ್ಮಾಣದಲ್ಲಿ ದೇಶದಾದ್ಯಂತ ಉತ್ತಮ ಹೆಸರು ಗಳಿಸಿರುವ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಇದೀಗ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿಗಳಿಸಿರುವ ಬೆಂಗಳೂರಿನ ಪ್ರತಿಷ್ಠಿತ ಆರ್.ವಿ.ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಚಲನ ಚಿತ್ರರಂಗ, ಮಾಧ್ಯಮ, ಕಲಾಕೌಶಲ್ಯದ ಪದವಿ ವ್ಯಾಸಂಗವನ್ನು ಪ್ರಾರಂಭಿಸುತ್ತಿದ್ದೇವೆ. ನಿಜಕ್ಕೂ ಪ್ರತಿಭಾವಂತರಿಗೆ ಇದೊಂದು ಸುವರ್ಣಾವ ಕಾಶ. ಎರಡು ದಿಗ್ಗಜ ಸಂಸ್ಥೆಗಳು ಒಗ್ಗೂಡಿ ಗುಣಮಟ್ಟದ ಶಿಕ್ಷಣದ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಮುಂದಾಗುತಿದ್ದೇವೆ. ಪ್ರತಿಭೆಗಳ ಅನಾವರಣಕ್ಕೆ ಇದೊಂದು ಮೈಲಿಗಲ್ಲು ಆಗುವುದು ನಿಶ್ಚಿತ ಎಂದು ಅವರು ಅಭಿಪ್ರಾಯಪಟ್ಟರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2026ರ ಬಹು ನಿರೀಕ್ಷಿತ ಸಿನಿಮಾಗಳು
ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಕ್‌ ವೈಭವ