ಹೊಡೆದ್ರೂ ಹೊಡೆಸಿಕೊಳ್ಳುವಷ್ಟು ಒಳ್ಳೆಯವನು ನಾನಲ್ಲ: ಸುದೀಪ್‌

KannadaprabhaNewsNetwork |  
Published : Dec 28, 2025, 03:00 AM IST
Kichcha Sudeep

ಸಾರಾಂಶ

ಸುದೀಪ್ ಅಭಿಮಾನಿಗಳೆಂದು ಬಿಂಬಿಸಿಕೊಂಡು ತಮ್ಮ ವಿರುದ್ಧ ಅವಹೇಳನಕಾರಿ ಸಂದೇಶ ಕಳುಹಿಸಿದವರಿಗೆ ‘ಕ್ಲಾಸ್‌ ಫ್ಯಾನ್ಸ್‌’ ಎಂದು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಇದೀಗ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

 ಬೆಂಗಳೂರು :  ಸುದೀಪ್ ಅಭಿಮಾನಿಗಳೆಂದು ಬಿಂಬಿಸಿಕೊಂಡು ತಮ್ಮ ವಿರುದ್ಧ ಅವಹೇಳನಕಾರಿ ಸಂದೇಶ ಕಳುಹಿಸಿದವರಿಗೆ ‘ಕ್ಲಾಸ್‌ ಫ್ಯಾನ್ಸ್‌’ ಎಂದು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಇದೀಗ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

‘ಇಡೀ ಚಿತ್ರರಂಗ ಚೆನ್ನಾಗಿದೆ. ನನ್ನಲ್ಲಿರುವ ಹುಡುಗರು ಸರಿ ಇಲ್ಲ ಅಂದರೆ ಹೇಳಿ, ಸರಿಪಡಿಸಿಕೊಳ್ಳೋಣ. ಆದರೆ, ಅವರು ಯಾರಿಗೆ ‘ಕ್ಲಾಸ್‌ ಫ್ಯಾನ್ಸ್’ ಅಂದಿರೋದು ಅಂತ ಹೆಸರು ಹೇಳಿದರೆ ಚೆಂದ. ಫೇಕ್ ಐಡಿ ಮೂಲಕ ಯಾರೋ ಅವರಿಗೆ ಕಾಮೆಂಟ್ ಮಾಡಿರಬಹುದು. ಇಂತಹ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ನನಗೆ ಕಾಣುತ್ತಿಲ್ಲ. ಅವರು ಯಾರ ಬಗ್ಗೆ ಹೇಳಿದ್ದಾರೆಂಬುದನ್ನು ಅವರನ್ನೇ ಕೇಳಿ’ ಎಂದು ತಿರುಗೇಟು ನೀಡಿದ್ದಾರೆ.

ನಾನು ಜಗಳ ಮಾಡಲು ಚಿತ್ರರಂಗಕ್ಕೆ ಬಂದಿಲ್ಲ

ಈ ಕುರಿತು ಮಾರ್ಮಿಕವಾಗಿ ಮಾತನಾಡಿರುವ ಸುದೀಪ್, ‘ಪ್ರೀತಿಯಿಂದ ತಾಯಿ ಕಪಾಳಕ್ಕೆ ಹೊಡೆದರೆ ಓಕೆ. ಆದರೆ, ಪಕ್ಕದ ಮನೆಯವರು ಹೊಡೆದರೂ ಹೊಡೆಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ. ನಾನು ಜಗಳ ಮಾಡಲು ಚಿತ್ರರಂಗಕ್ಕೆ ಬಂದಿಲ್ಲ. ಮನರಂಜನೆ ಕೊಡಲು ಬಂದವನು’ ಎಂದು ಹೇಳಿದ್ದಾರೆ.

‘ಮಾರ್ಕ್’ ಚಿತ್ರ ಯಶಸ್ವಿಯಾಗಿದೆ ಎಂದು ತಿಳಿಸಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ‘ಮಾರ್ಕ್‌’ ಚಿತ್ರ ನೋಡಲು ಬಂದ ಸುದೀಪ್‌ ಅವರ ಪುತ್ರಿ ಸಾನ್ವಿ ಅವರ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡು ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆಕೆ ನನ್ನ ಮಗಳು. ನಾನೇ ಇಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದ ಮೇಲೆ ಅವಳೂ ಎದುರಿಸುತ್ತಾಳೆ. ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ. ಆದರೆ, ಸೋಷಿಯಲ್‌ ಮೀಡಿಯಾಗಳಲ್ಲಿ ಕೂತು ಕಾಮೆಂಟ್‌ ಮಾಡುವವರಿಗೆಲ್ಲ ಉತ್ತರ ಕೊಡುತ್ತಾ ಕೂರಲಾಗದು’ ಎಂದರು. 

9 ಸಾವಿರ ಪೈರಸಿ ಲಿಂಕ್ಸ್‌:

‘ಮಾರ್ಕ್‌’ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪೈರಸಿ ಮಾಡುವ ಯತ್ನ ನಡೆದಿದ್ದು, ಸಿನಿಮಾ ಬಿಡುಗಡೆಯಾದ 24 ಗಂಟೆಯಲ್ಲೇ ಚಿತ್ರದ ನಕಲಿ ಪ್ರಿಂಟು ಆಚೆ ಬಂದಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಕುರಿತು ಸುದೀಪ್, ‘ಯುದ್ಧ ಮಾಡಲು ನಾವು ರೆಡಿ ಅಂತ ನಾನು ಯಾಕೆ ಹೇಳಿದೆ ಅಂತ ಈಗ ಗೊತ್ತಾಯಿತಾ? ‘ಮಾರ್ಕ್‌’ ಬಿಡುಗಡೆಯಾದ 24 ಗಂಟೆಯಲ್ಲಿ ಚಿತ್ರವನ್ನು ಪೈರಸಿ ಮಾಡಿದ್ದಾರೆ. ಎರಡನೇ ದಿನಕ್ಕೆ ನನಗೇ 4 ಸಾವಿರ ಪೈರಸಿ ಲಿಂಕ್ಸ್‌ ಬಂದಿವೆ. ಇಲ್ಲಿವರೆಗೂ 9 ಸಾವಿರ ‘ಮಾರ್ಕ್‌’ ಚಿತ್ರದ ಪೈರಸಿ ಲಿಂಕ್‌ಗಳನ್ನು ಡಿಲೀಟ್‌ ಮಾಡಿಸಿದ್ದೇವೆ’ ಎಂದು ಹೇಳಿದರು.

ಯುದ್ಧ ಎಂದಿದ್ದಕ್ಕೆ ಸಮರ್ಥನೆ:

‘ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್‌’ ಚಿತ್ರದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ, ‘ಹೊರಗೆ ಒಂದು ಪಡೆ ಕಾಯುತ್ತಿದೆ. ನಾವೂ ಯುದ್ಧಕ್ಕೆ ರೆಡಿ ಇದ್ದೇವೆ’ ಎಂದು ಹೇಳಿದ್ದೆ. ಆ ಹೇಳಿಕೆಯನ್ನು ಆಗ ಕೆಲವರು ವಿರೋಧಿಸಿದ್ದರು. ಇದು ನಿಮಗೆ ಬೇಕಿತ್ತಾ ಎಂದು ಪ್ರಶ್ನಿಸಿದ್ದರು. ಈಗ ಪೈರಸಿ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಸಾಕ್ಷಿ ಸಮೇತ ಹೇಳುತ್ತಿದ್ದೇನೆ. ನಾನು ಆಗ ಹೇಳಿದ್ದರಲ್ಲಿ ಯಾವ ತಪ್ಪು ಇದೆ ಹೇಳಿ? ಪೈರಸಿ ವೀರರ ವಿರುದ್ಧ ಮತ್ತೊಂದು ಕಠಿಣ ಕ್ರಮ ಇದೆ. ಇನ್ನೊಂದು ವಾರದಲ್ಲಿ ಅದೇನು ಅಂತ ಗೊತ್ತಾಗಲಿದೆ. ಈಗ ನಾನು ಏನೋ ಹೇಳೋದು, ಅದು ಮತ್ತೇನೋ ಅರ್ಥ ಪಡೆದುಕೊಳ್ಳುವುದು ಬೇಡ’ ಎಂದು ಸುದೀಪ್‌ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಸುದ್ದಿಗಳೇ ಪೈರಸಿ:

ಮಾಧ್ಯಮಗಳ ಹೆಸರಿನಲ್ಲಿ ಫೇಕ್‌ ಸುದ್ದಿಗಳನ್ನು ಹರಡಿ ಟ್ರೋಲ್‌ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್‌, ‘ನಮ್ಮ ಸಿನಿಮಾ ಜೊತೆಗೆ ನಿಮ್ಮ ಮಾಧ್ಯಮಗಳ‍ ಸುದ್ದಿಗಳೂ ಪೈರಸಿ ಆಗಿವೆ. ನಮ್ಮ ಜೊತೆಗೆ ನೀವೂ ಫೇಮಸ್‌ ಆಗಿದ್ದೀರಿ. ಒಂದು ಅಚ್ಚರಿ ಎಂದರೆ ಒಂದೇ ಚಿತ್ರದ ಎರಡೆರಡು ರಿವ್ಯೂಗಳನ್ನು ನೋಡಿದ್ದೇನೆ. ಒಂದು ಹೆಸರು ಇರುವ ಅಧಿಕೃತ ರಿವ್ಯೂ. ಮತ್ತೊಂದು ಅಪ್ಪ-ಅಮ್ಮ ಇಲ್ಲದ ಅನಾಥ ರಿವ್ಯೂ’ ಎಂದು ತಮ್ಮದೇ ಸ್ಟೈಲಿನಲ್ಲಿ ಪ್ರತಿಕ್ರಿಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಜಯ್‌ ಕಾರ್ತಿಕೇಯ, ವಿತರಕ ಕಾರ್ತಿಕ್‌ ಗೌಡ, ಸಾಹಸ ನಿರ್ದೇಶಕ ರವಿವರ್ಮ, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

2026ರ ಬಹು ನಿರೀಕ್ಷಿತ ಸಿನಿಮಾಗಳು
ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಕ್‌ ವೈಭವ