)
ಚಿತ್ರ: ಲ್ಯಾಂಡ್‌ಲಾರ್ಡ್
ನಿರ್ದೇಶನ: ಜಡೇಶ್ ಕೆ ಹಂಪಿ
ರೇಟಿಂಗ್ : 4ಆರ್.ಕೇಶವಮೂರ್ತಿಆ ಊರಿನ ಮರದಡಿಯ ಕಟ್ಟೆ ಮೇಲಿನ ಕುರ್ಚಿಯಲ್ಲಿ ಕೂತ ಧಣಿ, ಅವರ ಮುಂದೆ ನಡು ಬಗ್ಗಿಸಿ ನಿಂತ ಜನ. ಇವರ ಮುಂದೆ ಎರಡು ಆಯ್ಕೆಗಳಿವೆ. ‘ಸಂಧಾನವೋ, ಸಂವಿಧಾನವೋ’ ಎಂಬುದು. ಇವರ ಆಯ್ಕೆ ಯಾವುದು ಎನ್ನುವುದರ ಮೇಲೆ ‘ಲ್ಯಾಂಡ್‌ಲಾರ್ಡ್’ ಕತೆಯನ್ನು ಹೊತ್ತು ಸಾಗುತ್ತಾರೆ ನಿರ್ದೇಶಕ ಜಡೇಶ್ ಕೆ. ಹಂಪಿ. ನಿರ್ದೇಶಕನ ಈ ಭಾರವನ್ನು ಅವರಷ್ಟೇ ಸಮಾನವಾಗಿ ಹೊತ್ತು ಸಾಗುವುದು ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ರಾಕೇಶ್ ಅಡಿಗ ಹಾಗೂ ರಿತನ್ಯಾ ವಿಜಯ್. ಇಲ್ಲಿ ಸಂಧಾನ ಮಾಡಿಕೊಂಡರೆ ಏನಾಗುತ್ತದೆ, ಸಂವಿಧಾನದ ಮೊರೆ ಹೋದರೆ ಏನಾಗಬಹುದು ಎನ್ನುವ ಪ್ರಶ್ನೆಗಳ ನಡುವೆ ಭೂಮಿ, ಶ್ರೇಷ್ಠ- ಕನಿಷ್ಠ, ಮೇಲು-ಕೀಳು, ಧಣಿ-ಗುಲಾಮ... ಸಂಘರ್ಷದಲ್ಲಿ ಸ್ವಾಭಿಮಾನದ ಕಿಡಿಗಳು ತಣ್ಣಗೆ ಸ್ಫೋಟಗೊಳ್ಳುತ್ತಾ ಹೋಗುತ್ತವೆ.ಜಾತಿ, ಶೋಷಣೆ, ಸ್ವಾಭಿಮಾನದ ಬದುಕು, ಬಂಡಾಯದಂತಹ ಕಥನಗಳು ಕನ್ನಡ ಸಿನಿಮಾ ಪರದೆಗೆ ಹೊಸದಲ್ಲ ಎನಿಸಿದರೂ ಅಂಥ ಕತೆಗಳನ್ನು ಹೇಳುವ ಸಿನಿಮಾಗಳು ತೀರಾ ವಿರಳ. ತುಂಬಾ ಹಿಂದಕ್ಕೆ ಹೋದರೆ ‘ಚೋಮನ ದುಡಿ’ ದರ್ಶನವಾಗುತ್ತದೆ. ಇತ್ತೀಚಿನ ಸಿನಿ ಪುಟಗಳನ್ನು ತಡಕಾಡಿದರೆ ‘ಕಾಟೇರ’ ಕಾಣಿಸುತ್ತದೆ. ಹೀಗಾಗಿ ‘ಲ್ಯಾಂಡ್‌ಲಾರ್ಡ್’ ಕನ್ನಡದ ಮಟ್ಟಿಗೆ ‘ಕ್ವಾಲಿಟಿ’ ಸಿನಿಮಾ.
ಜಾತಿ ಪದ್ಧತಿ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ನಲುಗುವ, ಭೂಮಿಯಲ್ಲಿ ಬೇಸಾಯ ಮಾಡುವ ಕನಸು ಕಾಣುವ, ಜೀತದಾಳುತನ, ಸಾಲ, ಮಕ್ಕಳ ಸಾವು ಮತ್ತು ಮಗಳ ಶೋಷಣೆಯಿಂದಾಗಿ ಅಸಹಾಯಕನಾಗಿ, ಕೊನೆಗೆ ತನ್ನ ‘ದುಡಿ’ಯ (ತಮಟೆ) ಬಡಿತದೊಂದಿಗೆ ಪ್ರಾಣ ಬಿಡುವ ‘ಚೋಮನ ದುಡಿ’ಯ ಚೋಮನನ್ನು ನೋಡಿದ್ದೇವೆ. ಆದರೆ, ‘ಲ್ಯಾಂಡ್‌ಲಾರ್ಡ್’ನ ರಾಚಯ್ಯ ಪ್ರಾಣ ಬಿಡೋ ಅಸಾಮಿಯಲ್ಲ. ಸ್ವಾಭಿಮಾನ, ಭೂಮಿಯ ಹಕ್ಕಿಗಾಗಿ ಕಾನೂನು, ಸಂವಿಧಾನದ ಮೊರೆ ಹೋಗುತ್ತಾನೆ. ಶೋಷಣೆಗೆ ಸವಾಲೊಡ್ಡಿ ಚೋಮನ ವಾರಸ್ದಾರನಾಗಿ ‘ನೆತ್ತರಿನ ಮಣ್ಣಿನಲ್ಲೂ ಸಂವಿಧಾನ ಉಸಿರಾಡುತ್ತದೆ’ ಎನ್ನುತ್ತಾನೆ ರಾಚಯ್ಯ.ಕತೆ ಏನು? ರೂಲರ್, ಸರ್ವೈವರ್ ಹೆಸರಿನಲ್ಲಿ ಚಿತ್ರದ ಟೀಸರ್, ಟ್ರೇಲರ್ ಇತ್ಯಾದಿಗಳನ್ನು ನೋಡಿದ ಮೇಲೆ ಕತೆ ಏನೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕೆಂದರೆ ನೋಡಿ ಅರ್ಥೈಸಿಕೊಳ್ಳಬೇಕಾದ ವಿಚಾರಗಳು ಇಲ್ಲಿ ಸಾಕಷ್ಟಿವೆ. ಕೋಲಾರ ಜಿಲ್ಲೆಯ ಹುಲಿದುರ್ಗ ಊರಿನಲ್ಲಿ ರಾಚಯ್ಯ, ಚಿಕ್ಕ ಧಣಿ ನಡುವೆ ನಡೆಯುವ ಕತೆ. ಕಾನೂನು, ಪೊಲೀಸು, ಶಿಕ್ಷಣ, ಪ್ರೀತಿ-ಪ್ರೇಮ, ದೇವದಾಸಿ ಪದ್ಧತಿ, ಭೂಮಿಗಾಗಿ ಹೋರಾಟ ಮುಂತಾದ ವಿಷಯಗಳನ್ನು ಜೋಡಿಸುತ್ತಾ ಹೋಗುತ್ತದೆ ಈ ಚಿತ್ರ.
80-90ರ ದಶಕದ ಕತೆಯಲ್ಲಿ ರೈತನ ಪಾತ್ರದಲ್ಲಿ ದುನಿಯಾ ವಿಜಯ್, ಭೂಮಾಲೀಕನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅವರಷ್ಟೇ ಗಮನ ಸೆಳೆಯುವಂತೆ ನಟಿಸಿರುವುದು ರಾಕೇಶ್ ಅಡಿಗ. ಮೊದಲ ಹೆಜ್ಜೆಯಲ್ಲಿ ರಿತನ್ಯಾ ವಿಜಯ್, ತಮ್ಮ ನಟನಾ ಸಾಮರ್ಥ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಚಯ್ಯನ ಪತ್ನಿ ಪಾತ್ರದಲ್ಲಿ ರಚಿತಾ ರಾಮ್, ಪೊಲೀಸ್ ಅಧಿಕಾರಿಯಾಗಿ ಅಚ್ಯುತ್ ಕುಮಾರ್, ಶಿಶಿರ್ ಬೈಕಾಡಿ, ಶರತ್ ಲೋಹಿತಾಶ್ವ, ಅವಿನಾಶ್, ಗೋಪಾಲಕೃಷ್ಣ ದೇಶಪಾಂಡೆ, ಬಿ.ಸುರೇಶ್ ಹೀಗೆ ಬಹು ದೊಡ್ಡ ತಾರಗಣವೇ ಚಿತ್ರದ್ದು, ಕತೆಗೆ ಪೂರಕವಾಗಿ ಪಾತ್ರಗಳ ಪೋಷಣೆ ಮಾಡಿದ್ದಾರೆ.ಸ್ವಾಮಿ ಜೆ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ತಾಂತ್ರಿಕ ನೈಪುಣ್ಯತೆ ನೀಡಿದೆ. ‘ಕಾಟಿ, ಗುತ್ತಿ, ಚೋಮ, ಕರಿಯನಿಗೆ ಒಲಿಯದ ಭೂಮ್ತಾಯಿ ರಾಚಯ್ಯನಿಗೆ ಒಲಿದಳು’ ಎನ್ನುವ ಸಂಭಾಷಣೆ ಮೂಲಕ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬರುವ ಗುತ್ತಿ, ಶಿವರಾಮ ಕಾರಂತರ ‘ಚೋಮನ ದುಡಿ’ಯ ಚೋಮನನ್ನು ನೆನಪಿಸುವ ಮಾಸ್ತಿ ತಾನು ಮಾಸ್, ಫನ್ ರೈಟರ್ ಮಾತ್ರವಲ್ಲ ಪ್ರಬುದ್ಧ ಬರಹಗಾರನೆಂದು ತೋರಿಸಿದ್ದಾರೆ.