ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ 500 ಕೋಟಿ ಕ್ಲಬ್ ಸಮೀಪಿಸುತ್ತಿದೆ. ರಿಲೀಸ್ ಆದ ವಾರದೊಳಗೆ ಅತಿಮಾನುಷ ಕಥನವೊಂದು ಅದ್ದೂರಿ ಗಳಿಕೆ ಮಾಡಿದ್ದಕ್ಕೆ 8 ಮುಖ್ಯ ಕಾರಣಗಳು ಇಲ್ಲಿವೆ.
- ಪ್ರಿಯಾ ಕೆರ್ವಾಶೆ
1. ಹಳೆಯ ಕಾಂತಾರ ನೆಟ್ಟ ದೈವ ಲೋಕದ ಕಿಡಿ
2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಸಿನಿಮಾ ಹಾಕಿಕೊಟ್ಟ ಗಟ್ಟಿ ತಳಹದಿ ಈ ಸಿನಿಮಾ ದೃಢವಾಗಿ ನಿಲ್ಲಲು ಮುಖ್ಯ ಕಾರಣ. ಕರ್ನಾಟಕ ಕರಾವಳಿಯ ಜನಜೀವನ, ಬೆಸೆದುಕೊಂಡಿರುವ ವಿಶಿಷ್ಟ ನಂಬಿಕೆಗಳ ಜೊತೆಗೆ ದೈವ ಲೋಕದ ವಿಸ್ಮಯದ ಕಿಡಿಯನ್ನು ನೆಡಲು ಈ ಸಿನಿಮಾ ಯಶಸ್ವಿಯಾಗಿತ್ತು. ಆ ಕಿಡಿ ಸೃಷ್ಟಿಸಿದ ಕುತೂಹಲವೇ ‘ಕಾಂತಾರ ಚಾಪ್ಟರ್ 1’ ಸಿನಿಮಾ ಕಾಳ್ಗಿಚ್ಚಿನಂತೆ ಹಬ್ಬಲು ಮುಖ್ಯ ಕಾರಣವಾಯಿತು.
2. ದೈವಿಕತೆ ಎಂಬ ಇಮೋಷನ್
ದೈವಿಕತೆ ಅನ್ನುವುದು ಜನರ ಮನಸ್ಸಿನ ಭಾಗ. ಯಾವ ದೇಶ, ಯಾವ ಭಾಷೆಯೇ ಆಗಿರಲಿ, ದೈವತ್ವ ಎಂಬ ಅಂಶ ಎಲ್ಲ ಕಡೆ ಸಾಮಾನ್ಯ. ಅದನ್ನು ಈ ಸಿನಿಮಾದ ಮೊದಲ ಭಾಗವೇ ಸ್ಥಳೀಯವಾದ ಗಟ್ಟಿ ಕತೆಯೊಂದಿಗೆ ಹೇಳಿ ಜನ ಮಾನಸಿಕವಾಗಿ ಕನೆಕ್ಟ್ ಆಗುವಂತೆ ಮಾಡಿತು. ಈ ಸಿನಿಮಾವೂ ಆ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತು. ಕಥೆಯನ್ನೂ ಮೀರಿ ದೈವತ್ವವೇ ವಿಜೃಂಭಿಸಿದ್ದು ಜನ ಭಾವುಕವಾಗಿ ಸಿನಿಮಾವನ್ನು ಎತ್ತಿ ಹಿಡಿಯುವಂತೆ ಮಾಡಿತು.
3. ಕಥೆಯನ್ನೂ ಮೀರಿದ ವಿಷುವಲೈಸೇಶನ್
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕಥೆಗಿಂತಲೂ ಲಾರ್ಜರ್ ದ್ಯಾನ್ ಲೈಫ್ ಕಾನ್ಸೆಪ್ಟ್‌ನಲ್ಲಿ ವಿಷ್ಯುವಲೈಸೇಶನ್ ಕಟ್ಟಿಕೊಟ್ಟಿದ್ದಾರೆ. ಅಗ್ನಿ ಸಂಸ್ಕೃತಿಯ ಪ್ರತಿನಿಧಿಯಾಗಿ ಸಾಮಂತ ರಾಜ ಬಂಗ್ರ ಅರಸನ ಆಳ್ವಿಕೆ ಇದ್ದರೆ ಜಲ ಸಂಸ್ಕೃತಿಯ ಭಾಗವಾಗಿ ಈಶ್ವರನ ಹೂದೋಟ ಕಾಂತಾರದ ಪರಿಕಲ್ಪನೆ ಇದೆ. ಈ ಎರಡೂ ಪರಿಕಲ್ಪನೆಗಳನ್ನು ಅದ್ಭುತ ವಿಷುವಲ್‌ಗಳೊಂದಿಗೆ ಕಟ್ಟಿಕೊಡಲಾಗಿದೆ. ಇದರಲ್ಲಿ ಕದಂಬರ ಕಾಲದ ಜನಜೀವನ ಹೇಗಿತ್ತು ಎಂಬ ಚಿತ್ರದ ಜೊತೆಗೆ ಅರಣ್ಯವಾಸಿಗಳ ಬದುಕು, ಜನಪದದ ಅಂಶಗಳೂ ಜೀವ ತಳೆದಿವೆ. ಇವು ಪ್ರೇಕ್ಷಕ ಸಿನಿಮಾದಲ್ಲಿ ಜೀವಿಸುವಂತೆ ಮಾಡಿವೆ. ಛಾಯಾಗ್ರಾಹಕ ಅರವಿಂದ ಕಶ್ಯಪ್ ಅವರ ಕೊಡುಗೆಯನ್ನೂ ಇಲ್ಲಿ ನೆನೆಯಬೇಕು.
4. ಮೇಕಿಂಗ್ ವೀಡಿಯೋ ಸೃಷ್ಟಿಸಿದ್ದ ಹವಾ
ಸಾಮಾನ್ಯವಾಗಿ ಸಿನಿಮಾ ರಿಲೀಸ್‌ಗೂ ತಿಂಗಳ ಮೊದಲ ಪೋಸ್ಟರ್, ಹಾಡು, ಟೀಸರ್, ಟ್ರೇಲರ್ ಹೊರಬಿಡುವ ಕ್ರಮ. ಆದರೆ ಕಾಂತಾರ ಚಾಪ್ಟರ್ 1 ಇದನ್ನು ಮುರಿದು ಮೊದಲಿಗೆ ಮೇಕಿಂಗ್ ವೀಡಿಯೋವನ್ನು ಬಿಡುಗಡೆ ಮಾಡಿದರು. ಇದು ಸಿನಿಮಾದ ವ್ಯಾಪ್ತಿ ಎಷ್ಟು ಅಗಾಧವಾದುದು ಎಂಬುದನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿತು. ಟೀಸರ್‌ಗಿಂತಲೂ ಇದೇ ಪರಿಣಾಮಕಾರಿಯಾದದ್ದು ವಿಶೇಷ. ಆ ಬಳಿಕ ಬಂದ ಟ್ರೇಲರ್ ನೋಡಿದ ಪ್ರೇಕ್ಷಕ ಇದರಲ್ಲಿ ಬೇರೆ ಐತಿಹಾಸಿಕ ಸಿನಿಮಾಗಳ ಛಾಯೆ ಕಂಡು ಗೊಂದಲಕ್ಕೊಳಗಾದರೂ ಸಿನಿಮಾ ರಿಲೀಸ್ ಆದ ಬಳಿಕ ಆ ಗೊಂದಲಕ್ಕೆ ಉತ್ತರ ಸಿಕ್ಕಿತು.
5. ಸೋಷಲ್ ಮೀಡಿಯಾಗಳ ಹವಾ, ಸಮೂಹ ಸನ್ನಿ
ನಿರ್ಮಾಣ ಸಂಸ್ಥೆ ಸಿನಿಮಾ ಬಿಡುಗಡೆ ಹಿಂದಿನ ದಿನ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಿತ್ತು. ಹೌಸ್‌ಫುಲ್ ಶೋ ಕಂಡ ಈ ಪ್ರೀಮಿಯರ್ ಬಳಿಕ ಸಿನಿಮಾದ ಬಗ್ಗೆ ಸೋಷಲ್ ಮೀಡಿಯಾದಲ್ಲಿ ಯದ್ವಾ ತದ್ವಾ ಚರ್ಚೆ ಶುರುವಾಯಿತು. ಇದು ಸಿನಿಮಾಗೆ ಮೊದಲ ದಿನ ಪ್ರೇಕ್ಷಕರು ಕಿಕ್ಕಿರಿದು ಸೇರಲು ಸಣ್ಣ ಮಟ್ಟಿನ ಕೊಡುಗೆ ನೀಡಿತು. ಸಿನಿಮಾ ದಾಖಲೆಯ ಬುಕಿಂಗ್ ಕಂಡದ್ದು ನೋಡಿ ಇತರರಿಗೂ ಸ್ಫೂರ್ತಿಯಾಗಿ ಸಿನಿಮಾಕ್ಕೆ ಜನ ದಟ್ಟಣೆ ಹೆಚ್ಚಾಗುತ್ತಾ ಹೋಯಿತು. ಸ್ಥಳೀಯ ಕಥೆಯನ್ನು ಹಳ್ಳಿಯ ಜನರೂ ಅತ್ಯಧಿಕ ಸಂಖ್ಯೆಯಲ್ಲಿ ಕಣ್ಣು ತುಂಬಿಕೊಂಡರು.
6. ರಿಷಬ್ ಅಭಿನಯ, ನಿರ್ದೇಶನ
ಈ ಸಿನಿಮಾದ ಕಲ್ಪನೆ, ನಿರ್ದೇಶನ ರಿಷಬ್ ಶೆಟ್ಟಿ ಅವರದು. ಕಲಾವಿದನಿಗೆ ಪಾತ್ರದ ಬಗ್ಗೆ ಸ್ಪಷ್ಟತೆ, ವಿಷುವಲೈಸೇಶನ್ ಇದ್ದಷ್ಟೂ ಆತ ಪಾತ್ರಕ್ಕೆ ಜೀವ ತುಂಬುವ ಬಗೆ ತೀವ್ರವಾಗುತ್ತ ಹೋಗುತ್ತದೆ. ನಿರ್ದೇಶಕ ರಿಷಬ್ ಶೆಟ್ಟಿಯ ಮನಸ್ಸಲ್ಲಿ ಬೆರ್ಮೆ ಪಾತ್ರದ ಸ್ಪಷ್ಟ ಚಿತ್ರಣವಿದ್ದ ಕಾರಣ ಅವರು ಅಸಾಧಾರಣವಾಗಿ ಪಾತ್ರವನ್ನು ಜೀವಿಸುವುದು ಸಾಧ್ಯವಾಯಿತು. ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುವಷ್ಟು ಸಾಹಸ ದೃಶ್ಯಗಳಿದ್ದರೂ ಅವುಗಳ ನಿರ್ವಹಣೆಯಲ್ಲಿ ರಿಷಬ್ ತೋರಿತ ತ್ವರಿತ ಮೂವ್‌ಗಳು ಪ್ರೇಕ್ಷಕನಿಗೆ ಮನರಂಜನೆ ಒದಗಿಸಿ ಆತ ಕುರ್ಚಿ ಬಿಟ್ಟು ಎದ್ದೇಳದಂತೆ ಮಾಡಿದವು.
7. ಅಜನೀಶ್ ಹಿನ್ನೆಲೆ ಸಂಗೀತ
ಈ ಸಿನಿಮಾ ಹಾಡುಗಳು ಹಳೆಯ ಕಾಂತಾರ ಹಾಡುಗಳ ಮಟ್ಟಿಗೆ ಸಕ್ಸಸ್ ಕಂಡಿತೋ ಬಿಟ್ಟಿತೋ ಆದರೆ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲ ಶಹಭಾಷ್ ಅಂದಿದ್ದಾರೆ. ಕಥೆಯ ತೀವ್ರತೆಯನ್ನು ಪ್ರೇಕ್ಷಕನಿಗೆ ತಟ್ಟುವಂತೆ ಮಾಡುವಲ್ಲಿ ಈ ಹಿನ್ನೆಲೆ ಸಂಗೀತದ ಕಾಣಿಕೆ ದೊಡ್ಡದು.
8. ಲೋಕಲ್ ಕತೆಯ ಶಕ್ತಿ
‘ಮೋರ್ ಲೋಕಲ್ ಮೋರ್ ಯೂನಿವರ್ಸಲ್’ ಅನ್ನೋ ತತ್ವದಲ್ಲಿ ಇದ್ದ ರಿಷಬ್ ಅವರ ನಂಬಿಕೆಯನ್ನು ಈ ಸಿನಿಮಾ ನಿಜ ಮಾಡಿದೆ. ಸ್ಥಳೀಯವಾದ ಕಥೆ, ಆ ಕಲ್ಪನೆಯಲ್ಲಿ ಅರಳಿದ ಜಗತ್ತನ್ನು ಜನ ಜೀವಿಸಿದ್ದಾರೆ. ತುಳು ನಾಡಿನ ದಂತಕತೆಯೊಂದು ಜಗತ್ತಿನ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.