ಈ ಜಗತ್ತಲ್ಲಿ ಪ್ರತಿಯೊಬ್ಬರೂ ಬೇಟೆಗಾರರೇ: ಗೌರಿ ಶಂಕರ್‌

KannadaprabhaNewsNetwork | Updated : Mar 15 2024, 02:35 PM IST

ಸಾರಾಂಶ

ಕೆರೆಬೇಟೆ ಸಿನಿಮಾದ ಬಗ್ಗೆ ನಾಯಕ ಗೌರಿಶಂಕರ್‌ ಕೆಲವೊಂದು ಇಂಟರೆಸ್ಟಿಂಗ್‌ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಪ್ರಿಯಾ ಕೆರ್ವಾಶೆ

ಕೆರೆಬೇಟೆಯ ನೆವದಲ್ಲಿ ಸಿನಿಮಾ ಏನು ಹೇಳಹೊರಟಿದೆ ?
ಇಡೀ ಸಿನಿಮಾ ನಡೆಯುವುದು ಒಬ್ಬ ಮನುಷ್ಯನ ಭಾವನೆ, ಹೋರಾಟ, ಕನಸಿನ ಮೇಲೆ. ಪ್ರತಿಯೊಬ್ಬನಲ್ಲೂ ಕನಸು, ಹೋರಾಟ ಇರುತ್ತದೆ. ಆ ಮೂಲಭೂತ ಗುಣಗಳ ಮೇಲೆ ಸಿನಿಮಾವಿದೆ. ಮಲೆನಾಡು ಅಂದರೆ ರಮ್ಯ ಪ್ರಕೃತಿ ಅನ್ನುವ ಭಾವನೆ ಹೆಚ್ಚಿನವರಲ್ಲಿ ಇದೆ. ಆದರೆ ಆ ಪ್ರಾಕೃತಿಕ ಸೌಂದರ್ಯದ ಆಚೆಗೂ ಒಂದು ಬದುಕಿದೆ. ಆ ಬದುಕು ಹೇಗಿದೆ ಅನ್ನುವುದನ್ನು ಈ ಸಿನಿಮಾದಲ್ಲಿ ನೋಡಬಹುದು.

ಕೆರೆಬೇಟೆಯಲ್ಲಿ ಬೇಟೆಗಾರ ಯಾರು? ಮಿಕ ಯಾರು?
ಎಲ್ಲರೂ ಬೇಟೆಗಾರರೇ. ನಾವು ಮಿಕ ಅಂದುಕೊಂಡವರೂ ಬದುಕಿನ ಯಾವುದೋ ಸ್ಥಿತಿಯಲ್ಲಿ ಬೇಟೆಗಾರರೂ ಆಗಬೇಕಾಗುತ್ತದೆ. ಕೆರೆಬೇಟೆ ಪ್ರತಿಯೊಬ್ಬರ ಒಳಗೆ ಇರುವ ಬೇಟೆಗಾರ ಹಾಗೂ ಬೇಟೆಯ ತಹತಹದ ಮೇಲೆ ಬೆಳಕು ಚೆಲ್ಲುತ್ತದೆ.

 ಈ ಸಿನಿಮಾ ಜೊತೆಗೆ ನೀವು ಕನೆಕ್ಟ್‌ ಆದದ್ದು ಹೇಗೆ?
ನನ್ನ ಊರು ಶಿವಮೊಗ್ಗ. ನಿರ್ದೇಶಕರು ಕಥೆ ಹೇಳಿದಾಗ ಒನ್‌ಲೈನ್‌ ಇಷ್ಟವಾಯಿತು. ನಾವಿಬ್ಬರೂ ಒಂದೇ ಊರಿನವರು. ಇಡೀ ಸಿನಿಮಾ ಕೆರೆಬೇಟೆ ಸ್ಕ್ರೀನ್‌ ಪ್ಲೇ ಮೇಲೆ ನಡೆಯುತ್ತದೆ. ನಾವಿಬ್ಬರೂ ಕೂತು ಚಿತ್ರಕಥೆ ಹಣೆದೆವು. ಊರಿನ ಜೊತೆ ಸದಾ ಸಂಪರ್ಕದಲ್ಲಿರುವ ಕಾರಣ ನನ್ನ ಭಾಷೆಯ ಹಿಡಿತವೂ ಚೆನ್ನಾಗಿತ್ತು. ಸಿನಿಮಾ ಡೈಲಾಗ್‌ ನಾನೆ ಬರೆದೆ. ಪ್ರೊಡಕ್ಷನ್‌ ಕೂಡ ನನ್ನದೇ. 

ನಿಮ್ಮ ಲೈಫಿನ ಸ್ಕ್ರೀನ್‌ ಪ್ಲೇಯಲ್ಲಿ ಕೆರೆಬೇಟೆ ಅನುಭವ?
ನಾನು ಮಲೆನಾಡಿನವನಾದರೂ ನಿಜ ಜೀವನದಲ್ಲಿ ಕೆರೆಬೇಟೆ ಆಡಿಲ್ಲ. ನೋಡಿದ್ದೀನಿ ಅಷ್ಟೇ. ಆದರೆ ನಮ್ಮ ನಿರ್ದೇಶಕರು ಆ ಜಗತ್ತನ್ನು ಹೆಚ್ಚು ಎಕ್ಸ್‌ಪ್ಲೋರ್ ಮಾಡಿದ್ದಾರೆ. ನಾನು ಮೀನು ತಿನ್ನದ ಸಮುದಾಯಕ್ಕೆ ಸೇರಿದ ಕಾರಣ ನೇರಾನೇರ ಇದರಲ್ಲಿ ಪಾಲ್ಗೊಂಡಿಲ್ಲ. ಆದರೆ ನೋಡಿ ಗೊತ್ತಿದೆ, ಆ ಬಗ್ಗೆ ತಿಳಿವಳಿಕೆ ಇದೆ. 

ಸಿನಿಮಾದಲ್ಲಿ ಕ್ರೌರ್ಯದ ಅಂಶಗಳಿವೆಯಾ?
ಪ್ರತಿಯೊಬ್ಬರಲ್ಲೂ ಕ್ರೌರ್ಯ ಇರುತ್ತದೆ. ಅದನ್ನು ಪ್ರದರ್ಶಿಸುವ ಬಗೆಯಲ್ಲಿ ಭಿನ್ನತೆ ಇರುತ್ತದೆ. ಇಲ್ಲಿ ಅಂಥಾ ಅಂಶಗಳಿವೆ. ಒಬ್ಬ ವ್ಯಕ್ತಿಯ ಮೂಲಕ ಈ ಮನೋವ್ಯಾಪಾರವನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದೇವೆ. 

ಸಿನಿಮಾದ ವಿಶೇಷತೆಗಳು..ವಿನ್ಯಾಸದಲ್ಲೇ ಹೊಸತನ ಇದೆ. ಸಿನಿಮಾ ನೋಡುವ ಪ್ರತಿಯೊಬ್ಬನೂ ಈ ಸಿನಿಮಾದೊಳಗೊಂದು ಪಾತ್ರ ಆಗಲೇಬೇಕು. ಬದುಕಿನ ಹೋರಾಟ, ಛಲ, ಕನಸುಗಳೇ ಸಿನಿಮಾ ಹೈಲೈಟ್. ಈವರೆಗೆ ಮಲೆನಾಡ ಬದುಕನ್ನು ಇಷ್ಟು ಹತ್ತಿರದಿಂದ ತೋರಿಸಿದ ಚಿತ್ರಗಳು ಕಡಿಮೆ. ನಾವು ಆ ಕೆಲಸ ಮಾಡಿದ್ದೇವೆ. ಹಬ್ಬ, ಹರಿದಿನ, ಆಚರಣೆಗಳೆಲ್ಲ ಸಿನಿಮಾದ ಭಾಗವಾಗಿದೆ. 

ಸಿನಿಮಾ ಮಾಡುವಾಗಿನ, ಆ ಬಳಿಕದ ಅನುಭವ?
ಒಂದು ಗೆಲುವಿಗೆ ಎದುರು ನೋಡುತ್ತಾ ಇದ್ದೇವೆ. ಪ್ರೀಮಿಯರ್‌ ನೋಡಿದವರು, ‘ದುನಿಯಾ’ ನಂತರ ಅಂಥಾ ತೀವ್ರ ಪ್ರೇಮಕಥೆ ಹೊಂದಿರುವ ಸಿನಿಮಾವಿದು’ ಎಂದು ಅಭಿಪ್ರಾಯಪಟ್ಟರು. ಈ ಮಾತು ನಮ್ಮ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ರಾಜ್ಯಾದ್ಯಂತ 125-130 ಸೆಂಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

Share this article