;Resize=(412,232))
ಸಿನಿವಾರ್ತೆ
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಸುದ್ದಿಗೋಷ್ಠಿ ವೇಳೆ ಕಿಚ್ಚ ಸುದೀಪ್ ನಾಯಕಿಯರ ಪರ ನಿಂತು ಮೆಚ್ಚುಗೆ ಗಳಿಸಿದ್ದಾರೆ.
ವೇದಿಕೆಯ ಮೇಲೆ ಸುದೀಪ್, ಪ್ರಮುಖ ಕಲಾವಿದರು, ಗಣ್ಯರು ಮಧ್ಯಭಾಗದಲ್ಲಿ ಕೂತಿದ್ದರೆ, ನಾಯಕಿಯರಾದ ದೀಪೀಕ್ಷಾ ಮತ್ತು ರೋಷನಿ ಮೂಲೆಯಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ಪತ್ರಕರ್ತರು, ‘ಈ ವೇದಿಕೆಯಲ್ಲಿ ನಿಮ್ಮನ್ನು ಮೂಲೆಗುಂಪು ಮಾಡಿದಂತೆ ಸಿನಿಮಾದಲ್ಲೂ ಸೈಡ್‌ಲೈನ್ ಮಾಡಿದ್ದಾರಾ, ಟ್ರೇಲರ್ ನಲ್ಲಿ ನಿಮ್ಮ ಪಾತ್ರಕ್ಕೆ ಪ್ರಾಶಸ್ತ್ಯ ನೀಡಿದಂತೆ ಕಾಣುತ್ತಿಲ್ಲ’ ಎಂದು ಕೇಳಿದರು.
ಅಚಾನಕ್ ಪ್ರಶ್ನೆಗೆ ನಟಿಯರು ಉತ್ತರಿಸಲು ತಡಬಡಾಯಿಸಿದರು. ಸುದೀಪ್ ತಕ್ಷಣ ಎದ್ದು ನಿಂತು ತಾನು ಕುಳಿತಿದ್ದ ವೇದಿಕೆಯ ಮಧ್ಯಭಾಗದ ಆಸನದಲ್ಲಿ ನಾಯಕಿಯರನ್ನು ಕೂರಿಸಿ, ‘ಇದು ಅರಿವಿಗೆ ಬರದೇ ನಡೆದದ್ದು. ಯಾರಿಗೂ ಅವರನ್ನು ಮೂಲೆಯಲ್ಲಿ ಕೂರಿಸಬೇಕು ಅನ್ನೋದು ಇರಲಿಲ್ಲ. ಸಿನಿಮಾದಲ್ಲಿ ಎಲ್ಲಾ ಪಾತ್ರಕ್ಕೂ ಪ್ರಾಶಸ್ತ್ಯ ಇದೆ’ ಎಂದು ತಮಿಳು ಭಾಷೆಯಲ್ಲೇ ಉತ್ತರ ನೀಡಿ ಕೊನೆಯಲ್ಲಿ ಹೋಗಿ ಕುಳಿತರು. ‘ಪ್ರಶ್ನೆ ಕೇಳುವ ನೀವೂ ಮೊದಲ ಪ್ರಾಶಸ್ತ್ಯ ನಟಿಯರಿಗೆ ಕೊಟ್ಟಿಲ್ಲ, ಬಹಳ ಕಾಲ ನಮಗೆ ಪ್ರಶ್ನೆ ಕೇಳಿ ಈಗ ಕೊನೆಯಲ್ಲಿ ನಾಯಕಿಗೆ ಪ್ರಶ್ನೆ ಯಾಕೆ ಕೇಳ್ತಿದ್ದೀರಿ’ ಎಂದೂ ತಿರುಗೇಟು ನೀಡಿದರು.
ಸಂದರ್ಶನವೊಂದರಲ್ಲಿ ಸುದೀಪ್, ಸಿನಿಮಾ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು ಎಂಬ ಅಂಶವನ್ನು ತಳ್ಳಿ ಹಾಕಿದ್ದಾರೆ. ‘ಫ್ಯಾನ್ಸ್ ನಮ್ಮ ಗೊಂಬೆಗಳಲ್ಲ. ನಮ್ಮಿಂದ ಪಾಠ ಹೇಳಿಸಿಕೊಳ್ಳುವ ದಡ್ಡರಲ್ಲ. ಅಡ್ವೈಸ್ ಕೊಡೋವಷ್ಟು ದೊಡ್ಡವರು ನಾವ್ಯಾರೂ ಅಲ್ಲ. ಸಿನಿಮಾದ ಮೇಲೆ ಎಲ್ಲಾ ಜವಾಬ್ದಾರಿ ಹಾಕಬೇಡಿ. ಸಿನಿಮಾ ಸ್ಕೂಲ್ ಅಲ್ಲ. ಶಾಲೆಯಲ್ಲಿ 10 ವರ್ಷ, ಕಾಲೇಜಿನಲ್ಲಿ ಆರೇಳು ವರ್ಷ, ತಂದೆ ತಾಯಿ ಜೊತೆಗೆ 30-35 ವರ್ಷ ಬೆಳೆದಿರ್ತೀವಿ. ಅವರೇ ಹೇಳಿಕೊಡಲಾಗದ್ದನ್ನು ಎರಡೂವರೆ ಗಂಟೆಯ ಸಿನಿಮಾ ಹೇಳಿಕೊಡಬೇಕು ಅಂದುಕೊಳ್ಳೋದು ತಪ್ಪು’ ಎಂದು ಉತ್ತರ ನೀಡಿದ್ದಾರೆ.