;Resize=(412,232))
ಸಿನಿವಾರ್ತೆ
ಕೃತಿಚೌರ್ಯ ಆರೋಪಕ್ಕೆ ತುತ್ತಾಗಿದ್ದ ‘ಲವ್ ಮಾಕ್ಟೇಲ್ 3’ ಚಿತ್ರದ ವಿವಾದ ಸುಖಾಂತ್ಯಗೊಂಡಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ರಾಘವೇಂದ್ರ ನಾಯಕ್ ಮತ್ತು ಡಾರ್ಲಿಂಗ್ ಕೃಷ್ಣ ಒಂದೇ ಮೂಲದಿಂದ ಸ್ಫೂರ್ತಿ ಪಡೆದು ಕತೆ ರಚಿಸಿದ್ದಾರೆ ಎಂದು ನಿರ್ಧಾರಕ್ಕೆ ಬರಲಾಗಿದ್ದು, ಕೃತಿಚೌರ್ಯ ಆರೋಪವನ್ನು ನಿರಾಕರಿಸಲಾಗಿದೆ.
ಶುಕ್ರವಾರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ವಿವಾದವನ್ನು ಸೌಹಾರ್ದತಯುತವಾಗಿ ಬಗೆಹರಿಸಲಾಗಿದೆ. ಆರಂಭದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಗುರು ದೇಶಪಾಂಡೆ, ರಾಘವೇಂದ್ರ ನಾಯಕ್ ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಅವರೆಲ್ಲರ ಅಭಿಪ್ರಾಯ ಕೇಳಿ, ಮಾತುಕತೆ ನಡೆಸಿದ ಬಳಿಕ ವಾಣಿಜ್ಯ ಮಂಡಳಿ ಅಧಿಕೃತವಾಗಿ, ‘ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್ 3’ ಚಿತ್ರಕಥೆಯೇ ಬೇರೆ ಹಾಗೂ ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ. ಆದ್ದರಿಂದ ಇವರಿಬ್ಬರ ಕಥೆಯೂ ಬೇರೆ ಬೇರೆಯಾಗಿರುತ್ತದೆ ಎನ್ನುವ ಸಭೆಯ ತೀರ್ಮಾನಕ್ಕೆ ಇಬ್ಬರೂ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸೌಹಾರ್ದವಾಗಿ ಇತ್ಯರ್ಥವಾಗಿದೆ’ ಎಂದು ತಿಳಿಸಿದೆ.
ಇದೇ ವೇಳೆ ಗುರು ದೇಶಪಾಂಡೆ ಅವರ ಕುರಿತು ವೈಯಕ್ತಿಕ ವಿಚಾರ ಮಾತನಾಡಿದ್ದಕ್ಕೆ ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಅವರು ಕ್ಷಮೆ ಯಾಚಿಸಿದರು ಎಂದು ವಾಣಿಜ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಭೆಯಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ಕೆ.ವಿ. ಚಂದ್ರಶೇಖರ್, ಎ.ಗಣೇಶ್, ರಮೇಶ್ ಯಾದವ್, ಜಯಸಿಂಹ ಮುಸುರಿ ಉಪಸ್ಥಿತರಿದ್ದರು.