ಮಂಡ್ಯ ಶೈಲಿಯ ಭಾಷೆ ಚಾಲೆಂಜಿಂಗ್‌ ಆಗಿತ್ತು : ಪೃಥ್ವಿ ಅಂಬಾರ್‌

Published : Aug 01, 2025, 11:48 AM IST
Pruthvi Ambar

ಸಾರಾಂಶ

ಯಶ್‌ ತಾಯಿ ಪುಷ್ಪಾ ಅರುಣ್‌ ಕುಮಾರ್‌ ನಿರ್ಮಾಣದ, ಪೃಥ್ವಿ ಅಂಬಾರ್‌, ಕಾವ್ಯಾ ಶೈವ ನಟನೆಯ, ಶ್ರೀರಾಜ್ ನಿರ್ದೇಶನದ ‘ಕೊತ್ತಲವಾಡಿ’ ಇಂದು ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ ನಟ ಪೃಥ್ವಿ ಅಂಬಾರ್‌ ಮಾತನಾಡಿದ್ದಾರೆ.

ಯಶ್‌ ತಾಯಿ ಪುಷ್ಪಾ ಅರುಣ್‌ ಕುಮಾರ್‌ ನಿರ್ಮಾಣದ, ಪೃಥ್ವಿ ಅಂಬಾರ್‌, ಕಾವ್ಯಾ ಶೈವ ನಟನೆಯ, ಶ್ರೀರಾಜ್ ನಿರ್ದೇಶನದ ‘ಕೊತ್ತಲವಾಡಿ’ ಇಂದು ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ ನಟ ಪೃಥ್ವಿ ಅಂಬಾರ್‌ ಮಾತನಾಡಿದ್ದಾರೆ.

- ಪ್ರಿಯಾ ಕೆರ್ವಾಶೆ

- ಕೊತ್ತಲವಾಡಿಯಂಥಾ ಸಿನಿಮಾದಲ್ಲಿ ನಟಿಸುವಾಗಿನ ರಿಯಲ್ ಚಾಲೆಂಜ್‌ಗಳೇನು?

ಈ ಸಿನಿಮಾ ಮಂಡ್ಯ ಪ್ರಾಂತ್ಯದ ಕಥೆ ಹೊಂದಿದೆ. ಕರಾವಳಿಯವನಾದ ನಾನು ಮಂಡ್ಯ ಭಾಷೆಯನ್ನು ಮಾತನಾಡೋದು ಚಾಲೆಂಜಿಂಗ್‌ ಆಗಿತ್ತು. ಇದರ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್‌ ನಟರಂಗ ಅವರಂಥಾ ದೈತ್ಯ ಪ್ರತಿಭೆಗಳ ಜೊತೆಗೆ ನಟಿಸುವುದು ಕಲಿಕೆಯೂ, ಸವಾಲೂ ಆಗಿತ್ತು.

- ಕೊತ್ತಲವಾಡಿ ಸಿನಿಮಾಕ್ಕೆ ನಿಮ್ಮ ಕೊಡುಗೆ ಏನು?

ಹಳ್ಳಿಯ ಗಟ್ಟಿ ಹುಡುಗನಾಗಿ ಮೋಹನ್‌ ಎಂಬ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಈ ಸಿನಿಮಾದ ನಾಯಕ ಮೋಹನನ ಹಾಗೆ ನಾನು ಹಳ್ಳಿಮೂಲದವನು. ಹಳ್ಳಿಗಾಗಿ ಹೋರಾಡುವ ಈತನಂಥಾ ಜನರನ್ನು ನೋಡಿ ಬೆಳೆದಿದ್ದೇನೆ. ಇಂಥದ್ದೊಂದು ಪಾತ್ರ ಮಾಡುವ ಆಸೆ ಮೊದಲಿಂದಲೂ ಇತ್ತು. ಅದರ ಜೊತೆಗೆ ಆ್ಯಕ್ಷನ್ ನನ್ನ ಫೇವರಿಟ್‌ ಜಾನರ್‌. ಅಪ್ಪು ಸರ್‌, ದುನಿಯಾ ವಿಜಿ ಅವರ ಆ್ಯಕ್ಷನ್ ನನಗೆ ಸ್ಪೂರ್ತಿ. ಇನ್ನೊಂದೆಡೆ ಇದು ಯಶ್‌ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್‌ ನಿರ್ಮಾಣದ ಮೊದಲ ಸಿನಿಮಾ. ಅವರು ಸ್ಟ್ರಗ್ಲಿಂಗ್‌ ಕಲಾವಿದರಿಗೆ ಅವಕಾಶ ಕೊಡಬೇಕು ಅಂತ ಸಿನಿಮಾ ಮಾಡಿದ್ದಾರೆ. ಅದಕ್ಕೆ ನನ್ನೆಲ್ಲ ಶ್ರಮ ಹಾಕಿದ್ದೇನೆ.

- ನಿಮ್ಮನ್ನು ಸ್ಟ್ರಗ್ಲಿಂಗ್‌ ಹೀರೋ ಅನ್ನಬಹುದಾ?

ನಾನು ಸ್ಟ್ರಗ್ಲಿಂಗ್‌ ಹೀರೋನೇ. ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದೆ. ಆದರೆ ಒಂದೊಳ್ಳೆ ಬ್ರೇಕ್‌ಗಾಗಿ ಎದುರು ನೋಡುತ್ತಿದ್ದೇನೆ.

- ನೀವು ಹೀರೋ ಆಗಿದ್ದರೂ ಗೋಪಾಲಕೃಷ್ಣ ದೇಶಪಾಂಡೆ ಪಾತ್ರಕ್ಕೆ ತೂಕ ಹೆಚ್ಚಿದೆ. ಇನ್‌ಸೆಕ್ಯೂರಿಟಿ ಫೀಲ್‌ ತರಲ್ವಾ?

ಖಂಡಿತಾ ಇಲ್ಲ. ಅಂಥವರ ಜೊತೆಗೆ ನಟಿಸುವುದಕ್ಕೆ ಖುಷಿ ಇದೆ. ನಾನೇ ನನ್ನ ಎರಡು ಸೀನ್‌ ಅನವಶ್ಯಕ ಅನಿಸಿ ಕಟ್‌ ಮಾಡಿಸಿದ್ದೇನೆ. ಈ ಸಿನಿಮಾದಲ್ಲಿ ದೇಶಪಾಂಡೆ ಸರ್‌ ಪಾತ್ರವನ್ನು ಬಹಳ ಆಸ್ಥೆಯಿಂದ ಗಮನಿಸಿದ್ದೇನೆ. ನಾನವರ ಫ್ಯಾನ್‌ ಬಾಯ್‌. ಸಿನಿಮಾ ನೋಡಿದ ಮೇಲೆ ನನ್ನ ಪಾತ್ರಕ್ಕಿಂತಲೂ ಅವರ ಪಾತ್ರವೇ ಪ್ರೇಕ್ಷಕನ ಮನಸ್ಸಲ್ಲಿ ಉಳಿಯುತ್ತದೆ ಅನ್ನುವುದು ನನ್ನ ಅಭಿಪ್ರಾಯ.

- ಈ ಸಿನಿಮಾಕ್ಕೆ ನಿಮ್ಮ ಸಿದ್ಧತೆ ಹೇಗಿತ್ತು?

ನಾನು ಹಿಂದೆಯೇ ಮಾರ್ಷಲ್‌ ಆರ್ಟ್‌ ಕಲಿತಿದ್ದೇನೆ. ಈ ಸಿನಿಮಾದಲ್ಲಿ ಅದರ ಜೊತೆಗೆ ಇನ್ನೊಂದಿಷ್ಟು ತಯಾರಿ ಮಾಡಿಕೊಂಡೆ. ಪಾತ್ರಕ್ಕೆ ಮಾನಸಿಕ ಸಿದ್ಧತೆ ಇದ್ದೇ ಇರುತ್ತದೆ.

- ಸಿನಿಮಾದ ಹೈಲೈಟ್‌ ಏನು?

ಕಾರ್ತಿಕ್‌ ಎಂಬ ಯುವಕ ಅದ್ಭುತ ಸಿನಿಮಾಟೋಗ್ರಫಿ ಮಾಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ನಟನೆ ಬೆರಗಾಗಿಸುವಂತಿದೆ. ನಿರ್ದೇಶಕರು ಒಂದೂರಿನ ಕಥೆಯನ್ನು ಪವರ್‌ಫುಲ್ಲಾಗಿ ಪ್ರಸ್ತುತಪಡಿಸಿದ್ದಾರೆ.

- ನಿಮ್ಮ ಜೊತೆಗೆ ಬಂದ ದೀಕ್ಷಿತ್‌ ಶೆಟ್ಟಿ ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ನಿಮಗೆ ಆ ಪ್ಲಾನ್‌ ಇಲ್ವಾ?

ನಾನು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರ ಜೊತೆಗೆ ನಿರ್ದೇಶನ ಮಾಡುವ ಕನಸಿನಲ್ಲಿ ತುಳು ಸಿನಿಮಾ ನಿರ್ದೇಶನ ಮಾಡಿದ್ದೇನೆ. ನಮ್ಮೂರಿನ ರಾಜ್‌ ಬಿ ಶೆಟ್ಟಿ, ರಿಷಬ್‌, ರಕ್ಷಿತ್‌ ಶೆಟ್ಟಿ ಅವರಿಂದ ಪ್ರೇರಣೆ ಪಡೆದು ನಮ್ಮ ಸ್ಥಳೀಯ ಕಲಾವಿದರನ್ನೇ ಬಳಸಿ ಈ ಸಿನಿಮಾ ನಿರ್ದೇಶಿಸಿದ್ದೇನೆ. ಶೀಘ್ರ ಬಿಡುಗಡೆಯಾಗಲಿದೆ. ಇನ್ನೊಂದು ಸಿನಿಮಾ ಮಾಡುವ ಚಿಂತನೆಯೂ ಇದೆ.

- ಯಶ್‌ ತಾಯಿ ನಿಮ್ಮನ್ನು ಮಗನ ಥರ ಕಾಣ್ತಿದ್ದರಂತೆ?

ಸಿನಿಮಾ ರೆಡಿ ಆಗುವವರೆಗೂ ನನಗೆ ಅವರೇ ಪ್ರೊಡ್ಯೂಸರ್‌ ಅನ್ನೋ ವಿಚಾರವೇ ಗೊತ್ತಿರಲಿಲ್ಲ. ಸಿನಿಮಾ ರೆಡಿಯಾದ ಮೇಲೆ ಈ ವಿಷಯ ತಿಳಿದದ್ದು. ಪ್ರಚಾರದುದ್ದಕ್ಕೂ ಅವರು ನಮ್ಮ ಜೊತೆಗೆ ತಾಯಿಯಂತೆ ಬೆರೆತರು. ನಮಗಿಂತ ಹೆಚ್ಚು ಪ್ರಮೋಶನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅವರ ಅಕ್ಕರೆ, ಆತ್ಮವಿಶ್ವಾಸ, ವಿಚಾರದ ಬಗ್ಗೆ ಇರುವ ಸ್ಪಷ್ಟತೆ, ನೇರ ನಿಲುವು ಇಷ್ಟವಾಯ್ತು.

PREV
Read more Articles on

Recommended Stories

ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರಗೇ ಸೈಬರ್‌ ಟೋಪಿ!
ನಾಳೆ ಹೆಡೆಮುರಿ ಚಲನಚಿತ್ರದ ಟ್ರೈಲರ್ ಬಿಡುಗಡೆ