ಬೆಂಗಳೂರು : ದರ್ಶನ್ ಅಭಿಮಾನಿಗಳು ಹಾಗೂ ರಮ್ಯಾ ನಡುವಿನ ಸಂಘರ್ಷಕ್ಕೆ ಇದೀಗ ಧ್ರುವ ಸರ್ಜಾ ಪ್ರವೇಶಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು,‘ನಟಿ ರಮ್ಯಾ ನಡೆ ಸರಿ ಇದೆ. ಆದರೆ, ಪ್ರಥಮ್ ವರ್ತನೆ ತಪ್ಪು’ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿದ ಧ್ರುವ ಸರ್ಜಾ, ‘ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಅವರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದರು. ಆ ನಂತರ ಅವರೇ ಹೇಳಿಕೊಂಡಿರುವಂತೆ ತುಂಬಾ ಅಶ್ಲೀಲ ಸಂದೇಶಗಳು ಬಂದವು. ಅದಕ್ಕೆ ಅವರು ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ರಮ್ಯಾ ತೆಗೆದುಕೊಂಡ ನಿಲುವು ಸರಿ ಇದ್ದು, ನಾವು ಅವರ ಜತೆಗೆ ಇರುತ್ತೇವೆ’ ಎಂದಿದ್ದಾರೆ.
‘ದರ್ಶನ್ ವಿಚಾರದಲ್ಲಿ ಪ್ರಥಮ್ ವರ್ತನೆ ನೋಡಿ ನನಗೆ ಬೇಸರ ಆಯಿತು. ಈ ವಿಚಾರದಲ್ಲಿ ನಾನು ದರ್ಶನ್ ಅವರ ಪರ ಇದ್ದೇನೆ’ ಎಂದರು.
ಯಾರೋ ಬಂದು ಮಚ್ಚು, ಡ್ರ್ಯಾಗರ್ ತೋರಿಸಿದರು ಎಂದು ಪ್ರಥಮ್ ಅವರೇ ಹೇಳಿದ್ದಾರೆ. ಆದರೂ ದೂರು ಕೊಟ್ಟಿಲ್ಲ. ದರ್ಶನ್ ಅವರ ಬಗ್ಗೆ ತುಂಬಾ ಕೆಟ್ಟದಾಗಿ, ಗೌರವ ಇಲ್ಲದೆ ವಿಗ್ಗು ಇತ್ಯಾದಿ ಮಾತನಾಡಿದ್ದು ಸರಿಯಲ್ಲ. ಎಲ್ಲರಿಗೂ ಮರ್ಯಾದೆ ಅಂತಿರುತ್ತದೆ. ಯಾರೋ ಒಬ್ಬರು ಸ್ವಲ್ಪ ಡೌನ್ ಆಗಿದ್ದಾರೆ ಅಂದಕೂಡಲೇ ಆಳಿಗೊಬ್ಬರು ಕಲ್ಲು ಎಸೆಯಬಾರದು. ಸೀನಿಯರ್ ಬಗ್ಗೆ ಈ ಥರ ಮಾತನಾಡಿದಾಗ ನಾನು ಸುಮ್ಮನಿದ್ದರೆ ತಪ್ಪಾಗುತ್ತದೆ. ದರ್ಶನ್ ಅವರಿಗೆ ಫ್ಯಾಮಿಲಿ ಇದೆ. ಮಗ ಇದ್ದಾನೆ. ಇದೆಲ್ಲ ನೋಡಿದಾಗ ಆತನಿಗೆ ಏನನ್ನಿಸಬಹುದು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.