ಸಿನಿವಾರ್ತೆ
‘ಕಾಂತಾರ ಅಧ್ಯಾಯ 1’ ಸಿನಿಮಾ ಬಿಡುಗಡೆಗೂ ಮೊದಲೇ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಎಸ್‌ಎಸ್ ರಾಜಮೌಳಿ ಗರಡಿಯಲ್ಲಿ ಪಳಗಿರುವ ತೆಲುಗಿನ ನಿರ್ದೇಶಕ ಅಶ್ವಿನ್ ಗಂಗರಾಜು ನಿರ್ದೇಶನದ ಐತಿಹಾಸಿಕ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇದು ರಿಷಬ್ ಶೆಟ್ಟಿ ಒಪ್ಪಿಕೊಂಡಿರುವ ಮೂರನೇ ಪ್ಯಾನ್ ಇಂಡಿಯಾ ಸಿನಿಮಾ. ಈಗಾಗಲೇ ಅವರು ‘ಜೈ ಹನುಮಾನ್’, ‘ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಎರಡು ಪ್ಯಾನ್ ಇಂಡಿಯಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಹೊಸ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ‘ಸುಟ್ಟ ಭೂಮಿಯಿಂದ ಒಬ್ಬ ಬಂಡುಕೋರ ಹುಟ್ಟಿದ’ ಎಂಬ ಟ್ಯಾಗ್‌ಲೈನ್ ನೀಡಲಾಗಿದೆ.
‘ಎಲ್ಲ ಬಂಡುಕೋರರೂ ಯುದ್ಧವನ್ನು ಆಯ್ಕೆ ಮಾಡುವುದಿಲ್ಲ. ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ ಮತ್ತು ಈ ಸಿನಿಮಾ ಅಂಥಾ ಒಬ್ಬ ಬಂಡುಕೋರನ ಕಥೆ ಹೇಳುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 18ನೇ ಶತಮಾನದಲ್ಲಿ ಬಂಗಾಳದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಪ್ರಕ್ಷುಬ್ಧತೆಯಲ್ಲಿ ಜನಜೀವನ ದುಸ್ತರವಾಗಿದ್ದಾಗ ಉದಯಿಸಿದ ಬಂಡುಕೋರನ ಕಥೆ ಈ ಚಿತ್ರದ್ದು ಎನ್ನಲಾಗಿದೆ. ಸಿತಾರಾ ಎಂಟರ್‌ಟೇನ್‌ಮೆಂಟ್‌ನ ನಾಗವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.