ಅಲ್ಲು ಅರ್ಜುನ್‌, ಅಲಿಯಾ, ಕೃತಿ ಅತ್ಯುತ್ತಮ ನಟ, ನಟಿ

KannadaprabhaNewsNetwork | Updated : Oct 18 2023, 01:02 AM IST

ಸಾರಾಂಶ

ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021 ಪುರಸ್ಕೃತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಇಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು
- 69ನೇ ರಾಷ್ಟ್ರೀಯ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿ ಮುರ್ಮು - ವಹೀದಾ ರೆಹಮಾನ್‌ಗೆ ದಾದಾ ಸಾಹೇಬ್‌ ಫಾಲ್ಕೆ ಗೌರವ ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021 ಪುರಸ್ಕೃತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಇಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ವಹೀದಾ ರೆಹಮಾನ್‌ ಅವರು ದಾದಾ ಸಾಹೇಬ್‌ ಫಾಲ್ಕೆ ಗೌರವಕ್ಕೆ ಪಾತ್ರರಾದರೆ, ನಟ ಅಲ್ಲು ಅರ್ಜುನ್‌ ಉತ್ತಮ ನಟ, ಕೃತಿ ಸನೋನ್‌ ಮತ್ತು ಆಲಿಯಾ ಭಟ್‌ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಿದ ರಾಷ್ಟ್ರಪತಿ ಮುರ್ಮು, ಅರಿವು ಮತ್ತು ಸಂವೇದನೆ ಮೂಡಿಸಲು ಸಿನಿಮಾ ಅತ್ಯುತ್ತಮ ಮಾಧ್ಯಮವಾಗಿದೆ. ಅಲ್ಲದೇ ಈ ಮಾಧ್ಯಮ ಶಕ್ತವಾಗಿ ಭಾರತದ ಸಮಾಜವನ್ನು ತೋರಿಸುತ್ತದೆ’ ಎಂದು ಹೇಳಿದರು. ‘ಪುಷ್ಪ: ದ ರೈಸ್‌’ ಸಿನಿಮಾಕ್ಕೆ ನಟ ಅಲ್ಲು ಅರ್ಜುನ್‌ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ‘ಗಂಗೂಬಾಯಿ ಕಾಥೀಯಾವಾಡಿ’ ಹಾಗೂ ‘ಮಿಮಿ’ ಸಿನಿಮಾಗೆ ಕ್ರಮವಾಗಿ ಆಲಿಯಾ ಭಟ್‌ ಮತ್ತು ಕೃತಿ ಸನೋನ್‌ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು. ‘ಗೋದಾವರಿ’ ಎಂಬ ಮರಾಠಿ ಸಿನಿಮಾಕ್ಕಾಗಿ ನಿಖಿಲ್‌ ಮಹಾಜನ್‌ ಉತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದರು. ಆರ್‌ಆರ್‌ಆರ್‌ ಸಿನಿಮಾ ಸಂಗೀತ, ಜನಪ್ರಿಯತೆ, ಉತ್ತಮ ಗಾಯಕ, ಸ್ಪೆಶಲ್‌ ಎಫೆಕ್ಟ್‌, ಸಾಹಸ ನಿರ್ದೇಶನ ಮತ್ತು ನೃತ್ಯ ಸಂಯೋಜನೆಯಲ್ಲಿ 6 ರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿತು. ಶ್ರೇಯಾ ಘೋಷಾಲ್‌ ಉತ್ತಮ ಗಾಯಕಿ, ಕಾಲಭೈರವ ಉತ್ತಮ ಗಾಯಕ ಪ್ರಶಸ್ತಿ ಪಡೆದುಕೊಂಡರು. ==== ವಹೀದಾ ರೆಹಮಾನ್‌ಗೆ ಪಾಲ್ಕೆ ಗೌರವ ಭಾರತೀಯ ಚಿತ್ರರಂಗದ ಉನ್ನತ ಗೌರವವಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಮಂಗಳವಾರ ವಹೀದಾ ರೆಹಮಾನ್‌ ಅವರಿಗೆ ನೀಡಲಾಯಿತು. ಈ ಮೂಲಕ ಈ ಗೌರವ ಪಡೆದ 8ನೇ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಬಳಿಕ ಮಾತನಾಡಿದ ಅವರು, ‘ನನ್ನ ಸಿನಿಮಾ ಉದ್ಯಮದಿಂದಾಗಿ ಈ ಗೌರವ ನನಗೆ ಸಿಕ್ಕಿದೆ. ಉತ್ತಮ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರ ಜೊತೆ ಕೆಲಸ ಮಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಹಾಗಾಗಿ ಈ ಗೌರವ ಸಿಕ್ಕಿದೆ’ ಎಂದು ಅವರು ಹೇಳಿದರು.

Share this article