‘ಸು ಫ್ರಂ ಸೋ’ ಸಿನಿಮಾ ಒಂದೇ ವಾರದಲ್ಲಿ 20 ಕೋಟಿ ರು.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇವತ್ತು ಮಲಯಾಳಂನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದ ಸಕ್ಸಸ್ ಯಾತ್ರೆ ಮುಂದುವರಿಯಲಿದ್ದು, 4 ಸಿನಿಮಾಗಳು ರಿಲೀಸ್ ಮುಂದಕ್ಕೆ ಹಾಕಿವೆ. ಈ ಸಿನಿಮಾ ಚಿತ್ರರಂಗದಲ್ಲಿ ಹೊಸ ಹುಮ್ಮಸ್ಸು ಹುಟ್ಟಿಸಿದೆ.
ಹೊಸ ನಿರ್ದೇಶಕನ ಸಿನಿಮಾ ಕಲಿಸಿದ 5 ಪಾಠಗಳು
1. ಜನರನ್ನು ಹಿಡಿದು ಕೂರಿಸುವ ಶಕ್ತಿ ಸಿನಿಮಾಗಿತ್ತು. ಅದು ಸಿನಿಮಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. ಸಿನಿಮಾ ಮಾಡುವವರು ಆ ತಾಕತ್ತು ತಮ್ಮ ಸಿನಿಮಾಗಿದೆಯೇ ಅಂತ ಮೊದಲು ನೋಡಬೇಕು.
2. ಈ ಸಿನಿಮಾ ನೇಟಿವಿಟಿಯ ಹಿನ್ನೆಲೆಯಲ್ಲಿ ಭರಪೂರ ಹಾಸ್ಯ, ಮನರಂಜನೆ ನೀಡಿದೆ. ಅದು ಈ ಚಿತ್ರವನ್ನು ಉಳಿದ ಸಿನಿಮಾಗಳಿಂದ ಭಿನ್ನವಾಗಿ ನಿಲ್ಲಿಸಿದೆ. ಹಾಗೆಂದು ಇದೇ ಮಾದರಿಯ ಇನ್ನೊಂದು ಸಿನಿಮಾ ಬಂದರೆ ಜನ ನೋಡುವ ಸಾಧ್ಯತೆ ಕಡಿಮೆ. ಆದರೆ ಹೆಚ್ಚಿನವರು ಸಕ್ಸಸ್‌ಫುಲ್ ಸಿನಿಮಾ ಯಾಕೆ ಸಕ್ಸಸ್ ಆಗಿದೆ ಅಂತ ನೋಡೋ ಬದಲು ಅದರಂತೆ ಕಥೆ ಹೇಳುತ್ತೇನೆ ಅಂತ ಹೊರಟು ಸೋಲು ಅನುಭವಿಸುವ ಸಾಧ್ಯತೆ ಹೆಚ್ಚು.
3. ‘ಸು ಪ್ರಂ ಸೋ’ ಇರಬಹುದು, ಬಾಲಿವುಡ್ ಸಿನಿಮಾ ‘ಸೈಯ್ಯಾರ’ ಇರಬಹುದು, ಸಿನಿಮಾ ಪ್ರಚಾರ ಮಾಡಿದ ರೀತಿಯಲ್ಲಿ ಎದ್ದು ಕಾಣುತ್ತಿದ್ದದ್ದು ಹೊಸತನ. ಸಾಂಪ್ರದಾಯಿಕ ಪ್ರಚಾರ ತಂತ್ರ ಅನುಸರಿಸಲಿಲ್ಲ. ಸಂದರ್ಶನ ಕೊಟ್ಟು ಸಿನಿಮಾದ ಗುಟ್ಟು ಬಿಟ್ಟು ಕೊಡಲಿಲ್ಲ. ಜನರಿಗೆ ನೇರ ಸಿನಿಮಾ ತೋರಿಸಿ ಮೌತ್ ಪಬ್ಲಿಸಿಟಿ ಆಗುವಂತೆ ನೋಡಿಕೊಂಡರು. ಬಾಯಿಂದ ಬಾಯಿಗೆ ಈ ಸಿನಿಮಾ ಸುದ್ದಿ ಹರಡಿ ಸಿನಿಮಾ ಗೆದ್ದಿತು.
4. ಪ್ರಚಾರಕ್ಕೆ ಅಂತ ಪ್ರೈವೇಟ್ ಜೆಟ್, ವಿದೇಶದಲ್ಲಿ ರೀರೆಕಾರ್ಡಿಂಗ್ ಮಾಡೋ ಕಾಲದಲ್ಲಿ ‘ಸು ಫ್ರಂ ಸೋ’ ಟೀಮ್ ದುಡ್ಡಿನ ಮಿತವ್ಯಯ ತಂತ್ರ ಅನುಸರಿಸಿತು. ಶೂಟಿಂಗ್‌ಗೆ ಲಭ್ಯ ಇರುವ ಸ್ಥಳೀಯ ಸಂಪನ್ಮೂಲ ಬಳಸಿಕೊಂಡಿತು. ಖರ್ಚು ಉಳಿಸುವ ಜೊತೆಗೆ ಜನರಿಂದ ಭಿನ್ನ ಅನುಭವ ನೀಡಿತು.
5. ಈ ಸಿನಿಮಾದಲ್ಲಿ ಸುಮೇಧ್ ಅನ್ನುವ 19 ವರ್ಷದ ಕಾಲೇಜು ಹುಡುಗನ ಪ್ರತಿಭೆ ಗುರುತಿಸಿ ಚಿತ್ರತಂಡ ಸಂಗೀತ ನಿರ್ದೇಶನದ ದೊಡ್ಡ ಅವಕಾಶ ನೀಡಿತು. ನಮ್ಮ ನೆಲದ ಪ್ರತಿಭಾವಂತರಿಗೆ ಮಣೆ ಹಾಕಿತು. ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಸಂಧ್ಯಾ ಅರಕೆರೆ ಅವರಂಥಾ ಸ್ಥಳೀಯ ಪ್ರತಿಭೆಗಳೇ ಜನರ ಮನಸೂರೆಗೊಂಡರು.
20 ಕೋಟಿ ಕಲೆಕ್ಷನ್
ಸು ಫ್ರಂ ಸೋ ಸಿನಿಮಾದ ಈವರೆಗಿನ ಕಲೆಕ್ಷನ್ ರೂ.20 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಸಾಮಾನ್ಯ ಗಳಿಕೆ ಕಡಿಮೆ ಇರುವ ವೀಕ್ ಡೇಯಲ್ಲೂ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮುಂದಿನ ವೀಕೆಂಡ್‌ಗೆ ವಾರದ ಆರಂಭದಿಂದಲೇ ಬುಕಿಂಗ್‌ಗಳಾಗಿವೆ. ಅಂದಾಜು 9.5 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿವೆ. ಸಿನಿಮಾ ಮುಂದಿನವಾರ ಬೇರೆ ಭಾಷೆಗಳಲ್ಲಿ, ಬೇರೆ ದೇಶಗಳಲ್ಲಿ ರಿಲೀಸ್ ಆಗಲಿದ್ದು, ಗಳಿಕೆ ನಿರೀಕ್ಷೆಗೂ ಮೀರಿ ಹೆಚ್ಚಾಗುವ ಸಾಧ್ಯತೆ ಇದೆ.
4 ಸಿನಿಮಾಗಳು ಮುಂದಕ್ಕೆ
‘ಸು ಫ್ರಂ ಸೋ’ ಸಿನಿಮಾ ಸ್ಕ್ರೀನ್‌ಗಳನ್ನೆಲ್ಲ ಆವರಿಸಿಕೊಂಡ ರಭಸಕ್ಕೆ 4 ಸಿನಿಮಾಗಳ ರಿಲೀಸ್ ಮುಂದಕ್ಕೆ ಹೋಗಿದೆ. ಆ.1ರಂದು ಬಿಡುಗಡೆಯಾಗಬೇಕಿದ್ದ ಪ್ರಿಯಾಂಕಾ ಉಪೇಂದ್ರ ನಟನೆಯ ‘ಕಮರೋ 2’, ಅಥರ್ವ ಪ್ರಕಾಶ್ ನಟನೆಯ ‘ನಾನ್‌ವೆಜ್’, ರೊಮ್ಯಾಂಟಿಕ್ ಡ್ರಾಮಾ ‘ಲವ್ ಮ್ಯಾಟ್ರು’ ಹಾಗೂ ಆ.8ಕ್ಕೆ ರಿಲೀಸ್ ಆಗಬೇಕಿದ್ದ ‘ಸೆಪ್ಟೆಂಬರ್ 10’ ಸಿನಿಮಾಗಳ ರಿಲೀಸ್ ಮುಂದಕ್ಕೆ ಹೋಗಿದೆ.