ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು : ಕಳ್ಳತನದಲ್ಲಿ ಎಷ್ಟು ವಿಧ ? ಅವು ಯಾವುವು?

KannadaprabhaNewsNetwork |  
Published : Jan 11, 2025, 12:45 AM ISTUpdated : Jan 11, 2025, 04:43 AM IST
ನಿಮ್ಮ ವಸ್ತುಗಳಿಗೆ | Kannada Prabha

ಸಾರಾಂಶ

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾ ವಿಮರ್ಶೆ

ಚಿತ್ರ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು

ತಾರಾಗಣ: ಪ್ರಸನ್ನ ವಿ ಶೆಟ್ಟಿ, ಮಧುಸೂದನ್‌ ಗೋವಿಂದ್, ಅಪೂರ್ವ ಭಾರದ್ವಾಜ್‌, ದಿಲೀಪ್‌ ರಾಜ್‌, ಶಿಲ್ಪಾ ಮಂಜುನಾಥ್‌

ನಿರ್ದೇಶನ : ಕೇಶವ ಮೂರ್ತಿ

ರೇಟಿಂಗ್‌: 3.5- ಪ್ರಿಯಾ ಕೆರ್ವಾಶೆ

‘ನೀವು ಕ್ಲಾಸಲ್ಲಿ ಕಳ್ಳತನ ಮಾಡಿಲ್ವಾ, ನಾನು ಪೆನ್ಸಿಲ್‌, ಸ್ಕೆಚ್‌ ಪೆನ್‌ ಕದ್ದಿದ್ದೆ..’

ಸಿನಿಮಾ ಮುಗಿದ ಮೇಲೆ ಪ್ರೇಕ್ಷಕರಲ್ಲೇ ಹೀಗೊಂದು ಸಣ್ಣ ಮಾತುಕತೆ ಶುರು ಆಯಿತು ಅನ್ನುವುದೇ ಹೊಸಬರ ಈ ಸಿನಿಮಾ ಕರೆಕ್ಟ್ ದಾರಿಯಲ್ಲಿದೆ ಎಂಬುದಕ್ಕೆ ಉದಾಹರಣೆ. ಆದರೆ ಇದು ದಾರಿ ತಪ್ಪಿದವರ, ದಾರಿ ತಪ್ಪಿಸುವವರ ಕಥೆ. ಮೂರು ಕಳ್ಳತನದ ಕಥೆಗಳುಳ್ಳ ಆ್ಯಂಥಾಲಜಿ.

ಆರಂಭದ ಕಥೆಯಲ್ಲಿ ಎದುರಾಗುವವನು ಇನಾಯತ್‌. ಈತನದು ಅಂತರ್‌ ಧರ್ಮೀಯ ಮದುವೆ, ಕೆಳಮಧ್ಯಮ ವರ್ಗದ ಸಂಸಾರ, ವಿಪರೀತ ತಾಪತ್ರಯಗಳು, ಪಡಿಪಾಟಲು ಪಡುವಂಥಾ ಕೆಲಸ, ಈತನಿಗೆ ಚಪ್ಪಲಿ ಅಡಿಮೇಲಾದರೆ ತನ್ನ ಭವಿಷ್ಯವೂ ಅಡಿಮೇಲಾದಂತೆ ದಿಗಿಲು. ಗೀಳು ಸಮಸ್ಯೆಯ, ತೊದಲು ಮಾತಿನ ಈ ಆಸಾಮಿ ಚೀಟಿಗೆ ಕಟ್ಟುವ ದುಡ್ಡು ಹೊಂದಿಸಲು ಬಳಸುವುದು ವಿಚಿತ್ರ ಕಳ್ಳತನದ ತಂತ್ರ. ಕಿರುತೆರೆ, ರಂಗಭೂಮಿ ಹಿನ್ನೆಲೆಯ ಪ್ರಸನ್ನ ವಿ ಶೆಟ್ಟಿ ಈ ಪಾತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಮುಂದಿನ ಕಥೆ ಹುಡುಗ, ಹುಡುಗಿಯ ಕ್ಲೆಪ್ಟೋಮೇನಿಯಾ ಅಂದರೆ ಕದಿಯುವ ಗೀಳಿನ ಬಗ್ಗೆ. ಇದೊಂದು ಲವಲವಿಕೆಯ ಕಲರ್‌ಫುಲ್‌ ಜಗತ್ತು. ಮಧುಸೂದನ್‌ ಮತ್ತು ಅಪೂರ್ವ ಈ ಲೋಕಕ್ಕೆ ಕರೆದೊಯ್ಯುತ್ತಾರೆ.

ಕೊನೆಯ ಕಥೆ ದಿಲೀಪ್‌ ರಾಜ್‌, ಶಿಲ್ಪಾ ನಟನೆಯಲ್ಲಿ ಇಡೀ ಸೆಕೆಂಡ್‌ ಹಾಫ್‌ ಅನ್ನು ಆವರಿಸುತ್ತದೆ. ಇದು ಹನಿಟ್ರ್ಯಾಪ್‌ ಸ್ಟೋರಿಲೈನ್‌ನ ಥ್ರಿಲ್ಲರ್‌.

ಕಥೆಗಿಂತಲೂ ಅನುಭವವಾಗಿ ಇಡೀ ಸಿನಿಮಾ ಹೆಚ್ಚು ತಾಕುತ್ತದೆ. ಇದಕ್ಕೆ ಛಾಯಾಗ್ರಾಹಕ ಹರ್ಷ ಕುಮಾರ್‌ ಕೊಡುಗೆಯೂ ಇದೆ. ಸಿನಿಮಾದುದ್ದಕ್ಕೂ ಜಿದ್ದಿಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಅಭಿನಯಿಸಿದ್ದಾರೆ. ಡ್ರಾಮ, ರೋಮ್‌ಕಾಮ್‌, ಥ್ರಿಲ್ಲರ್‌ ಜಾನರಾದ ಈ ಮೂರು ಕಥೆಗಳು ಬೆಂಗಳೂರಿನ ವಿಭಿನ್ನ ಸ್ತರಗಳ ಬದುಕನ್ನು ಕಟ್ಟಿಕೊಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ನಡುವಿಂದ ಎದ್ದು ಬಂದಂಥಾ ಪಾತ್ರ ಚಿತ್ರಣ, ಓಪನ್‌ ಎಂಡಿಂಗ್‌, ಹೊಸ ಬಗೆಯ ದೃಷ್ಟಿಕೋನ, ಈ ಸಿನಿಮಾ ಸಾಧ್ಯತೆಯನ್ನು ವಿಸ್ತರಿಸಿದೆ.

PREV

Recommended Stories

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಸೀಮಂತ ಶಾಸ್ತ್ರ