ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌

Published : Jun 18, 2025, 04:43 PM IST
Sanju Weds Geetha

ಸಾರಾಂಶ

ಪ್ರಚಾರಕ್ಕೆ ಬರದಿದ್ರೆ ನಿರ್ಮಾಪಕ ಎಲ್ಲೋಗ್ತಾನೆ. ರಚಿತಾರಾಮ್‌ರಂಥಾ ಕಲಾವಿದರನ್ನು ಬ್ಯಾನ್‌ ಮಾಡಬೇಕು ಅನ್ನೋದು ನಮ್ಮ ಒತ್ತಾಯ - ನಾಗಶೇಖರ್‌

 ಸಿನಿವಾರ್ತೆ

‘ರಚಿತಾ ರಾಮ್‌ ಸಂಭಾವನೆ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳುವವರಲ್ಲ. ನಟನೆಯಾಗಲಿ, ಡಬ್ಬಿಂಗ್‌ ಆಗಲಿ, ಹಣ ಸಂದಾಯವಾದ ಮೇಲೇ ಅವರು ಬರುವುದು. ನಮ್ಮ ಸಿನಿಮಾದಲ್ಲಿ ಅವರಿಗೆ ಸಂಪೂರ್ಣ ಸಂಭಾವನೆ ನೀಡಿದ್ದೇವೆ. ಆರಂಭದ ಒಂದೆರಡು ಪ್ರಚಾರ ಕಾರ್ಯಕ್ರಮ ಹೊರತುಪಡಿಸಿ ಈವರೆಗೆ ಅವರು ಸಿನಿಮಾ ಪ್ರಚಾರಕ್ಕೆ ಬಂದಿಲ್ಲ. ಪ್ರಚಾರಕ್ಕೆ ಬರದಿದ್ರೆ ನಿರ್ಮಾಪಕ ಎಲ್ಲೋಗ್ತಾನೆ. ರಚಿತಾರಾಮ್‌ರಂಥಾ ಕಲಾವಿದರನ್ನು ಬ್ಯಾನ್‌ ಮಾಡಬೇಕು ಅನ್ನೋದು ನಮ್ಮ ಒತ್ತಾಯ’.

- ಇವು ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾ ನಿರ್ದೇಶಕ ನಾಗಶೇಖರ್‌ ಮಾತುಗಳು.

ಎರಡೆರಡು ಬಾರಿ ಬಿಡುಗಡೆ ಕಂಡ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾ ಪ್ರಚಾರಕ್ಕೆ ನಾಯಕ ನಟಿ ರಚಿತಾ ರಾಮ್‌ ಗೈರು ಹಾಜರಾಗಿರುವುದರಿಂದ ಬೇಸತ್ತ ಚಿತ್ರತಂಡ ಇದೀಗ ರಚಿತಾ ರಾಮ್‌ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಈ ಬಗ್ಗೆ ವಿವರ ನೀಡಿರುವ ನಿರ್ದೇಶಕ ನಾಗಶೇಖರ್‌, ‘ಸಿನಿಮಾ ಮರು ಬಿಡುಗಡೆಯಾದಾಗ ಅವರ ಅಗತ್ಯ ಬಹಳ ಇತ್ತು. ನಾವು ಪ್ರಚಾರಕ್ಕೆ ಸಂಬಂಧಿಸಿ ಚಿಕ್ಕ ವೀಡಿಯೋ ಮಾಡಿಕೊಡಲು ಹೇಳಿದಾಗಲೂ ಮಾಡಲಿಲ್ಲ. ಕಾರ್ಯಕ್ರಮಗಳಿಗೆ ಮೇಲಿಂದ ಮೇಲೆ ಕರೆಯುತ್ತಲೇ ಇದ್ದೆವು. ಅವರ ಶೆಡ್ಯೂಲ್‌ ನೋಡಿಕೊಂಡು ಸಿನಿಮಾ ಕಾರ್ಯಕ್ರಮ ಆಯೋಜಿಸಲೂ ಮುಂದಾಗಿದ್ದೆವು. ಆದರೆ ಅವರು ಇದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ರಾಕ್‌ಲೈನ್‌ ವೆಂಕಟೇಶ್‌ರಂತಹ ಹಿರಿಯ ನಿರ್ಮಾಪಕರು ವಿನಂತಿಸಿದರೂ ಬರಲಿಲ್ಲ.

 ಅಂದರೆ ವರ್ಷದ 365 ದಿನವೂ ಇವರು ಬ್ಯುಸಿನಾ? ನಾನು ವಿಷ್ಣುವರ್ಧನ್‌ ಅವರಂಥಾ ದಿಗ್ಗಜರಿಂದ ಈ ಕಾಲದ ನಿತ್ಯಾ ಮೆನನ್‌, ತಮನ್ನಾರಂಥವರ ತನಕ ಅನೇಕರಿಗೆ ಆ್ಯಕ್ಷನ್‌ ಕಟ್‌ ಹೇಳಿದವನು. ದಶಕಗಳಿಂದ ಇಂಡಸ್ಟ್ರಿಯಲ್ಲಿರುವ ನನ್ನಂಥವರನ್ನೇ ಈ ಲೆವೆಲ್‌ಗೆ ಆಟ ಆಡಿಸಿದರೆ ಇನ್ನು ಹೊಸಬರ ಕಥೆ ಏನು? ಇವರು ಇಂಥಾ ಅಸಹಕಾರವನ್ನೇ ರೂಢಿಸಿಕೊಂಡರೆ ಇತರ ಕಲಾವಿದರೂ ಇವರನ್ನೇ ಅನುಸರಿಸುವುದಿಲ್ಲವೇ? ಎಲ್ಲರೂ ಹೀಗೆ ಮಾಡಿದರೆ ದುಡ್ಡು ಹಾಕಿದ ನಿರ್ಮಾಪಕ ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ವಾಣಿಜ್ಯ ಮಂಡಳಿ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

PREV
Read more Articles on

Recommended Stories

ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪಲು ಭಯ : ಧನಂಜಯ
ಡೆವಿಲ್ ಪ್ರಚಾರಕ್ಕೆ ನಿಂತ ದರ್ಶನ್ ಪತ್ನಿ : ಫ್ಯಾನ್ಸ್ ಬೆಂಬಲ ಕೋರಿದ ವಿಜಯಲಕ್ಷ್ಮೀ