ಸಿನಿವಾರ್ತೆ
ಕೆಲ ದಿನಗಳ ಹಿಂದಷ್ಟೇ ನಿರ್ದೇಶಕ ಅನುರಾಗ್ ಕಶ್ಯಪ್ ಬಾಲಿವುಡ್ ಬಗ್ಗೆ ತೀವ್ರ ಟೀಕೆ ಮಾಡಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ಹಾಡಿ ಹೊಗಳಿದ್ದರು. ಇದೀಗ ಬಹುಭಾಷಾ ನಟಿ ಪೂಜಾ ಹೆಗ್ಡೆ ಕೂಡ ಬಾಲಿವುಡ್‌ನಲ್ಲಿ ತನ್ನ ಪ್ರತಿಭೆಗೆ ತಕ್ಕ ಪಾತ್ರ ಸಿಗಲಿಲ್ಲ, ಸೌತ್ ಸಿನಿಮಾ ತನ್ನ ಪ್ರತಿಭೆಗೆ ನೀರೆರೆದಿದೆ ಎಂದಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಾನು ಮನರಂಜನಾ ಮಾಧ್ಯಮಕ್ಕೆ ಎಂಟ್ರಿ ಕೊಟ್ಟಿದ್ದು ಬಾಲಿವುಡ್ ಸಿನಿಮಾ ಮೂಲಕ. ಆದರೆ ಬಾಲಿವುಡ್ಡಾ, ಸೌತ್ ಸಿನಿಮಾವಾ ಎಂಬ ಆಯ್ಕೆ ಬಂದಾಗ ನಾನು ದಕ್ಷಿಣ ಭಾರತೀಯ ಇಂಡಸ್ಟ್ರಿಯನ್ನೇ ಆಯ್ಕೆ ಮಾಡುತ್ತೇನೆ. ಏಕೆಂದರೆ ಇಲ್ಲಿ ನನ್ನ ಪ್ರತಿಭೆಗೆ ಮನ್ನಣೆ ಸಿಕ್ಕಿತು. ಈಗಲೂ ಕೂಲಿ ಸಿನಿಮಾದಲ್ಲಿನ ನನ್ನ ಡ್ಯಾನ್ಸ್ ಅನ್ನು ಜಗತ್ತಿನಾದ್ಯಂತದ ಜನ ಮೆಚ್ಚಿಕೊಂಡಿದ್ದಾರೆ. ದಳಪತಿ ವಿಜಯ್ ಅವರ ಕೊನೆಯ ಸಿನಿಮಾದಲ್ಲೂ ನಟಿಸುತ್ತಿದ್ದೇನೆ. ಬಾಲಿವುಡ್ ನನ್ನ ಗ್ಲಾಮರಿಗಷ್ಟೇ ಬಳಸಿಕೊಂಡಿತು. ನನ್ನ ಪ್ರತಿಭೆಗೆ ತಕ್ಕ ಪಾತ್ರ ಅಲ್ಲಿ ಸಿಕ್ಕಿಲ್ಲ’ ಎಂದಿದ್ದಾರೆ.
ಇನ್ನೊಂದೆಡೆ ‘ಕೂಲಿ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಸ್ಟೆಪ್ಸ್ ಹಾಕಿದ ‘ಮೋನಿಕಾ ಬಲೂಚಿ’ ಹಾಡಿಗೆ ಸ್ವತಃ ಜಗದ್ವಿಖ್ಯಾತ ನಟಿ ಮೋನಿಕಾ ಬಲೂಚಿ ಅವರೇ ಮೆಚ್ಚುಗೆ ಸೂಚಿಸಿದ್ದಾರೆ. ಈ ಹಾಡು 7 ಕೋಟಿಗೂ ಅಧಿಕ ವೀಕ್ಷಣೆ ದಾಖಲಿಸಿದೆ.