ಆ್ಯಕ್ಷನ್‌ಗೆ ರಾಜ, ಫ್ಯಾಮಿಲಿಗೆ ಮಾರ್ತಾಂಡ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಆ್ಯಕ್ಷನ್‌ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಮೆಚ್ಚುಗೆ ಆಗುವ ಚಿತ್ರ. ಚಿರು ಬಾಡಿ ಲ್ಯಾಂಗ್ವೇಜ್‌, ಧ್ರುವ ಸರ್ಜಾ ಅವರು ಧ್ವನಿ ಸೇರಿಕೊಂಡು ನಿರ್ದೇಶಕ ರಾಮ್‌ನಾರಾಯಣ್‌ ಅವರೇ ಬರೆದಿರುವ ಖಡಕ್‌ ಡೈಲಾಗ್‌ಗಳಿಗೆ ಮತ್ತಷ್ಟು ಗತ್ತು ಬಂದಿದೆ.
ಚಿತ್ರ: ರಾಜಮಾರ್ತಾಂಡ ತಾರಾಗಣ: ಚಿರಂಜೀವಿ ಸರ್ಜಾ, ಮೇಘಶ್ರೀ, ದೇವರಾಜ್, ಸಂಗೀತ, ಭಜರಂಗಿ ಲೋಕಿ, ಚಿಕ್ಕಣ್ಣ, ದೀಪ್ತಿ ಸತಿ ನಿರ್ದೇಶನ: ರಾಮ್‌ನಾರಾಯಣ್‌ ರೇಟಿಂಗ್‌: 3 ಆರ್‌ ಕೇಶವಮೂರ್ತಿ ಆ್ಯಕ್ಷನ್‌, ಮಾಸ್‌, ಖಡಕ್‌ ಡೈಲಾಗ್‌ ಹಾಗೂ ಕುತೂಹಲ ಮೂಡಿಸುವ ನಾಯಕನ ಫ್ಯಾಮಿಲಿ ಹಿನ್ನೆಲೆ... ಇವಿಷ್ಟು ಅಂಶಗಳನ್ನು ಒಳಗೊಂಡ ‘ರಾಜಮಾರ್ತಾಂಡ’ ಸಿನಿಮಾ ಮತ್ತೆ ತೆರೆ ಮೇಲೆ ಚಿರು ಅವರ ದರ್ಶನ ಮಾಡಿಸಿದೆ. ಆ್ಯಕ್ಷನ್‌ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಮೆಚ್ಚುಗೆ ಆಗುವ ಚಿತ್ರ. ಚಿರು ಬಾಡಿ ಲ್ಯಾಂಗ್ವೇಜ್‌, ಧ್ರುವ ಸರ್ಜಾ ಅವರು ಧ್ವನಿ ಸೇರಿಕೊಂಡು ನಿರ್ದೇಶಕ ರಾಮ್‌ನಾರಾಯಣ್‌ ಅವರೇ ಬರೆದಿರುವ ಖಡಕ್‌ ಡೈಲಾಗ್‌ಗಳಿಗೆ ಮತ್ತಷ್ಟು ಗತ್ತು ಬಂದಿದೆ. ಕೆಲಸಕ್ಕಾಗಿ ಅಲೆಯುತ್ತಿರುವ ರಾಜ, ಆತನ ವಿಚಿತ್ರ ವರ್ತನೆ ನೋಡಿ ರಾಜನ ಹಿಂದೆ ಬೀಳುವ ವೈದ್ಯೆ. ಇಬ್ಬರ ಪರಿಚಯ, ಸ್ನೇಹ, ಪ್ರೀತಿ ಆಗುವ ಹೊತ್ತಿಗೆ ರಾಜ ಮತ್ತು ಆತನ ಅಜ್ಜಿಯ ಹಿನ್ನೆಲೆ ಏನು ಎನ್ನುವ ಗುಟ್ಟು ತೆರೆದುಕೊಳ್ಳುತ್ತದೆ. ಚಿತ್ರದ ನಾಯಕ ರಾಜನ ಬಾಲ್ಯದ ಜೀವನದಲ್ಲಿ ಏನಾಯಿತು ಎಂಬುದು ದ್ವಿತೀಯಾರ್ಧ ಚಿತ್ರದ ಕತೆ. ಮೊದಲಾರ್ಧ ಕತೆ ಹಾಡು, ಫೈಟು ಮತ್ತು ಮಾಸ್‌ ಡೈಲಾಗ್‌ಗಳನ್ನು ಹೊತ್ತು ತಂದರೆ, ವಿರಾಮದ ನಂತರ ಕತೆ ಒಂದು ದೊಡ್ಡ ಕುಟುಂಬ, ಅಲ್ಲಿ ನಡೆದ ಸಾವು- ನೋವು ಮತ್ತು ಮೋಸ, ವಂಚನೆಗಳ ಕತೆ ಅನಾವರಣಗೊಳಿಸಿ ಪ್ರೇಕ್ಷಕನ ಕುತೂಹಲ ಹೆಚ್ಚಿಸುತ್ತದೆ. ಚಿರಂಜೀವಿ ಸರ್ಜಾ ಎಂದಿನಂತೆ ಕತೆಗೆ ಜೀವ ತುಂಬಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ಮೇಘಶ್ರೀ, ದೀಪ್ತಿ ಸತಿ ನೆನಪಿನಲ್ಲಿ ಉಳಿಯುತ್ತದೆ. ಚಿರು ಅವರ ಕೊನೆ ಚಿತ್ರವನ್ನು ಅವರ ಅಭಿಮಾನಿಗಳಿಗೆ ನನೆಪಿನಲ್ಲಿ ಉಳಿಯುವಂತೆ ರೂಪಿಸುವಲ್ಲಿ ನಿರ್ದೇಶಕ ರಾಮ್‌ನಾರಾಯಣ್‌ ಯಶಸ್ಸು ಆಗಿದ್ದಾರೆ.

Share this article