ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

- ಪೋಷಕರು, ಶಿಕ್ಷಕರಿಗೆ ಹಿರಿಯ ಪತ್ರಕರ್ತಅಂಶಿ ಪ್ರಸನ್ನಕುಮಾರ್‌ ಸಲಹೆ- ತರಳಬಾಳು ಶಿಕ್ಷಣ ಕೇಂದ್ರದ ವಾರ್ಷಿಕೋತ್ಸವ

- ಪೋಷಕರು, ಶಿಕ್ಷಕರಿಗೆ ಹಿರಿಯ ಪತ್ರಕರ್ತಅಂಶಿ ಪ್ರಸನ್ನಕುಮಾರ್‌ ಸಲಹೆ

- ತರಳಬಾಳು ಶಿಕ್ಷಣ ಕೇಂದ್ರದ ವಾರ್ಷಿಕೋತ್ಸವ

---

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳಿಗೆ ಕೇವಲ ಎಂಜಿನಿಯರಿಂಗ್‌, ಮೆಡಿಕಲ್‌ ಓದುವಂತೆ ಒತ್ತಡ ಹೇರದೆ ಅವರ ಆಸಕ್ತಿಯ ವಿಷಯ ಗುರುತಿಸಿ ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಸಲಹೆ ಮಾಡಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ನಡೆದ ತರಳಬಾಳು ಶಿಕ್ಷಣ ಕೇಂದ್ರದ ವಾರ್ಷಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಕಲಾ, ವಾಣಿಜ್ಯ, ವಿಜ್ಞಾನ- ಹೀಗೆ ಎಲ್ಲದಕ್ಕೂ ಅದರದೇ ಆದ ಮಹತ್ವವಿದೆ. ಮೂಲ ವಿಜ್ಞಾನ ಕೋರ್ಸುಗಳು, ಐಟಿ- ಬಿಟಿ ಕೋರ್ಸುಗಳು ಕೂಡ ಇವೆ. ಹೀಗಾಗಿ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿದು ಅದೇ ಕೋರ್ಸಿಗೆ ಸೇರಿಸಿ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಅದರಲ್ಲೂ ಮುಂದೇನು ನಾವೇನು ಆಗಬೇಕು ಎಂಬುದನ್ನು ನಿರ್ಧರಿಸುವುದು ಪಿಯುಸಿ. ಆದ್ದರಿಂದ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಗುರುವಿನ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲದಿಂದ ಉತ್ತಮವಾಗಿ ಓದಬೇಕು. ಸಾಧನೆ ಮಾಡುವ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಅವರು ಹೇಳಿದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಪರಿಣಾಮವಾಗಿ ಈಗ ಅವಕಾಶಗಳು ಹೆಚ್ಚಿವೆ. ಉತ್ತಮವಾಗಿ ಓದಿದರೆ ಪ್ರಪಂಚದ ಮೂಲೆಮೂಲೆಗಳಲ್ಲಿ ಉದ್ಯೋಗ ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌, ಟಿವಿಗೆ ಜೋತುಬೀಳದೆ ಪುಸ್ತಕಗಳ ಕಡೆ ಗಮನಹರಿಸಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ, ಸಂಪೂರ್ಣವಾಗಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.

ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು. ಪರಿಸರ ಕಾಳಜಿಯನ್ನು ಕೂಡ ಹೊಂದಿರಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ. ನಾಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ತಲಾ ಶೇ.50 ರಷ್ಟು ಇರುತ್ತದೆ. ಆದ್ದರಿಂದ ಶಾಲಾ- ಕಾಲೇಜಿಗೆ ಸೇರಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಪೋಷಕರು ಭಾವಿಸಬಾರದು. ಆಗಾಗ್ಗೆ ಶಾಲಾ- ಕಾಲೇಜಿಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಸಂವಾದಿಸಬೇಕು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪ್ರಯೋಗ್‌ ರಾಜ್‌, ಜೆ. ಲಕ್ಷ್ಮಿ ಚರಿತಾ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಸುಪ್ರಿಯಾ ಹಾಗೂ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಎಂ. ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು.

ತರಳುಬಾಳು ಶಿಕ್ಷಣ ಕೇಂದ್ರದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ.ಜಿ.ಆರ್‌. ಶಿವಮೂರ್ತಿ, ಮುಖ್ಯ ಶಿಕ್ಷಕ ವಿ. ಆನಂದಪ್ಪ ಇದ್ದರು.

ಸಹ ಶಿಕ್ಷಕ ಗಣೇಶ್‌ ಕುಮಾರ್‌ ವರದಿ ಓದಿದರು. ವಿದ್ಯಾರ್ಥಿಗಳಾದ ಸಾನ್ವಿ ಹೆಬ್ಬಾರ್‌ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಹೇಶ್ವರಿ ಸ್ವಾಗತಿಸಿದರು. ಸಿ.ಎಸ್‌. ನಿಶ್ಚಲ್‌ ವಂದಿಸಿದರು. ಅನ್ನಪೂರ್ಣ ಹಾಗೂ ಮೌರ್ಯ ಲೋಕೇಶ್‌ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜೇತರಿಗೆ ಬಹುಮಾನ ವಿತರಣೆ

ವಾರ್ಷಿಕೋತ್ವವ ಅಂಗವಾಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಡಿಡಿಪಿಐ ಎಚ್‌.ಕೆ. ಪಾಂಡು ಕಲಾಮಂದಿರದಲ್ಲಿ ಭಾನುವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಿದರು.

ವಿಜ್ಞಾನ ವಸ್ತು ಪ್ರದರ್ಶನ

ಶಾಲಾ ವಾರ್ಷಿಕೋತ್ಸವ ಅಂಗವಾಗಿ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ನಡೆದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಇಸ್ರೋ ನಿವೃತ್ತ ಪರಿಸರ ವಿಜ್ಞಾನಿ ಡಾ.ವಿ. ಜಗನ್ನಾಥ ಉದ್ಘಾಟಿಸಿದರು.

Share this article