ಸಂಭಾವನೆಗಳು ಭಾರವಾಗುತ್ತಿವೆ, ಕಷ್ಟಗಳು ಹೆಚ್ಚಾಗಿವೆ

Published : Jul 17, 2026, 12:47 PM IST
Theatre

ಸಾರಾಂಶ

ಕಳೆದ ಎರಡು ದಶಕಗಳು ಕನ್ನಡ ಸಿನೆಮಾ ಇತಿಹಾಸದಲ್ಲೇ ಅತ್ಯಂತ ಸ್ಥಿತ್ಯಂತರಗಳನ್ನು ಕಂಡ ಸಮಯ. 2006ರಲ್ಲಿ ತೆರೆ ಕಂಡ ‘ಮುಂಗಾರು ಮಳೆ’, ಅಲ್ಲಿ ತನಕ ಕನ್ನಡ ಸಿನೆಮಾ ಗಳಿಕೆಯಲ್ಲಿ ಮಾಡಿದ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು.

 - ಕೆ.ಎಂ. ಚೈತನ್ಯ, ಹಿರಿಯ ನಿರ್ದೇಶಕರು

ಕಳೆದ ಎರಡು ದಶಕಗಳು ಕನ್ನಡ ಸಿನೆಮಾ ಇತಿಹಾಸದಲ್ಲೇ ಅತ್ಯಂತ ಸ್ಥಿತ್ಯಂತರಗಳನ್ನು ಕಂಡ ಸಮಯ. 2006ರಲ್ಲಿ ತೆರೆ ಕಂಡ ‘ಮುಂಗಾರು ಮಳೆ’, ಅಲ್ಲಿ ತನಕ ಕನ್ನಡ ಸಿನೆಮಾ ಗಳಿಕೆಯಲ್ಲಿ ಮಾಡಿದ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ತಂದಿತ್ತು. ಅಲ್ಲಿಯ ತನಕ ಸಿನೆಮಾಗಳಲ್ಲಿ ನಟರಿಗೆ ಮಾತ್ರ ಒಳ್ಳೆಯ ಸಂಭಾವನೆ ಇತ್ತು. ಮುಂಗಾರು ಮಳೆಯ ನಂತರ ನಿರ್ದೇಶಕರು, ಗೀತ ರಚನಾಕಾರರು, ನೃತ್ಯ ಸಂಯೋಜಕರು ಸೇರಿದಂತೆ ಎಲ್ಲಾ ವಿಭಾಗದ ತಂತ್ರಜ್ಞರಿಗೂ ಸಂಭಾವನೆಯಲ್ಲಿ ಹೆಚ್ಚುವರಿ ಆಯ್ತು.

ಇಪ್ಪತ್ತು ವರ್ಷಗಳ ಹಿಂದೆ ಇಂದಿನಷ್ಟು ಮಲ್ಟಿಪ್ಲೆಕ್ಸ್‌ಗಳಿರಲಿಲ್ಲ. ಅದೇ ಸಮಯದಲ್ಲಿ ಟಿ ವಿ. ಚಾನೆಲ್‌ಗಳು ಸಿನಿಮಾಗಳಿಗೆ ಒಳ್ಳೆಯ ಮೊತ್ತ ಕೊಟ್ಟು ಖರೀದಿಸಲು ಶುರು ಮಾಡಿದವು. ಆಡಿಯೋ ಕಂಪನಿಗಳು ಸಿನೆಮಾ ಆಡಿಯೋ ಹಕ್ಕುಗಳಿಗಾಗಿ ಒಳ್ಳೆಯ ಮೊತ್ತ ಕೊಡಲು ಪ್ರಾರಂಭಿಸಿದರು. ಅನೇಕ ನಿರ್ಮಾಪಕರು ಒಂದು ಸಿನೆಮಾ ಶುರು ಮಾಡುವ ಮುಂಚೆ ಅದರಿಂದ ಅವರಿಗೆ ಟಿ.ವಿ ಹಾಗೂ ಸಂಗೀತದಿಂದ ಎಷ್ಟು ಹಣ ಬರಬಹುದು ಎಂದು ಲೆಕ್ಕ ಹಾಕಿ ಮುಂದಿನ ಹಣ ಹೊಂಚುವುದರ ಬಗ್ಗೆ ಯೋಚಿಸುತ್ತಿದ್ದರು.

ಅದಾದ ಕೆಲವು ವರ್ಷಗಳಲ್ಲಿ ವಿರಳವಾಗಿದ್ದ ಮಲ್ಟಿಪ್ಲೆಕ್ಸ್‌ಗಳು ಅನೇಕ ಜಾಗಗಳಲ್ಲಿ ಹುಟ್ಟಿಕೊಂಡವು. ಸಿನಿಮಾ ನೋಡುವ ಅನುಭವವನ್ನು ಉತ್ತಮಗೊಳಿಸಿದವು. ಆ ಉತ್ತಮ ಅನುಭವಕ್ಕೆ ಪ್ರೇಕ್ಷಕ ಟಿಕೆಟ್ ದರಕ್ಕೆ ಹೆಚ್ಚು ಹಣ ತೆರಬೇಕಿತ್ತು. ನೋಡುವಾಗ ತಿನ್ನುವ ಪಾಪ್‌ಕಾರ್ನ್‌, ಕೂಲ್‌ ಡ್ರಿಂಕ್ಸ್‌, ನೀರು ಎಲ್ಲಕ್ಕೂ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿಗಿಂತ ದುಬಾರಿ ಹಣ ಖರ್ಚು ಮಾಡಬೇಕಿತ್ತು. ನಿಧಾನಕ್ಕೆ ಈ ಮಲ್ಟಿಪ್ಲೆಕ್ಸ್‌ಗಳ ಅಭ್ಯಾಸ ನೋಡುಗರಿಗೆ ಹೆಚ್ಚಾಯ್ತು.

ಇದೇ ಸಮಯಕ್ಕೆ ಓಟಿಟಿಗಳು ಪ್ರವೇಶಿಸಿದವು. ಸಿನೆಮಾಗಳನ್ನು ಖರೀದಿಸಿದವು. ಸಿನಿಮಾ ಹಲವು ಕಡೆ ಹಣ ಗಳಿಸಬಲ್ಲದು ಎಂಬ ಭರವಸೆ ನಿರ್ಮಾಪಕರಲ್ಲಿ ಮೂಡಿತು. ಹತ್ತು, ಇಪ್ಪತ್ತು ಕೋಟಿಯಲ್ಲಿ ಆಗುತ್ತಿದ್ದ ಕನ್ನಡ ಸಿನೆಮಾಗಳು ಈಗ ನೂರು ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಆಗಲು ಶುರುವಾದವು.

ಆ ಸಿನಿಮಾಗಳು ಒಂದು ವೇಳೆ ಚಿತ್ರಮಂದಿರದಲ್ಲಿ ಚೆನ್ನಾಗಿ ಓಡದೇ ಇದ್ದರೆ, ಆ ಚಿತ್ರ ತೆರೆಕಂಡ ಕೇವಲ ನಾಲ್ಕೈದು ವಾರಗಳಲ್ಲಿ ತಮ್ಮ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ ಸ್ವಲ್ಪ ಹೆಚ್ಚು ಮೊತ್ತ ಕೊಡುತ್ತಿದ್ದರು. ಎಲ್ಲರೂ ಈ ಓಟಿಟಿಗಳಿಗೆ ಒಗ್ಗಿ ಹೋದರು. ಒಂದು ಸಿನಿಮಾ ನೋಡಬೇಕೆಂದರೆ ಕೆಲವು ವಾರ ಕಾದರೆ ಸಾಕು, ಅವು ಓಟಿಟಿಯಲ್ಲಿ ಬಿಡುಗಡೆ ಆಗುತ್ತವೆ ಎಂಬ ಮನಸ್ಥಿತಿಗೆ ಬಂದರು.

ಆದ್ದರಿಂದ ಒಂದು ಸಿನಿಮಾಗೆ ಜನರನ್ನು ಕರೆದೊಯ್ಯಲು ಅದರ ಪ್ರಚಾರಕ್ಕೆ ನಿರ್ಮಾಪಕರು ಇನ್ನೂ ಹೆಚ್ಚು ಬಂಡವಾಳ ಹಾಕಬೇಕಾಯಿತು. ಅದ್ದೂರಿಯಾಗಿ, ದೊಡ್ಡ ತೆರೆಯ ಮೇಲೆ ಮಾತ್ರ ಸವಿಯುವಂತೆ ಇದ್ದರೆ, ಆ ಸಿನಿಮಾದ ಸುತ್ತ ಅತ್ಯಂತ ಮಾತುಕತೆ, ಕುತೂಹಲ ಕೆರಳಿಸಿದ್ದರೆ ಜನ ಚಿತ್ರಮಂದಿರಗಳಿಗೆ ಬರುತ್ತಾರೆ.

ಮುಂಚೆ ಒಂದು ಚಿತ್ರ ಬಿಡುಗಡೆ ಆಗುವ ಮೊದಲೇ ಅದನ್ನು ನಿರ್ಮಾಪಕರ ಜೊತೆ ಮಾತುಕತೆ ನಡೆಸಿ ಒಂದು ಮೊತ್ತ ಕೊಟ್ಟು ಅದರ ಡಿಜಿಟಲ್ ಹಕ್ಕು ಖರೀದಿಸುತ್ತಿದ್ದರು. ಈಗ ಹಾಗೆ ಮಾಡುತ್ತಿಲ್ಲ. ಒಂದು ಸಿನಿಮಾ ಮೊದಲು ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಬೇಕು. ಅದು ಆ ಚಿತ್ರಮಂದಿರಗಳಲ್ಲಿ ಹೇಗೆ ನಡೆಯುತ್ತೋ ಅದನ್ನ ನೋಡಿಕೊಂಡು ಆ ಸಿನಿಮಾಗೆ ಎಷ್ಟು ಕೊಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅನೇಕ ಸಿನೆಮಾಗಳನ್ನು ‘ಪೇ ಪರ್ ವ್ಯೂ’ ಎಂಬ ವರ್ಗದಲ್ಲಿ ತಮ್ಮ ಓಟಿಟಿ ಮೇಲೆ ಹಾಕುತ್ತಾರೆ. ಅಂದರೆ ಆ ಸಿನಿಮಾ ಎಷ್ಟು ಜನ ನೋಡುತ್ತಾರೆ, ಅದಕ್ಕೆ ತಕ್ಕಂತೆ ಒಂದು ಭಾಗವನ್ನ ನಿರ್ಮಾಪಕರಿಗೆ ಈ ಓಟಿಟಿಗಳು ನೀಡುತ್ತವೆ.

ಒಂದು ಸಿನಿಮಾ ನಿರ್ಮಿಸುವುದು ಬಹಳ ದೊಡ್ಡ ಸವಾಲಾಗಿ ನಿಂತಿದೆ. ಒಂದು ಕಡೆ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಮುಂಚಿನ ಹಾಗೆ ಆ ಸಿನಿಮಾಗೆ ಹಾಕಿದ ಬಂಡವಾಳ ಹಿಂಪಡೆಯಲು ದಾರಿಗಳು ಕಮ್ಮಿಯಾಗುತ್ತಿವೆ. ‍

ಲೇಖನದ ಜೀವವಾಕ್ಯದಂತೆ ನಡುವಲ್ಲಿ ದೊಡ್ಡ ಫಾಂಟಿನಲ್ಲಿ ಹಾಕಿ

ಸಿನಿಮಾದ ನಟರು ಹಾಗು ತಂತ್ರಜ್ಞರ ಸಂಭಾವನೆ ಮುಂಚಿನಂತೆಯೇ ಇದೆ. ಒಂದು ಸಿನೆಮಾ ನಿರ್ಮಾಣ ಮಾಡುವ ಬಂಡವಾಳಕ್ಕೂ, ಅದು ಗಳಿಸುವ ದುಡಿಮೆಗೂ ಇರುವ ಕಂದರ ಹೆಚ್ಚುತ್ತಿದೆ. ಇದಕ್ಕೆ ಸದ್ಯದ ನಮ್ಮ ಚಿತ್ರರಂಗದ ಪರಿಸ್ಥಿತಿಯಲ್ಲಿ ಯಾವ ಪರಿಹಾರವೂ ಕಾಣುತ್ತಿಲ್ಲ. ಯಾಕಂದ್ರೆ ಸಮಸ್ಯೆ ಇರುವುದು ಉದ್ಯಮದಲ್ಲಿ ಮಾತ್ರ ಅಲ್ಲ. ಬದಲಾದ ಜನರ ಆಸಕ್ತಿಯಲ್ಲಿ ಕೂಡ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಮಹಾಪ್ರಭು ಪುರಿ ಜಗನ್ನಾಥರ ಮಹಾ ಮಾರ್ಗದಲ್ಲಿ
ಬದರೀನಾಥ ದೇಗುಲ ಹುಂಡಿ ಲೂಟಿ : ಪ್ರಮುಖ ಆರೋಪಿ ಪ್ರಮೋದ್‌ ಸೆರೆ