ಕನ್ನಡಪ್ರಭ ಸಿನಿವಾರ್ತೆ ಪಣಜಿ
ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗದಲ್ಲಿ ಅವರ ‘ರೂಬಿ ಕ್ಯೂಬ್’ ಪ್ರದರ್ಶನಗೊಂಡಿದ್ದು, ಚಿತ್ರರಸಿಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದೆ. ಈ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮತ್ತು ಚಿತ್ರದ ನಾಯಕಿ ವೈನಿಧಿ ಜಗದೀಶ್ ಭಾಗವಹಿಸಿ ಮಾತನಾಡಿದರು.
‘ನನ್ನ 25 ವರ್ಷಗಳ ಸಿನಿಮಾ ಪಯಣದ 13ನೇ ಚಿತ್ರ ಇದಾಗಿದ್ದು, ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಓದಿದ ಸಂದರ್ಶನವೊಂದು ಈ ಚಿತ್ರಕ್ಕೆ ಸ್ಫೂರ್ತಿಯಾಯಿತು. ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ ಹೊಂದಿರುವ ನನ್ನ ಮಗನಿಗೆ ಆ ಲೇಖನ ನೀಡಿ ಕಥೆ ಬರೆಯಲು ಹೇಳಿದ್ದೆ. ಆತ ಇಂಗ್ಲಿಷ್‌ನಲ್ಲಿ ಬರೆದ ಕಥೆಯನ್ನು ನಾನು ಚಿತ್ರಕಥೆ ಮತ್ತು ಸಂಭಾಷಣೆಗೆ ಒಗ್ಗಿಸಿ ಸಿನಿಮಾ ಮಾಡಿದ್ದೇನೆ. ಇಂದಿನ ಯುವ ಪೀಳಿಗೆಯು ಭಾರತೀಯ ಕೌಟುಂಬಿಕ ವ್ಯವಸ್ಥೆ ಮತ್ತು ಮಾನವೀಯ ಸಂಬಂಧಗಳನ್ನು ಹೇಗೆ ನೋಡುತ್ತದೆ ಎಂಬುದನ್ನು ಅರಿಯಲು ಈ ಸಿನಿಮಾ ಸಹಕಾರಿಯಾಯಿತು’ ಎಂದರು.ಶೀರ್ಷಿಕೆಯ ಕುರಿತು ಮಾತನಾಡಿದ ಅವರು, ‘ಸುಮಾರು 55 ವರ್ಷಗಳ ಹಿಂದೆ ಹಳ್ಳಿಯಿಂದ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ 25 ರೂಪಾಯಿ ಕೊಟ್ಟು ರೂಬಿಕ್ಸ್ ಕ್ಯೂಬ್ ಖರೀದಿಸಿದ್ದೆ. ಅದರ ಆರು ಮುಖಗಳು ಮತ್ತು ಆರು ಬಣ್ಣಗಳಂತೆಯೇ ಈ ಸಿನಿಮಾದಲ್ಲಿ ಆರು ಕುಟುಂಬಗಳು ಮತ್ತು ಭಾವನೆಗಳ ಏರಿಳಿತಗಳಿವೆ. ನಾಯಕಿಯ ಅಡ್ಡಹೆಸರು ರೂಬಿ ಆಗಿರುವುದರಿಂದ ಚಿತ್ರಕ್ಕೆ ‘ರೂಬಿ ಕ್ಯೂಬ್’ ಎಂದು ಹೆಸರಿಡಲಾಗಿದೆ’ ಎಂದರು.
‘ಕಳೆದ 10 ವರ್ಷಗಳಿಂದ ಇಂಡಿಯನ್ ಪನೋರಮಾಗೆ ಆಯ್ಕೆಯಾಗುವ ಚಿತ್ರಗಳನ್ನು ದೆಹಲಿ ದೂರದರ್ಶನದಲ್ಲಿ ಪ್ರಸಾರ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಸ್ವತಂತ್ರ ಹಾಗೂ ಸದಭಿರುಚಿಯ ಚಿತ್ರ ನಿರ್ಮಾಪಕರಿಗೆ ದೊಡ್ಡ ನಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ಮತ್ತು ಪ್ರಸಾರ ಭಾರತಿ ಮತ್ತೆ ದೂರದರ್ಶನದಲ್ಲಿ ಇಂತಹ ಚಿತ್ರಗಳ ಪ್ರಸಾರ ಆರಂಭಿಸಬೇಕು’ ಎಂದು ಅವರು ಮನವಿ ಮಾಡಿದರು.