ಹಲವು ವರ್ಷಗಳ ಬಳಿಕ ಮನಬಿಚ್ಚಿ ಮಾತಾಡಿದ ರಕ್ಷಿತ್ : ನಾನಿರುವುದೇ ಹೀಗೆ!

Published : Feb 16, 2026, 12:41 PM IST
Rakshit shetty

ಸಾರಾಂಶ

ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಕೆಲಸ ಮಾಡುವ ಶೈಲಿ ಗೊತ್ತಿರುತ್ತದೆ. ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶವನ್ನೇ ಇಟ್ಟುಕೊಳ್ಳದ ರಕ್ಷಿತ್, ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೇ ಚಿತ್ರಕತೆಯಲ್ಲಿ ತೊಡಗಿದ್ದರು

ಸಿನಿವಾರ್ತೆ

ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತಿರುತ್ತದೆ. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶವನ್ನೇ ಇಟ್ಟುಕೊಳ್ಳದ ರಕ್ಷಿತ್, ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೇ ಚಿತ್ರಕತೆಯಲ್ಲಿ ತೊಡಗಿದ್ದರು. ಯಾರ ಫೋನಿಗೂ ಸಿಗುತ್ತಿರಲಿಲ್ಲ. ಅವರು ಅಮೆರಿಕಾದಲ್ಲಿದ್ದಾರೆ, ಉಡುಪಿಯಲ್ಲಿದ್ದಾರೆ, ದೇಶ ಸುತ್ತುತ್ತಿದ್ದಾರೆ, ಚಿತ್ರಕತೆ ಬರೆಯುತ್ತಿದ್ದಾರೆ ಮುಂತಾದ ಉಳಿದವರು ಕಂಡಂತೆ ಆಡುತ್ತಿದ್ದ ಮಾತುಗಳಲ್ಲಷ್ಟೇ ರಕ್ಷಿತ್ ಶೆಟ್ಟರ ಜಾಡು ತಿಳಿಯುತ್ತಿತ್ತು.

ಅವರು ಇದ್ದದ್ದೇ ಹಾಗೆ, ಅರ್ಧ ಅಂತರಂಗ, ಅರ್ಧ ಬಹಿರಂಗ. ಮುಂದೇನು ಅಂತ ಗೊತ್ತಿಲ್ಲದವರಂತೆ ಕೆಲಸ ಮಾಡುತ್ತಿದ್ದ ರಕ್ಷಿತ್, ನಾಳೆಗಳನ್ನು ಪ್ಲಾನ್ ಮಾಡುತ್ತಿರಲಿಲ್ಲ. ಇವತ್ತಿನ ಜನಪ್ರಿಯತೆಯ ಮೇಲೆ ನಾಳೆಗಳನ್ನು ಕಟ್ಟುತ್ತಿರಲಿಲ್ಲ. ಮುಗಿಬಿದ್ದು ಸಿನಿಮಾ ಮಾಡುವ ಆತುರ ತೋರಿದವರೂ ಅಲ್ಲ.

ಚಿತ್ರರಂಗಕ್ಕೆ ಅಪರೂಪವಾದ ಅಪೂರ್ವ ಸಂಯಮ ಮತ್ತು ನಿರಾಳ‍ದಲ್ಲಿ ಅವರು ಕೆಲಸ ಮಾಡುವವರು ಅಂತ ಅವರ ಸಿನಿಮಾಗಳ ಅಭಿಮಾನಿಗಳಿಗೂ ಗೊತ್ತಿದೆ. ಅವರೆಲ್ಲರೂ ರಿಚರ್ಡ್ ಆ್ಯಂಟನಿಗೆ ಕಾಯುತ್ತಿರುತ್ತಾರೆ. ಆ ಸಿನಿಮಾ ಯಾವಾಗ ಅಂತ ಕೇಳಲು ನಾವೆಲ್ಲ ತಿಂಗಳಿಗೆ ಒಂದಾದರೂ ಫೋನು ಮಾಡುತ್ತಿದ್ದರೆ, ಅವರ ಫೋನ್ ಸ್ವಿಚಾಫ್ ಆಗಿರುತ್ತಿತ್ತು. ಇವತ್ತು ಅವರ ಫೋನ್ ಸದ್ದುಮಾಡಿತು.

‘ಸದ್ಯಕ್ಕೆ ಉಡುಪಿಯಲ್ಲಿದ್ದೇನೆ’ ಅಂದರು ರಕ್ಷಿತ್ ಶೆಟ್ಟಿ.

ಅವರ ಧ್ವನಿಯಲ್ಲಿ ನಿರಾಳತೆಯೂ ತೃಪ್ತಿಯೂ ಇದ್ದಂತಿತ್ತು. ಹಿಡಿದದ್ದನ್ನು ಸಾಧಿಸಿದ ಧನ್ಯತೆ ಅದು. ಅವರ ಮಾತಿನಲ್ಲಿಯೂ ಆ ಖುಷಿ ಮತ್ತು ಅಕ್ಕರೆ ಕಾಣಿಸಿತು.

ಐದು ಸಿನಿಮಾಗಳ ಸ್ಕ್ರಿಪ್ಟಿನ ಮೇಲೆ ಕೆಲಸ

‘ಐದು ಸಿನಿಮಾಗಳ ಸ್ಕ್ರಿಪ್ಟಿನ ಮೇಲೆ ಕೆಲಸ ಮಾಡಿದ್ದೇನೆ. ಎಲ್ಲವೂ ನಾನು ಅಂದುಕೊಂಡಂತೆ ಬಂದಿದೆ. ಅವನ್ನು ಶೂಟ್ ಮಾಡುವುದಷ್ಟೇ ಬಾಕಿ. ಮಾರ್ಚ್ ಕೊನೆಯ ಹೊತ್ತಿಗೆ ಪ್ರೀ-ಪ್ರೊಡಕ್ಷನ್ ಕೆಲಸ ಶುರುಮಾಡುತ್ತೇನೆ. ಅದು ಮುಗಿಯುತ್ತಿದ್ದಂತೆ ಶೂಟಿಂಗ್ ಶುರುವಾಗುತ್ತದೆ. ಮೊದಲು ‘ರಿಚರ್ಡ್ ಆ್ಯಂಟನಿ’, ಅದಾದ ನಂತರ ‘ಪುಣ್ಯಕೋಟಿ’, ಆಮೇಲೆ ಮೂರು ಸಿನಿಮಾಗಳು. ಬೆನ್ನಿಂದ ಬೆನ್ನಿಗೆ ಐದು ಸಿನಿಮಾಗಳು ಬರುತ್ತಾ ಹೋಗುತ್ತವೆ. ತಂಡ ಸಿದ್ಧವಾಗಿದೆ, ಚಿತ್ರಕತೆಯೂ ಸಿದ್ಧವಾಗಿದೆ’ ಅಂತ ತನ್ನ ಪ್ಲಾನ್ ತೆರೆದಿಟ್ಟರು ರಕ್ಷಿತ್.

ಅವರ ಪ್ರಕಾರ ಪುಣ್ಯಕೋಟಿಗೆ ಸಿಕ್ಕಾಪಟ್ಟೆ ವಿಎಫ್ಎಕ್ಸ್ ಕೆಲಸಗಳಿವೆ. ಅವು ಸಿದ್ಧವಾದ ನಂತರವೇ ಶೂಟಿಂಗಿಗೆ ಹೋಗಲು ಸಾಧ್ಯ. ರಿಚರ್ಡ್ ಆ್ಯಂಟನಿ ಶುರುವಾಗುವ ಮೊದಲೇ ಪುಣ್ಯಕೋಟಿಯ ತಾಂತ್ರಿಕ ತಂಡ ಕೆಲಸ ಆರಂಭಿಸುತ್ತದೆ. ರಿಚರ್ಡ್ ಆ್ಯಂಟನಿಗೂ ಸಾಕಷ್ಟು ವಿಎಫ್ಎಕ್ಸ್ ಕೆಲಸಗಳು ನಡೆಯಬೇಕಿದೆ. ಆದರೆ ಶೂಟಿಂಗಿಗೆ ಹೋಗುವುದಕ್ಕೆ ಅಡ್ಡಿಯಿಲ್ಲ. ಹೀಗಾಗಿ ತಂಡವನ್ನು ಸಿದ್ಧಮಾಡಿ ಅವರಿಗೆ ಕೆಲಸ ವಹಿಸಿ, ತಾನು ರಿಚರ್ಡ್ ಆ್ಯಂಟನಿ ಚಿತ್ರದಲ್ಲಿ ತೊಡಗಿಕೊಳ್ಳುವುದು ರಕ್ಷಿತ್ ಶೆಟ್ಟರ ಸದ್ಯದ ಪ್ಲಾನು. ರಿಚರ್ಡ್ ಆ್ಯಂಟನಿ ಮುಗಿಯುತ್ತಿದ್ದಂತೆ ಪುಣ್ಯಕೋಟಿಯ ಫೌಂಡೇಶನ್ ಸಿದ್ಧವಾಗಿರುತ್ತದೆ. ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ.

‘ಪುಣ್ಯಕೋಟಿ ಮತ್ತು ನಂತರ ಬರುವ ಮೂರು ಸಿನಿಮಾಗಳನ್ನು ನಾನೇ ನಿರ್ಮಾಣ ಮಾಡುವುದು ಅಂತ ನಿರ್ಧರಿಸಿದ್ದೇನೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದೇನೆ. ಎಲ್ಲರೂ ನನ್ನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಅನ್ನುವುದು ನನಗೂ ಗೊತ್ತಿದೆ. ಆದರೆ ನಾನು ಕೆಲಸ ಮಾಡುವ ರೀತಿಯೇ ಹಾಗೆ. ನನಗೆ ನನ್ನದೇ ಆದ ಸಾವಧಾನ ಇದೆ. ಅದನ್ನು ಬಿಡುವುದು ನನಗೆ ಸಾಧ್ಯವೇ ಇಲ್ಲ’ ಅಂತ ರಕ್ಷಿತ್ ಶೆಟ್ಟಿ ಸಿನಿಮಾ ನಿಧಾನವಾಗಿದ್ದು ಯಾಕೆ ಅನ್ನುವುದನ್ನು ಹೇಳುತ್ತಾ ಹೋದರು.

‘ಬದುಕಿನ ಒಂದು ಮಜಲಿನಿಂದ ಇನ್ನೊಂದಕ್ಕೆ ಹೊರಳಿಕೊಳ್ಳುವ ಸಮಯದಲ್ಲಿ, ಬದಲಾವಣೆಯ ಹೊತ್ತಲ್ಲಿ ನಾನು ನನಗೆ ಬೇಕಾದಷ್ಟು ಸಮಯ ತೆಗೆದುಕೊಂಡೇ ಕೆಲಸ ಮಾಡುತ್ತೇನೆ. ನಾನು ತಕ್ಷಣ ಸಿನಿಮಾ ಮಾಡಿ ತಕ್ಷಣ ಹಣ ಮಾಡುವುದಕ್ಕೆ ಬಂದವನಲ್ಲ. ದುಡ್ಡು ಬೇಕು, ಅದು ನನಗೂ ಗೊತ್ತಿದೆ. ಆದರೆ ಎರಡು ವರ್ಷ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ ಇದ್ದು, ನಂತರ ಎರಡು ವರ್ಷದ್ದನ್ನು ದುಡಿಯುವುದು ಸಾಧ್ಯವಾದರೆ ಅದೇ ನನಗೆ ಇಷ್ಟ. ಎಲ್ಲವೂ ಒಮ್ಮೆಗೇ ಆಗಬೇಕು ಅನ್ನುವ ಆಸೆ ನನಗಿಲ್ಲ. ಇದೆಲ್ಲಾ ಸಿನಿಮಾರಂಗಕ್ಕೆ ಬೇರೆ ಥರ ಅನ್ನಿಸಬಹುದು. ಹೀಗೂ ಇರುತ್ತಾರಾ ಅಂತ ಆಶ್ಚರ್ಯ ಆಗಬಹುದು. ಆದರೆ ನಾನಿರುವುದೇ ಹಾಗೆ, ಬಾಲ್ಯದಿಂದಲೂ ಹೀಗೆಯೇ ಕೆಲಸ ಮಾಡಿಕೊಂಡು ಬಂದವನು. ಬೇರೆ ಥರ ಇರಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ನಾನು ಬದಲಾಗಲು ಹೊರಟರೆ ನನ್ನತನ ಕಳೆದುಕೊಳ್ಳುತ್ತೇನೆ’.

‘ಮಿಡ್‌ಲೈಫ್‌ಗೆ ಬಂದಾಗ ಒಂದು ಬದಲಾವಣೆ ಬೇಕಾಗುತ್ತದೆ. ಆ ಬದಲಾವಣೆ ಸಾಧ್ಯವಾಗಬೇಕಿದ್ದರೆ ಜೀವನದ ಒಂದು ಚಕ್ರ ಮುಗಿಯಬೇಕು. ಅದನ್ನು ಮುಗಿಸಿ ಮತ್ತೊಂದಕ್ಕೆ ಕಾಲಿಡುವವನು ನಾನು. ಅದಕ್ಕೆ ಅದರದ್ದೇ ಆದ ಅವಧಿ, ಸಾವಧಾನ ಎಲ್ಲವೂ ಬೇಕು. ನಾನು ಅದನ್ನೆಲ್ಲ ಇಷ್ಟಪಡುತ್ತಲೇ ಮಾಡುತ್ತೇನೆ’ ಅಂತ ಹೇಳುತ್ತಿದ್ದ ರಕ್ಷಿತ್ ಶೆಟ್ಟರ ಮಾತಲ್ಲಿ ತಾನು ಅಂದುಕೊಂಡಿದ್ದನ್ನು ಅಂದುಕೊಂಡ ರೀತಿಯಲ್ಲೇ ಮಾಡಿ ಮುಗಿಸಿದ ಸಂತೋಷ ಇತ್ತು.

ರಿಚರ್ಡ್ ಆ್ಯಂಟನಿಯ ಪ್ರಯಾಣ ಶುರುವಾಗಿದೆ ಮತ್ತು ಆತನ ಜತೆ ಯಾರಿದ್ದಾರೆ ಅನ್ನುವುದು ಇಷ್ಟರಲ್ಲೇ ಬಯಲಾಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್