ಸ್ಯಾಂಡಲ್‌ವುಡ್‌ ಡಿಸೆಂಬರ್ ಧಮಾಕ : ಕನ್ನಡದ ಮೂರು ಸ್ಟಾರ್ ಸಿನಿಮಾಗಳು

Published : Dec 05, 2025, 11:44 AM IST
Sandalwood

ಸಾರಾಂಶ

ಡಿಸೆಂಬರ್‌ನಲ್ಲಿ ಕನ್ನಡದ ಮೂರು ಸ್ಟಾರ್ ಸಿನಿಮಾಗಳು ಬರಲಿವೆ. ದೊಡ್ಡ ಬಂಡವಾಳದ ಇವುಗಳ ಮೇಲೆ ಪಾನ್ ಇಂಡಿಯಾದ ಕಣ್ಣೂ ಬಿದ್ದಿದೆ. ಹೇಮಂತ ಮಾಸದ ಚಳಿ ಚುರುಕಾಗುತ್ತಿರುವಂತೆ ಆ್ಯಕ್ಷನ್‌, ಕಾಮಿಡಿಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸ್ಯಾಂಡಲ್‌ವುಡ್‌ ಸಜ್ಜಾಗಿದೆ

- ಪ್ರಿಯಾ ಕೆರ್ವಾಶೆ

ಹೇಮಂತ ಮಾಸದ ಚಳಿ ಚುರುಕಾಗುತ್ತಿರುವಂತೆ ಆ್ಯಕ್ಷನ್‌, ಕಾಮಿಡಿಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸ್ಯಾಂಡಲ್‌ವುಡ್‌ ಸಜ್ಜಾಗಿದೆ. ವರ್ಷಾಂತ್ಯದಲ್ಲಿ ದರ್ಶನ್‌, ಸುದೀಪ್‌, ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ ಲಗ್ಗೆ ಇಟ್ಟು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದ್ದಾರೆ. ಬೇರೆ ಯಾವ ಭಾಷೆಯಲ್ಲೂ ವರ್ಷಾಂತ್ಯಕ್ಕೆ ದೊಡ್ಡ ಸಿನಿಮಾಗಳಿಲ್ಲ. ಹೀಗಾಗಿ ದೇಶದ ಸಿನಿ ಪ್ರಿಯರ ದೃಷ್ಟಿ ಸ್ಯಾಂಡಲ್‌ವುಡ್‌ನತ್ತ ನೆಟ್ಟಿದೆ.

1. ದಿ ಡೆವಿಲ್‌

ಭರ್ತಿ ಎರಡು ವರ್ಷಗಳ ಬಳಿಕ ಬಿಡುಗಡೆಯಾಗುತ್ತಿರುವ ದರ್ಶನ್‌ ಸಿನಿಮಾವಿದು. 2023 ಡಿಸೆಂಬರ್‌ನಲ್ಲಿ ಅವರು ನಟಿಸಿದ ‘ಕಾಟೇರ’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರು.ನಷ್ಟು ಗಳಿಕೆ ದಾಖಲಿಸಿತ್ತು. ಇದೀಗ ಕೊಲೆ ಆರೋಪದ ಮೇಲೆ ಜೈಲು ಸೇರಿರುವ ದರ್ಶನ್‌ ಅವರ ಸಿನಿಮಾ ಭವಿಷ್ಯ ‘ಡೆವಿಲ್‌’ ಮೇಲೆ ನಿಂತಿದೆ. ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಕಾರಣ ಈ ಸಂಕಷ್ಟದ ಸಂದರ್ಭದಲ್ಲಿ ಫ್ಯಾನ್ಸ್‌ ತಮ್ಮ ನೆಚ್ಚಿನ ನಟನಿಗೆ ಹೆಚ್ಚಿನ ಬೆಂಬಲ ನೀಡುವ ನಿರೀಕ್ಷೆ ಇದೆ. ಪ್ರಕಾಶ್‌ ವೀರ್‌ ನಿರ್ದೇಶನ, ನಿರ್ಮಾಣದ ಈ ಸಿನಿಮಾದಲ್ಲಿ ಕರಾವಳಿ ಪ್ರತಿಭೆ ರಚನಾ ರೈ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗುತ್ತಿರುವ ಚಿತ್ರದ ಟ್ರೇಲರ್‌ ಇಂದು ಬಿಡುಗಡೆಯಾಗುತ್ತಿದೆ. ಟಿಕೆಟ್‌ ಬುಕಿಂಗ್‌ ನಾಳೆಯಿಂದ (ಡಿ.6) ಆರಂಭವಾಗುತ್ತಿದ್ದು, ಡಿಸೆಂಬರ್‌ 11 ರ ಬೆಳಗ್ಗೆ 6.30ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಮೊದಲ ದಿನ ಈ ಸಿನಿಮಾ ಗರಿಷ್ಠ 20 ಕೋಟಿ ರು.ಗಳಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ.

ಅಂದಾಜು ಬಂಡವಾಳ : 40 ಕೋಟಿ ರು.

2. 45

ಮೂರು ಸ್ಟಾರ್‌ ನಟರು ಇರುವ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಅವರ ಮಹತ್ವಾಕಾಂಕ್ಷೆಯ ಪ್ಯಾನ್‌ ಇಂಡಿಯನ್‌ ಚಿತ್ರವಿದು. ಶಿವರಾಜ್‌ ಕುಮಾರ್‌, ಉಪೇಂದ್ರ, ರಾಜ್‌ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ನಂಬರ್‌ ಅನ್ನೇ ಸಿನಿಮಾ ಶೀರ್ಷಿಕೆಯಾಗಿಟ್ಟುಕೊಂಡು ಮಾರ್ಕಂಡೇಯ ಪುರಾಣದ ಎಳೆಯ ಸ್ಫೂರ್ತಿಯಲ್ಲಿ ಮ್ಯಾಜಿಕ್‌ ಮಾಡಲು ಹೊರಟಿರುವ ಈ ಚಿತ್ರ ಡಿ.25ರಂದು ಬಿಡುಗಡೆಯಾಗಲಿದೆ. ಮೂವರು ಸ್ಟಾರ್‌ ನಟರು ಇರುವ ಜೊತೆಗೆ ತಾಂತ್ರಿಕತೆ, ಕಥೆ ಬಗ್ಗೆ ನಿರೀಕ್ಷೆ ಹುಟ್ಟಿಸಿರುವ ಕಾರಣ ಈ ಸಿನಿಮಾ ಮೊದಲ ದಿನ 25 ಕೋಟಿ ರು.ಗಳಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ.

ಅಂದಾಜು ಬಂಡವಾಳ: 100 ಕೋಟಿ

3. ಮಾರ್ಕ್‌

ಕಿಚ್ಚ ಸುದೀಪ್‌ ನಟನೆಯ ಆ್ಯಕ್ಷನ್‌ ಥ್ರಿಲ್ಲರ್‌. ಕಳೆದ ವರ್ಷ ಬಂದ ಸುದೀಪ್‌ ಅವರ ‘ಮ್ಯಾಕ್ಸ್‌’ ಸಿನಿಮಾದ ಮಾದರಿಯಲ್ಲೇ ರೆಡಿಯಾದ ಚಿತ್ರ. ಆ ಸಿನಿಮಾ ನಿರ್ದೇಶಿಸಿದ ವಿಜಯ ಕಾರ್ತಿಕೇಯ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸುದೀಪ್‌ ಹಾಗೂ ವಿಜಯ್‌ ಕಾಂಬಿನೇಶನ್‌ನಲ್ಲಿ ಬಂದ ‘ಮ್ಯಾಕ್ಸ್‌’ ವಿಭಿನ್ನ ನಿರೂಪಣೆ ಮೂಲಕ ಗಮನ ಸೆಳೆದಿತ್ತು. ಆ ಹಿನ್ನೆಲೆಯಲ್ಲಿ ‘ಮಾರ್ಕ್‌’ ಬಗ್ಗೆ ಕುತೂಹಲವಿದೆ. ಕಳೆದ ವರ್ಷ ‘ಮ್ಯಾಕ್ಸ್‌’ ಬಿಡುಗಡೆಯಾದ ದಿನದಂದೇ ಅಂದರೆ ಡಿ.25ರಂದು ‘ಮಾರ್ಕ್‌’ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್‌ 20 ರಿಂದ 25 ಕೋಟಿ ರು.ಗಳಷ್ಟಾಗುವ ನಿರೀಕ್ಷೆ ಇದೆ.

ಅಂದಾಜು ಬಂಡವಾಳ : 60 ಕೋಟಿ ರು.

ಕನ್ನಡದಲ್ಲಿ ಬಿಟ್ಟರೆ ಬೇರೆ ಯಾವ ಭಾಷೆಯಲ್ಲೂ ಡಿಸೆಂಬರ್‌ಗೆ ಈ ಮಟ್ಟಿನ ಹೈಪ್‌ ನಿರ್ಮಾಣವಾಗಿಲ್ಲ. ರಣ್‌ವೀರ್‌ ಸಿಂಗ್‌ ನಟನೆಯ ‘ದುರಂಧರ್‌’, ತೆಲುಗಿನ ‘ಅಖಂಡ 2’ ಮೊದಲಾದ ಸಿನಿಮಾಗಳು ತಕ್ಕಮಟ್ಟಿಗೆ ಸದ್ದು ಮಾಡಿದ್ದರೂ, ಭಾರತೀಯ ಭಾಷೆಗಳಲ್ಲಿ ನಿರೀಕ್ಷೆ ಹುಟ್ಟಿಸುವಂಥಾ ಸಿನಿಮಾಗಳ ರಿಲೀಸ್‌ ಆಗುತ್ತಿಲ್ಲ.

2025ರ ಉತ್ತಮ ಗಳಿಕೆಯ ಚಿತ್ರಗಳು

1. ಕಾಂತಾರ ಚಾಪ್ಟರ್‌ 1

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸಿದೆ. ಸುಮಾರು 125 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ ಎನ್ನಲಾದ ಈ ಸಿನಿಮಾ ಸುಮಾರು 900 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ. ಇದು ಕೆಜಿಎಫ್‌ ಬಳಿಕ ಅತ್ಯುತ್ತಮ ಗಳಿಕೆ ದಾಖಲಿಸಿದ ಕನ್ನಡ ಸಿನಿಮಾ ಎಂಬ ಗೌರವಕ್ಕೂ ಭಾಜನವಾಗಿದೆ.

2. ಮಹಾವತಾರ ನರಸಿಂಹ

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ ವಿಶೇಷವಾಗಿ ಮಕ್ಕಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪೌರಾಣಿಕ ಕಥೆಯಿಂದ ಜನರಿಗೆ ಸುಲಭವಾಗಿ ಕನೆಕ್ಟ್‌ ಆಗುವ ಜೊತೆಗೆ ಅತ್ಯುತ್ತಮ ತಾಂತ್ರಿಕತೆ ಕಾರಣಕ್ಕೆ ಜನರ ಮನಗೆದ್ದಿದೆ. ಈ ಸಿನಿಮಾ ಒಟ್ಟಾರೆ 320 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ.

3. ಸು ಫ್ರಮ್‌ ಸೋ

ರಾಜ್‌ ಬಿ. ಶೆಟ್ಟಿ ನಿರ್ಮಾಣದಲ್ಲಿ ಜೆ.ಪಿ. ತುಮಿನಾಡು ನಿರ್ದೇಶಿಸಿದ ಸಿನಿಮಾ ಅಂದಾಜು 130 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ. ಕಾಮಿಡಿ ಕಥಾಹಂದರದ ಈ ಚಿತ್ರ ಮಲಯಾಳಂ, ತೆಲುಗು ಭಾಷೆಗಳಲ್ಲೂ ಉತ್ತಮ ಪ್ರದರ್ಶನ ಕಂಡಿದೆ. ಹೊಸತನದ ಕಾರಣದಕ್ಕೆ ದೇಶದ ಗಮನ ಸೆಳೆದಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಬ್ಯುಸಿ ಶೆಡ್ಯೂಲ್‌ ಮಧ್ಯೆ ಸ್ಟಾರ್‌ಗಳ ಫ್ಯಾಮಿಲಿ ಟೈಮ್‌
ಜ.3ರಂದು ಕುಂದಾಪುರದಲ್ಲಿ ರಿಷಭೋತ್ಸವ - ರಿಷಬ್‌ ಶೆಟ್ಟಿಗೆ ಹುಟ್ಟೂರಿನ ಗೌರವ