ಮುಗೀತಾ ಸಿನಿಮಾ ಸ್ಯಾಟಲೈಟ್ ಹಕ್ಕು ಮಾರಾಟದ ಜಮಾನ

Published : Jul 25, 2025, 11:51 AM IST
kantara chapter 1 poster

ಸಾರಾಂಶ

ಕಾಂತಾರ ಅಧ್ಯಾಯ 1 ಪ್ರಸಾರ ಹಕ್ಕು ಬೇಡ ಎಂದಿದೆಯಂತೆ ಪ್ರತಿಷ್ಠಿತ ವಾಹಿನಿ, ಸ್ಯಾಟಲೈಟ್‌ ಹಕ್ಕು ಮಾರಾಟದಿಂದ ಒಂದಿಷ್ಟು ದುಡ್ಡು ಬರುತ್ತದೆ ಎಂಬ ಭರವಸೆಗೆ ಎಳ್ಳು ನೀರು ಬಿಡುವ ಕಾಲ ಬಂದಿದೆ

 ಬಹಳಷ್ಟು ಮಂದಿ ಸಿನಿಮಾ ಮಾಡುವವರು ಸ್ಯಾಟಲೈಟ್‌ ಹಕ್ಕು ಮಾರಾಟದಿಂದ ಒಂದಿಷ್ಟು ದುಡ್ಡು ಬರುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು. ಅದರಿಂದ ಸ್ವಲ್ಪ ಸೇಫ್‌ ಆಗಬಹುದು ಎಂಬ ನಂಬಿಕೆ. ಆದರೆ ಈಗ ಆ ನಂಬಿಕೆಗೆ ಎಳ್ಳು ನೀರು ಬಿಡುವ ಕಾಲ ಬಂದಿದೆ. ಯಾಕೆಂದರೆ ಬಹುತೇಕ ವಾಹಿನಿಗಳು ಸಿನಿಮಾ ಖರೀದಿಸುವುದನ್ನು ನಿಲ್ಲಿಸಿಬಿಟ್ಟಿವೆ.

ಇದಕ್ಕೆ ಸಣ್ಣ ಸಿನಿಮಾ, ದೊಡ್ಡ ಸಿನಿಮಾ ಎಂಬ ಭೇದವಿಲ್ಲ. ದೊಡ್ಡ ಸಿನಿಮಾಗಳಿಗೂ ಬಿಸಿ ತಟ್ಟುತ್ತಿದೆ. ವಿಶೇಷ ಎಂದರೆ ಕಾಂತಾರವರೆಗೂ ಈ ವಿಚಾರ ಹೋಗಿದೆ. ನಂಬಿಕಾರ್ಹ ಮೂಲಗಳು ಈ ಹಿಂದೆ ‘ಕಾಂತಾರ’ ಸಿನಿಮಾದ ಸ್ಯಾಟಲೈಟ್‌ ಹಕ್ಕು ಪಡೆದಿದ್ದ ಪ್ರತಿಷ್ಠಿತ ವಾಹಿನಿಯೊಂದು ‘ಕಾಂತಾರ ಅಧ್ಯಾಯ 1’ ಚಿತ್ರದ ಸ್ಯಾಟಲೈಟ್‌ ಹಕ್ಕು ಖರೀದಿಸುವುದಿಲ್ಲ ಎಂದು ತಿಳಿಸಿರುವುದಾಗಿ ಹೇಳಿದೆ. ಕಲರ್ಸ್ ಮತ್ತು ಸುವರ್ಣ ಒಂದಾದ ಮೇಲೆ ಆ ಸಂಸ್ಥೆಗಳು ಸಿನಿಮಾ ಖರೀದಿ ಮೇಲೆ ಆಸಕ್ತಿ ತೋರಿಸುತ್ತಿಲ್ಲ. ಉದಯ ವಾಹಿನಿ ಕೂಡ ಸಿನಿಮಾ ಖರೀದಿಗೆ ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗ ಜೀ ಟಿವಿ ಮಾತ್ರ ಕೆಲವೇ ಕೆಲವು ಬೆರಳೆಣಿಕೆಯ ಸಿನಿಮಾಗಳನ್ನು ಖರೀದಿಸಿರುವ ಸುದ್ದಿ ಇದೆ.

ಈ ಪರಿವರ್ತನೆಗೆ ಕಾರಣ ಬದಲಾಗಿರುವ ಮಾರುಕಟ್ಟೆ. ಮೊದಲೆಲ್ಲಾ ಒಂದು ಸಿನಿಮಾಗೆ ಮಾಡಿದ ಹೂಡಿಕೆ ಒಂದೆರಡು ವರ್ಷಗಳಲ್ಲಿ ಹಿಂದಕ್ಕೆ ಬರುತ್ತಿತ್ತು. ಆದರೆ ಈಗ ಹತ್ತು ವರ್ಷ ಕಳೆದರೂ ಆ ಹೂಡಿಕೆ ವಾಪಸ್‌ ಬರುತ್ತಿಲ್ಲ. ಜಾಹೀರಾತುದಾರರು ಸಿನಿಮಾಗಳ ಮಧ್ಯೆ ಜಾಹೀರಾತು ಪ್ರಸಾರಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ವಾಹಿನಿಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ. ಈ ಕುರಿತು ಹಿರಿಯ ನಿರ್ಮಾಪಕರೊಬ್ಬರು ಮಾತನಾಡಿ, ‘ಸಿನಿಮಾ ಬಿಡುಗಡೆಗೂ ಮೊದಲು ಸ್ಯಾಟಲೈಟ್‌ ಹಕ್ಕು ಮಾರಾಟವಾದರೆ ಧೈರ್ಯ ಇರುತ್ತದೆ. ಆದರೆ ಈಗ ಯಾರೂ ಖರೀದಿಸುತ್ತಿಲ್ಲ. ಇತ್ತ ಸ್ಯಾಟಲೈಟ್‌ ಇಲ್ಲ, ಅತ್ತ ಓಟಿಟಿ ಇಲ್ಲ. ಥಿಯೇಟರ್‌ಗೆ ಜನ ಬರುತ್ತಿಲ್ಲ. ಹೊಸ ನಿರ್ಮಾಪಕರು ಇದೆಲ್ಲವನ್ನೂ ಯೋಚನೆ ಮಾಡಿ ಬರಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ.

ಇವೆಲ್ಲವೂ ಹೊಸ ನಿರ್ಮಾಪಕರು ನಿಜಕ್ಕೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಬಹಳಷ್ಟು ಮಂದಿ ಸ್ಯಾಟಲೈಟ್‌ ಹಕ್ಕು ಇಷ್ಟು ಕೋಟಿಗೆ ಹೋಗುತ್ತದೆ ಎಂದು ಹೇಳುವ ಸಾಧ್ಯತೆ ಇರುತ್ತದೆ. ಕೋಟಿ ಬಿಟ್ಟು ಲಕ್ಷ ಬರುವುದೂ ಅನುಮಾನ. ಹಾಗಾಗಿ ಕಂಟೆಂಟ್‌ ಚೆನ್ನಾಗಿದ್ದರೆ ಮಾತ್ರ ಮುಂದುವರಿಯಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಮತ್ತೆ ಯೋಚಿಸಬೇಕು.

PREV
Read more Articles on

Recommended Stories

ಸತ್ತವಳ ನೆರಳಲ್ಲಿ ಬದುಕಿದವರ ಪಡಿಪಾಟಲು
ಡ್ಯೂಪ್ ಬಳಸದೇ ಕಠಿಣ ಸಾಹಸ ಚಿತ್ರೀಕರಣದಲ್ಲಿ ಭಾಗಿಯಾದ ಯಶ್