ಸಿನಿವಾರ್ತೆ
ರಿಷಬ್ ಶೆಟ್ಟಿ ಅವರ ‘ಕಾಂತಾರ 1’ ಸಿನಿಮಾದಲ್ಲಿ ಭಾರತದ ನಂಬರ್ 1 ಲೈವ್ ಕಾನ್ಸರ್ಟ್ ಗಾಯಕ, ಸ್ಟಾರ್ ನಟ ದಿಲ್ಜಿತ್ ದೋಸಾಂಜ್ ಹಾಡನ್ನು ಬಳಸಿಕೊಳ್ಳಲಾಗಿದೆ. ದೇಶ, ವಿದೇಶದಲ್ಲಿ ಹೆಸರು ಮಾಡಿರುವ ಈ ಗಾಯಕ ಚಿತ್ರದ ಪ್ರಮುಖ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ ಎನ್ನಲಾಗಿದೆ.
ಮುಂಬೈಯ ಯಶ್‌ರಾಜ್ ಫಿಲಂಸ್ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಒಂದೇ ದಿನದಲ್ಲಿ ಮುಕ್ತಾಯಗೊಂಡಿದೆ. ಸಿನಿಮಾ ರಿಲೀಸ್ ತೀರ ಹತ್ತಿರದಲ್ಲಿದ್ದೂ, ಈ ಹಾಡಿನ ರೆಕಾರ್ಡಿಂಗ್‌ಗಾಗಿ ರಿಷಬ್ ಹಾಗೂ ಅಜನೀಶ್ ಪ್ರೈವೇಟ್ ಜೆಟ್‌ನಲ್ಲಿ ಮುಂಬೈಗೆ ಧಾವಿಸಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಿತ್ರದ ಮ್ಯೂಸಿಕ್ ಪ್ರೊಡಕ್ಷನ್ ಟೀಮ್ ಹೆಡ್ ಬಾಬಿ ಸಿ ಆರ್, ‘ಕಾಂತಾರ ಚಿತ್ರದಲ್ಲಿ ದಿಲ್ಜಿತ್ ಅವರ ಹಾಡು ಸೆಲೆಬ್ರಿಟಿ ಟ್ರ್ಯಾಕ್ ಆಗಿ ಹೊರಹೊಮ್ಮಲಿದೆ. ಈ ಸಿನಿಮಾದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಗಾಯಕ ದಿಲ್ಜಿತ್ ದೋಸಾಂಜ್ ಅವರಿಂದ ವಿಶೇಷ ಮ್ಯೂಸಿಕ್ ಟ್ರ್ಯಾಕ್ ಅನ್ನು ಹಾಡಿಸಲಾಗಿದೆ’ ಎಂದಿದ್ದಾರೆ.
‘ಕಾಂತಾರ ಚಾಪ್ಟರ್ 1’ ಅಕ್ಟೋಬರ್ 2ರಂದು 30 ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ರಿಷಬ್ ಶೆಟ್ಟಿ ಸೇರಿದಂತೆ ಚಿತ್ರತಂಡ ಕೊನೆಯ ಹಂತದ ತಯಾರಿಯಲ್ಲಿ ಬ್ಯುಸಿಯಾಗಿದೆ.