)
ಫ್ಲರ್ಟ್ ಚಿತ್ರದ ನಾಯಕ, ನಿರ್ದೇಶಕನ ಮಾತು
ಚಂದನ್ ಕುಮಾರ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ, ‘ಫ್ಲರ್ಟ್’ ಸಿನಿಮಾ ಇಂದು (ನ.28) ಪ್ರೇಕ್ಷಕರ ಮುಂದೆ ಬರುತ್ತಿರುವ ಹಿನ್ನೆಲೆಯಲ್ಲಿ ಚಂದನ್ ಮಾತುಗಳು ಇಲ್ಲಿವೆ.
- ಆರ್. ಕೇಶವಮೂರ್ತಿ
ಒಂದು ಹುಡುಗಿಯನ್ನು ಆಟ ಆಡಿಸಿಕೊಂಡು ಹೋಗುವ ಹುಡುಗನ ಕತೆ ಎಂದು ಸಿಂಪಲ್ಲಾಗಿ ಹೇಳಿಬಿಡಬಹುದು. ಆದರೆ ಬೇರೆ ರೀತಿಯ ತಿರುವು, ಶೇಡ್ಸ್‌ಗಳಿವೆ. ಕೊನೆಯ ತನಕ ಏನು ಅಂತ ಗೊತ್ತಾಗದಷ್ಟು ಥ್ರಿಲ್ಲರ್ ಇದೆ. ಹೊಸ, ಹಳೆಯ ತಲೆಮಾರನ್ನು ಪ್ರತಿನಿಧಿಸುವ ಪಾತ್ರ ನನ್ನದು.
ಈಗಾಗಲೇ ಚಿತ್ರ ನೋಡಿದವರ ಪ್ರತಿಕ್ರಿಯೆ ಕೇಳಿದ್ದೇನೆ. ಮೆಚ್ಚಿ ಮಾತನಾಡಿದ್ದಾರೆ. ಸಾಧು ಕೋಕಿಲ, ‘ಉಪೇಂದ್ರ ರೇಂಜಿಂಗೆ ಸಿನಿಮಾ ಮಾಡಿದ್ದೀರಿ’ ಎಂದು ಹೊಗಳಿದ್ದಾರೆ. ಇದು ನನ್ನ ನಂಬಿಕೆ ಮತ್ತು ಯಶಸ್ಸಿನ ಭರವಸೆ ಹೆಚ್ಚಿಸಿದೆ.
ಕತೆಯ ಹುಟ್ಟಿಗೆ ಮೂಲ ಏನು? ನಿಮಗೇ ಇಷ್ಟ ಆಗಿದ್ದೇನು?
ನಾವು ಇಂಜಿನಿಯರಿಂಗ್ ಓದುವ ಕಾಲಕ್ಕೆ, ಹುಡುಗಿಯೊಬ್ಬಳನ್ನು ಮಾತನಾಡಿಸಲು ತುಂಬಾ ಹೆದರುತ್ತಿದ್ವಿ. ಆದರೆ, ಈಗ ಹುಡುಗಿಯರನ್ನು ಮಾತನಾಡಿಸೋದು, ಸುತ್ತಾಡಿಸೋದು ಬಲು ಸುಲಭ. ಈ ಬೋಲ್ಡ್‌ನೆಸ್ ನನ್ನ ಕತೆಗೆ ಮೂಲ. ಸ್ಟೋರಿ ಮತ್ತು ಸ್ಕ್ರೀನ್ ಪ್ಲೇ ನನಗೆ ಹೆಮ್ಮೆ ಮೂಡಿಸಿದೆ.
ನೀವೇ ನಿರ್ದೇಶಕರಾಗಿದ್ದು, ನಿರ್ಮಾಪಕರಾಗಿದ್ದು ಯಾಕೆ?
ನನಗೆ ಈ ಕತೆಯನ್ನು ಒಂದು ಸಾಲಿನಲ್ಲಿ ಹೇಳಲಿಕ್ಕಾಗದೆ ನಿರ್ಮಾಪಕರು ಸಿಗದೆ ನಾನೇ ನಿರ್ಮಾಣ ಮಾಡಿದೆ. ಒಳ್ಳೆಯ ಕತೆಗಳು ಬರದೆ, ಒಬ್ಬ ನಟನಾಗಿ ನನ್ನಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ನಾನೇ ನಿರ್ದೇಶಕನಾದೆ.
ಈ ಚಿತ್ರಕ್ಕೆ ಸುದೀಪ್ ಅವರು ಜಸ್ಟ್ ವೆಲ್ ವಿಷರ್ ಮಾತ್ರನಾ?
ಇಲ್ಲಿ ದೊಡ್ಡ ಪಿಲ್ಲರ್‌ಗಳಿದ್ದಾರೆ. ಆ ಎಲ್ಲಾ ಪಿಲ್ಲರ್‌ಗಳಿಗೆ ಸುದೀಪ್ ಅವರು ರೂಫ್ ಇದ್ದಂಗೆ. ನಾನು ಅವರಿಗೆ ಕತೆಯನ್ನೇ ಹೇಳಿಲ್ಲ. ಆದರೆ, ಸಿನಿಮಾ ಪೂರ್ತಿ ಮುಗಿಸಿ ತೋರಿಸಿದಾಗ ಸುದೀಪ್ ಅವರು 12 ದಿನಗಳ ಕಾಲ ಕೂತು 3 ಗಂಟೆ ಇದ್ದ ಸಿನಿಮಾವನ್ನು ಎಡಿಟ್ ಮಾಡಿಸಿ ಕೊಟ್ಟಿದ್ದಾರೆ. ನನ್ನ ಸಿನಿಮಾ ಚೆನ್ನಾಗಿದ್ದಿದ್ದಕ್ಕೆ ಅವರು ಆ ಮಟ್ಟಿಗೆ ಸಪೋರ್ಟ್ ಮಾಡಿದ್ದು.
ಕಿರುತೆರೆ, ಹಿರಿತೆರೆ ಎರಡಲ್ಲೂ ಕೆಲಸ ಮಾಡಿರುವ ನಿಮಗೆ ಯಾವುದು ಕಷ್ಟ ಅನಿಸಿತು?
ಎರಡೂ ಕಡೆ ನಾನು ಹೆಚ್ಚು ಸ್ಟ್ರಗಲ್ ಮಾಡಲಿಲ್ಲ. ಕಿರುತೆರೆಯಲ್ಲಿ ಜನರೇ ನನ್ನ ಮೆರೆಸಿದ್ರು. ಹಿರಿತೆರೆಯಲ್ಲಿ ನನಗೆ ಒಳ್ಳೆಯ ಕತೆಗಳು ಬರಲಿಲ್ಲ ಎಂಬುದಷ್ಟೇ ಸಮಸ್ಯೆ. ಉಳಿದಂತೆ ಎರಡೂ ಕಡೆ ನಾನು ಹ್ಯಾಪಿ.
ಫ್ಲರ್ಟ್ ಚಿತ್ರ ನೋಡಿದವರು ಯಾವುದಕ್ಕೆ ಹೆಚ್ಚು ಮಾರ್ಕ್ಸ್ ಕೊಡ್ತಾರೆ?
ಕತೆ ಮತ್ತು ಚಿತ್ರಕಥೆಗೆ. ಕತೆಯ ಮೊದಲ ಪಾಯಿಂಟ್ ಯಾವುದು, ಮುಂದೇನಾಗುತ್ತದೆ, ಹೀಗೆಯೇ ಆಗುಬಹುದು ಎನ್ನುವ ಯಾವ ಅಂದಾಜಿಗೂ ಸಿಗದೆ ಸಾಗುವ ಸಿನಿಮಾವಿದು.