ಕನ್ನಡಪ್ರಭ ಸಿನಿವಾರ್ತೆ
‘ಹೆಣ್ಣುಮಕ್ಕಳನ್ನು ಗೌರವಿಸಬೇಕು. ಹೀರೋಯಿನ್ ನೆಪ ಮಾತ್ರಕ್ಕೆ ಸಿನಿಮಾದಲ್ಲಿರಬಾರದು. ಈ ಕಾರಣಕ್ಕೇ ಮ್ಯಾಕ್ಸ್ ಸಿನಿಮಾದಲ್ಲಿ ಹೀರೋಯಿನ್ ಪಾತ್ರ ಇದ್ದರೂ ನಾನದನ್ನು ತೆಗೆಯಲು ಹೇಳಿದೆ’ ಎಂದು ಸುದೀಪ್ ಹೇಳಿದ್ದಾರೆ.ಡಿ. 25ಕ್ಕೆ ಬಿಡುಗಡೆ ಆಗಲಿರುವ ‘ಮ್ಯಾಕ್ಸ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ಬೆಳಗ್ಗೆ ಎದ್ದರೆ ನಾನು ಸ್ಕ್ರಿಪ್ಟ್ ಹುಡುಕುತ್ತಿರುತ್ತೀನಿ, ಹೀರೋಯಿನ್‌ನಲ್ಲ’ ಎಂದೂ ಹೇಳಿದ್ದಾರೆ.‘ನನಗೆ ಉಪೇಂದ್ರ ಅವರ ಸ್ಟಾರ್‌ಡಮ್ ಬಗ್ಗೆ ಅನುಮಾನ ಇಲ್ಲ. ಚಿತ್ರರಂಗಕ್ಕೆ ಉಪೇಂದ್ರ ಕೊಡುಗೆ ದೊಡ್ಡದು. ನಾವೆಲ್ಲ ಅವರಿಂದ ಕಲಿತುಕೊಂಡು ಬೆಳೆದವರು. ನಮ್ಮಿಬ್ಬರ ಸಿನಿಮಾ ರಿಲೀಸ್ ಬಗ್ಗೆ ಅವರಿಗೇ ಇಲ್ಲದ ತಲೆನೋವು, ನನಗ್ಯಾಕೆ ನಿಮಗ್ಯಾಕೆ. ಅವರೇ ಎಲ್ಲೂ ಮಾತಾಡ್ತಿಲ್ಲ. ಅವರಿಗೆ ಗೊತ್ತು ನಾವ್ಯಾಕೆ ಆ ದಿನಾಂಕಕ್ಕೇ ಸಿನಿಮಾ ಬಿಡುಗಡೆ ಮಾಡ್ತಿದ್ದೀವಿ ಅಂತ. ಅಷ್ಟೊಂದು ರಜೆಗಳಿರುವಾಗ ನಮ್ಮ ಸಿನಿಮಾ ಬರದಿದ್ದರೆ ಬೇರೆ ಭಾಷೆ ಸಿನಿಮಾ ಬರ್ತವೆ ಅಷ್ಟೇ. ದಯವಿಟ್ಟು ಉಪೇಂದ್ರ ಸಿನಿಮಾವನ್ನು ನಂಬಿ. ಗುರು ಮೊದಲು ಬರ್ತಿದ್ದಾರೆ. ಸ್ವಲ್ಪ ದಿನದ ನಂತರ ಶಿಷ್ಯ ಬರ್ತಿದ್ದಾನೆ ಅಷ್ಟೇ’ ಎಂದು ಸುದೀಪ್ ಹೇಳಿದ್ದಾರೆ.‘ಮ್ಯಾಕ್ಸ್ ಹೈ ವೋಲ್ಟೇಜ್ ಸಿನಿಮಾ. ನಿಷ್ಠಾವಂತ ಪೊಲೀಸ್ ಅಧಿಕಾರಿ ಅರ್ಜುನ್ ಮಹಾಕ್ಷಯ್ ಆಗಿ ಕಾಣಿಸಿಕೊಂಡಿದ್ದೇನೆ. ಆತನನ್ನ ಎಲ್ಲರೂ ಮ್ಯಾಕ್ಸ್ ಅಂತ ಕರೆಯುತ್ತಾರೆ. ನಿರ್ದೇಶಕ ವಿಜಯ್ ಅವರ ಸ್ಕ್ರಿಪ್ಟ್‌ನಲ್ಲಿನ ಪ್ರಾಮಾಣಿಕತೆ ಇಷ್ಟ ಆಯ್ತು. ಅವರ ವಿಷನ್ ಚೆನ್ನಾಗಿತ್ತು, ಹೀಗಾಗಿ ಸಿನಿಮಾ ಒಪ್ಪಿಕೊಂಡಿದ್ದೆ. ಟ್ರೇಲರ್ ನೋಡಿದಾಗ ಆ್ಯಕ್ಷನ್, ರಕ್ತ ಕಾಣಬಹುದು, ಆದರೆ ಅದೇ ಸಿನಿಮಾ ಅಲ್ಲ. ಈ ಸಿನಿಮಾದ ಸ್ಪೀಡ್ ಸಖತ್ತಾಗಿದೆ. ಪ್ರತೀ ಸೀನ್ ಕೂಡ ಒಂದು ಕಥೆ ಹೇಳುತ್ತೆ. ಈ ಸಿನಿಮಾದ ನೈಟ್ ಸೀನ್‌ಗಳನ್ನು ಹಗಲು ಧೂಳು, ಬೆಂಕಿ ನಡುವೆ ಶೂಟ್ ಮಾಡ್ತಾ ಇದ್ವಿ. ಅದು ಚಾಲೆಂಜಿಂಗ್ ಆಗಿತ್ತು. ಕಾರಣಾಂತರಗಳಿಂದ ಸಿನಿಮಾ ವಿಳಂಬವಾಗಿದೆ. ನನ್ನ ತಾಯಿಗೆ ಈ ಸಿನಿಮಾ ನೋಡೋದಕ್ಕಾಗಿಲ್ಲ ಎಂಬ ನೋವಿದೆ’ ಎಂದು ಸುದೀಪ್ ಹೇಳಿದ್ದಾರೆ.‘ಈ ಸಿನಿಮಾದಲ್ಲಿ ರಕ್ತ ಹರಿಸಿದ್ದಕ್ಕೆ ಆಕ್ಷೇಪಿಸುತ್ತಿರುವವರಿಗೆ ನನ್ನದೊಂದು ಮಾತು. ಹಿಂದೆ ನಾನು ಸ್ವಾತಿ ಮುತ್ತು, ಮೈ ಆಟೋಗ್ರಾಫ್, ಮುಸ್ಸಂಜೆ ಮಾತು ರೀತಿಯ ಎಂತೆಂಥದ್ದೋ ಒಳ್ಳೊಳ್ಳೆ ಸಿನಿಮಾ ಮಾಡಿದ್ದೀನಿ. ಆಗ ಎಲ್ಲರೂ ಸೇರಿ ಮನೆಗೆ ಕಳಿಸಿದರು. ಕತ್ತಿ, ಮಚ್ಚು ಹಿಡ್ಕೊಂಡವರನ್ನ ನಂ.1, ನಂ.2 ಸ್ಥಾನಕ್ಕೆ ಕೂರಿಸಿದ್ರು. ಜನಗಳಿಗೆ ಇದೇ ಬೇಕೇನೋ ಅಂದುಕೊಂಡೆ. ನೂರು ದಿನ ಓಡಿದ ಮಾಣಿಕ್ಯ ಸಿನಿಮಾದಲ್ಲಿದ್ದದ್ದು ಶಾಂತಿ ನಿವಾಸ ಸಿನಿಮಾದ್ದೇ ಕಥೆ. ಆದರೆ ಜನ ಮಾಣಿಕ್ಯವನ್ನ ಗೆಲ್ಲಿಸಿದ್ರು. ಕಾರಣ ಆ್ಯಕ್ಷನ್, ಡ್ಯಾನ್ಸ್, ರೊಮ್ಯಾನ್ಸ್ ಎಲ್ಲಾ ಇದರಲ್ಲಿತ್ತು. ಹಾಗಂತ ನನ್ನ ಸಿನಿಮಾ ಎಲ್ಲೂ ಮಾನವೀಯತೆ ಬಿಟ್ಟು ಆಚೆ ನಿಲ್ಲಲ್ಲ’ ಎಂದೂ ಸುದೀಪ್ ಹೇಳಿದ್ದಾರೆ.
ಚಿತ್ರ ಡಿಸೆಂಬರ್ 25ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಲೈಪುಲಿ ಎಸ್ ಧನು ನಿರ್ಮಾಣದ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.