ದಿ ಸೂಟ್
ತಾರಾಗಣ: ಧನ್ವಿ ಕೋಟೆ, ಕಮಲ್, ಸುಜಯ್ ಆರ್ಯ
ನಿರ್ದೇಶನ: ಎಸ್ ಭಗತ್ ರಾಜ್
- ಪ್ರಿಯಾ ಕೆರ್ವಾಶೆ
ನಾಯಕಿ ಕುಂಚ ಕಲಾವಿದೆ. ನಾಯಕ ಇಂಟೀರಿಯರ್ ಡಿಸೈನರ್. ಇವರಿಬ್ಬರ ಲೈಫ್‌ಸ್ಟೋರಿ ಒಂದು ಅಸಂಗತ ಚಿತ್ರದಂತೆ ದಿ ಸೂಟ್ ಸಿನಿಮಾವಾಗಿದೆ. ಸಿನಿಮಾಗೆ ಸ್ಟ್ರಾಂಗ್ ಕಥೆಯ ಬೇಸ್ ಇರಬೇಕು ಅನ್ನೋ ಮನಸ್ಥಿತಿ ಇರುವವರು ಈ ಸಿನಿಮಾ ನೋಡಿದ ಮೇಲೆ ತಮ್ಮ ನಿಲುವು ಬದಲಾಯಿಸಿಕೊಳ್ಳದೇ ಇರುವುದಿಲ್ಲಐದು ಜನ ಬೆಸ್ಟ್ ಫ್ರೆಂಡ್ಸ್. ಎಲ್ಲರೂ ಕಲಾವಿದರು. ತರ್ಲೆ ಮಾಡುವ, ಕಾಲೆಳೆಯುವ, ಚೆಂದ ಪೇಂಟಿಂಗ್ ಮಾಡುವ ನಾಯಕಿ ಇವರಲ್ಲೊಬ್ಬಳು. ಉಳಿದ ನಾಲ್ಕೂ ಜನರ ಪೇಂಟಿಂಗ್ ಅನ್ನು ಕೇಳುವವರಿಲ್ಲದಿದ್ದರೂ ಇವಳ ಪೇಂಟಿಂಗ್ ಮಾತ್ರ ಕ್ಷಣಾರ್ಧದಲ್ಲಿ ಮಾರಾಟವಾಗುತ್ತದೆ. ಹಾಗೆ ಅವಳ ಪೇಂಟಿಂಗ್ ಕೊಳ್ಳುವವರು ಯಾರು? ಈ ಕಲಾವಿದೆಯ ಬದುಕಿನಲ್ಲಿ ಪ್ರೀತಿ ಮೂಡಿದಾಗ ಏನಾಗುತ್ತದೆ ಅನ್ನೋದಕ್ಕೆಲ್ಲಾ ಸಿನಿಮಾದಲ್ಲಿ ಉತ್ತರವಿದೆ.
ಆದರೆ, ನಾಯಕಿ ಯಾಕೆ ಮಾನಸಿಕ ಅಸ್ವಸ್ಥೆಯನ್ನು ಅಮ್ಮಾ ಎಂದು ಅಪ್ಪಿಕೊಂಡು ಅತ್ತಳು? ದೇವರನ್ನು ಪ್ರಾರ್ಥಿಸುವಾಗ ಬೀದಿಯಲ್ಲಿ ಪ್ರತ್ಯಕ್ಷವಾಗುವ ವ್ಯಕ್ತಿ ಯಾರು? ಕೆಲವೇ ನಿಮಿಷಗಳಲ್ಲಿ ಸೈಕಿಯಾಟ್ರಿಸ್ಟ್ ಒಬ್ಬ ಮನುಷ್ಯನ ಅಷ್ಟೂ ಸಮಸ್ಯೆಯನ್ನು ಹೊರ ತೆಗೆಯಬಹುದಾ? ಸ್ಕಿಜೋಫ್ರೇನಿಯಾ ಇರುವ ವ್ಯಕ್ತಿ ಒಂದು ಕಂಪನಿ ಮುನ್ನಡೆಸಿಕೊಂಡು, ಆ ಮಟ್ಟಿನ ಸಹಜತೆಯಿಂದ ಇರೋದಕ್ಕೆ ಸಾಧ್ಯವಾ ಹೀಗೆ ಸಾಲು ಸಾಲು ಸಂದೇಹಗಳಿಗೆ ಸಿನಿಮಾ ಉತ್ತರ ಕೊಡುವುದಿಲ್ಲ. ಇಲ್ಲಿ ಪ್ರೇಕ್ಷಕನಿಗೇ ಯೋಚಿಸಿ ಒಂದು ನಿರ್ಧಾರಕ್ಕೆ ಬರುವ ಜವಾಬ್ದಾರಿ ನೀಡಲಾಗಿದೆ.
ಇನ್ನು ಕಥೆಯ ವಿಚಾರಕ್ಕೆ ಬಂದರೆ ಅದರದ್ದು ಈ ಸಿನಿಮಾದಲ್ಲಿ ಕ್ಯಾಮಿಯೋ ಅಪೀಯರೆನ್ಸ್. ಕೊನೆಯ ಅರ್ಧಗಂಟೆಯಲ್ಲಿ ಹಾಗೆ ಎಂಟ್ರಿ ಕೊಟ್ಟು ಹವಾ ಎಬ್ಬಿಸಿ ಹೋಗುತ್ತದೆ. ನಟನೆ, ಸಂಗೀತ ಇತ್ಯಾದಿಗಳ ಬಗ್ಗೆಯೂ ಇದಮಿತ್ಥಂ ಎನ್ನಲಾಗದು.