ಬಹುಕೋಟಿ ವೆಚ್ಚದ ಸಲಾರ್‌ ಹಾಗೂ ಡಂಕಿ ಚಿತ್ರಗಳ ನಡುವೆ ಥಿಯೇಟರ್‌ ಫೈಟ್‌!

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರಗಳಾದ ಸಲಾರ್ ಹಾಗೂ ಡಂಕಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಈ ಬೆಳವಣಿಗೆಗಳಿಂದ ಬೇಸತ್ತು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶಿಸುವುದಿಲ್ಲ ಎಂದು ಹೊಂಬಾಳೆ ಫಿಲಂಸ್‌ ಹೇಳಿದೆ.

- ಇಂದು ಡಂಕಿ, ನಾಳೆ ಸಲಾರ್‌ ಬಿಡುಗಡೆಕನ್ನಡಪ್ರಭ ಸಿನಿವಾರ್ತೆ

ದಕ್ಷಿಣ ಭಾರತದ ಪಿವಿಆರ್ - ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಈ ಚಿತ್ರ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್‌ ನಿರ್ಧಾರ ಪ್ರಕಟಿಸಿದೆ.

ನಾಳೆ (ಡಿ.22) ವಿಶ್ವಾದ್ಯಂತ ಪ್ರಶಾಂತ್‌ ನೀಲ್‌ ನಿರ್ದೇಶನ, ಪ್ರಭಾಸ್‌ ನಟನೆಯ ‘ಸಲಾರ್‌’ ಬಿಡುಗಡೆಯಾಗುತ್ತಿದೆ. ಅದೇ ದಿನ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಶಾರೂಕ್ ಖಾನ್‌ ನಟನೆಯ ‘ಡಂಕಿ’ಯೂ ತೆರೆ ಕಾಣುತ್ತಿದೆ. ಇದೀಗ ಈ ಎರಡೂ ಚಿತ್ರಗಳ ನಡುವೆ ಥಿಯೇಟರ್‌ಗಳಿಗಾಗಿ ಜಟಾಪಟಿ ಶುರುವಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಹೊಂಬಾಳೆ ಫಿಲಂಸ್‌, ‘ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ, ‘ಡಂಕಿ’ ಸಿನಿಮಾ ವಿತರಕರು ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದಾರೆ. ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡವೋ, ಆಗ ‘ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್‌ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿಕೊಂಡರು. ಪಿವಿಆರ್ - ಐನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಸಲಾರ್’ಗಿಂತ ‘ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್ ಗಳು ಸಹ ಒಪ್ಪಿವೆ. ಇದೀಗ ಸಲಾರ್‌ ಚಿತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿದ್ದೇವೆ’ ಎಂದು ಹೊಂಬಾಳೆ ಫಿಲಂಸ್‌ ತಿಳಿಸಿದೆ. ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೊಲಿಸ್‍ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಸಲಾರ್‌ ಬಿಡುಗಡೆ ಆಗಲಿದೆ.‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‍ ಬ್ಯಾನರ್‌ನಲ್ಲಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Share this article