ರಜನಿ ಕೂಲಿ ಚಿತ್ರದ ಟಿಕೆಟ್‌ ಬೆಲೆ ₹200 ಅಲ್ಲ, ₹2000!

Published : Aug 11, 2025, 06:25 AM IST
rajinikanth film coolie

ಸಾರಾಂಶ

ಸಿನಿಮಾ ಟಿಕೆಟ್‌ ದರಕ್ಕೆ 200 ರು. ಮಿತಿ ನಿಗದಿಗೊಳಿಸಲು ರಾಜ್ಯ ಸರ್ಕಾರ ಕರಡು ನಿಯಮ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿರುವಾಗಲೇ, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್  ಅವರ ಹೊಸ ಸಿನಿಮಾ ‘ಕೂಲಿ’ ಟಿಕೆಟ್‌ ದರ 2000 ರು.ವರೆಗೂ ಮಾರಾಟವಾಗಿದೆ.

ಸಿನಿವಾರ್ತೆ

ರಾಜ್ಯದಲ್ಲಿ ಎಲ್ಲಾ ಸಿನಿಮಾಗಳಿಗೂ 200 ರು. ಟಿಕೆಟ್‌ ದರ ನಿಗದಿಯಾಗಬೇಕು ಎಂಬ ಸರ್ಕಾರದ ಪ್ರಸ್ತಾವನೆಯ ನಡುವೆಯೇ ಸೂಪರ್‌ ಸ್ಟಾರ್‌ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ‘ಕೂಲಿ’ ಸಿನಿಮಾದ ಟಿಕೆಟ್‌ ದರ ಗಗನಕ್ಕೇರಿದೆ.

ಆಗಸ್ಟ್‌ 14 ರಂದು ಮುಂಜಾನೆ 6 ರಿಂದಲೇ ಪ್ರದರ್ಶನ ನಿಗದಿಯಾಗಿದ್ದು, ಬೆಂಗಳೂರಿನಲ್ಲಿ ಟಿಕೆಟ್‌ನ ಗರಿಷ್ಠ ದರ ರು.2000 ಕ್ಕೇರಿದೆ. ಬೆಂಗಳೂರು ಎಂ ಜಿ ರೋಡ್‌ನ ಸ್ವಾಗತ್‌ ಶಂಕರ್‌ನಾಗ್ ಥೇಟರ್‌ನಲ್ಲಿ 2000 ರು. 1500 ರು. ಬೆಲೆಯ ಎಲ್ಲಾ ಟಿಕೆಟ್‌ ಸೋಲ್ಡೌಟ್‌ ಆಗಿದ್ದರೆ, ಎಂಜಿ ರಸ್ತೆಯ ನ್ಯೂಫ್ಯಾನ್‌ಗ್ಲೆಡ್‌ ಮಿನಿಫ್ಲೆಕ್ಸ್‌ನಲ್ಲಿ ಟಿಕೆಟ್‌ ರೇಟು 2000 ರು. ಇದೆ.

ವಿಚಿತ್ರ ಎಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎ ನರಸಿಂಹಲು ಒಡೆತನದ ವೈಭವಿ ವೈಷ್ಣವಿ ಥೇಟರ್‌ನಲ್ಲಿ ‘ಕೂಲಿ’ ಶೋ ಒಂದರ ಟಿಕೆಟ್‌ ದರ 800 ರು. ಗಳಷ್ಟಿದೆ. ಕೆಲವು ದಿನಗಳ ಕೆಳಗೆ ರಾಜ್ಯದಲ್ಲಿ ಎಲ್ಲ ಚಿತ್ರಗಳಿಗೂ 200 ರು. ಟಿಕೆಟ್‌ ರೇಟ್‌ ನಿಗದಿ ಮಾಡುವಂತೆ ನರಸಿಂಹಲು ಅವರು ಇತರ ಪದಾಧಿಕಾರಿಗಳೊಂದಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು.

ಉಳಿದಂತೆ 200 ರು.ನಿಂದ 2000 ರು.ವರೆಗೂ ಟಿಕೆಟ್‌ ದರವಿದ್ದು, ಮುಂಜಾನೆ 6 ರಿಂದ 7ರ ಫಸ್ಟ್‌ ಡೇ ಫಸ್ಟ್‌ ಶೋಗಳ ದರ ಹಲವೆಡೆ 1000 ರು.ಗಳಷ್ಟಿದೆ. ಎಲ್ಲ ಟಿಕೆಟ್‌ಗಳೂ ಸೋಲ್ಡ್‌ ಔಟ್ ಆಗಿವೆ.

ಮುಂಗಡ ಟಿಕೆಟ್‌ ಖರೀದಿಯೊಂದರಲ್ಲೇ ಈ ಸಿನಿಮಾ ರಿಲೀಸ್‌ಗೂ ಮುನ್ನ 50ಕೋಟಿ ರು.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಭಾರತದಲ್ಲಿ ಮೊದಲ ದಿನದ ಶೋಗಳ 5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.

ಸ್ಯಾಟಲೈಟ್‌, ಮ್ಯೂಸಿಕ್‌ ರೈಟ್, ಓಟಿಟಿ ಹಕ್ಕು ಸೇರಿ ಸಿನಿಮಾದ ಈವರೆಗಿನ ಒಟ್ಟು ಗಳಿಕೆ 250 ಕೋಟಿ ರು.ವನ್ನೂ ದಾಟಿದೆ ಎನ್ನಲಾಗಿದೆ.

ಲೋಕೇಶ್ ಕನಕರಾಜು ನಿರ್ದೇಶನದ ಚಿತ್ರವನ್ನು ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ರಜನಿಕಾಂತ್ ಜೊತೆಗೆ ಅಮೀರ್‌ ಖಾನ್, ಉಪೇಂದ್ರ, ನಾಗಾರ್ಜುನ, ಶ್ರುತಿ ಹಾಸನ್ ಮೊದಲಾದವರು ನಟಿಸಿದ್ದಾರೆ.

ಕೂಲಿ ಸಿನಿಮಾ ವೀಕ್ಷಣೆಗಾಗಿ ಕಂಪನಿಗೆ ರಜೆ

ಮಧುರೈನ ಯುಎನ್‌ ಅಕ್ವಾ ಕೇರ್ ಕಂಪನಿಯು ಆ.14ರಂದು ಕೂಲಿ ಸಿನಿಮಾ ವೀಕ್ಷಣೆಗೆಂದು ತನ್ನೆಲ್ಲ ಉದ್ಯೋಗಿಗಳಿಗೆ ರಜೆ ನೀಡಿದೆ. ಜೊತೆಗೆ ಉಚಿತ ಟಿಕೆಟ್‌ಗಳನ್ನೂ ನೀಡಲು ಮುಂದಾಗಿದೆ. ರಜನಿ ಕಾಂತ್ ಅವರ 50 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮಕ್ಕೆ ಕಂಪನಿ ಈ ಕಾರ್ಯಕ್ಕೆ ಮುಂದಾಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌
ಮಾರ್ಕ್‌ ಟ್ರೇಲರ್‌ಗೆ ಒಂದೂವರೆ ಕೋಟಿ ವೀಕ್ಷಣೆ