- ಈ ಸಿನಿಮಾಗೆ ಕತೆ, ಚಿತ್ರಕಥೆ ಬರೆದವರು ವಿಶ್ರುತ್ ನಾಯಕ್. ಅವರು ಯಾವಾಗಲೂ ಒಂದೊಳ್ಳೆ ಕಥೆ ತರ್ತೀನಿ ಸಿನಿಮಾ ಮಾಡೋಣ ಅಂತ ಹೇಳ್ತಿದ್ರು. ಒಮ್ಮೆ ಅವರು ನಿರ್ದೇಶಕ ಅನ್ಬು ಅರಸ್ ಜೊತೆ ಬಂದರು. ಒಂದು ಕಥೆ ಹೇಳಿದರು. ಬಹಳ ಚೆನ್ನಾಗಿದೆಯಲ್ಲಾ ಅನಿಸಿತು. ‘ಈ ಕಥೆ ಸಿನಿಮಾ ಆಗಬೇಕು’ ಅಂತ ಅವರ ಬಳಿ ಹೇಳಿದೆ.
- ದೆಹಲಿಯಲ್ಲಿರುವ ಕರ್ನಾಟಕ ಮೂಲದ ಸಮೀರ್ ಕಥೆ ಕೇಳಿದ ಕೂಡಲೇ ಸಿನಿಮಾ ನಿರ್ಮಿಸಲು ಮುಂದಾದರು. ಒಂದೊಳ್ಳೆ ಕಥೆಗೆ ಪ್ರೊಡ್ಯೂಸರ್ ಸಿಕ್ಕರಲ್ಲಾ ಅಂತ ಸಂತೋಷಪಟ್ಟು ನನ್ನ ಪಾಡಿಗಿದ್ದೆ. ಆಗ ವಿಶ್ರುತ್ ಮತ್ತು ಅನ್ಬು ಮತ್ತೆ ಬಂದು ನೀವೇ ಲೀಡ್ ಪಾತ್ರ ಮಾಡಬೇಕು ಅಂದುಬಿಟ್ಟರು. ಪಾತ್ರ ನನಗೆ ಚೆನ್ನಾಗಿ ಸೂಟ್ ಆಗ್ತಿದೆ ಅನಿಸಿ ಒಪ್ಪಿದೆ. ಅಂದುಕೊಂಡ ಹಾಗೆ ಸಿನಿಮಾದ ಕೆಲಸ ಮುಗಿದು ಇದೀಗ ತೆರೆಗೆ ಬರುತ್ತಿದೆ. ಎಂದೋ ಮನಸ್ಸೊಳಗೆ ಸೇರಿಕೊಂಡ ಕನಸು ಇದೀಗ ನನಸಾಗುತ್ತಿದೆ.- ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೀವಿ. ಪ್ರೇಕ್ಷಕ ಸಿನಿಮಾ ನೋಡಿ ವಾಪಾಸ್ ಹೋಗುವಾಗ ಮನರಂಜನೆಯ ಜೊತೆಗೆ ಭಾವನಾತ್ಮಕ ವಿಷಯವನ್ನು ಎದೆಯೊಳಗೆ ಇಟ್ಟುಕೊಂಡು ಹೋಗ್ತಾನೆ.- ಬಹಳ ಸರಳವಾದ ವಿಷಯ ಸಿನಿಮಾದ್ದು, ಆದರೆ ಸಂಕೀರ್ಣ ವಿಚಾರ ಇದೆ. ಇದು ಪ್ರತಿ ಮನೆಯ ಸಮಸ್ಯೆ. ಮೇಲ್ನೋಟಕ್ಕೆ ಸಿಂಪಲ್. ಆದರೆ ಇದು ಜಾಸ್ತಿಯಾಗುತ್ತಾ ಹೋಗಿ ಗಹನಕ್ಕೆ ಇಳಿದಾಗ ಅದರ ಗಾಂಭೀರ್ಯ ಅರ್ಥ ಆಗುತ್ತೆ. - ಸಿನಿಮಾದ ಅಡಿಬರಹ ‘ಕನ್‌ಫ್ಯೂಶನ್ ಟು ಕನ್‌ಕ್ಲೂಷನ್’ ಅಂತಿದೆ. ಕನ್‌ಫ್ಯೂಶನ್‌ನೊಂದಿಗೆ ಹೊರಟ ವ್ಯಕ್ತಿಯೊಬ್ಬ ಕನ್‌ಕ್ಲೂಷನ್‌ಗೆ ಬರುವವರೆಗಿನ ಜರ್ನಿಯೇ ವಿಕಾಸ ಪರ್ವ.