ಅಪ್ಪನ ಹೆಸರು ನನ್ನ ಶಕ್ತಿ, ಅಪ್ಪನ ಜೊತೆ ಮುಂದಿನ ಸಿನಿಮಾ : ವಿಕ್ರಮ್‌ ರವಿಚಂದ್ರನ್‌

KannadaprabhaNewsNetwork |  
Published : Mar 07, 2025, 12:49 AM ISTUpdated : Mar 07, 2025, 07:38 AM IST
ವಿಕ್ರಮ್‌ | Kannada Prabha

ಸಾರಾಂಶ

ಅಪ್ಪನ ಹಿನ್ನೆಲೆ ನನಗೆ ಶಕ್ತಿ ನೀಡುತ್ತದೆ, ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತೇನೆ ಎಂದು ವಿಕ್ರಮ್‌ ರವಿಚಂದ್ರನ್‌ ಹೇಳಿದ್ದಾರೆ.

- ಪ್ರಿಯಾ ಕೆರ್ವಾಶೆ

- ಅಪ್ಪ ಹಾಗೂ ನಾನು ಮನೆಯಲ್ಲಿ ಆಗಾಗ ಸಣ್ಣಪುಟ್ಟ ಫೋಟೋ ಶೂಟ್ ಮಾಡುತ್ತಾ ಇರುತ್ತೇವೆ. ಆದರೆ ಈ ಶೂಟ್‌ ಮಾಡಿದ ಉದ್ದೇಶ ಬೇರೆ ಇತ್ತು. ಇದನ್ನು ಶೂಟ್‌ ಮಾಡಿದ ಮೇಲೆ ಅಪ್ಪನಿಗೆ ನೇರವಾಗಿಯೇ ಹೇಳಿದೆ, ‘ಇನ್ನು ಸುಮ್ಮನೆ ಕೂತದ್ದು ಸಾಕು, ಕೆಲಸ ಶುರು ಮಾಡೋಣ’ ಅಂತ. ಅದರ ಮುಂದುವರಿಕೆಯೇ ಈ ಪೋಸ್ಟರ್‌. ಕುತೂಹಲ ಕೆರಳಿಸಲೆಂದೇ ಪೋಸ್ಟರ್‌ ಹೊರಬಿಟ್ಟಿದ್ದೇವೆ. ಇದು ಮುಂಬರುವ ದಿನಗಳಲ್ಲಿ ಕಾರ್ಯರೂಪಕ್ಕೆ ಬರಬೇಕಾದ ಪ್ರಾಜೆಕ್ಟ್‌. ಹೀಗಾಗಿ ಕೆಲಸ ಶುರುವಾದ ಮೇಲೇ ಈ ಬಗ್ಗೆ ಡೀಟೇಲಾಗಿ ಹೇಳ್ತೀನಿ.

- ಸದ್ಯಕ್ಕೆ ನಾನು ನಟಿಸಿರುವ ‘ಮುಧೋಳ’ ರಿಲೀಸ್‌ ಪ್ಲಾನ್‌ ನಡೀತಿದೆ. ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ. ಹಿಂದಿನ ಸಿನಿಮಾಗಳನ್ನು ಮಾಡಿದ ಮೇಲೆ ತಪ್ಪಿನ ಅರಿವಾಗಿದೆ. ಅದನ್ನು ಸರಿಪಡಿಸಿಕೊಂಡು ಹೊಸ ಭರವಸೆಯೊಂದಿಗೆ ಬರುತ್ತಿದ್ದೇನೆ. ಇಲ್ಲಿ ಜನ ನನ್ನ ಹಿನ್ನೆಲೆ, ಹೆಸರು ನೋಡಲ್ಲ. ಅವರಿಗೆ ಅವರು ಕೊಡೋ 200 ರು.ಗೆ ಭರಪೂರ ಮನರಂಜನೆ ನೀಡಬೇಕು. ಅವರನ್ನು ನಟನೆಯಿಂದ ತೃಪ್ತಗೊಳಿಸಬೇಕು, ಜೊತೆಗೆ ನನ್ನ ಕನ್ನಡ ಉಚ್ಛಾರಣೆ ಇನ್ನೂ ಸ್ವಚ್ಛವಾಗಬೇಕು ಎಂದೆಲ್ಲ ಜ್ಞಾನೋದಯ ಆಗಿದೆ.

- ಅಷ್ಟಕ್ಕೂ ನನಗೆ ಹಣ ಮಾಡಬೇಕು, ಹೆಸರು ಮಾಡಬೇಕು ಎಂಬ ಹಪಹಪಿ ಇಲ್ಲ. ಆದರೆ ಸಿನಿಮಾ ಅಂದರೆ ಅಮ್ಮನ ಹೊಟ್ಟೆಯೊಳಗೆ ಇದ್ದಷ್ಟೇ ಆಪ್ತಭಾವ. ಸಿನಿಮಾ ಬಿಟ್ಟರೆ ನನ್ನ ಪಾಲಿಗೆ ಬೇರೆ ಜಗತ್ತಿಲ್ಲ. ಹಾಗೆಂದು ನಾನು ಕಲಿಕೆಯಲ್ಲಿ ಜಾಣನಾಗಿದ್ದೆ. ಅತ್ಯುತ್ತಮ ಟೆನ್ನಿಸ್‌ ಪ್ಲೇಯರ್‌ ಆಗಿದ್ದೆ. ಮನಸ್ಸು ಮಾಡಿದ್ದರೆ ಆ ಕ್ಷೇತ್ರಗಳಲ್ಲಿ ಮುಂದೆ ಹೋಗಬಹುದಿತ್ತು. ಆದರೆ ನಾನು ಎಂದೂ ಸಿನಿಮಾ ಬಿಟ್ಟು ಬೇರೇನನ್ನೂ ಆಲೋಚನೆ ಮಾಡಿದವನೇ ಅಲ್ಲ.

- ಕನ್ನಡ ಇಂಡಸ್ಟ್ರಿಯಲ್ಲಿ ರವಿಚಂದ್ರನ್‌ ಹಾಗೂ ಉಪೇಂದ್ರ ಅವರ ಕೆಟ್ಟ ಸಿನಿಮಾ ಬಂದರೆ ಜನ ಕಣ್ಣೀರು ಹಾಕೋದನ್ನು ನೋಡಿದ್ದೇನೆ. ಇದೇ ಇವರಿಬ್ಬರ ಮೇಲೆ ಕನ್ನಡಿಗರಿಗೆ ಇರುವ ಅಭಿಮಾನವನ್ನು ತೋರಿಸುತ್ತದೆ. ಅಂಥಾ ನಟನ ಮಗನಾಗಿ ಗುರುತಿಸಿಕೊಳ್ಳಲು ನನಗೆ ಹೆಮ್ಮೆ ಇದೆ. ಅಪ್ಪನ ಹೆಸರು ನನ್ನ ಶಕ್ತಿ. ಅವರ ಜೊತೆಗೆ ಮುಂದಿನ ಸಿನಿಮಾ. ನಮ್ಮಿಬ್ಬರ ನಡುವೆ ವಯಸ್ಸು, ಮನಸ್ಥಿತಿ ಅಂತೆಲ್ಲ ಗ್ಯಾಪ್‌ ಇರಬಹುದು. ಆದರೆ ಅವರ ಕ್ರಿಯೇಟಿವ್‌ ಥಾಟ್‌ ದೊಡ್ಡದು. ಅವರ ಮಾತಿಗೆ ಎದುರಾಡದೇ ಸಿನಿಮಾದಲ್ಲಿ ನಟಿಸುತ್ತೇನೆ. ಅವರು ಇಲ್ಲಿ ನಿಂತ್ಕೋ ಅಂದರೆ ಯಾಕೆ ಅಂತ ಪ್ರಶ್ನಿಸದೆ ನಿಂತುಕೊಳ್ಳುತ್ತೇನೆ. ಅವರ ಅನುಭವಕ್ಕೆ ತಲೆಬಾಗುತ್ತೇನೆ. ಈ ಮೂಲಕ ನಾನು ಬೆಳೆದು ಅಪ್ಪನ ಹೆಸರು, ಘನತೆಯನ್ನು ಮುಂದುವರಿಸುತ್ತೇನೆ.ಬಾಕ್ಸ್

ಯಾವ ಖ್ಯಾತ ನಿರ್ದೇಶಕರಿಂದಲೂ ಅವಕಾಶದ ಕರೆಬಂದಿಲ್ಲ

ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೆಪೊಟಿಸಂ ಅನ್ನೋದೆಲ್ಲ ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಿದ್ದರೆ ಈಗ ನನ್ನ ಕೈಯಲ್ಲಿ ಕನಿಷ್ಟ ಹತ್ತು ಸ್ಕ್ರಿಪ್ಟ್‌ಗಳಿರಬೇಕಿತ್ತು, ಖ್ಯಾತ ನಿರ್ಮಾಪಕರು ನನ್ನ ಸಿನಿಮಾ ಮಾಡಬೇಕಿತ್ತು. ಆದರೆ ಸದ್ಯ ನನ್ನ ‘ಮುಧೋಳ’ ಸಿನಿಮಾವನ್ನು ನಾನೇ ಬಂಡವಾಳ ಹಾಕಿ ನಿರ್ಮಿಸಿದ್ದೇನೆ. ಇನ್ನು ಅವಕಾಶದ ಬಗ್ಗೆ ಹೇಳೋದಾದರೆ ಯಾವೊಬ್ಬ ಖ್ಯಾತ ನಿರ್ದೇಶಕರಿಂದಲೂ ಅಭಿನಯಿಸಲು ಕರೆ ಬಂದಿಲ್ಲ, ನಾನು ಹೊಸಬರ ಸಿನಿಮಾದಲ್ಲೇ ತೃಪ್ತಿ ಕಾಣುತ್ತಿದ್ದೇನೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2025ರ ಕನ್ನಡ ಚಿತ್ರರಂಗದ ಸಕ್ಸಸ್‌ ರೇಟ್‌ 0.78%-ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ
ಸೆನ್ಸಾರ್‌ನಲ್ಲಿ ಇಯರ್‌ ಎಂಡ್‌ ರಶ್‌ - ಇಬ್ಬರು ಅಧಿಕಾರಿಗಳ ನಿಯೋಜನೆಗೆ ಮನವಿ