ಡ್ರೈವರ್‌ ಮಗ ಹೀರೋ ಆಗಿ ಗೆದ್ದ ಮೇಲೆ ಡ್ರೈವರ್ ಪತ್ನಿ ನಿರ್ಮಾಪಕಿಯಾಗಿ ಗೆಲ್ಲಬಾರದೇ: ಪುಷ್ಪಾ ಅರುಣ್‌ಕುಮಾರ್‌

KannadaprabhaNewsNetwork |  
Published : Apr 30, 2025, 12:31 AM IST

ಸಾರಾಂಶ

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪಾ ಅರುಣ್‌ಕುಮಾರ್‌ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಪೃಥ್ವಿ ಅಂಬಾರ್ ನಟನೆಯ ಸಿನಿಮಾ ನಿರ್ಮಿಸಿದ್ದಾರೆ. ಪಿಎ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆ ಆರಂಭಿಸಿರುವ ಪುಷ್ಪಾ ಅವರ ಸಂದರ್ಶನ.

ಆರ್‌. ಕೇಶವಮೂರ್ತಿ

ನೀವು ಸಿನಿಮಾ ನಿರ್ಮಾಣಕ್ಕೆ ಬಂದಿದ್ದು ಅಚ್ಚರಿ!

ನಾನೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು, ಏನಾದರು ಕೆಲಸ ಮಾಡಬೇಕು ಅಂತ ಬಂದಿದ್ದೇನೆ. ತುಂಬಾ ದುಡ್ಡಿದೆ ಅಂತ ನಿರ್ಮಾಪಕಿ ಆಗಿಲ್ಲ. ನಿರ್ಮಾಪಕಿ ಆಗಬೇಕು ಎಂಬುದು ಬಹಳ ವರ್ಷಗಳ ಕನಸು. ಮಕ್ಕಳು ದೊಡ್ಡವರಾಗಿ ಸೆಟಲ್‌ ಆಗಲಿ ಅಂತ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ನಿರ್ಮಾಪಕಿ ಆಗುತ್ತೇನೆ ಎಂದಾಗ ಯಶ್‌ ಏನು ಹೇಳಿದರು?

ಬೇಡ. ಆರಾಮಾಗಿ ಇರಿ. ಯಾಕೆ ಇದೆಲ್ಲ ಅಂತಲೇ ಮೊದಲು ಹೇಳಿದ. ತಂದೆ, ತಾಯಿ ಕಷ್ಟಪಡಬಾರದು, ಅವರು ಖುಷಿಯಾಗಿರಬೇಕು ಅಂತಲೇ ಮಕ್ಕಳು ಬಯಸುತ್ತಾರೆ. ನನ್ನ ಮಗ ಕೂಡ ಹಾಗೆನೇ.

ಚಿತ್ರದ ಕತೆ, ತಂಡ ಇತ್ಯಾದಿ ಯಶ್‌ ಅವರಿಗೆ ಹೇಳಿದ್ದೀರಾ?

ಹೇಳಿಲ್ಲ. ಯಾಕೆಂದರೆ ಇದು ನನ್ನ ವೈಯಕ್ತಿ ಆಸೆ, ಕನಸು ಮತ್ತು ಗುರಿಯೊಂದಿಗೆ ಆರಂಭಿಸಿರುವ ಪ್ರಾಜೆಕ್ಟ್‌. ನಾನು ಮತ್ತು ನನ್ನ ಯಜಮಾನರ (ಪತಿ ಅರುಣ್‌ ಕುಮಾರ್‌) ಯೋಜನೆ ಇದು. ಹೀಗಾಗಿ ಬಸ್‌ ಡ್ರೈವರ್‌ ಮತ್ತು ಡ್ರೈವರ್‌ ಪತ್ನಿ ಸೇರಿ ನಿರ್ಮಿಸುತ್ತಿರುವ ಸಿನಿಮಾ ಅಂತಲೇ ನೋಡಿ. ಹೀಗಾಗಿ ಪ್ರೊಡಕ್ಷನ್‌ ಹೆಸರನ್ನೂ ಕೂಡ ಪಿಎ ಪ್ರೊಡಕ್ಷನ್ಸ್ ಅಂತಲೇ ಹೆಸರಿಟ್ಟಿದ್ದೇವೆ. ಪಿಎ ಎಂದರೆ ಪುಷ್ಪಾ ಅರುಣ್‌ಕುಮಾರ್‌ ಅಂತ.

ಈಗ ಸಿನಿಮಾ ನಿರ್ಮಾಣ ಎಂಬುದು ಕಷ್ಟ ಅಲ್ಲವೇ?

ಡ್ರೈವರ್‌ ಮಗ ಹೀರೋ ಆಗಿ ಗೆದ್ದಿದ್ದಾನೆ ಅಂದ ಮೇಲೆ ಡ್ರೈವರ್‌ ಪತ್ನಿ ಕೂಡ ನಿರ್ಮಾಪಕಿಯಾಗಿ ಗೆಲ್ಲುತ್ತಾರೆಂಬ ನಂಬಿಕೆ ಇದೆ. ನಾವು ಜಮೀನು ಕೆಲಸ ಮಾಡಿಕೊಂಡಿದ್ದೇವೆ. ಕೃಷಿ ಮಾಡೋರು ಸುಮ್ಮನೆ ಕೂರಲ್ಲ. ಕೃಷಿ ಜತೆಗೆ ನನಗೆ ಗೊತ್ತಿರುವ ಮತ್ತೊಂದು ಕ್ಷೇತ್ರ ಸಿನಿಮಾ. ದುಡ್ಡು ಮಾಡಕ್ಕೆ ಅಂತ ಬಂದಿಲ್ಲ. ಹೀಗಾಗಿ ಕಷ್ಟ-ನಷ್ಟಗಳ ಬಗ್ಗೆ ಯೋಚನೆ ಮಾಡಿಲ್ಲ.

ಚಿತ್ರತಂಡದ ಬಗ್ಗೆ ಹೇಳುವುದಾದರೆ?

ಪೃಥ್ವಿ ಅಂಬಾರ್‌ ನಾಯಕ, ಕಾವ್ಯಾ ಶೈವ ನಾಯಕಿ. ಶ್ರೀರಾಜ್‌ ನಿರ್ದೇಶನ, ಕಾರ್ತಿಕ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನವಿದೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ನಟಿಸಿದ್ದಾರೆ. ಬಹುತೇಕ ತಂತ್ರಜ್ಞರು ಹೊಸಬರನ್ನೇ ಈ ಚಿತ್ರದ ಮೂಲಕ ಪರಿಚಯಿಸಿದ್ದೇವೆ.

ಚಿತ್ರದಲ್ಲಿ ಯಾವ ರೀತಿ ಕತೆ ಇದೆ?

ಹಳ್ಳಿಯ ಕತೆ. ಪ್ರೆಸೆಂಟ್‌ ಜನರೇಷನ್‌ ಮತ್ತು ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಸಂದೇಶಾತ್ಮಕ ಸಿನಿಮಾ ಇದು. ನೋಡಿದ ಪ್ರತಿಯೊಬ್ಬರಿಗೂ ಕನೆಕ್ಟ್‌ ಆಗುವ ಕತೆ. ಪೃಥ್ವಿ ಅಂಬರ್‌ ತುಂಬಾ ಒಳ್ಳೆಯ ನಟ. ಆ ಹುಡುಗ ಗೆಲ್ಲಬೇಕು.

ಈಗ ಸಿನಿಮಾ ಯಾವ ಹಂತದಲ್ಲಿದೆ?

ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಬಿಡುಗಡೆಗೆ ರೆಡಿ ಇದೆ. ಮೊದಲು ಕೆಲಸ ಮಾಡಿ ಆಮೇಲೆ ಮಾತಾಡೋಣ ಅಂತ ಶೂಟಿಂಗ್‌ ಸೇರಿದಂತೆ ಎಲ್ಲಾ ಕೆಲಸಗಳನ್ನು ಮುಗಿಸಿ ನಿಮ್ಮ ಮುಂದೆ ಬಂದಿದ್ದೇವೆ.

ನಿರ್ಮಾಣದ ಯೋಚನೆ ಬರಲು ಕಾರಣ?

ಕಾರಣ ಮತ್ತು ಸ್ಫೂರ್ತಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು. ನಾನು ಡಾ ರಾಜ್‌ಕುಮಾರ್‌ ಅವರ ದೊಡ್ಡ ಅಭಿಮಾನಿ. ಇತಿಹಾಸವನ್ನು ಓದಿ, ತಿಳಿದುಕೊಂಡಿದ್ದೇನೆ. ಅವರು ಚಿತ್ರರಂಗಕ್ಕೆ ಬಂದು ಕಷ್ಟಪಟ್ಟು ಒಂದು ದಾರಿ ಹಾಕಿದ್ದಕ್ಕೇ ಡ್ರೈವರ್‌ ಮಗ ಹೀರೋ ಆಗಕ್ಕೆ ಸಾಧ್ಯವಾಗಿದ್ದು. ರಾಜ್‌ಕುಮಾರ್‌ ‍ಅವರು ನೆಟ್ಟ ತೆಂಗಿನ ಮರದ ಫಸಲು ನಮಗೆ ಸಿಗುತ್ತಿದೆ.

ಮುಂದೆ ಯಶ್‌ ಅವರ ಜತೆಗೂ ಸಿನಿಮಾ ಮಾಡುತ್ತೀರಾ?

ನಾನು ತುಂಬಾ ದುಡ್ಡಿರೋ ನಿರ್ಮಾಪಕಿ ಅಲ್ಲ. ಯಶ್‌ಗೆ ಸಿನಿಮಾ ಮಾಡಕ್ಕೆ ತುಂಬಾ ಜನ ಇದ್ದಾರೆ. ಅವನೇ ನಿರ್ಮಾಣ ಮಾಡಿಕೊಳ್ಳುತ್ತಾನೆ. ದುಡ್ಡಿರೋವ್ರಿಗೆ, ಗೆದ್ದವರಿಗೆ ಸಿನಿಮಾ ಮಾಡುವುದಕ್ಕಿಂತ ಹೊಸಬರ ಜತೆಗೆ ಸಿನಿಮಾ ಮಾಡಬೇಕು, ಅವರಿಗೆ ವೇದಿಕೆ ಸಿಗಬೇಕು ಎಂಬುದು ನನ್ನ ಈ ನಿರ್ಮಾಣ ಸಂಸ್ಥೆಯ ಗುರಿ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌