ಆರ್. ಕೇಶವಮೂರ್ತಿ
ಯುವ ಕತೆ ಏನು?ಅಪ್ಪ- ಮಗನ ಸಂಘರ್ಷದ ಸುತ್ತಾ ಸಾಗುವ ಕತೆ. ಕಾಲೇಜು ಮುಗಿಸಿ ಜೀವನ ಶುರು ಮಾಡಿದ ಮಗ, ಸಂಸಾರದ ಜವಾಬ್ದಾರಿ ಹೊತ್ತುಕೊಂಡ ಅಪ್ಪ. ಈ ಎರಡೂ ಪಾತ್ರಗಳ ಮೂಲಕ ತಂದೆ, ತಾಯಿ, ಕುಟುಂಬ, ಯುವ ಮನಸ್ಸುಗಳ ಆಸೆ ಮತ್ತು ಕನಸು, ಗುರಿಗಳು ಹೀಗೆ ಹಲವು ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಪುನೀತ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಬರುವವರಿಗೆ ಈ ಚಿತ್ರ ಹೇಗೆ ಕನೆಕ್ಟ್ ಆಗಬಹುದು?ಚಿಕ್ಕಪ್ಪ (ಪುನೀತ್ ರಾಜ್‌ಕುಮಾರ್) ಅವರ ಅಭಿಮಾನಿಗಳ ಜತೆಗೆ ಎಲ್ಲರಿಗೂ ಈ ಚಿತ್ರದ ಕತೆ ಕನೆಕ್ಟ್ ಆಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬಂದಿರುವ ಮತ್ತು ಬರುವ ಘಟನೆಗಳನ್ನೇ ಆಧರಿಸಿದ ಸಿನಿಮಾ ಇದು. ಕಲ್ಪನೆಯ ಕತೆಯಲ್ಲ. ಸರ್ವಿಸ್ ಕ್ಷೇತ್ರದಲ್ಲಿ ಜೀವನ ಸಾಗಿಸುತ್ತಿರುವ ಯುವ ಸಮೂಹ, ಅವರ ಹಿಂದಿನ ಶಕ್ತಿಯಾಗಿರುವ ಹೆತ್ತವರು ಹೀಗೆ ಎಲ್ಲರೂ ನೋಡುವ ಸಿನಿಮಾ ಇದು. ಈ ಚಿತ್ರ ಏನನ್ನು ಹೇಳುತ್ತದೆ?ಮಗನಿಗೆ ಅಪ್ಪ ಅರ್ಥವಾದರೆ, ಅಪ್ಪನಿಗೆ ಮಗನ ಕನಸು, ಗುರಿಗಳು ಅರ್ಥ ಆಗುತ್ತವೆ. ಕೊನೆಗೆ ಅಪ್ಪ-ಮಗನ ನಂಟು ಹೇಗಿರುತ್ತದೆ ಎನ್ನುವುದನ್ನು ಈ ಚಿತ್ರ ಹೇಳುತ್ತದೆ. ಪ್ರೇಕ್ಷಕರನ್ನು ಪ್ರಭಾವಿಸುವ ಅಂಶಗಳೇನು?ಚಿತ್ರದಲ್ಲಿ ಹೇಳಿರುವ ಎಮೋಷನ್ ಹಾಗೂ ಮನರಂಜನೆ ತುಂಬಾ ಖುಷಿ ಕೊಡುತ್ತದೆ. ಆ ಖುಷಿಯಲ್ಲೇ ಮನಸ್ಸಿಗೆ ಮುಟ್ಟುವ ಭಾವುಕತೆಯ ನೆರಳು ಪ್ರೇಕ್ಷಕನ ಜತೆ ಬರುತ್ತದೆ. ಪುನೀತ್ ಅವರು ಇದ್ದು, ಈ ಚಿತ್ರ ನೋಡಿ ಏನು ಹೇಳುತ್ತಿದ್ದರು?ನನ್ನ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತವರು ಚಿಕ್ಕಪ್ಪ. ಅವರನ್ನ ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾ ನೋಡಿ ಮೊದಲು ಖುಷಿಯಿಂದ ವಿಷ್ ಮಾಡುತ್ತಿದ್ದರು. ಆ ನಂತರ ಏನೆಲ್ಲ ತಪ್ಪುಗಳು ಮಾಡಿದ್ದೇನೆ, ಏನೆಲ್ಲ ಚೆನ್ನಾಗಿ ಮಾಡಿದ್ದೇನೆ ಅಂತ ಬೆಸ್ಟ್ ರಿವ್ಯೂ ಕೊಡುತ್ತಿದ್ದರು. ಅಣ್ಣಾವ್ರ ಕುಟುಂಬದ ಕುಡಿ ಸಿನಿಮಾ ಅಂತ ಬರುವವರಿಗೆ ಏನು ಹೇಳುತ್ತೀರಿ?ಇದು ಜನ ಕೊಡುತ್ತಿರುವ ಪ್ರೀತಿ. ನಮ್ಮ ಕುಟುಂಬದ ಮೇಲಿನ ಪ್ರೀತಿ ನನ್ನ ಮೇಲೂ ತೋರಿಸುತ್ತಿದ್ದಾರೆ ಅಂದುಕೊಳ್ಳುತ್ತೇನೆ. ಅವರು ಏನೇ ನಿರೀಕ್ಷೆಗಳು ಇಟ್ಟುಕೊಂಡು ಬಂದರೂ ನಿರಾಸೆ ಆಗಲ್ಲ. ಅವರ ಪ್ರೀತಿ, ಅಭಿಮಾನಕ್ಕೆ ನಿರಾಸೆಯಾಗದಂತೆ ಚಿತ್ರ ಮಾಡಿದ್ದೇನೆ.