- 22ನೇ ವಯಸ್ಸಿಗೇ ಕರ್ನಾಟಕ ಯುವಕ ಸಾಧನೆ- ಜಕರ್‌ಬರ್ಗ್‌ಗಿದ್ದ ಪಟ್ಟ ದಶಕದ ಬಳಿಕ ಆದರ್ಶ್‌ಗೆ- ಅಮೆರಿಕದಲ್ಲಿ ಎಐ ಸ್ಟಾರ್ಟಪ್ ಸ್ಥಾಪಕನ ಸಾಧನೆ
ಅಮೆರಿಕದಲ್ಲಿ ಇತರೆ ಇಬ್ಬರ ಜೊತೆಗೂಡಿ ಮೆರ್‌ಕೋರ್ ಎಂಬ ಎಐ ಸ್ಟಾರ್ಟಪ್ ಸ್ಥಾಪಿಸಿರುವ ಆದರ್ಶ್ ಹಿರೇಮಠ್
ವಿದ್ಯಾಭಾಸ್ಯ ಮೊಟಕುಗೊಳಿಸಿ ದೆಹಲಿಯ ಸೂರ್ರ್ಯ, ಅಮೆರಿಕದ ಬ್ರೆಂಡನ್ ಜೊತೆಗೂಡಿ ಹೊಸ ಸಾಹಸ ಆರಂಭಸಂಸ್ಥೆ ಆರಂಭವಾದ 9 ತಿಂಗಳಲ್ಲಿ 89 ಕೋಟಿ ರು. ಆದಾಯ । ಸಂಸ್ಥೆಯ ಶೇ.49ರಷ್ಟು ಷೇರು 1.2 ಲಕ್ಷ ಕೋಟಿಗೆ ಖರೀದಿಸಿದ್ದ ಮೆಟಾ
ಸೇವೆ ವಿಸ್ತರಣೆಗಾಗಿ ಮಾರುಕಟ್ಟೆಯಿಂದ ಇತ್ತೀಚೆಗೆ 3 ಲಕ್ಷ ಕೋಟಿ ರು. ಹಣ ಸಂಗ್ರಹಿಸಿದ್ದ ಮೆರ್‌ಕೋರ್ ಸಂಸ್ಥೆಇದರ ಬೆನ್ನಲ್ಲೇ ಕಂಪನಿಯ ಮಾರುಕಟ್ಟೆ ಮೌಲ್ಯ ಏರಿಕೆ. ಕಂಪನಿಯ 3 ಸಂಸ್ಥಾಪಕರು ಬಿಲಿಯನೇರ್‌ಗಳಾಗಿ ಘೋಷಣೆ
==ವಾಷಿಂಗ್ಟನ್: ‘ಮೆರ್‌ಕೋರ್’ ಎಂಬ ಎಐ ಸ್ಟಾರ್ಟಪ್ ಹುಟ್ಟುಹಾಕಿದ ಕನ್ನಡಿಗ ಆದರ್ಶ್ ಹಿರೇಮಠ (22) ವಿಶ್ವದ ಅತಿ ಕಿರಿಯ ಸ್ವ-ನಿರ್ಮಿತ (ಸೆಲ್ಫ್‌ಮೇಡ್) ಬಿಲಿಯನೇರ್ (1 ಶತಕೋಟಿ ಡಾಲರ್- 8800 ಕೋಟಿ ರು) ಗಳಾಗಿದ್ದಾರೆ. ಇನ್ನಿಬ್ಬರು ಸಹಸಂಸ್ಥಾಪಕರೊಂದಿಗೆ ಸೇರಿಕೊಂಡು ಈ ಸಾಧನೆ ಮಾಡಿರುವ ಹಿರೇಮಠ, 23 ವರ್ಷದಲ್ಲಿ ಈ ಪಟ್ಟ ತಮ್ಮದಾಗಿಸಿಕೊಂಡು ದಶಕಗಳ ಕಾಲ ಉಳಿಸಿಕೊಂಡಿದ್ದ ಮೆಟಾ ಸಿಇಒ ಮಾರ್ಕ್ ಜಕರ್‌ಬರ್ಗ್ ಅವರನ್ನು ಮೀರಿಸಿದ್ದಾರೆ.ಆದರ್ಶ್ ಅಮೆರಿಕದಲ್ಲೇ ಹುಟ್ಟಿ ಬೆಳೆದವರಾದರೂ ಅವರ ಹೆತ್ತವರು ಕನ್ನಡಿಗರು. ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರೇಮಠ, ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದರು. ಬಳಿಕ ಸ್ನೇಹಿತರಾದ ಸೂರ್ಯ ಮಿಧಾ ಮತ್ತು ಬ್ರೆಂಡನ್ ಫೂಡಿ ಅವರೊಂದಿಗೆ ಸೇರಿ ಮೆರ್‌ಕೋರ್ ಎಂಬ ಸ್ಟಾರ್ಟಪ್ ಅನ್ನು 2023ರಲ್ಲಿ ಶುರು ಮಾಡಿದ್ದರು. 9 ತಿಂಗಳಲ್ಲೇ ಈ ಕಂಪನಿ 89 ಕೋಟಿ ರು. ಆದಾಯು ಪಡೆದುಕೊಂಡಿತ್ತು. ಇನ್ನು 2025ರ ಜೂನ್‌ನಲ್ಲಿ ಮೆಟಾ ಕಂಪನಿಯು ಮೆರ್‌ಕೋರ್ ಕಂಪನಿಯಲ್ಲಿನ 1.2 ಲಕ್ಷ ಕೋಟಿ ರು. ಬೆಲೆಯ ಶೇ.49ರಷ್ಟು ಷೇರುಗಳನ್ನು ಖರೀದಿಸಿದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಮತ್ತಷ್ಟು ಏರಿಕೆಯಾಗಿತ್ತು. ಈ ನಡುವೆ ಇತ್ತೀಚೆಗೆ ಮೆರ್‌ಕೋರ್ ತನ್ನ ಸೇವಾ ವಿಸ್ತರಣೆಗಾಗಿ ಮಾರುಕಟ್ಟೆಯಿಂದ 3 ಲಕ್ಷ ಕೋಟಿ ರು. ಬಂಡವಾಳ ಸಂಗ್ರಹಿಸಿದೆ. ಇದರ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಇನ್ನಷ್ಟು ಹೆಚ್ಚಾಗಿ, ಕಂಪನಿಯ ಮೂವರೂ ಸಂಸ್ಥಾಪಕರು ಬಿಲಿಯನೇರ್‌ಗಳಾಗಿ ಹೊರಹೊಮ್ಮಿದ್ದಾರೆ.
ಆದರ್ಶ್ ಹರ್ಷ:ಈ ಬಗ್ಗೆ ಮಾತನಾಡಿರುವ ಆದರ್ಶ್, ‘ಸಿಲಿಕಾನ್ ವ್ಯಾಲಿಯಲ್ಲೇ ಬೆಳೆದ ನಾನು ಚಿಕ್ಕಂದಿನಿಂದಲೇ ಟೆಕಿಗಳಿಂದ ಸುತ್ತುವರೆದಿದ್ದೆ. ಬಳಿಕ ನನ್ನ ಒಲವೂ ಪ್ರಯತ್ನಗಳೂ ಸಹಜವಾಗಿ ಅದೇ ಕ್ಷೇತ್ರದತ್ತ ಹೆಚ್ಚಿತು. ವಿದ್ಯಾಭ್ಯಾಸವನ್ನು ಬಿಡದಿದ್ದರೆ ನಾನಿನ್ನೂ ಕಾಲೇಜಿನಲ್ಲೇ ಇರುತ್ತಿದ್ದೆ. ಸಮಾನಮನಸ್ಕ ಸಹ-ಸಂಸ್ಥಾಪಕರೊಂದಿಗೆ ಸೇರಿಕೊಂಡು, ಯಾವುದೇ ಸ್ಪಷ್ಟ ಗುರಿ ಇಲ್ಲದೆ ಹೊಸ ಆವಿಷ್ಕಾರಕ್ಕೆ ಕೈ ಹಾಕಿ, ಇಂದಿದನ್ನು ಸಾಧಿಸಿದ್ದೇವೆ’ ಎಂದರು.
ಜತೆಗೆ, ಮೆರ್‌ಕೋರ್ ಭಾರತದಾದ್ಯಂತ ಕಾರ್ಯಾಚರಣೆಗಳು, ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ಹೊಂದಿದೆ ಎಂದೂ ಹೇಳಿದರು.---
ಆ್ಯಪಲ್‌ನ ಎಐ ಘಟಕಕ್ಕೆಬೆಂಗ್ಳೂರಿಗ ಉಪಾಧ್ಯಕ್ಷ-ಬೆಂಗಳೂರಲ್ಲಿ ಓದಿದ ಅಮರ್
ಸುಬ್ರಹ್ಮಣ್ಯಗೆ ಪ್ರತಿಷ್ಠಿತ ಹುದ್ದೆವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ತಂತ್ರಜ್ಞಾನ ಕಂಪನಿ ಆ್ಯಪಲ್, ತನ್ನ ಕೃತಕ ಬುದ್ಧಿಮತ್ತೆ (ಎಐ) ಘಟಕಕ್ಕೆ ಭಾರತ ಮೂಲದ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಅಮರ್ ಸುಬ್ರಹ್ಮಣ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಘೋಷಿಸಿದೆ.
ಅಮರ್ 2001ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ನಂತರ ಅಮೆರಿಕದ ವಿಸ್ಕನ್ಸಿನ್ ವಿವಿಯಿಂದ ಪಿಎಚ್‌ಡಿ ಪಡೆದಿದ್ದಾರೆ. ಹತ್ತಾರು ವರ್ಷಗಳ ಕಾಲ ಗೂಗಲ್, ಮೈಕ್ರೋಸಾಫ್ಟ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಎಐ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಎಐ ಕ್ಷೇತ್ರದಲ್ಲಿ ಅವರ ಸಾಧನೆ ಮತ್ತು ಅನುಭವ, ಗೂಗಲ್ ಮತ್ತು ಓಪನ್‌ಎಐ ಜೊತೆ ಸೆಣೆಸಲು ಹೆಣಗಾಡುತ್ತಿರುವ ಆ್ಯಪಲ್‌ಗೆ ಹೊಸ ಶಕ್ತಿ ತುಂಬುವ ನಿರೀಕ್ಷೆ ವ್ಯಕ್ತವಾಗಿದೆ.ಅಮರ್ ಸುಬ್ರಹ್ಮಣ್ಯ ಅವರು ತಮ್ಮ ಪಿಎಚ್.ಡಿ. ಅವಧಿಯಲ್ಲಿಯೇ ಮೈಕ್ರೋಸಾಫ್ಟ್ ರಿಸರ್ಚ್‌ನಲ್ಲಿ ಅತಿಥಿ ಸಂಶೋಧಕರಾಗಿ ಕೆಲಸ ಮಾಡಿದ್ದರು. ಅಲ್ಲಿ ಅವರು ಬಹು-ಸಂವೇದಿ ಸಮ್ಮಿಲನ (ಮಲ್ಟಿ ಸೆನ್ಸರಿ ಫ್ಯುಶನ್) ತಂತ್ರಜ್ಞಾನವನ್ನು ಬಳಸಿ ಭಾಷಣ ಗುರುತಿಸುವಿಕೆ ಮತ್ತು ಸ್ಪೀಕರ್ ದೃಢೀಕರಣ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದರು. ಈ ಅಪೂರ್ವ ಸಾಧನೆಗಾಗಿ 2007ರಲ್ಲಿ ಅವರಿಗೆ ಮೈಕ್ರೋಸಾಫ್ಟ್ ರಿಸರ್ಚ್ ಗ್ರಾಜ್ಯುಯೇಟ್ ಫೆಲೋಶಿಪ್ ಎಂಬ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದು ನಂತರದ ದಿನಗಳಲ್ಲಿ ಗೂಗಲ್, ಮೈಕ್ರೋಸಾಫ್ಟ್‌ನಂತಹ ಕಂಪನಿಗಳಲ್ಲಿ ಬೃಹತ್ ಜವಾಬ್ದಾರಿಗಳನ್ನು ನಿರ್ವಹಿಸಲು ದೃಢವಾದ ಅಡಿಪಾಯ ಹಾಕಿತು.ಲೇಖನ ಕ್ಷೇತ್ರದಲ್ಲೂ ಸಾಧನೆಗೈದಿರುವ ಅವರು ಗ್ರಾಫ್ ಆಧರಿತ ಸೆಮಿ-ಸೂಪರ್‌ವೈಸ್ಡ್ ಲರ್ನಿಂಗ್ ಕುರಿತು ಪುಸ್ತಕವೊಂದರ ಸಹ-ಲೇಖಕರಾಗಿದ್ದಾರೆ. ಎಂಟಿಟಿ ರೆಸಲ್ಯೂಷನ್, ಎನ್‌ಎಲ್‌ಪಿ, ಧ್ವನಿ-ಚಿತ್ರ ಸುಧಾರಣೆ ಇತ್ಯಾದಿ ಕ್ಷೇತ್ರಗಳಲ್ಲಿ ಹಲವು ಮಹತ್ವದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.